RCB ಭವಿಷ್ಯ ಮಳೆಯ ಕೈಯಲ್ಲಿ
18 ರನ್ನಿಗಿಂತ ಕಡಿಮೆ ಅಂತರದಲ್ಲಿ ಸೋತರೂ ಚೆನ್ನೈಗೆ ಮುನ್ನಡೆ
Team Udayavani, May 18, 2024, 6:55 AM IST
ಬೆಂಗಳೂರು: ಬಹುಶಃ ಇದು ಫೈನಲ್‌ಗೂ ಮಿಗಿಲಾದ ಪಂದ್ಯ. ಅತೀ ಹೆಚ್ಚು ಅಭಿಮಾನಿಗಳನ್ನು ಹಾಗೂ ಸ್ಟಾರ್ ಆಟಗಾರರನ್ನು ಹೊಂದಿರುವ ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪ್ಲೇ ಆಫ್ ಹಣೆಬರಹವನ್ನು ನಿರ್ಧರಿಸುವ ಮುಖಾಮುಖೀ. 4ನೇ ತಂಡವಾಗಿ ಮುಂದಿನ ಸುತ್ತಿಗೆ ತೇರ್ಗಡೆಯಾಗುವ ತಂಡ ಯಾವುದು ಎಂದು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿರುವ “ನಾಕೌಟ್’ ಮ್ಯಾಚ್. ಶನಿವಾರ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಈ ರೋಚಕ ಪಂದ್ಯಕ್ಕೆ ವೇದಿಕೆಯಾಗಲಿದೆ.
ಆದರೆ ಮಳೆ ಸಹಕರಿಸಿದರೆ ಮಾತ್ರ ಈ ಪಂದ್ಯ ಎಂಬುದು ಅಭಿಮಾನಿಗಳ ಪಾಲಿನ ಅತ್ಯಂತ ನಿರಾಸೆಯ ಸಂಗತಿ. ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮೋಡ ಹಾಗೂ ಮಳೆಯ ವಾತಾವರಣವಿದ್ದು, ಇದು ಶನಿವಾರವೂ ಮುಂದುವರಿಯಲಿದೆ. ಇದರಿಂದ ಪಂದ್ಯಕ್ಕೆ ಅಡಚಣೆಯಾಗುವ ಎಲ್ಲ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ವಾಶೌಟ್ ಆದರೆ ಆರ್‌ಸಿಬಿ ಕೂಟದಿಂದ ನಿರ್ಗಮಿಸಲಿದೆ. ಚೆನ್ನೈ 4ನೇ ತಂಡವಾಗಿ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.
ಸದ್ಯ ಚೆನ್ನೈ 14 ಹಾಗೂ ಆರ್‌ಸಿಬಿ 12 ಅಂಕಗಳನ್ನು ಹೊಂದಿವೆ. ನೆಟ್ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್ ಹೊಂದಿದೆ. ಕೇವಲ ಗೆಲ್ಲುವುದಷ್ಟೇ ಅಲ್ಲ, ರನ್‌ರೇಟ್‌ನಲ್ಲಿ ಚೆನ್ನೈಯನ್ನು ಹಿಂದಿಕ್ಕಬೇಕಾದ ಒತ್ತಡ ಆರ್‌ಸಿಬಿಯದ್ದು. ಆಗ ಆರ್‌ಸಿಬಿ ಕನಿಷ್ಠ 18 ರನ್ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು.
ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. ಸೋತರೂ ಅಂತರ 18 ರನ್ ಅಂತರಕ್ಕಿಂತ ಕಡಿಮೆ ಇದ್ದರೆ ಚೆನ್ನೈಗೆ ಯಾವ ಚಿಂತೆಯೂ ಇಲ್ಲ!
ದ್ವಿತೀಯ ಸುತ್ತಿನ ಸ್ಪರ್ಧೆ
ಇದು ಆರ್‌ಸಿಬಿ-ಚೆನ್ನೈ ನಡುವಿನ ದ್ವಿತೀಯ ಸುತ್ತಿನ ಸ್ಪರ್ಧೆ. ಎರಡೂ ತಂಡಗಳು ಚೆನ್ನೈಯಲ್ಲಿ ಉದ್ಘಾಟನ ಪಂದ್ಯ ಆಡಿದ್ದವು. ಇದನ್ನು ಆರ್‌ಸಿಬಿ 6 ವಿಕೆಟ್‌ಗಳಿಂದ ಸೋತಿತ್ತು. ಹೀಗಾಗಿ ಡು ಪ್ಲೆಸಿಸ್ ಪಡೆಗೆ ಇದು ಸೇಡಿನ ಪಂದ್ಯವೂ ಹೌದು.
ಬಳಿಕ ಪಂಜಾಬ್ ವಿರುದ್ಧ 4 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ, ಮತ್ತೆ ಸತತ 6 ಪಂದ್ಯಗಳಲ್ಲಿ ಎಡವಿತ್ತು. ಅನಂತರ ಸತತ 5 ಪಂದ್ಯಗಳನ್ನು ಗೆದ್ದು ತನ್ನ ಪ್ಲೇ ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಇದೀಗ ಚೆನ್ನೈಯನ್ನು ಸೋಲಿಸುವುದಕ್ಕಿಂತ ಮಿಗಿಲಾಗಿ ಮಳೆಯನ್ನು ಮಣಿಸುವುದೇ ಆರ್‌ಸಿಬಿಗೆ ಭಾರೀ ಸಮಸ್ಯೆಯಾಗಿ ಕಾಡುತ್ತಿದೆ!
ಪಂದ್ಯಾವಳಿ ಮುಂದುವರಿದಂತೆ ಆರ್‌ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವೆರಡೂ ಹೆಚ್ಚು ನಂಬಲರ್ಹವಾಗಿ ಗೋಚರಿಸುತ್ತಿದೆ. ಆರ್‌ಸಿಬಿಗೆ ಹೋಲಿ ಸಿದರೆ ಚೆನ್ನೈ ಆರಂಭದ ಲಯದಲ್ಲಿ ಇಲ್ಲದಿರುವುದು ಸ್ಪಷ್ಟ.
ಕೊಹ್ಲಿ, ಧೋನಿ ಬೌಲಿಂಗ್ ಮಾಡುವರೇ?!
ಶನಿವಾರದ ಪಂದ್ಯದಲ್ಲಿ ಕೊಹ್ಲಿ ಮತ್ತು ಧೋನಿ ಬೌಲಿಂಗ್ ಮಾಡುವರೇ? ಇಂಥದೊಂದು ಪ್ರಶ್ನೆ, ಕುತೂಹಲ ಮೂಡಲು ಕಾರಣವೊಂದಿದೆ. ನೆಟ್ಸ್‌ನಲ್ಲಿ ಇವರಿಬ್ಬರೂ ಬ್ಯಾಟಿಂಗ್ ಬಿಟ್ಟು ಬೌಲಿಂಗ್ ಅಭ್ಯಾಸ ನಡೆಸಿದ್ದು!
ಸಿಎಸ್‌ಕೆ ನೆಟ್ ಪ್ರ್ಯಾಕ್ಟೀಸ್ ವೇಳೆ ಧೋನಿ ಆಫ್ಸ್ಪಿನ್ ಬೌಲಿಂಗ್ ನಡೆಸಿ ಗಮನ ಸೆಳೆದರು. ಐಪಿಎಲ್‌ನಲ್ಲಿ ಧೋನಿ ಈವರೆಗೆ ಬೌಲಿಂಗ್ ಮಾಡಿಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಕೂಡ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿರಿಸಿದರು. ಕೊಹ್ಲಿ 2012ರಲ್ಲಿ ಚೆನ್ನೈ ವಿರುದ್ಧವೇ ಒಂದು ಓವರ್ ಎಸೆದಿದ್ದರು. ಆಗ ಚೆನ್ನೈ 206 ರನ್ ಚೇಸಿಂಗ್‌ಗೆ ಇಳಿದಿತ್ತು. 2 ಓವರ್‌ಗಳಲ್ಲಿ 43 ರನ್ ಅಗತ್ಯವಿತ್ತು. ಕೊಹ್ಲಿ ಎಸೆದ 19ನೇ ಓವರ್‌ನಲ್ಲಿ ಆಲ್ಬಿ ಮಾರ್ಕೆಲ್ 28 ರನ್ ಬಾರಿಸಿದ್ದರು!
ಐವರು ಸ್ಟಾರ್ ಕ್ರಿಕೆಟಿಗರು ಗೈರು!
ಈ ಮುಖಾಮುಖೀ ನಿರೀಕ್ಷಿತ ಜೋಶ್ ಪಡೆದುಕೊಂಡೀತೇ ಎಂಬುದುದೊಂದು ದೊಡ್ಡ ಪ್ರಶ್ನೆ. ಕಾರಣ, ಇತ್ತಂಡಗಳ ಕನಿಷ್ಠ 5 ಮಂದಿ ಸ್ಟಾರ್ ಆಟಗಾರರು ಈ ಪಂದ್ಯಕ್ಕೆ ಅಲಭ್ಯರಾಗಿರುವುದು!
ವಿಲ್ ಜಾಕ್ಸ್ ವಾಪಸ್
ಕೊನೆಯ ಹಂತದಲ್ಲಿ ಆರ್‌ಸಿಬಿ ಪಾಳೆಯದಲ್ಲಿ ಹೊಸ ಚೈತನ್ಯ ತುಂಬಿದ ಇಂಗ್ಲೆಂಡ್‌ನ ಹೊಡಿಬಡಿ ಆಟಗಾರ ವಿಲ್ ಜಾಕ್ಸ್ ಸೇವೆ ಇನ್ನು ತಂಡಕ್ಕೆ ಲಭಿಸುವುದಿಲ್ಲ. ಅವರು ಇಂಗ್ಲೆಂಡ್‌ಗೆ ವಾಪಸಾಗಿದ್ದು, ಪಾಕಿಸ್ಥಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಜಾಕ್ಸ್ ಗೈರು ಆರ್‌ಸಿಬಿಗೆ ಖಂಡಿತವಾಗಿಯೂ ದೊಡ್ಡ ಹೊಡೆತ.
ವೇಗಿ ರೀಸ್ ಟಾಪ್ಲಿ ಕೂಡ ಇಂಗ್ಲೆಂಡ್‌ಗೆ ವಾಪಸಾಗಿದ್ದಾರೆ. ಆದರೆ ಟಾಪ್ಲಿ ಅಷ್ಟೇನೂ ಪರಿಣಾಮ ಬೀರದ ಕಾರಣ ಆರ್‌ಸಿಬಿಗೆ ಅಂಥ ನಷ್ಟವೇನಿಲ್ಲ.
ಚೆನ್ನೈಗೆ ಭಾರೀ ಹೊಡೆತ
ಚೆನ್ನೈ ತಂಡದ ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಐಪಿಎಲ್ ಬಿಟ್ಟು ಲಂಡನ್ ವಿಮಾನ ಏರಿದ್ದಾರೆ. ತಂಡದ ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಮತ್ತೆ ತವರಿನತ್ತ ಮುಖ ಮಾಡಿದ್ದಾರೆ. ಶ್ರೀಲಂಕಾದ ಮತೀಶ ಪತಿರಣ ಕೂಡ ಚೆನ್ನೈ ಬಿಟ್ಟು ನಡೆದಿದ್ದಾರೆ.
ಮೇ 18ರಂದು ಆರ್‌ಸಿಬಿ ಅಜೇಯ!
ಆರ್‌ಸಿಬಿಯ ಕೊನೆಯ ಲೀಗ್ ಪಂದ್ಯ ನಡೆಯುವುದು ಮೇ 18ರಂದು. ವಿಶೇಷವೆಂದರೆ, ಮೇ 18ರಂದು ಆಡಲಾದ ಎಲ್ಲ ಐಪಿಎಲ್ ಪಂದ್ಯಗಳನ್ನೂ ಆರ್‌ಸಿಬಿ ಗೆದ್ದಿರುವುದು! ಇದರಲ್ಲಿ 2 ಜಯ ಚೆನ್ನೈ ವಿರುದ್ಧವೇ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.