ರಣಜಿ ಕಿರೀಟ ಗೆದ್ದ ವಿದರ್ಭ ವೀರರು
Team Udayavani, Jan 2, 2018, 6:00 AM IST
ಇಂದೋರ್: ನೂತನ ವರ್ಷಾರಂಭದ ದಿನದಂದೇ ವಿದರ್ಭ ಹೊಸ ಇತಿಹಾಸ ನಿರ್ಮಿಸಿದೆ. 2017-18ನೇ ಋತುವಿನ ಪ್ರತಿಷ್ಠಿತ ರಣಜಿ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದು ದೇಶಿ ಕ್ರಿಕೆಟಿನ ದೊರೆಯಾಗಿ ಕಿರೀಟವನ್ನೇರಿಸಿಕೊಂಡಿದೆ.
ಇಲ್ಲಿನ “ಹೋಳ್ಕರ್ ಸ್ಟೇಡಿಯಂ’ನಲ್ಲಿ ಒಂದು ದಿನ ಮುಂಚಿತವಾಗಿ ಸೋಮವಾರವೇ ಮುಕ್ತಾಯಗೊಂಡ ಫೈನಲ್ ಹಣಾಹಣಿಯಲ್ಲಿ ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಬಲಿಷ್ಠ ಎದುರಾಳಿ ದಿಲ್ಲಿಯನ್ನು 9 ವಿಕೆಟ್‌ಗಳಿಂದ ಮಣಿಸಿತು. ಗೆಲುವಿಗೆ ಕೇವಲ 29 ರನ್ ಗುರಿ ಪಡೆದ ವಿದರ್ಭ, ಕಪ್ತಾನ ಫೈಜ್ ಫಜಲ್ (2) ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಗ ರಾಮಸ್ವಾಮಿ ಸಂಜಯ್ 9 ರನ್ ಮತ್ತು ವಾಸಿಮ್ ಜಾಫರ್ 17 ರನ್ ಮಾಡಿ ಅಜೇಯರಾಗಿ ಉಳಿದಿದ್ದರು. ಕುಲವಂತ್ ಖೆಜೊÅàಲಿಯಾ ಅವರ ಒಂದೇ ಓವರಿನಲ್ಲಿ 4 ಬೌಂಡರಿ ಬಾರಿಸುವ ಮೂಲಕ ಜಾಫರ್ ವಿದರ್ಭದ ವಿಜಯವನ್ನು ಸಾರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ರಜನೀಶ್ ಗುರ್ಬಾನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ವಿದರ್ಭ ಇನ್ನಿಂಗ್ಸ್ ಕೊನೆಗೊಳ್ಳುವಾಗ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ 133ರಲ್ಲಿ ಅಜೇಯರಾಗಿದ್ದರು. 262 ಎಸೆತಗಳ ಈ ಅಮೋಘ ಆಟದ ವೇಳೆ ವಾಡ್ಕರ್ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. ವಾಡ್ಕರ್ ಸಾಹಸದಿಂದಾಗಿಯೇ ವಿದರ್ಭ ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. 135ಕ್ಕೆ 5 ವಿಕೆಟ್ ಉರುಳಿಸಿದ ನವದೀಪ್ ಸೈನಿ ದಿಲ್ಲಿಯ ಅತ್ಯಂತ ಯಶಸ್ವಿ ಬೌಲರ್. ಆಕಾಶ್ ಸುದಾನ್ ಮತ್ತು ಕುಲವಂತ್ ಖೆಜೊÅàಲಿಯಾ 2 ವಿಕೆಟ್ ಹಾರಿಸಿದರು.
ದಿಲ್ಲಿ ಮತ್ತೆ ಕುಸಿತ
7ಕ್ಕೆ 528 ರನ್ ಮಾಡಿದಲ್ಲಿಂದ 4ನೇ ದಿನದಾಟ ಮುಂದುವರಿಸಿದ ವಿದರ್ಭ ತನ್ನ ಮೊದಲ ಇನ್ನಿಂಗ್ಸ್ ಮ್ಯಾರಥಾನ್ ಓಟವನ್ನು 547ಕ್ಕೆ ಕೊನೆಗೊಳಿಸಿತು. 252 ರನ್ನುಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದಿಲ್ಲಿ ಮತ್ತೂಮ್ಮೆ ಕಳಪೆ ಆಟವನ್ನು ಪ್ರದರ್ಶಿಸಿ 280 ರನ್ನಿಗೆ ಸರ್ವಪತನ ಕಂಡಿತು. ವಿದರ್ಭ ದಾಳಿಯ ನೇತೃತ್ವ ವಹಿಸಿದ ಅಕ್ಷಯ್ ವಖಾರೆ 4, ಆದಿತ್ಯ ಸರ್ವಟೆ 3 ಹಾಗೂ ರಜನೀಶ್ ಗುರ್ಬಾನಿ 2 ವಿಕೆಟ್ ಉಡಾಯಿಸಿ ಮೆರೆದರು.
ದಿಲ್ಲಿಯ ದ್ವಿತೀಯ ಸರದಿಯಲ್ಲಿ ಕೇವಲ ಇಬ್ಬರಷ್ಟೇ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವಿತ್ತರು. ರಾಣ ಸರ್ವಾಧಿಕ 64 ರನ್ ಬಾರಿಸಿದರೆ (113 ಎಸೆತ, 12 ಬೌಂಡರಿ), ಮೊದಲ ಸರದಿಯಲ್ಲಿ ಶತಕ ದಾಖಲಿಸಿದ ಧ್ರುವ ಶೋರೆ 62 ರನ್ ಹೊಡೆದರು (142 ಎಸೆತ, 10 ಬೌಂಡರಿ). ಆರಂಭಕಾರ ಕುಣಾಲ್ ಚಾಂಡೇಲ (9) ಅವರನ್ನು ಉರುಳಿಸಿದ ವಖಾರೆ ದಿಲ್ಲಿ ಕುಸಿತಕ್ಕೆ ಚಾಲನೆ ನೀಡಿದರು. ಟೀಮ್ ಇಂಡಿಯಾದ ಮಾಜಿ ಆರಂಭಕಾರ ಗೌತಮ್ ಗಂಭೀರ್ 15ರ ಗಡಿ ದಾಟಲಿಲ್ಲ. ಈ ಮಹತ್ವದ ವಿಕೆಟ್ ಗುರ್ಬಾನಿ ಪಾಲಾಯಿತು. ಹೀಗೆ 50 ರನ್ನಿಗೆ ದಿಲ್ಲಿಯ 2 ವಿಕೆಟ್ ಬಿತ್ತು. 3ನೇ ವಿಕೆಟಿಗೆ ಜತೆಗೂಡಿದ ಧ್ರುವ ಶೋರೆ ಮತ್ತು ನಿತೀಶ್ ರಾಣ ಶತಕದ ಜತೆಯಾಟದ ಮೂಲಕ ಉತ್ತಮ ಹೋರಾಟವನ್ನೇನೋ ಸಂಘಟಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಗುರ್ಬಾನಿ ವಿದರ್ಭಕ್ಕೆ ಮೇಲುಗೈ ಒದಗಿಸುವಲ್ಲಿ ಯಶಸ್ವಿಯಾದರು. ಶೋರೆ-ರಾಣ ಜತೆಯಾಟದಲ್ಲಿ 114 ರನ್ ಹರಿದು ಬಂತು.
ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ ಬಾರಿಸಿದ್ದ ಹಿಮ್ಮತ್ ಸಿಂಗ್ ಈ ಬಾರಿ ಖಾತೆಯನ್ನೇ ತೆರೆಯಲಿಲ್ಲ. ರಿಷಬ್ ಪಂತ್ ಕಪ್ತಾನನ ಆಟ ಆಡುವಲ್ಲಿ ವಿಫಲರಾದರು. ಪಂತ್ ಗಳಿಕೆ 32 ರನ್ ಮಾತ್ರ. ಮನನ್ ಶರ್ಮ 8 ರನ್ ಮಾಡಿ ನಿರ್ಗಮಿಸಿದರು. 234 ರನ್ನಿಗೆ 8 ವಿಕೆಟ್ ಉರುಳಿಸಿಕೊಂಡ ದಿಲ್ಲಿ ಮುಂದೆ ಆಗ ಇನ್ನಿಂಗ್ಸ್ ಸೋಲಿನ ಭೀತಿ ಆವರಿಸಿತ್ತು. ತಂಡವನ್ನು ಈ ಸಂಕಟದಿಂದ ಪಾರುಮಾಡಿದವರು ಕೆಳ ಕ್ರಮಾಂಕದ ಆಟಗಾರರಾದ ವಿಕಾಸ್ ಮಿಶ್ರಾ (34) ಮತ್ತು ಆಕಾಶ್ ಸುದಾನ್ (18).
ವಿದರ್ಭ ಕನಸಿನ ಓಟ
“ಡಿ’ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದ್ದ ವಿದರ್ಭ ಟ್ರೋಫಿ ಎತ್ತುವಷ್ಟು ಎತ್ತರಕ್ಕೆ ಬೆಳೆಯುತ್ತದೆಂದು ಯಾರೂ ಭಾವಿಸಿರಲಿಲ್ಲ. ತನ್ನ ಅಜೇಯ ಓಟವನ್ನು ಮುಂದುವರಿಸಿದ ಈ “ಸಾಮಾನ್ಯ ತಂಡ’ ಮೊದಲ ಸಲ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು. ಅಲ್ಲಿ ನೆಚ್ಚಿನ ಕರ್ನಾಟಕವನ್ನು ಮಣಿಸಿತು. ಫೈನಲ್ ಪ್ರವೇಶಿಸಿ ದಿಲ್ಲಿಯನ್ನು ಬೇಟೆಯಾಡಿ ದೇಶಿ ಕ್ರಿಕೆಟ್ ಗದ್ದುಗೆ ಮೇಲೆ ವಿರಾಜಮಾನವಾಯಿತು!
ವರ್ಷದ ಮೊದಲ ದಿನವೇ ಗೆದ್ದ ಮೊದಲ ತಂಡ
ದೇಶೀಯ ಕ್ರಿಕೆಟನ್ನು ಗಮನಕ್ಕೆ ತಂದುಕೊಟ್ಟರೆ ಹೊಸ ವರ್ಷದ ಮೊದಲ ದಿನವೇ ಪ್ರಶಸ್ತಿ ಗೆದ್ದ ಮೊದಲ ತಂಡ ವಿದರ್ಭ. ಒಟ್ಟಾರೆ ಜನವರಿ ತಿಂಗಳಲ್ಲಿ ಈ ಹಿಂದೆ ಕರ್ನಾಟಕ ಪ್ರಶಸ್ತಿ ಗೆದ್ದಿತ್ತು.
2013-14ರಲ್ಲಿ ಹೈದರಾಬಾದ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಕರ್ನಾಟಕ ಮಣಿಸಿತ್ತು. ಅಜೇಯವಾಗಿ ಪ್ರಶಸ್ತಿ ಜಯ: ಲೀಗ್ ಹಂತ ಸೇರಿದಂತೆ ಒಟ್ಟಾರೆ 9 ಪಂದ್ಯದಲ್ಲಿ ವಿದರ್ಭ ಆಡಿತ್ತು. 7 ಪಂದ್ಯದಲ್ಲಿ ಗೆದ್ದಿತ್ತು. 2 ಪಂದ್ಯ ಡ್ರಾ ಕಂಡಿತ್ತು. 1 ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಗೆದ್ದಿತ್ತು.
ಮಹಾರಾಷ್ಟ್ರದ ಮೂರನೇ ತಂಡ
ವಿದರ್ಭ ಕ್ರಿಕೆಟ್ ತಂಡ ಮಹಾರಾಷ್ಟ್ರದಲ್ಲಿರುವ ಮೂರು ಕ್ರಿಕೆಟ್ ತಂಡಗಳ ಪೈಕಿ ಒಂದು. ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ತಂಡಗಳು ಬಹಳ ಬಲಿಷ್ಠವಾಗಿವೆ. ಅದರಲ್ಲೂ ಮುಂಬೈ ದೇಶೀಯ ಕ್ರಿಕೆಟ್‌ನಲ್ಲಿ ಪ್ರಬಲ ಹಿಡಿತ ಹೊಂದಿದೆ. ಈ ಪೈಪೋಟಿಯ ನಡುವೆ ಇದುವರೆಗೆ ವಿದರ್ಭಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅದೀಗ ನೆರವೇರಿದೆ.
ಮಹಾರಾಷ್ಟ್ರದ ಪೂರ್ವಭಾಗದಲ್ಲಿ ವಿದರ್ಭ ಪ್ರಾಂತ್ಯವಿದೆ. ಆ ರಾಜ್ಯದ ಒಟ್ಟು ಪ್ರದೇಶದಲ್ಲಿ ವಿದರ್ಭ ಪಾಲು ಶೇ.31ರಷ್ಟು. ಜನಸಂಖ್ಯೆಯ ಪಾಲು ಶೇ.21.3ರಷ್ಟು. ಇದರ ಗಡಿಭಾಗದಲ್ಲಿ ಮಧ್ಯಪ್ರದೇಶ, ಮತ್ತೂಂದು ಕಡೆ ತೆಲಂಗಾಣವಿದೆ. ಇಲ್ಲಿರುವ ಜನಸಂಖ್ಯಾ ಬಾಹುಳ್ಯದಿಂದ ಇದಕ್ಕೆ ಪ್ರತ್ಯೇಕ ತಂಡವನ್ನು ನೀಡಲಾಗಿದೆ. ನಾಗ್ಪುರದಲ್ಲಿ ಈ ತಂಡದ ಕೇಂದ್ರಸ್ಥಾನವಿದೆ. ಈಗ ಐಸಿಸಿ ಮುಖ್ಯಸ್ಥರಾಗಿರುವ ಶಶಾಂಕ್ ಮನೋಹರ್ ಇದೇ ಪ್ರಾಂತ್ಯದವರು.
ಏಕೈಕ ಟ್ರೋಫಿ ಗೆದ್ದ
ಏಳನೇ ತಂಡ
ರಾಜಸ್ಥಾನ 2, ಮಹಾರಾಷ್ಟ್ರ 2, ಹೈದರಾಬಾದ್ 2, ಬಂಗಾಳ 2, ರೈಲ್ವೇಸ್ 2, ತಮಿಳುನಾಡು 2 ಸಲ ರಣಜಿ ಟ್ರೋಫಿ ಗೆದ್ದರೆ ನವನಗರ್ 1,ಪಶ್ವಿಮ ಭಾರತ 1,ಹರ್ಯಾಣ 1, ಪಂಜಾಬ್ 1,ಉತ್ತರಪ್ರದೇಶ 1, ಗುಜರಾತ್ 1 ಹಾಗೂ ಈಗ ವಿದರ್ಭ 1 ಸಲ ಟ್ರೋಫಿ ಗೆದ್ದಿದೆ. ವಿದರ್ಭ ಮೊದಲ ಸಲ ಟ್ರೋಫಿ ಗೆದ್ದ ಒಟ್ಟಾರೆ 7ನೇ ತಂಡ.
ವಿದರ್ಭ ಗೆಲುವಿನ
ಅಂಕಿಸಂಖ್ಯೆಗಳು
ವಿದರ್ಭ ರಣಜಿ ಕ್ರಿಕೆಟ್‌ನಲ್ಲಿ ಒಟ್ಟಾರೆ 268 ಪಂದ್ಯ ಆಡಿದೆ. ಇಷ್ಟು ಪಂದ್ಯ ಆಡಿದ ಬಳಿಕ ವಿದರ್ಭಕ್ಕೆ ಟ್ರೋμ ಸಿಕ್ಕಿದೆ. ಒಟ್ಟಾರೆ ಇದು ವಿದರ್ಭದ 441 ಪಂದ್ಯ. 48ನೇ ಗೆಲುವು. 89 ಪಂದ್ಯದಲ್ಲಿ ಸೋಲು. 131 ಪಂದ್ಯದಲ್ಲಿ ಡ್ರಾ
ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ದಿಲ್ಲಿ-295 ಮತ್ತು 280 (ರಾಣ 64, ಶೋರೆ 62, ವಿಕಾಸ್ ಮಿಶ್ರಾ 34, ಪಂತ್ 32, ವಖಾರೆ 95ಕ್ಕೆ 4, ಸರ್ವಟೆ 30ಕ್ಕೆ 3, ಗುರ್ಬಾನಿ 92ಕ್ಕೆ 2). ವಿದರ್ಭ-547 (ವಾಡ್ಕರ್ ಔಟಾಗದೆ 133, ಸರ್ವಟೆ 79ಜಾಫರ್ 78, ನೆರಾಲ್ 74, ಸೈನಿ 135ಕ್ಕೆ 5, ಸುದಾನ್ 102ಕ್ಕೆ 2, ಖೆಜೊÅàಲಿಯಾ 132ಕ್ಕೆ 2) ಮತ್ತು ಒಂದು ವಿಕೆಟಿಗೆ 32.
ಪಂದ್ಯಶ್ರೇಷ್ಠ: ರಜನೀಶ್ ಗುರ್ಬಾನಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.