ದಾವಣಗೆರೆ ಎಕ್ಸ್‌ಪ್ರೆಸ್‌ಗೆ ಮುಂಬೈ ಚಿಂದಿ
Team Udayavani, Dec 8, 2017, 1:22 PM IST
ನಾಗ್ಪುರ: “ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ವೇಗಿ ಆರ್. ವಿನಯ್ ಕುಮಾರ್ ಅವರ ಹ್ಯಾಟ್ರಿಕ್ ಸಾಹಸ ಹಾಗೂ ಘಾತಕ ದಾಳಿಯ ನೆರವಿನಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನವೇ ಕರ್ನಾಟಕದೆದುರು ಮುಂಬಯಿ ತಂಡ 173 ರನ್ನಿಗೆ ಮುಗ್ಗರಿಸಿದೆ. ಜವಾಬು ನೀಡಲಾರಂಭಿಸಿದ ಕರ್ನಾಟಕ ಒಂದು ವಿಕೆಟಿಗೆ 115 ರನ್ ಪೇರಿಸಿ ಮೇಲುಗೈ ಸೂಚನೆಯನ್ನು ರವಾನಿಸಿದೆ.
ನಾಗ್ಪುರದ “ವಿಸಿಎ’ ಸ್ಟೇಡಿಯಂನಲ್ಲಿ ಗುರು ವಾರ ಮೊದಲ್ಗೊಂಡ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕರ್ನಾಟಕಕ್ಕೆ ಟಾಸ್ ಗೆಲುವು ಅದೃಷ್ಟ ತಂದಿತ್ತಿತು. ಮೊದಲು ಬೌಲಿಂಗ್ ಆಯ್ದುಕೊಂಡು ಭರಪೂರ ಲಾಭವೆತ್ತಿತು. ಬ್ಯಾಟಿಂಗಿಗೆ ಕಠಿನವಾಗಿ ಪರಿಣಮಿಸಿದ, ಸೀಮ್ ಬೌಲಿಂಗಿಗೆ ನೆರವು ನೀಡುತ್ತಿದ್ದ ಟ್ರ್ಯಾಕ್ ಮೇಲೆ ವಿನಯ್ ಕುಮಾರ್ ಪ್ರಥಮ ಓವರಿನಿಂದಲೇ ಮುಂಬಯಿ ಮೇಲೆರಗಿ ಹೋದರು. ಈ ಓವರಿನ ಅಂತಿಮ ಎಸೆತ ಹಾಗೂ ಮುಂದಿನ ಓವರಿನ (ಪಂದ್ಯದ 3ನೇ ಓವರ್) ಮೊದಲೆರಡು ಎಸೆತಗಳಲ್ಲಿ ವಿಕೆಟ್ ಹಾರಿಸಿ ರಣಜಿಯಲ್ಲಿ ತಮ್ಮ ದ್ವಿತೀಯ ಹ್ಯಾಟ್ರಿಕ್ ಸಾಧನೆಗೈದರು. ಆಗಲೇ ಮುಂಬಯಿ ತಂಡ ಕರ್ನಾಟಕದ ಬಿಗಿಮುಷ್ಠಿಯಲ್ಲಿ ಸಿಲುಕಿತ್ತು.
ವಿನಯ್ ಹ್ಯಾಟ್ರಿಕ್
ವಿನಯ್ ಅವರದು “ಬ್ರೋಕನ್ ಓವರ್ ಹ್ಯಾಟ್ರಿಕ್’ ಆಗಿತ್ತು. ಮೊದಲು ಬಲಿಯಾದವರು ಪ್ರತಿಭಾನ್ವಿತ ಆರಂಭಕಾರ ಪೃಥ್ವಿ ಶಾ (2). ಆಫ್ಸ್ಟಂಪಿನ ಹೊರಗಿದ್ದ ಚೆಂಡನ್ನು ಕವರ್‌ನತ್ತ ತಳ್ಳಲು ಹೋದ ಶಾ, ಸ್ಲಿಪ್‌ನಲಿದ್ದ ಕರುಣ್ ನಾಯರ್ ಕೈಗೆ ಕ್ಯಾಚ್ ನೀಡಿದರು. ವಿನಯ್ ಅವರ ದ್ವಿತೀಯ ಓವರಿನಲ್ಲಿ ಮೊದಲ ಎಸೆತ ದಲ್ಲಿ ಜಾಯ್ ಬಿಷ್ಟ್ (1) ಕೂಡ ಇದೇ ರೀತಿ ಔಟಾದರು. ಕ್ಯಾಚ್ ಮತ್ತೆ ನಾಯರ್ ಕೈಸೇರಿತು. ಈ ಹಂತದಲ್ಲಿ ಬ್ಯಾಟಿಂಗ್ ಲೈನ್‌ಅಪ್ ಬದಲಿಸಿದ ಮುಂಬಯಿ, ವೇಗಿ ಆಕಾಶ್ ಪಾರ್ಕರ್ ಅವರಿಗೆ ಭಡ್ತಿ ಕೊಟ್ಟಿತು. ಬಹುಶಃ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಷ್ಟು ಬೇಗ ಈ ಕಠಿನ ಪಿಚ್ ಮೇಲೆ ಪರದಾಡುವುದು ಬೇಡ ಎಂಬ ಉದ್ದೇಶದಿಂದಲೋ ಅಥವಾ ವಿನಯ್ ಹೆಚ್ಚು ಅಪಾಯಕಾರಿಯಾಗಿ ಗೋಚ ರಿಸುತ್ತಿದ್ದುದರಿಂದಲೋ ಈ ಬದಲಾವಣೆ ಮಾಡಿರಬೇಕು. ಇದು ವಿನಯ್ ಹ್ಯಾಟ್ರಿಕ್ ಸಾಧನೆಗೆ ಅನುಕೂಲಕರವಾಗಿ ಪರಿಣಮಿಸಿತು.
ಆ ಓವರಿನ ದ್ವಿತೀಯ ಎಸೆತ ಔಟ್‌ಸ್ವಿಂಗರ್ ಆಗಿತ್ತು. ಆದರೆ ದಿಕ್ಕು ಬದಲಿಸಿ ಬಂದು ನೇರವಾಗಿ ಪಾರ್ಕರ್ ಪ್ಯಾಡಿಗೆ ಬಡಿಯಿತು. ಲೆಗ್ ಬಿಫೋರ್ ಬಗ್ಗೆ ಅನುಮಾನವೇ ಇರಲಿಲ್ಲ. ವಿನಯ್ ಕುಮಾರ್ ರಣಜಿ ನಾಕೌಟ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ನಾಯಕನಾಗಿ ವಿಜೃಂಭಿಸಿ ದರು. 7 ರನ್ನಿಗೆ 3 ವಿಕೆಟ್ ಉಡಾಯಿಸಿ ಕೊಂಡ ಮುಂಬಯಿ ಚಿಂತಾಜನಕ ಸ್ಥಿತಿಯಲ್ಲಿತ್ತು.
ವಿನಯ್ ಆಕ್ರಮಣ ಹ್ಯಾಟ್ರಿಕ್‌ಗಷ್ಟೇ ಸೀಮಿತ ವಾಗಲಿಲ್ಲ. ಇನ್ನೂ 3 ವಿಕೆಟ್ ಕಿತ್ತು ಕರ್ನಾಟಕವನ್ನು ಸುಸ್ಥಿತಿಗೆ ತಲುಪಿಸಿದರು. ಅವರಿಗೆ ಉಳಿದಿಬ್ಬರು ವೇಗಿಗಳಾದ ಶ್ರೀನಾಥ್ ಅರವಿಂದ್ (45ಕ್ಕೆ 2), ಅಭಿಮನ್ಯು ಮಿಥುನ್ (31ಕ್ಕೆ 1) ಉತ್ತಮ ಬೆಂಬಲವಿತ್ತರು.
ಕುಲಕರ್ಣಿ ಹೋರಾಟ
ಒಂದು ಹಂತದಲ್ಲಿ ಮುಂಬಯಿ 103 ರನ್ನಿಗೆ 9 ವಿಕೆಟ್ ಉದುರಿಸಿಕೊಂಡು ತೀವ್ರ ಸಂಕಟ ಅನುಭವಿಸುತ್ತಿತ್ತು. ಆದರೆ ಬೌಲರ್ ಧವಳ್ ಕುಲಕರ್ಣಿ ಮತ್ತು ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಶಿವಂ ಮಲ್ಹೋತ್ರಾ ಸೇರಿಕೊಂಡು ಅಂತಿಮ ವಿಕೆಟಿಗೆ ಹೋರಾಟವೊಂದನ್ನು ಸಂಘಟಿಸಿದರು. ಕರ್ನಾಟಕದ 20 ಓವರ್‌ಗಳ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ, 70 ರನ್ ಒಟ್ಟುಗೂಡಿಸಿದರು.ಇವರಿಂದಾಗಿ ಮುಂಬಯಿ ಮೊತ್ತಕ್ಕೊಂದು ಮರ್ಯಾದೆ ಲಭಿಸಿತು. ಕುಲಕರ್ಣಿ 132 ಎಸೆತಗಳಿಂದ 75 ರನ್ (9 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಪಾಠವಾದರು. ಅನಂತರದ ಹೆಚ್ಚಿನ ಗಳಿಕೆ 32 ರನ್ ಮಾಡಿದ ಅಖೀಲ್ ಹೆರ್ವಾಡ್ಕರ್ ಅವರದು. ಮಧ್ಯಮ ಕ್ರಮಾಂಕದಲ್ಲಿ ಲಾಡ್ (8), ಯಾದವ್ (14), ನಾಯಕ ತಾರೆ (4) ಅವರ ವೈಫಲ್ಯ ಮುಂಬಯಿಯ ಸಂಕಟವನ್ನು ಬಿಗಡಾಯಿಸುವಂತೆ ಮಾಡಿತು.
ಕರ್ನಾಟಕ ದಿಟ್ಟ ಆರಂಭ
ಈ ಋತುವಿನ ಎಲ್ಲ ಪಂದ್ಯಗಳಲ್ಲೂ ರನ್ ಪ್ರವಾಹ ಹರಿಸುತ್ತ ಬಂದ ಕರ್ನಾಟಕ ಇಲ್ಲಿಯೂ ಇಂಥದೇ ಸೂಚನೆ ನೀಡಿದೆ. ಮೊದಲ ವಿಕೆಟಿಗೆ ರವಿಕುಮಾರ್ ಸಮರ್ಥ್ (40) ಮತ್ತು “ರನ್ ಮೆಶಿನ್’ ಮಾಯಾಂಕ್ ಅಗರ್ವಾಲ್ 18.1 ಓವರ್‌ಗಳಿಂದ 83 ರನ್ ಪೇರಿಸಿದರು. ಅಗರ್ವಾಲ್ 83 ಎಸೆತಗಳಿಂದ ಅಜೇಯ 62 ರನ್ ಮಾಡಿದ್ದು (8 ಬೌಂಡರಿ, 1 ಸಿಕ್ಸರ್), ಇವರೊಂದಿಗೆ 12 ರನ್ ಗಳಿಸಿರುವ ಕೌನೈನ್ ಅಬ್ಟಾಸ್ ಕ್ರೀಸಿನಲ್ಲಿದ್ದಾರೆ.
ಮುಂಬಯಿ ಬೌಲಿಂಗ್ ಸರದಿಯಲ್ಲಿ ಇಬ್ಬರು “ಶಿವಂ’ರಿಗೆ (ದುಬೆ, ಮಲ್ಹೋತ್ರಾ) ಇದು ಚೊಚ್ಚಲ ಪಂದ್ಯವಾಗಿದೆ. ಸಹಜವಾಗಿಯೇ ಅವರ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ಕರ್ನಾ ಟಕದ ಬ್ಯಾಟ್ಸ್‌ಮನ್‌ಗಳು ಇದರ ಸಂಪೂರ್ಣ ಲಾಭವನ್ನೆತ್ತಬೇಕಿದೆ. ಗಾಯಾಳು ಡಿ. ನಿಶ್ಚಲ್ ಮತ್ತು ಸ್ಟುವರ್ಟ್ ಬಿನ್ನಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ.
ಹ್ಯಾಟ್ರಿಕ್ ಸ್ವಾರಸ್ಯ
ಆರ್. ವಿನಯ್ ಕುಮಾರ್ ರಣಜಿಯಲ್ಲಿ 2 ಹ್ಯಾಟ್ರಿಕ್ ಸಾಧಿಸಿದ ಕರ್ನಾಟಕದ 2ನೇ ಬೌಲರ್ ಎನಿಸಿದರು. ಮೊದಲನೆಯವರು ಅನಿಲ್ ಕುಂಬ್ಳೆ.
ವಿನಯ್ ಕುಮಾರ್ 2 ಹಾಗೂ ಎರಡಕ್ಕಿಂತ ಹೆಚ್ಚು ಹ್ಯಾಟ್ರಿಕ್ ಸಾಧಿಸಿದ ಕೇವಲ 4ನೇ ಬೌಲರ್. ಸರ್ವೀಸಸ್‌ನ ಜೋಗಿಂದರ್ ರಾವ್ (3 ಸಲ), ವಿದರ್ಭದ ಪ್ರೀತಂ ಗಂಧೆ ಮತ್ತು ಕರ್ನಾಟಕದ ಅನಿಲ್ ಕುಂಬ್ಳೆ (ತಲಾ 2 ಸಲ) ಉಳಿದ ಮೂವರು.
ವಿನಯ್ ಅವರದು ಕರ್ನಾಟಕ ಪರ ದಾಖಲಾದ 10ನೇ ಹ್ಯಾಟ್ರಿಕ್. ರಣಜಿ ಇತಿಹಾಸದಲ್ಲಿ ಅತ್ಯಧಿಕ ಹ್ಯಾಟ್ರಿಕ್ ಸಾಧನೆ ಮಾಡಿದ ದಾಖಲೆ ಕರ್ನಾಟಕ ದ್ದಾಗಿದೆ. ಬಂಗಾಲ (6), ದಿಲ್ಲಿ, ಹರಿಯಾಣ, ತಮಿಳುನಾಡು (ತಲಾ 5) ಅನಂತರದ ಸ್ಥಾನದಲ್ಲಿವೆ.
ವಿನಯ್ ರಣಜಿ ನಾಕೌಟ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ನಾಯಕ, ಒಟ್ಟಾರೆ 6ನೇ ಬೌಲರ್.
ವಿನಯ್ ರಣಜಿ ನಾಕೌಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಕರ್ನಾಟಕದ 2ನೇ ಬೌಲರ್. ರಘುರಾಮ ಭಟ್ ಮೊದಲಿಗ. ಇವರಿಬ್ಬರೂ ಮುಂಬಯಿ ವಿರುದ್ಧವೇ ಹ್ಯಾಟ್ರಿಕ್ ಸಾಧಿಸಿದ್ದು ವಿಶೇಷ.
ಇದು 1993-94ರ ಬಳಿಕ ರಣಜಿ ನಾಕೌಟ್‌ನಲ್ಲಿ ದಾಖಲಾದ ಮೊದಲ ಹ್ಯಾಟ್ರಿಕ್. ಅಂದು ದಿಲ್ಲಿ ವಿರುದ್ಧ ಬಂಗಾಲದ ಸಾಗರ್ಮೋಯ್ ಸೇನ್‌ಶರ್ಮ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರು.
ರಣಜಿಯಲ್ಲಿ 500 ಪಂದ್ಯಗಳ ಗಡಿ ದಾಟಿದ ಮುಂಬಯಿ ವಿರುದ್ಧ ದಾಖಲಾದ ಕೇವಲ 3ನೇ ಹ್ಯಾಟ್ರಿಕ್ ಇದಾಗಿದೆ. ಮೂರೂ ಹ್ಯಾಟ್ರಿಕ್ ನಾಕೌಟ್ ಹಂತದಲ್ಲೇ ದಾಖಲಾದದ್ದು ವಿಶೇಷ. ಈ ಮೂವ ರಲ್ಲಿ ಇಬ್ಬರು ಹ್ಯಾಟ್ರಿಕ್ ಹೀರೋಗಳು ಕರ್ನಾಟಕ ದವರು (ರಘುರಾಮ ಭಟ್ ಮೊದಲಿಗ). ಮುಂಬಯಿ ವಿರುದ್ಧದ ಮತ್ತೋರ್ವ ಹ್ಯಾಟ್ರಿಕ್ ಸಾಧಕ ತಮಿಳು ನಾಡಿನ ಬಿ. ಕಲ್ಯಾಣಸುಂದರಂ. ಅವರು 1972-73ರ ಫೈನಲ್‌ನಲ್ಲಿ ಹ್ಯಾಟ್ರಿಕ್ ದಾಖಲಿಸಿದ್ದರು.
ಸ್ಕೋರ್‌ಪಟ್ಟಿ
ಮುಂಬಯಿ ಪ್ರಥಮ ಇನ್ನಿಂಗ್ಸ್
ಪೃಥ್ವಿ ಶಾ ಸಿ ನಾಯರ್ ಬಿ ವಿನಯ್ 2
ಜಾಯ್ ಬಿಷ್ಟ್ ಸಿ ನಾಯರ್ ಬಿ ವಿನಯ್ 1
ಅಖೀಲ್ ಹೆರ್ವಾಡ್ಕರ್ ಸಿ ಸಮರ್ಥ್ ಬಿ ವಿನಯ್ 32
ಆಕಾಶ್ ಪಾರ್ಕರ್ ಎಲ್‌ಬಿಡಬ್ಲ್ಯು ವಿನಯ್ 0
ಸಿದ್ದೇಶ್ ಲಾಡ್ ಸಿ ಗೌತಮ್ ಬಿ ವಿನಯ್ 8
ಸೂರ್ಯಕುಮಾರ್ ಯಾದವ್ ಸಿ ಗೌತಮ್ ಬಿ ಅರವಿಂದ್ 14
ಆದಿತ್ಯ ತಾರೆ ಸಿ ಸಮರ್ಥ್ ಬಿ ಮಿಥುನ್ 4
ಶಿವಂ ದುಬೆ ಬಿ ಕೆ.ಗೌತಮ್ 7
ಧವಳ್ ಕುಲಕರ್ಣಿ ಸಿ ವಿನಯ್ ಬಿ ಅರವಿಂದ್ 75
ಕರ್ಶ್ ಕೊಠಾರಿ ಸಿ ಗೌತಮ್ ಬಿ ವಿನಯ್ 1
ಶಿವಂ ಮಲ್ಹೋತ್ರಾ ಔಟಾಗದೆ 7
ಇತರ 22
ಒಟ್ಟು (ಆಲೌಟ್) 173
ವಿಕೆಟ್ ಪತನ: 1-6, 2-7, 3-7, 4-21, 5-40, 6-49, 7-74, 8-95, 9-103.
ಬೌಲಿಂಗ್:
ವಿನಯ್ ಕುಮಾರ್ 15-2-34-6
ಅಭಿಮನ್ಯು ಮಿಥುನ್ 11-1-31-1
ಶ್ರೀನಾಥ್ ಅರವಿಂದ್ 15-4-45-2
ಕೃಷ್ಣಪ್ಪ ಗೌತಮ್ 11-1-31-1
ಶ್ರೇಯಸ್ ಗೋಪಾಲ್ 4-2-18-0
ಕರ್ನಾಟಕ ಪ್ರಥಮ ಇನ್ನಿಂಗ್ಸ್
ಆರ್. ಸಮರ್ಥ್ ಬಿ ದುಬೆ 40
ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ 62
ಕೌನೈನ್ ಅಬ್ಟಾಸ್ ಬ್ಯಾಟಿಂಗ್ 12
ಇತರ 1
ಒಟ್ಟು (ಒಂದು ವಿಕೆಟಿಗೆ) 115
ವಿಕೆಟ್ ಪತನ: 1-83.
ಬೌಲಿಂಗ್:
ಧವಳ್ ಕುಲಕರ್ಣಿ 8-2-17-0
ಶಿವಂ ಮಲ್ಹೋತ್ರಾ 7-0-33-0
ಆಕಾಶ್ ಪಾರ್ಕರ್ 3-0-26-0
ಕರ್ಶ್ ಕೊಠಾರಿ 4-0-25-0
ಶಿವಂ ದುಬೆ 6-2-11-1
ಜಾಯ್ ಬಿಷ್ಟ್ 1-0-3-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.