ಗೆಲುವಿನ ಕಹಳೆ ಮೊಳಗಿಸಿದ ಗೌತಮ್
ರಣಜಿ: ತಮಿಳುನಾಡಿಗೆ 26 ರನ್ ಸೋಲು
Team Udayavani, Dec 13, 2019, 5:54 AM IST
ದಿಂಡಿಗಲ್ (ತಮಿಳುನಾಡು): ದಿಂಡಿಗಲ್ ರಣಜಿ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ದಾಳಿಗೆ ದಿಂಡುರುಳಿದ ಆತಿಥೇಯ ತಮಿಳುನಾಡು 26 ರನ್ನುಗಳಿಂದ ಕರ್ನಾಟಕಕ್ಕೆ ಶರಣಾಗಿದೆ. ಇದರೊಂದಿಗೆ ಕರುಣ್ ನಾಯರ್ ಪಡೆ 2019-20ನೇ ಸಾಲಿನ ರಣಜಿ ಋತುವನ್ನು ರೋಚಕ ಗೆಲುವಿನೊಂದಿಗೆ ಆರಂಭಿಸಿದೆ.
ಗೆಲುವಿಗೆ 181 ರನ್ನುಗಳ ಗುರಿ ಪಡೆದ ತಮಿಳುನಾಡು, ಅಂತಿಮವಾಗಿ 154ಕ್ಕೆ ಸರ್ವಪತನ ಕಂಡಿತು. ಇದಕ್ಕೂ ಮೊದಲು ಕರ್ನಾಟಕ ತನ್ನ ದ್ವಿತೀಯ ಸರದಿಯಲ್ಲಿ 151ಕ್ಕೆ ಆಲೌಟ್ ಆಗಿತ್ತು.
ಕರ್ನಾಟಕ ಡಿ. 20ರಿಂದ 2ನೇ ಲೀಗ್ ಪಂದ್ಯದಲ್ಲಿ ಉತ್ತರಪ್ರದೇಶವನ್ನು ಎದುರಿಸ ಲಿದೆ. ಈ ಮುಖಾಮುಖೀ ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೆ. ಗೌತಮ್ ಮ್ಯಾಜಿಕ್
ಬೌಲಿಂಗಿಗೆ ಹೆಚ್ಚಿನ ನೆರವು ನೀಡುತ್ತಿದ್ದ ದಿಂಡಿಗಲ್ ಟ್ರ್ಯಾಕ್‌ನಲ್ಲಿ ಎರಡೂ ತಂಡಗಳಿಗೆ ಗೆಲ್ಲುವ ಅವಕಾಶವಿತ್ತು. ಹಾಗೆಯೇ ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ಸಾಧ್ಯತೆಯೂ ಇತ್ತು. ಆದರೆ ಪಂದ್ಯದ ಕೊನೆಯ 2 ಓವರ್‌ಗಳಲ್ಲಿ ಮ್ಯಾಜಿಕ್ ಮಾಡಿದ ಗೌತಮ್, ತಮಿಳುನಾಡಿನ ಅಂತಿಮ 2 ವಿಕೆಟ್ ಉಡಾಯಿಸಿ ಕರ್ನಾಟಕದ ಗೆಲುವನ್ನು ಸಾರಿದರು. ಆಗ ಪಂದ್ಯದ ಮುಕ್ತಾಯಕ್ಕೆ 3 ಎಸೆತಗಳಷ್ಟೇ ಬಾಕಿ ಇದ್ದವು.
ಕೆ. ಗೌತಮ್ ಸಾಧನೆ 60ಕ್ಕೆ 8 ವಿಕೆಟ್. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 6 ವಿಕೆಟ್ ಉಡಾಯಿಸಿದ್ದರು. ಒಟ್ಟು ಸಾಧನೆ 170ಕ್ಕೆ 14 ವಿಕೆಟ್. ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಿ 51 ಮತ್ತು 22 ರನ್ ಹೊಡೆದಿದ್ದರು. ಈ ಆಲ್‌ರೌಂಡ್ ಸಾಹಸಕ್ಕಾಗಿ ಅವರಿಗೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.
ಕರ್ನಾಟಕ 151 ಆಲೌಟ್
ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಬಳಿಕ ಕರ್ನಾಟಕ ದ್ವಿತೀಯ ಇನ್ನಿಂಗ್ಸ್
ನಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿತ್ತು. 5ಕ್ಕೆ 89 ರನ್ ಗಳಿಸಿದಲ್ಲಿಂದ ಬ್ಯಾಟಿಂಗ್ ಮುಂದುವರಿಸಿ 151ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪಡಿಕ್ಕಲ್ 39, ಶರತ್ 28, ಮಥಾಯಿಸ್ ಮತ್ತು ಕೆ. ಗೌತಮ್ ತಲಾ 22 ರನ್ ಹೊಡೆದರು. ಆರ್. ಅಶ್ವಿನ್ 4, ಕೆ. ವಿಘ್ನೇಶ್ 3 ವಿಕೆಟ್ ಉರುಳಿಸಿದರು.
ಭರವಸೆಯ ಚೇಸಿಂಗ್
ತಮಿಳುನಾಡಿನ ಚೇಸಿಂಗ್ ಭರವಸೆ ಯಿಂದಲೇ ಕೂಡಿತ್ತು. ಅಭಿನವ್‌ಮುಕುಂದ್-ಮುರಳಿ ವಿಜಯ್ ಮೊದಲ ವಿಕೆಟಿಗೆ 49 ರನ್ ಮಾಡಿ ಗೆಲುವಿನ ಸೂಚನೆ ನೀಡಿದರು. ಆದರೆ 10ನೇ ಓವರಿನಲ್ಲಿ ಮುರಳಿ ವಿಜಯ್ ರನೌಟಾಗುವುದರೊಂದಿಗೆ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. ಕೆ. ಗೌತಮ್ ಕೆರಳಿ ನಿಂತರು. ಹೀಗಾಗಿ ಗೆಲುವಿನ ಪ್ರಯತ್ನ ಕೈಬಿಟ್ಟ ತಮಿಳುನಾಡು ಪಂದ್ಯವನ್ನು ಡ್ರಾಗೊಳಿಸಲು ಮುಂದಾಯಿತು.
ಆಗ ರನ್ನೂ ಬರಲಿಲ್ಲ, ವಿಕೆಟ್‌ಗಳೂ ಉಳಿಯಲಿಲ್ಲ. 114ಕ್ಕೆ 8 ವಿಕೆಟ್ ಹಾರಿ ಹೋಯಿತು. 9ನೇ ವಿಕೆಟಿಗೆ ಜತೆಗೂಡಿದ ಮುರುಗನ್ ಅಶ್ವಿನ್-ಮಣಿಮಾರನ್ ಸಿದ್ಧಾರ್ಥ ಕರ್ನಾಟಕ ದಾಳಿಯನ್ನು ತಡೆದು ನಿಂತಾಗ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಿತು. ಇವರಿಬ್ಬರು 13 ಓವರ್‌ಗಳಷ್ಟು ಕಾಲ ರಾಜ್ಯಕ್ಕೆ ಸವಾಲಾಗಿ ಉಳಿದರು.
ಇನ್ನೇನು ಕರ್ನಾಟಕ ಇನ್ನಿಂಗ್ಸ್ ಮುನ್ನಡೆಗಷ್ಟೇ ತೃಪ್ತಿ ಪಡಬೇಕೆನ್ನುವಾಗಲೇ ಗೌತಮ್ ಜಾದೂ ಮಾಡಿದರು!
ಕರ್ನಾಟಕ ಪ್ರಥಮ ಇನ್ನಿಂಗ್ಸ್ 336
ತಮಿಳುನಾಡು ಪ್ರಥಮ ಇನ್ನಿಂಗ್ಸ್ 307
ಕರ್ನಾಟಕ ದ್ವಿತೀಯ ಇನ್ನಿಂಗ್ಸ್ 151
ತಮಿಳುನಾಡು ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 181 ರನ್)
ಅಭಿನವ್ ಸಿ ನಾಯರ್ ಬಿ ಗೌತಮ್ 42
ಮುರಳಿ ವಿಜಯ್ ರನೌಟ್ 15
ಬಾಬಾ ಅಪರಾಜಿತ್ ಎಲ್‌ಬಿಡಬ್ಲ್ಯು ಗೌತಮ್ 0
ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಗೌತಮ್ 2
ದಿನೇಶ್ ಕಾರ್ತಿಕ್ ಬಿ ಗೌತಮ್ 17
ವಿಜಯ್ ಶಂಕರ್ ಸಿ ಮೋರೆ ಬಿ ಗೌತಮ್ 5
ಎನ್. ಜಗದೀಶನ್ ಎಲ್‌ಬಿಡಬ್ಲ್ಯು ಕೌಶಿಕ್ 7
ಎಂ. ಅಶ್ವಿನ್ ಔಟಾಗದೆ 23
ಸಾಯಿ ಕಿಶೋರ್ ಎಲ್‌ಬಿಡಬ್ಲ್ಯು ಗೌತಮ್ 6
ಎಂ. ಸಿದ್ಧಾರ್ಥ ಬಿ ಗೌತಮ್ 20
ಕೆ. ವಿಘ್ನೇಶ್ ಔಟಾಗದೆ 4
ಇತರ 13
ಒಟ್ಟು (ಆಲೌಟ್) 154
ವಿಕೆಟ್ ಪತನ: 1-49, 2-49, 3-53, 4-72, 5-84, 6-94, 7-98, 8-114, 9-150.
ಬೌಲಿಂಗ್: ರೋನಿತ್ ಮೋರೆ 15-4-51-0
ವಿ. ಕೌಶಿಕ್ 12-2-23-1
ಕೃಷ್ಣಪ್ಪ ಗೌತಮ್ 30.3-11-60-8
ಶ್ರೇಯಸ್ ಗೋಪಾಲ್ 6-2-9-0
ಪಂದ್ಯಶ್ರೇಷ್ಠ: ಕೃಷ್ಣಪ್ಪ ಗೌತಮ್
ಮುಂಬಯಿಗೆ 309 ರನ್ ಜಯ
ವಡೋದರ: “ರಣಜಿ ಕಿಂಗ್’ ಮುಂಬಯಿ 2019-20ರ ಋತುವನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಬರೋಡ ವಿರುದ್ಧದ ಮೊದಲ ಪಂದ್ಯವನ್ನು 309 ರನ್ನುಗಳ ಅಂತರದಿಂದ ತನ್ನದಾಗಿಸಿಕೊಂಡಿದೆ.
ಗೆಲುವಿಗೆ 534 ರನ್ನುಗಳ ಕಠಿನ ಗುರಿ ಪಡೆದ ಆತಿಥೇಯ ಬರೋಡ, ಪಂದ್ಯದ ಕೊನೆಯ ದಿನವಾದ ಗುರುವಾರ 224ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಮನ್ಯು ರಜಪೂತ್ (53)-ದೀಪಕ್ ಹೂಡಾ (61) ಮಧ್ಯಮ ಕ್ರಮಾಂಕದಲ್ಲಿ ಹೋರಾಟ ಸಂಘಟಿಸಿದರೂ ಬರೋಡಕ್ಕೆ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಶಮ್ಸ್ ಮುಲಾನಿ (72ಕ್ಕೆ 4), ಶಶಾಂಕ್ ಅತ್ತರ್ದೆ (61ಕ್ಕೆ 2) ಮತ್ತು ಆಕಾಶ್ ಪಾರ್ಕರ್ (16ಕ್ಕೆ 2) ಘಾತಕ ದಾಳಿ ನಡೆಸಿ ಬರೋಡವನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಮುಂಬಯಿ-431 ಮತ್ತು 4 ವಿಕೆಟಿಗೆ 409 ಡಿಕ್ಲೇರ್. ಬರೋಡ-307 ಮತ್ತು 224.
ಡ್ರಾ ಸಾಧಿಸಿದ ದಿಲ್ಲಿ
ತಿರುವನಂತಪುರ: ಆತಿಥೇಯ ಕೇರಳ ವಿರುದ್ಧ ಫಾಲೋಆನ್‌ಗೆ ತುತ್ತಾದ ಬಳಿಕ ದಿಟ್ಟ ಹೋರಾಟ ನಡೆಸಿದ ದಿಲ್ಲಿ, ಋತುವಿನ ಮೊದಲ ರಣಜಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರಂಭಕಾರ ಕುಣಾಲ್ ಚಂದೇಲ (125) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ನಿತೀಶ್ ರಾಣಾ (114) ಅಮೋಘ ಶತಕ ಬಾರಿಸಿ ತಂಡವನ್ನು ಸೋಲಿನಿಂದ ಪಾರುಮಾಡಿದರು. ಮತ್ತೋರ್ವ ಓಪನರ್ ಅನುಜ್ ರಾವತ್ 87 ರನ್ ಬಾರಿಸಿದರು. ಮೊದಲ ವಿಕೆಟಿಗೆ 130 ರನ್ ಒಟ್ಟುಗೂಡಿತು. 3ನೇ ವಿಕೆಟಿಗೆ ಜತೆಗೂಡಿದ ಚಂದೇಲ-ರಾಣಾ 118 ರನ್ ಪೇರಿಸಿದರು. ಪಂದ್ಯ ಮುಗಿಯುವ ವೇಳೆ ದಿಲ್ಲಿ ದ್ವಿತೀಯ ಸರದಿಯಲ್ಲಿ 4 ವಿಕೆಟಿಗೆ 395 ರನ್ ಗಳಿಸಿತ್ತು.
ಸಂಕ್ಷಿಪ್ತ ಸ್ಕೋರ್: ಕೇರಳ-525. ದಿಲ್ಲಿ-142 ಮತ್ತು 4 ವಿಕೆಟಿಗೆ 395.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.