ರಣಜಿ ಫೈನಲ್: ಶೋರೆ ಶತಕ ಶೌರ್ಯ; ದಿಲ್ಲಿ ಚೇತರಿಕೆ
Team Udayavani, Dec 30, 2017, 6:20 AM IST
ಇಂದೋರ್: ವನ್‌ಡೌನ್ ಬ್ಯಾಟ್ಸ್‌ಮನ್ ಧ್ರುವ ಶೋರೆ ಅವರ ಜೀವನಶ್ರೇಷ್ಠ ಬ್ಯಾಟಿಂಗ್ ಸಾಹಸದಿಂದ ದೊಡ್ಡ ಆತಂಕದಿಂದ ಪಾರಾದ ದಿಲ್ಲಿ ತಂಡ, ವಿದರ್ಭ ಎದುರಿನ ರಣಜಿ ಫೈನಲ್ ಪಂದ್ಯದ ಮೊದಲ ದಿನ 6 ವಿಕೆಟಿಗೆ 271 ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ. ಶತಕ ಶೌರ್ಯ ಮೆರೆದ ಶೋರೆ 123 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ವಿದರ್ಭ ಮೊದಲು ಬೌಲಿಂಗ್ ಆಕ್ರಮಣವನ್ನೇ ನೆಚ್ಚಿಕೊಂಡಿತು. ಇದರಲ್ಲಿ ಭರ್ಜರಿ ಯಶಸ್ಸನ್ನೂ ಸಾಧಿಸಿತು. 99 ರನ್ನಿಗೆ ದಿಲ್ಲಿಯ 4 ವಿಕೆಟ್ ಉರುಳಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ ಧ್ರುವ ಶೋರೆ ಮತ್ತು ಹಿಮ್ಮತ್ ಸಿಂಗ್ ಅವರ ಜವಾಬ್ದಾರಿಯುತ ಜತೆಯಾಟದಿಂದ ದಿಲ್ಲಿ ಚೇತರಿಕೆಯ ಹಾದಿ ಹಿಡಿಯಿತು. ಇವರು 5ನೇ ವಿಕೆಟಿಗೆ 105 ರನ್ ಪೇರಿಸಿದರು. ಸಾಹಸಮಯ ಆಟವಾಡಿದ ಹಿಮ್ಮತ್ ಕೊಡುಗೆ 66 ರನ್.
ಬಲಗೈ ಬ್ಯಾಟ್ಸ್‌ಮನ್ ಧ್ರುವ ಶೋರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಾರಿಸಿದ 3ನೇ ಶತಕ ಇದಾಗಿದೆ. ಜತೆಗೆ ಇದು ಅವರ ಜೀವನಶ್ರೇಷ್ಠ ಬ್ಯಾಟಿಂಗ್ ಕೂಡ ಹೌದು. 256 ಎಸೆತಗಳನ್ನು ದಿಟ್ಟತನದಿಂದ ನಿಭಾಯಿಸಿರುವ ಶೋರೆ 17 ಬೌಂಡರಿಗಳ ನೆರವಿನಿಂದ ಈ ಅತ್ಯಮೂಲ್ಯ ಇನ್ನಿಂಗ್ಸ್ ಕಟ್ಟಿದ್ದಾರೆ.
21ರ ಹರೆಯದ, ಕೇವಲ 5ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ ಹಿಮ್ಮತ್ ಸಿಂಗ್ ಆಟ ಬಹಳ ಆಕ್ರಮಣಕಾರಿ ಆಗಿತ್ತು. ವಿದರ್ಭ ಬೌಲರ್‌ಗಳ ಮೇಲೆರಗಿ ಹೋದ ಅವರು ಕೇವಲ 72 ಎಸೆತಗಳಿಂದ 66 ರನ್ ಸಿಡಿಸಿದರು. 8 ಬೌಂಡರಿ ಜತೆಗೆ 2 ಸಿಕ್ಸರ್ ಇದರಲ್ಲಿ ಸೇರಿತ್ತು.
ಇವರಿಬ್ಬರನ್ನು ಹೊರತುಪಡಿಸಿದರೆ ದಿಲ್ಲಿ ಸರದಿಯಲ್ಲಿ ಯಾರೂ ದೊಡ್ಡ ಮೊತ್ತ ದಾಖಲಿಸಲಿಲ್ಲ. ಭರವಸೆಯ ಆಟಗಾರ ನಿತೀಶ್ ರಾಣ, ನಾಯಕ ರಿಷಬ್ ಪಂತ್ ತಲಾ 21 ರನ್ ಮಾಡಿದರು. ಟೀಮ್ ಇಂಡಿಯಾದ ಮಾಜಿ ಆರಂಭಕಾರ ಗೌತಮ್ ಗಂಭೀರ್ ಗಳಿಕೆ ಕೇವಲ 15 ರನ್. ಶೋರೆ ಜತೆ 5 ರನ್ ಮಾಡಿರುವ ವಿಕಾಸ್ ಮಿಶ್ರ ಕ್ರೀಸಿನಲ್ಲಿದ್ದಾರೆ.
ಮೊದಲ ಓವರಲ್ಲೇ ಆಘಾತ
ವಿದರ್ಭದ ಪ್ರಧಾನ ಬೌಲರ್ ರಜನೀಶ್ ಗುರ್ಬಾನಿ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ. ಬಳಿಕ ಪಂತ್ ಹಾಗೂ ಹಿಮ್ಮತ್ ಸಿಂಗ್ ವಿಕೆಟ್ ಹಾರಿಸುವಲ್ಲಿ ಯಶಸ್ವಿಯಾದರು. ಆರಂಭಿಕ ಆಘಾತವಿಕ್ಕಿದ ಆದಿತ್ಯ ಠಾಕ್ರೆ ಕೂಡ 2 ವಿಕೆಟ್ ಕಿತ್ತರು. ಇದು ಠಾಕ್ರೆ ಅವರ ಪಾದಾರ್ಪಣಾ ಪ್ರಥಮ ದರ್ಜೆ ಪಂದ್ಯ. ವಿದರ್ಭ ಪರ ದಾಳಿ ಆರಂಭಿಸಿದ ಅವರು 4ನೇ ಎಸೆತದಲ್ಲೇ ಕುಣಾಲ್ ಚಾಂಡೇಲ (0) ವಿಕೆಟ್ ಹಾರಿಸಿ ಮೆರೆದರು. ರಾಣ ವಿಕೆಟ್ ಕೂಡ ಠಾಕ್ರೆ ಪಾಲಾಯಿತು.
ಉಳಿದೆರಡು ವಿಕೆಟ್‌ಗಳನ್ನು ಸಿದ್ದೇಶ್ ನೆರಾಲ್ ಮತ್ತು ಅಕ್ಷಯ್ ವಖಾರೆ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ದಿಲ್ಲಿ ಪ್ರಥಮ ಇನ್ನಿಂಗ್ಸ್-6 ವಿಕೆಟಿಗೆ 271 (ಶೋರೆ ಬ್ಯಾಟಿಂಗ್ 123, ಹಿಮ್ಮತ್ ಸಿಂಗ್ 66, ರಾಣ 21, ಪಂತ್ 21, ಗಂಭೀರ್ 15, ಮನನ್ ಶರ್ಮ 13 (ಗುರ್ಬಾನಿ 44ಕ್ಕೆ 2, ಠಾಕ್ರೆ 65ಕ್ಕೆ 2).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.