ಐಪಿಎಲ್ ಆರಂಭದಿಂದಲೂ ಹಲವು ವಿಘ್ನ: ಸವಾಲು ಎದುರಿಸಿ ಸಾಮ್ರಾಟ ಪಟ್ಟ
Team Udayavani, Apr 3, 2020, 5:34 PM IST
ಐಪಿಎಲ್ ಆರಂಭವಾದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಅದರ ಬೆನ್ನತ್ತಿ ಬಂದಿವೆ. ಒಂದು ರೀತಿಯಲ್ಲಿ ಅದರ ಆರಂಭವೇ ಸವಾಲಿನ ನಡುವೆ ಆಗಿದ್ದು. ಬಿಸಿಸಿಐಗೆ ಸೆಡ್ಡು ಹೊಡೆದು ಐಸಿಎಲ್ ಆರಂಭವಾದಾಗ, ಅದನ್ನು ನಿಯಂತ್ರಿಸಲು ಐಪಿಎಲ್ ಆರಂಭಿಸುವ ತೀರ್ಮಾನವನ್ನು ಅಂದಿನ ಬಿಸಿಸಿಐ ಉಪಾಧ್ಯಕ್ಷ ಲಲಿತ್ ಮೋದಿ ಮಾಡಿದರು. ಮುಂದೆ ಜಾಗತಿಕ ಲೀಗ್ ಕ್ರೀಡೆಗಳ ಪೈಕಿ ಈ ಕೂಟಕ್ಕೆ ಮಹತ್ವದ ಸ್ಥಾನ ಸಿಕ್ಕಿತು. ಹಾಗಂತ ಸವಾಲುಗಳು ಕಡಿಮೆಯಾಗಲಿಲ್ಲ. ಈ ಬಾರಿಯೂ ಕೂಟ ನಡೆಯುತ್ತದೋ, ಇಲ್ಲವೋ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಹಿಂದೆ ಎದುರಿಸಿದ ಸವಾಲುಗಳ ಚಿತ್ರಣ ಇಲ್ಲಿದೆ
2009ರ 2ನೇ ಕೂಟವೇ ದ. ಆಫ್ರಿಕಾಗೆ ಸ್ಥಳಾಂತರ!
ಮೊದಲ ಐಪಿಎಲ್ ನಡೆದಿದ್ದು 2008ರಲ್ಲಿ. ಅದು ಭಾರೀ ಅಬ್ಬರ ಹುಟ್ಟು ಹಾಕಿತ್ತು. ವಿಚಿತ್ರವೆಂದರೆ 2009ರಲ್ಲಿ ನಡೆದ ಕೇವಲ ಎರಡನೇ ಕೂಟವನ್ನೇ ಭಾರತದಿಂದ ಹೊರಗೆ ನಡೆಸಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿತು. ಆ ವರ್ಷ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದರಿಂದ ಐಪಿಎಲ್ ಅನ್ನು, ದ. ಆಫ್ರಿಕಾದಲ್ಲಿ ನಡೆಸಲು ದಿಢೀರ್ ತೀರ್ಮಾನಿಸಿ ಸ್ಥಳಾಂತರಿಸಲಾಯಿತು. ಅದರ ನಂತರ ಶುರುವಾಗಿದ್ದು ವಿವಾದ. ಈ ರೀತಿಯ ಸ್ಥಳಾಂತರದ ವೇಳೆ ವಿದೇಶಿ ವಿನಿಮಯದ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲ ಎಂದು ಐಪಿಎಲ್ ಮುಖ್ಯಸ್ಥರಾಗಿದ್ದ ಲಲಿತ್ ಮೋದಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅವರನ್ನು ಮುಂದೆ ಬಿಸಿಸಿಐ ನಿಷೇಧಿಸಿತು. ಇದೇ ಪ್ರಕರಣದಲ್ಲಿ ಕೆಕೆಆರ್ ಮುಖ್ಯಸ್ಥ ಶಾರುಖ್ ಖಾನ್, ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಕೂಡ ಹಲವು ಕಾನೂನು ಸಮರ ನಡೆಸಬೇಕಾಯಿತು.
ಶ್ರೀನಿವಾಸನ್, ಅನುರಾಗ್ ಠಾಕೂರ್ ಪದಚ್ಯುತಿ
ತಾವೇ ಮಾಲಿಕರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿರುವುದರಿಂದ, ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಅಧಿಕಾರ ಕಳೆದುಕೊಂಡರು. ಸರ್ವೋಚ್ಚ ನ್ಯಾಯಪೀಠ ಅವರನ್ನು 2014ರಲ್ಲಿ ಪದಚ್ಯುತ ಮಾಡಿತು. ಬಿಸಿಸಿಐನಲ್ಲಿ ಮಾಡಲು ಹೇಳಿದ್ದ ಸಮಗ್ರ ಆಡಳಿತಾತ್ಮಕ ಸುಧಾರಣೆಗೆ ಸಹಕಾರ ಮಾಡಲಿಲ್ಲವೆಂಬ ಕಾರಣಕ್ಕೆ, ಮುಂದೆ ಅಧ್ಯಕ್ಷರಾದ ಅನುರಾಗ್ ಠಾಕೂರ್ ಅವರನ್ನೂ 2017 ಸರ್ವೋಚ್ಚ ನ್ಯಾಯಾಲಯ ಪದಚ್ಯುತಗೊಳಿಸಿತು. ಅದಾದ ಮೇಲೆ ಶೇ.70ರಷ್ಟು ಬಿಸಿಸಿಐ ಸಂವಿಧಾನವನ್ನೇ ಬದಲಿಸಲಾಯಿತು.
2012ರಲ್ಲಿ ಪಾಮರ್ ಬಾಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಪಂಜಾಬ್ ಕಿಂಗ್ಸ್ ಮಾಲಿಕ ನೆಸ್ ವಾಡಿಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹಿಂದೊಮ್ಮೆ ಸಹ ಮಾಲಕಿ ಪ್ರೀತಿ ಜಿಂಟಾ ಆರೋಪಿಸಿದ್ದರು. ಅದಕ್ಕಿಂತ ದೊಡ್ಡ ಪ್ರಕರಣ ನಡೆದಿದ್ದು 2012ರಲ್ಲಿ. ಆಸ್ಟ್ರೇಲಿಯದ ಎಡಗೈ ಬ್ಯಾಟ್ಸ್‌ಮನ್ ಲೂಕ್ ಪಾಮರ್‌ಬಾಕ್ ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾಗಿದ್ದರು. ಅವರು ಜೊಹಲ್ ಹಮೀದ್ ಎಂಬ ಅಮೆರಿಕ ವ್ಯಕ್ತಿಗೆ ಲೈಂಗಿಕ ಕಿರುಕುಳ ನೀಡಿದ್ದು ದೊಡ್ಡ ಸುದ್ದಿಯಾಗಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಲೂಕ್ ಬಂಧನದ ಭೀತಿ ಎದುರಿಸಿದ್ದರು. ಅಷ್ಟರಲ್ಲಿ ಪ್ರಕರಣ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿ ಲೂಕ್ ಸುರಕ್ಷಿತವಾಗಿ ಆಸ್ಟ್ರೇಲಿಯಕ್ಕೆ ಮರಳಿದರು. ಮುಂದೆ ಲೂಕ್ ಕ್ರಿಕೆಟ್‌ನಿಂದಲೇ ನಿವೃತ್ತರಾದರು.
2013ರಲ್ಲಿ ಸ್ಪಾಟ್ ಫಿಕ್ಸಿಂಗ್‌ನ ಮಹಾಸ್ಫೋಟ
ಈ ಪ್ರಕರಣವಂತೂ ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯಲು ಸಾಧ್ಯವೇ ಇಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾಗಿದ್ದ ಎಸ್.ಶ್ರೀಶಾಂತ್, ಅಂಕಿತ್ ಚವಾಣ್, ಅಜಿತ್ ಚಂಡೀಲರನ್ನು, ರಾತ್ರೋರಾತ್ರಿ ಮುಂಬೈ ಪೊಲೀಸರು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿಸಿದರು. ಮುಂದೆ ಮೂವರೂ ಆಜೀವ ನಿಷೇಧಕ್ಕೊಳಗಾದರು. ಶ್ರೀಶಾಂತ್ ನ್ಯಾಯಾಲಯ ಹೋರಾಟದ ನಂತರ ನಿಷೇಧದಿಂದ ಹೊರಬಂದಿದ್ದಾರೆ. ಅದಕ್ಕೂ ಮುನ್ನವೇ ದೆಹಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಾಗಿದ್ದ ಎಲ್ಲರನ್ನೂ ಸಾಕ್ಷಾಧಾರದ ಕೊರತೆಯಿಂದ ಖುಲಾಸೆ ಮಾಡಿತು. ಈ ಘಟನೆ ಹಲವು ರೂಪದಲ್ಲಿ, ಹಲವು ವರ್ಷಗಳ ಕಾಲ ಬಿಸಿಸಿಐಯನ್ನು ಕಾಡಿತು.
ಚೆನ್ನೈ ಕಿಂಗ್ಸ್, ರಾಜಸ್ಥಾನ್‌ಗೆ 2 ವರ್ಷ ನಿಷೇಧ
2013ರ ಫಿಕ್ಸಿಂಗ್ ಪ್ರಕರಣದಿಂದಾದ ಮತ್ತೂಂದು ದೊಡ್ಡ ಬೆಳವಣಿಗೆಯೆಂದರೆ, ಐಪಿಎಲ್‌ನ ಎರಡು ಪ್ರಸಿದ್ಧ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧಿಸಿದ್ದು. ಚೆನ್ನೈನ ಆಡಳಿತ ಮಾಲಿಕ ಮೈಯಪ್ಪನ್, ರಾಜಸ್ಥಾನ್ ಸಹ ಮಾಲಿಕ ರಾಜ್ ಕುಂದ್ರಾ ಬೆಟ್ಟಿಂಗ್ ಮಾಡಿದ ಪರಿಣಾಮ, ಈ ತಂಡಗಳು ನಿಷೇಧ ಅನುಭವಿಸುವಂತಾಯಿತು. ಅವು 2016, 2017ರ ಕೂಟದಿಂದ ಹೊರಬಿದ್ದವು.
ಮೈಯಪ್ಪನ್, ರಾಜ್‌ಕುಂದ್ರಾಗೆ ನಿಷೇಧ
ಐಪಿಎಲ್‌ನಲ್ಲಿ ತಂಡದ ಮಾಲಿಕರಾಗಿದ್ದವರು ಯಾವ ಕಾರಣಕ್ಕೂ ತಪ್ಪು ಮಾಡುವಂತಿಲ್ಲ. ಚೆನ್ನೈ ತಂಡದ ಆಡಳಿತ ಮುಖ್ಯಸ್ಥರಾಗಿದ್ದ ಶ್ರೀನಿವಾಸನ್ ಅಳಿಯ ಗುರುನಾಥ್ ಮೈಯಪ್ಪನ್, ರಾಜಸ್ಥಾನ್ ರಾಯಲ್ಸ್ ತಂಡದ ಅಂದಿನ ಮುಖ್ಯಸ್ಥರಾಗಿದ್ದ ರಾಜ್ ಕುಂದ್ರಾ, 2013ರ ಪ್ರಕರಣದ ತನಿಖೆ ವೇಳೆ ಬೆಟ್ಟಿಂಗ್ ನಡೆಸಿದ್ದು ಸಾಬೀತಾಯಿತು. ಇದರಿಂದ ಈ ಇಬ್ಬರನ್ನೂ ಕ್ರಿಕೆಟ್ ಸಂಬಂಧಿ ಚಟುವಟಿಕೆಗಳಿಂದ ಸರ್ವೋಚ್ಚ ನ್ಯಾಯಪೀಠ ಆಜೀವ ನಿಷೇಧಿಸಿತು.
2014ರಲ್ಲೂ ಅರ್ಧ ಕೂಟ ಯುಎಇನಲ್ಲಿ
2009ರಲ್ಲಿ ಲೋಕಸಭಾ ಚುನಾವಣೆ ಕಾರಣಕ್ಕೆ ಪೂರ್ಣ ಕೂಟ ದ.ಆಫ್ರಿಕಾದಲ್ಲಿ ನಡೆದಿತ್ತು. 2014ರಲ್ಲೂ ಲೋಕಸಭಾ ಚುನಾವಣೆ ಯಿದ್ದಿದ್ದರಿಂದ ಅರ್ಧದಷ್ಟು ಕೂಟ ಯುಎಇನಲ್ಲಿ ನಡೆಯಿತು. ಅನಂತರ ಭಾರತಕ್ಕೆ ಮರಳಿತು. ಸಾರ್ವತ್ರಿಕ ಚುನಾವಣೆ ಕಾರಣಕ್ಕೆ, ಕೂಟವನ್ನೇ ಹೊರ ದೇಶದಲ್ಲಿ ನಡೆಸಬೇಕಾದ 2ನೇ ಉದಾಹರಣೆಯಿದು.
2016ರ ಕೂಟಕ್ಕೆ ಬರದ ಛಾಯೆ
2016ರ ಐಪಿಎಲ್‌ಗೆ ಅತಿ ಹೆಚ್ಚು ಕಾಡಿದ್ದು ನೀರಿನ ಬರ. ಕಳೆದ 100 ವರ್ಷದಲ್ಲೇ ಮಹಾರಾಷ್ಟ್ರದಲ್ಲಿ ಕಂಡು ಕೇಳರಿಯದ ಬರವಿದೆ. ಆದ್ದರಿಂದ ಈ ಬಾರಿ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯ ನಡೆಸಬಾರದೆಂದು ಲೋಕಸತ್ತಾ ಎಂಬ ಎನ್‌ಜಿಒ ಅರ್ಜಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿ ಮಹಾರಾಷ್ಟ್ರ ಉಚ್ಚ ನ್ಯಾಯಾಲಯ ತೀರ್ಪು ನೀಡಿತು. ಪರಿಣಾಮ ಮಹಾರಾಷ್ಟ್ರದಲ್ಲಿ ಮುಂಬೈ, ಪುಣೆ, ನಾಗ್ಪುರದಲ್ಲಿ ನಡೆಸಬೇಕಾಗಿದ್ದ ಒಟ್ಟು 20 ಪಂದ್ಯಗಳ ಪೈಕಿ 12 ರದ್ದಾಯಿತು. ನಡೆದಿದ್ದು ಕೇವಲ 8 ಪಂದ್ಯ. ಉಳಿದ ಪಂದ್ಯಗಳು ನೀರಿನ ಸಮಸ್ಯೆಯಿಲ್ಲದ ಬೇರೆ ಬೇರೆ ರಾಜ್ಯಕ್ಕೆ ವರ್ಗಾವಣೆಗೊಂಡವು. ಮಹಾರಾಷ್ಟ್ರ ಮಾದರಿಯಲ್ಲೇ ಅದೇ ವರ್ಷ ದೇಶದ ಉಳಿದ ಕಡೆ ಅರ್ಜಿ ಸಲ್ಲಿಕೆಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.