ಮುನಿಸು ಮರೆತು ಒಂದಾದ ಗೋಪಿಚಂದ್-ಸೈನಾ
Team Udayavani, Sep 5, 2017, 7:55 AM IST
ನವದೆಹಲಿ: ಮಾಜಿ ವಿಶ್ವ ನಂ.1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಭಾರತ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್‌ರೊಂದಿಗಿನ ತಮ್ಮ ದೀರ್ಘಕಾಲದ ಮುನಿಸನ್ನು ಮರೆತು ಒಂದಾಗಿದ್ದಾರೆ. ಮತ್ತೆ ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅಕಾಡೆಮಿಗೆ ಮರಳಲು ಸಿದ್ಧವಾಗಿದ್ದಾರೆ. ಕಳೆದ ಮೂರು ವರ್ಷದಿಂದ ತರಬೇತಿ ನೀಡುತ್ತಿದ್ದ ವಿಮಲ್‌ಕುಮಾರ್ ಅವರಿಗೆ ಗೌರವಪೂರ್ಣ ವಿದಾಯ ಹೇಳಿದ್ದಾರೆ.
ಗೋಪಿಚಂದ್ ಮಾರ್ಗದರ್ಶನದಲ್ಲಿ ಸೈನಾ ನೆಹ್ವಾಲ್ 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಸೇರಿದಂತೆ ಹಲವು ಸೂಪರ್ ಸೀರೀಸ್ ಟ್ರೋಫಿ ಗೆದ್ದಿದ್ದಾರೆ. ಆದರೆ 2014ರಲ್ಲಿ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಹೀಗಾಗಿ ಸೈನಾ 2014 ಸೆ.2ರಿಂದ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಅವರಿಂದ ಕೋಚಿಂಗ್ ಪಡೆಯಲು ಆರಂಭಿಸಿದ್ದರು. ಆದರೆ ಸೈನಾ 2016ರಲ್ಲಿ ರಿಯೋ ಒಲಿಂಪಿಕ್ಸ್ ನಂತರ ಮೋಣಕಾಲಿನ ಶಸ್ತ್ರಚಿಕಿತ್ಸೆಗೆ ತುತ್ತಾಗಿದ್ದರು. ಆ ನಂತರ ಸೈನಾ ಪ್ರದರ್ಶನವೂ ಕುಗ್ಗಿತ್ತು.
ಸೈನಾ ಟ್ವೀಟ್‌ನಲ್ಲಿ ಹೇಳಿದ್ದು ಏನು?: ಪುನಃ ಗೋಪಿಚಂದ್ ಅಕಾಡೆಮಿಗೆ ಮರಳುತ್ತಿರುವ ಬಗ್ಗೆ ಸೈನಾ ನೆಹ್ವಾಲ್ ಸರಣಿ ಟ್ವೀಟ್ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ ತಾನು ಗೋಪಿಚಂದ್ ಅಕಾಡೆಮಿಗೆ ಮರಳುವ ಬಗ್ಗೆ ಚಿಂತಿಸುತ್ತಿದ್ದೇನೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಆ ನಂತರ ಗೋಪಿಚಂದ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಲು ಅನುಮತಿ ಸಿಕ್ಕಿದೆ. ಈ ಹಿಂದೆ ತರಬೇತಿ ನೀಡಿದ ವಿಮಲ್ ಕುಮಾರ್ ಸರ್‌ಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಗೋಪಿಗೂ-ಸೈನಾಗೂ ಮುನಿಸುಂಟಾಗಿದ್ದೇಕೆ?
ರಾಷ್ಟ್ರೀಯ ಕೋಚ್ ಕೂಡ ಆಗಿರುವ ಗೋಪಿಚಂದ್ ಸೈನಾ, ಸಿಂಧು, ಪಿ.ಕಶ್ಯಪ್, ಕೆ.ಶ್ರೀಕಾಂತ್…ಸೇರಿದಂತೆ ಹಲವರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಆರಂಭದಲ್ಲಿ ಸೈನಾಗೆ ಗೋಪಿಚಂದ್ ಹೆಚ್ಚಿನ ಮಾರ್ಗದರ್ಶನ ನೀಡುತ್ತಿದ್ದರು. ಆದರೆ ನಂತರದ ಹಂತದಲ್ಲಿ ಗೋಪಿ ಇತರೆ ಆಟಗಾರರ ಕಡೆ ಹೆಚ್ಚು ಲಕ್ಷ್ಯ ನೀಡುತ್ತಿದ್ದಾರೆ, ತನ್ನ ಕಡೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಸೈನಾ ತನ್ನ ಪ್ರದರ್ಶನ ಮಟ್ಟ ಕುಗ್ಗುತ್ತಿದೆ ಎಂದು ಗೋಪಿಚಂದ್ ಅಕಾಡೆಮಿ ಬಿಟ್ಟು ಬೆಂಗಳೂರಿಗೆ ಆಗಮಿಸಿದ್ದರು.
ವಿಮಲ್ ಮಾರ್ಗದರ್ಶನದಲ್ಲಿ ಸೈನಾ ವಿಶ್ವ ನಂ.1
2014 ಸೆಪ್ಟೆಂಬರ್ 2 ರಿಂದ ವಿಮಲ್ ಕುಮಾರ್ ಮಾರ್ಗದರ್ಶನದಲ್ಲಿ ಸೈನಾ ಅಭ್ಯಾಸ ನಡೆಸುತ್ತಿದ್ದರು. ಇದೇ ಹಂತದಲ್ಲಿ ಸೈನಾ ವಿಶ್ವ ನಂ.1ನೇ ಸ್ಥಾನಕ್ಕೇರಿದ್ದರು. ಈ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳೆ ಎಂಬ ಖ್ಯಾತಿ ಪಡೆದಿದ್ದರು. 2015ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು 2017ರ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ವಿವಿಧ ಸೂಪರ್ ಸೀರೀಸ್ ಟ್ರೋಫಿಯನ್ನು ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.