ರಣಜಿ ಪಂದ್ಯ: ಮುನ್ನಡೆ ಬಳಿಕ ಕುಸಿದ ಕರ್ನಾಟಕ
29 ರನ್ ಇನ್ನಿಂಗ್ಸ್ ಲೀಡ್; ದ್ವಿತೀಯ ಸರದಿಯಲ್ಲಿ 89ಕ್ಕೆ 5
Team Udayavani, Dec 12, 2019, 5:12 AM IST
ಸಾಂದರ್ಭಿಕ ಚಿತ್ರ.
ದಿಂಡಿಗಲ್ (ತಮಿಳುನಾಡು): ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಮಹತ್ವದ ಮೊದಲ ಇನ್ನಿಂಗ್ಸ್ ಲೀಡ್ ಪಡೆದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಬ್ಯಾಟಿಂಗ್ ಕುಸಿತ ಅನುಭವಿಸಿದೆ. 3ನೇ ದಿನ ದಾಟದ ಅಂತ್ಯಕ್ಕೆ 5 ವಿಕೆಟಿಗೆ ಕೇವಲ 89 ರನ್ ಮಾಡಿದ್ದು, 118 ರನ್ನುಗಳ ಮುನ್ನಡೆಯನ್ನಷ್ಟೇ ಹೊಂದಿದೆ.
ಗುರುವಾರ ಪಂದ್ಯದ ಅಂತಿಮ ದಿನವಾಗಿದ್ದು, ಕರ್ನಾಟಕ ಸಾಧ್ಯವಾದಷ್ಟು ಹೊತ್ತು ಬ್ಯಾಟಿಂಗ್ ವಿಸ್ತರಿಸಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಬ್ಯಾಟಿಂಗ್ ಕುಸಿತ ಮುಂದುವರಿದರೆ ಆಗ ಕರ್ನಾಟಕದ ಬೌಲರ್‌ಗಳು ಮ್ಯಾಜಿಕ್ ಮಾಡಬೇಕಾಗುತ್ತದೆ.
ಕರ್ನಾಟಕದ 5 ವಿಕೆಟ್ 59 ರನ್ ಆಗುವಷ್ಟರಲ್ಲಿ ಉರುಳಿತ್ತು. ಆದರೆ ವನ್‌ಡೌನ್ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಕ್ರೀಸ್ ಆಕ್ರಮಿಸಿಕೊಂಡಿದ್ದು, ರಾಜ್ಯದ ಭರವಸೆಯಾಗಿ ಉಳಿದಿದ್ದಾರೆ. 106 ಎಸೆತ ಎದುರಿಸಿರುವ ಪಡಿಕ್ಕಲ್ 29 ರನ್ ಮಾಡಿ ಆಡುತ್ತಿದ್ದು, ಇವರೊಂದಿಗೆ 25 ರನ್ ಮಾಡಿರುವ ಕೀಪರ್ ಬಿ.ಆರ್. ಶರತ್ ಕ್ರೀಸಿನಲ್ಲಿದ್ದಾರೆ.
ಮಾಯಾಂಕ್ ಅಗರ್ವಾಲ್ (8), ಡಿ. ನಿಶ್ಚಲ್ (0), ನಾಯಕ ಕರುಣ್ ನಾಯರ್ (5), ಪವನ್ ದೇಶಪಾಂಡೆ (20) ಮತ್ತು ಶ್ರೇಯಸ್ ಗೋಪಾಲ್ (0) ಅವರನ್ನು ಕರ್ನಾಟಕ ಈಗಾಗಲೇ ಕಳೆದುಕೊಂಡಿದೆ. ಆಲ್‌ರೌಂಡರ್ ಕೆ. ಗೌತಮ್, ರೋನಿತ್ ಮೋರೆ ಮೇಲೆ ಭರವಸೆ ಇರಿಸಿದೆ.
ತಮಿಳುನಾಡು ಪರ ಕೆ. ವಿಘ್ನೇಶ್ ಮತ್ತು ಆರ್. ಅಶ್ವಿನ್ ತಲಾ 2 ವಿಕೆಟ್ ಉರುಳಿಸಿದರು. ಅಗರ್ವಾಲ್ ದುರದೃಷ್ಟವಶಾತ್ ರನೌಟಾದರು.
ಇದಕ್ಕೂ ಮುನ್ನ ತಮಿಳುನಾಡು ದಿನೇಶ್ ಕಾರ್ತಿಕ್ ಅವರ ಶತಕದ ಹೊರತಾಗಿಯೂ (113) 307ಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿತು. ಕೆ. ಗೌತಮ್ 110ಕ್ಕೆ 6 ವಿಕೆಟ್ ಉಡಾಯಿಸಿದರು. ಕರ್ನಾಟಕ 336 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-336 ಮತ್ತು 5 ವಿಕೆಟಿಗೆ 89. ತಮಿಳುನಾಡು-307.
ಪೃಥ್ವಿ ಶಾ ದ್ವಿಶತಕ
ವಡೋದರ: ಮುಂಬಯಿಯ ಆರಂಭಕಾರ ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟಿಗೆ ಭರ್ಜರಿ ಪುನರಾಗಮನ ಸಾರಿದ್ದಾರೆ. ಬರೋಡ ವಿರುದ್ಧದ ರಣಜಿ ಪಂದ್ಯದ 3ನೇ ದಿನವಾದ ಬುಧವಾರ 202 ರನ್ ಬಾರಿಸಿ ಮಿಂಚಿದ್ದಾರೆ. ದ್ವಿತೀಯ ಸರದಿಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಶಾ 179 ಎಸೆತಗಳಿಂದ, 19 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ತಮ್ಮ ಇನ್ನಿಂಗ್ಸ್ ಕಟ್ಟಿದರು. ಸೂರ್ಯಕುಮಾರ್ ಯಾದವ್ 102 ರನ್ ಗಳಿಸಿ ಔಟಾಗದೆ ಉಳಿದರು. 124 ರನ್ ಮೊದಲ ಇನ್ನಿಂಗ್ಸ್ ಲೀಡ್ ಪಡೆದ ಮುಂಬಯಿ 4ಕ್ಕೆ 409 ರನ್ ಪೇರಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿತು. ಗೆಲುವಿಗೆ 534 ರನ್ನುಗಳ ಕಠಿನ ಸವಾಲು ಪಡೆದ ಬರೋಡ, 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 74 ರನ್ ಮಾಡಿ ಸಂಕಟಕ್ಕೆ ಸಿಲುಕಿದೆ.
ಸಂಕ್ಷಿಪ್ತ ಸ್ಕೋರ್: ಮುಂಬಯಿ-431 ಮತ್ತು 4 ವಿಕೆಟಿಗೆ 409 ಡಿಕ್ಲೇರ್. ಬರೋಡ-307 ಮತ್ತು 3 ವಿಕೆಟಿಗೆ 74.
ವಿನಯ್ ಕುಮಾರ್
400 ವಿಕೆಟ್
ಪಾಟ್ನಾ: ಈಗ ಪುದುಚೇರಿಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಮಾಜಿ ಪೇಸ್ ಬೌಲರ್ ಆರ್. ವಿನಯ್ ಕುಮಾರ್ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 400 ವಿಕೆಟ್ ಉರುಳಿಸಿದ ಸಾಧನೆಗೈದಿದ್ದಾರೆ. ಬಿಹಾರ ವಿರುದ್ಧ 3ನೇ ದಿನದಾಟದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು.
ವಿನಯ್ ಕುಮಾರ್ ರಣಜಿ ಕ್ರಿಕೆಟ್‌ನಲ್ಲಿ 400 ಪ್ಲಸ್ ವಿಕೆಟ್ ಕಿತ್ತ 11ನೇ ಬೌಲರ್, ಕೇವಲ 2ನೇ ಪೇಸ್ ಬೌಲರ್. ಹರ್ಯಾಣದ ಸ್ಪಿನ್ನರ್ ರಾಜೀಂದರ್ ಗೋಯೆಲ್ 637 ವಿಕೆಟ್ ಉರುಳಿಸಿರುವುದು ದಾಖಲೆ. ಪೇಸ್ ವಿಭಾಗದ ದಾಖಲೆ ರಾಜಸ್ಥಾನದ ಪಂಕಜ್ ಸಿಂಗ್ ಹೆಸರಲ್ಲಿದೆ (409).
ಕರ್ನಾಟಕವನ್ನು ಸತತ 2 ಸಲ ರಣಜಿ ಚಾಂಪಿಯನ್ ಪಟ್ಟಕ್ಕೇರಿಸಿದ ಕಪ್ತಾನನಾಗಿರುವ ವಿನಯ್ ಕುಮಾರ್, ಭಾರತದ ಪರ ಏಕೈಕ ಟೆಸ್ಟ್, 31 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದಾರೆ.
ದಿಲ್ಲಿಗೆ ಫಾಲೋಆನ್
ತಿರುವನಂತಪುರ: ಜಲಜ್ ಸಕ್ಸೇನಾ ಅವರ ಘಾತಕ ದಾಳಿಗೆ ತತ್ತರಿಸಿದ ದಿಲ್ಲಿ, ಆತಿಥೇಯ ಕೇರಳ ವಿರುದ್ಧದ ರಣಜಿ ಮುಖಾಮುಖೀಯಲ್ಲಿ ಫಾಲೋಆನ್‌ಗೆ ತುತ್ತಾಗಿದೆ.
ಕೇರಳದ 525 ರನ್ನುಗಳ ಬೃಹತ್ ಮೊತ್ತಕ್ಕೆ ಜವಾಬಾಗಿ ದಿಲ್ಲಿ 142 ರನ್ನಿಗೆ ಕುಸಿಯಿತು. ಸಕ್ಸೇನಾ 63 ರನ್ನಿಗೆ 6 ವಿಕೆಟ್ ಉಡಾಯಿಸಿದರು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ದಿಲ್ಲಿ ಒಂದು ವಿಕೆಟಿಗೆ 142 ರನ್ ಮಾಡಿದೆ. ಇನ್ನೂ 241 ರನ್ ಹಿನ್ನಡೆಯಲ್ಲಿದೆ.
ಸಂಕ್ಷಿಪ್ತ ಸ್ಕೋರ್: ಕೇರಳ-525. ದಿಲ್ಲಿ 142 ಮತ್ತು ಒಂದು ವಿಕೆಟಿಗೆ 142.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.