ಜಾಫರ್ ಜಬರ್ದಸ್ತ್ ದಾಖಲೆ : ಅಜೇಯ 285 ರನ್
Team Udayavani, Mar 16, 2018, 10:30 AM IST
ನಾಗ್ಪುರ: ದೇಶಿ ಕ್ರಿಕೆಟಿನ ಬ್ಯಾಟಿಂಗ್ ಹೀರೋ ವಾಸಿಮ್ ಜಾಫರ್ ಗುರುವಾರ ನೂತನ ಮೈಲುಗಲ್ಲು ನೆಟ್ಟು ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರು. ಜಾಫರ್ 285 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದು, 2ನೇ ದಿನದಾಟದ ಅಂತ್ಯಕ್ಕೆ ವಿದರ್ಭ ಕೇವಲ 3 ವಿಕೆಟಿಗೆ 598 ರನ್ ರಾಶಿ ಹಾಕಿದೆ. ವೈಯಕ್ತಿಕ ಗಳಿಕೆ 160ಕ್ಕೆ ಏರಿದಾಗ ವಾಸಿಮ್ ಜಾಫರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಗಡಿ ದಾಟಿದರು. ಈ ಸಂದರ್ಭದಲ್ಲಿ ದಿಲೀಪ್ ವೆಂಗ್‌ಸರ್ಕಾರ್ (17,868) ಮತ್ತು ಜಿ.ಆರ್. ವಿಶ್ವನಾಥ್ (17,970) ಅವರ ದಾಖಲೆಯನ್ನು ಹಿಂದಿಕ್ಕಿದರು. ಭಾರತದ ಪ್ರಥಮ ದರ್ಜೆ ಸಾಧಕರ ಯಾದಿಯಲ್ಲಿ ಜಾಫರ್‌ಗೆ ಈಗ 6ನೇ ಸ್ಥಾನ.
200 ರನ್ ಪೂರ್ತಿಗೊಳಿಸಿದೊಡನೆ ಜಾಫರ್ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದರು; 40ರ ಹರೆಯದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ 5ನೇ ಬ್ಯಾಟ್ಸ್ ಮನ್ ಎನಿಸಿದರು. ಹಾಗೆಯೇ 40ರ ಹರೆಯದ ಬಳಿಕ 250 ರನ್ ಹೊಡೆದ ಏಶ್ಯದ ಮೊದಲ ಕ್ರಿಕೆಟಿಗನೆಂಬ ಹೆಗ್ಗ ಳಿಕೆಗೂ ಪಾತ್ರರಾದರು. ಗುರುವಾರಕ್ಕೆ ಜಾಫರ್ ವಯಸ್ಸು 40 ವರ್ಷ, 27 ದಿನ.
ವಿದರ್ಭ 2 ವಿಕೆಟಿಗೆ 289 ರನ್ ಮಾಡಿದಲ್ಲಿಂದ ಬ್ಯಾಟಿಂಗ್ ಮುಂದುವರಿಸಿತ್ತು. ಆಗ ಜಾಫರ್ 113 ಹಾಗೂ ಗಣೇಶ್ ಸತೀಶ್ 29 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಗುರುವಾರ ಗಣೇಶ್ ಸತೀಶ್ ಕೂಡ ಶತಕ ಸಂಭ್ರಮ ಆಚರಿಸಿದರು. ಸತೀಶ್ ಗಳಿಕೆ 120 ರನ್ (280 ಎಸೆತ, 10 ಬೌಂಡರಿ, 2 ಸಿಕ್ಸರ್). ಶೇಷ ಭಾರತಕ್ಕೆ 2ನೇ ದಿನದಾಟದಲ್ಲಿ ಲಭಿಸಿದ್ದು ಈ ಒಂದು ವಿಕೆಟ್ ಮಾತ್ರ. ಇದು ಸಿದ್ಧಾರ್ಥ್ ಕೌಲ್ ಪಾಲಾಯಿತು. ವಾಸಿಮ್ ಜಾಫರ್ 425 ಎಸೆತಗಳನ್ನು ಎದುರಿಸಿ ನಿಂತಿದ್ದು, 34 ಬೌಂಡರಿ ಜತೆಗೆ ಒಂದು ಸಿಕ್ಸರ್ ಬಾರಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಾಫರ್ ಬಾರಿಸಿದ 53ನೇ ಶತಕ. ಜಾಫರ್ – ಸತೀಶ್ 3ನೇ ವಿಕೆಟಿಗೆ 289 ರನ್ ಸೂರೆಗೈದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.