![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 11:41 PM IST
ಬೆಂಗಳೂರು: ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ “ಸಿ’ ವಿಭಾಗದಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಹಾತೊರೆಯುತ್ತಿರುವ ಕರ್ನಾಟಕ ತೀವ್ರ ಪೈಪೋಟಿ ಎದುರಿಸುತ್ತಿದೆ. ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಗುರುವಾರ ಆರಂಭವಾಗಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಅಗ್ರಸ್ಥಾನಿ ಹರಿಯಾಣವನ್ನು ಎದುರಿಸಬೇಕಿದ್ದು, ಇದನ್ನು ಬೋನಸ್ ಅಂಕ ಸಹಿತ ಗೆಲ್ಲಬೇಕಾದ ಒತ್ತಡ ಮಾಯಾಂಕ್ ಅಗರ್ವಾಲ್ ಪಡೆಯ ಮೇಲಿದೆ.
ಬೋನಸ್ ಅಂಕ ಮಾನದಂಡ
ಹರಿಯಾಣ ಈಗಾಗಲೇ 26 ಅಂಕ ಗಳಿಸಿದ್ದು, “ಸಿ’ ವಿಭಾಗದ ಅಗ್ರಸ್ಥಾನಿಯಾಗಿದೆ. 21 ಅಂಕ ಹೊಂದಿರುವ ಕೇರಳ ದ್ವಿತೀಯ ಸ್ಥಾನದಲ್ಲಿದೆ. ತೃತೀಯ ಸ್ಥಾನಿ ಕರ್ನಾಟಕದ ಬಳಿ ಇರುವುದು 19 ಅಂಕ ಮಾತ್ರ. ಮೂರೂ ತಂಡಗಳಿಗೆ ಒಂದೊಂದು ಪಂದ್ಯ ಬಾಕಿ ಇದೆ.
ಕರ್ನಾಟಕ ಈ ಪಂದ್ಯವನ್ನು ಬೋನಸ್ ಅಂಕ ಸಹಿತ ಗೆದ್ದರೆ ಒಟ್ಟು ಅಂಕ 26ಕ್ಕೆ ಏರಲಿದೆ. ಹರಿಯಾಣದ ಅಂಕ 26ಕ್ಕೇ ನಿಲ್ಲಲಿದೆ. ಆಗ ಲೀಗ್‌ನಲ್ಲಿ ಹರಿಯಾಣಕ್ಕಿಂತ ಅಧಿಕ ಬೋನಸ್ ಅಂಕ ಗಳಿಸಿದ ಕರ್ನಾಟಕ (2) ನಾಕೌಟ್ ಪ್ರವೇಶಿಸಲಿದೆ. ಹರಿಯಾಣ ಈವರೆಗೆ ಸಂಪಾದಿಸಿದ್ದು ಒಂದು ಬೋನಸ್ ಅಂಕ ಮಾತ್ರ. ರನ್‌ರೇಟ್‌ನಲ್ಲಿ ಕರ್ನಾಟಕ ಹರಿಯಾಣಕ್ಕಿಂತ ಮುಂದಿದೆಯಾದರೂ ಇಲ್ಲಿ ರನ್‌ರೇಟ್ ಗಣನೆಗೆ ಬರುವುದಿಲ್ಲ.
ಕೇರಳ-ಬಿಹಾರ ಪಂದ್ಯ
ಕೇರಳದ ಕೊನೆಯ ಎದುರಾಳಿ ದುರ್ಬಲ ಬಿಹಾರ. ಅದು ಈಗಾಗಲೇ ಆರರಲ್ಲಿ 5 ಸೋಲನುಭವಿಸಿ ಕೊನೆಯ ಸ್ಥಾನಕ್ಕೆ ಕುಸಿ ದಿದೆ. ಹೀಗಾಗಿ ಕೇರಳಕ್ಕೆ ಗೆಲುವು ಕಷ್ಟವಲ್ಲ ಎಂಬುದೊಂದು ಲೆಕ್ಕಾಚಾರ. ಆಗ ಕೇರಳದ ಅಂಕ 27ಕ್ಕೆ ಏರಲಿದೆ. ಬೋನಸ್ ಸಹಿತ ಗೆದ್ದರೆ ಅಂಕ 28ಕ್ಕೆ ಏರಲಿದೆ. ಆಗ ಕೇರಳ ಅಗ್ರಸ್ಥಾನದೊಂದಿಗೆ ಮುಂದಿನ ಸುತ್ತು ಪ್ರವೇಶಿಸಲಿದೆ.
ಒಂದು ವೇಳೆ ಹರಿಯಾಣ ವಿರುದ್ಧದ ಪಂದ್ಯ ಡ್ರಾಗೊಂಡಲ್ಲಿ, ಕರ್ನಾಟಕ ಇನ್ನಿಂಗ್ಸ್ ಮುನ್ನಡೆ ಸಾಧಿಸಿ 3 ಅಂಕ ಗಳಿಸಿದರೆ ಒಟ್ಟು ಅಂಕ 22ಕ್ಕೆ ಏರುತ್ತದೆ. ಆಗ ಬಿಹಾರ ವಿರುದ್ಧ ಕೇರಳದ ಸೋಲನ್ನು ಹಾರೈಸಬೇಕು. ಇದಿಷ್ಟು “ಸಿ’ ವಿಭಾಗದ ಲೆಕ್ಕಾಚಾರ.
ರಾಹುಲ್ ಆಗಮನ
ಚಿನ್ನಸ್ವಾಮಿಯಲ್ಲೇ ನಡೆದ ಕಳೆದ ಪಂದ್ಯ ದಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಇನ್ನಿಂಗ್ಸ್ ಜಯಭೇರಿ ಮೊಳಗಿಸಿತ್ತು. ಹರಿಯಾಣಕ್ಕೂ ಇಂಥದೇ ಸೋಲನ್ನು ಉಣಿಸಬೇಕಿದೆ.
ಕರ್ನಾಟಕ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠ. ಅಗರ್ವಾಲ್, ಅನೀಶ್, ಪಡಿಕ್ಕಲ್, ಸ್ಮರಣ್, ಶ್ರೀಜಿತ್, ಅಭಿನವ್… ಎಲ್ಲರೂ ಉತ್ತಮ ಫಾರ್ಮ್ನಲ್ಲಿದ್ದಾರೆ. ಇದೀಗ ಕೆ.ಎಲ್. ರಾಹುಲ್ ಸೇರ್ಪಡೆಗೊಂಡಿದ್ದಾರೆ. ಇವರಿಗಾಗಿ ಯಾರನ್ನು ಕೈಬಿಡುವುದೆಂಬುದೇ ತಲೆನೋವು!
ಬೌಲಿಂಗ್ ವಿಭಾಗಕ್ಕೆ ವಿದ್ವತ್ ಕಾವೇರಪ್ಪ ಬಲ ತುಂಬಲಿದ್ದಾರೆ. ಇವರಿ ಗಾಗಿ ಯಶೋವರ್ಧನ್ ಹೊರಗುಳಿಯ ಬೇಕಾಗಬಹುದು. ಉಳಿದಂತೆ ಪ್ರಸಿದ್ಧ್ ಕೃಷ್ಣ, ವಿ. ಕೌಶಿಕ್, ಅಭಿಲಾಷ್ ಶೆಟ್ಟಿ, ಶ್ರೇಯಸ್ ಗೋಪಾಲ್ ಉತ್ತಮ ಲಯದಲ್ಲಿದ್ದಾರೆ.
ಹರಿಯಾಣವೂ ಬಲಿಷ್ಠ
ಹರಿಯಾಣ ಕೂಡ ಪ್ರಬಲ ಪಡೆ ಯನ್ನು ಹೊಂದಿದೆ. ನಾಯಕ ಅಂಕಿತ್ ಕುಮಾರ್, ಹಿಮಾಂಶು ರಾಣಾ, ನಿಶಾಂತ್ ಸಿಂಧು, ಮಧ್ಯಮ ವೇಗಿ ಆನುಜ್ ಠಕ್ರಾಲ್, ಅಂಶುಲ್ ಕಾಂಬೋಜ್, ಸುಮಿತ್ ಕುಮಾರ್, ಅಜಿತ್ ಚಹಲ್ ಅವರೆಲ್ಲ ಉತ್ತಮ ಫಾರ್ಮ್ನಲ್ಲಿದ್ದಾರೆ. ಆತಿಥೇಯ ತಂಡಕ್ಕೆ ಹರಿಯಾಣ ಪ್ರಬಲ ಪೈಪೋಟಿಯೊಡ್ಡುವುದರಲ್ಲಿ ಅನುಮಾನವಿಲ್ಲ.
You seem to have an Ad Blocker on.
To continue reading, please turn it off or whitelist Udayavani.