ಬ್ಯಾಡ್ಮಿಂಟನ್: ಸೈನಾಗೆ ಸ್ವರ್ಣ, ಉಳಿದವರಿಗೆ ಬೆಳ್ಳಿ
Team Udayavani, Apr 16, 2018, 6:00 AM IST
ಗೋಲ್ಡ್‌ಕೋಸ್ಟ್: ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಕೂಟದ ಅಂತಿಮ ದಿನವಾದ ರವಿವಾರ ಭಾರತ ಒಂದು ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಒಟ್ಟಾರೆಯಾಗಿ ಗೇಮ್ಸ್ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸರ್ವಾಧಿಕ 6 ಪದಕ ಗೆದ್ದು ಶ್ರೇಷ್ಠ ನಿರ್ವಹಣೆ ತೋರಿತು.
ರವಿವಾರ ಭಾರತಕ್ಕೆ 3 ಚಿನ್ನ ಗೆಲ್ಲುವ ಅವಕಾಶವಿತ್ತು. ಆದರೆ ಕೊನೆಗೆ ಇದು ಒಂದಕ್ಕೆ ಸೀಮಿತಗೊಂಡಿತು. ಉಳಿದೆರಡು ಪದಕಗಳು ಬೆಳ್ಳಿ ರೂಪದಲ್ಲಿ ಬಂದವು. “ಆಲ್ ಇಂಡಿಯನ್’ ವನಿತೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ಚಿನ್ನದ ಪದಕ ಗೆದ್ದರೆ, ಫೈನಲ್‌ನಲ್ಲಿ ಎಡವಿದ ಪಿ.ವಿ. ಸಿಂಧು ಬೆಳ್ಳಿ ಪದಕಕ್ಕೆ ತೃಪ್ತರಾದರು. ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಶ್ಯದ ಲೀ ಚಾಂಗ್ ವೀ ವಿರುದ್ಧ ಸೋಲು ಕಾಣಬೇಕಾಯಿತು. ಗೇಮ್ಸ್ ಪುರುಷರ ಡಬಲ್ಸ್‌ನಲ್ಲಿ ಇದೇ ಮೊದಲ ಸಲ ಕಣಕ್ಕಿಳಿದ ಸಾತ್ವಿಕ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಇಂಗ್ಲೆಂಡಿನ ಜೋಡಿಗೆ ಶರಣಾಗಿ ಚಿನ್ನವನ್ನು ಕಳೆದುಕೊಂಡರು.
ಸೈನಾ-ಸಿಂಧು ಜಿದ್ದಾಜಿದ್ದಿ ಸೆಣಸಾಟ
ಸೈನಾ ನೆಹ್ವಾಲ್-ಪಿ.ವಿ. ಸಿಂಧು ನಡುವಿನ ವನಿತಾ ಸಿಂಗಲ್ಸ್ ಫೈನಲ್ ಅಂತಿಮ ದಿನದ ವಿಶೇಷ ಆಕರ್ಷಣೆಯಾಗಿತ್ತು. ಇಬ್ಬರೂ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟು ಹೋರಾಡಿದ್ದರಿಂದ ಪಂದ್ಯದ ಕಾವು ಕ್ಷಣದಿಂದ ಕ್ಷಣಕ್ಕೆ ಏರುತ್ತ ಹೋಯಿತು. ಸಿಂಧು ಪಾದದ ನೋವನ್ನು ಲೆಕ್ಕಿಸದೇ ಹೋರಾಟ ಜಾರಿಯಲ್ಲಿರಿಸಿದರು. ಅಂತಿಮವಾಗಿ ಸೈನಾ 21-18, 23-21 ಅಂತರದಿಂದ ಗೆದ್ದು ಚಿನ್ನಕ್ಕೆ ಕೈ ಚಾಚಿದರು. ಇದು ಸೈನಾಗೆ ಒಲಿದ 2ನೇ ಗೇಮ್ಸ್ ಸಿಂಗಲ್ಸ್ ಚಿನ್ನ. 2010ರ ತವರಿನ ಗೇಮ್ಸ್‌ನಲ್ಲೂ ಸೈನಾ ನೆಹ್ವಾಲ್ ಬಂಗಾರದ ಪದಕ ಜಯಿಸಿದ್ದರು.
ಸಿಂಧು ಪಾದದ ನೋವಿಗೆ ಸಿಲುಕಿದ್ದರಿಂದ ಕೂಟದ ಪ್ರತಿಯೊಂದು ಸಿಂಗಲ್ಸ್‌ನಲ್ಲೂ ಸೈನಾ ಆಡಬೇಕಾಗಿ ಬಂತು. ಆದರೆ ಈ ಒತ್ತಡವನ್ನು ಅವರು ಅಂಗಳದಲ್ಲಿ ತೋರ್ಪಡಿಸಲಿಲ್ಲ. ಸಿಂಧು ಕೂಡ ಅಷ್ಟೇ, ಗಾಯಾಳಾದರೂ ಅಮೋಘ ಹೋರಾಟವನ್ನು ಜಾರಿಯಲ್ಲಿರಿಸಿದರು. ಸೈನಾ ನೆಟ್ ಬಳಿ ಹೆಚ್ಚಿನ ಆಕ್ರಮಣ ತೋರಿದರೆ, ಸಿಂಧು ಅಮೋಘ ಸ್ಮ್ಯಾಶ್‌ಗಳ ಮೂಲಕ ಮುನ್ನುಗ್ಗಿದರು. ಇವರಿಬ್ಬರ ಸ್ಪರ್ಧೆ ಎಷ್ಟೊಂದು ತೀವ್ರತೆಯಿಂದ ಕೂಡಿತ್ತು ಎಂಬುದಕ್ಕೆ ಅಂಕಗಳ ಅಂತರವೇ ಸಾಕ್ಷಿ.
ಮೊದಲ ಗೇಮ್ ವೇಳೆ 9-4ರ ಮುನ್ನಡೆಯಲ್ಲಿದ್ದ ಸೈನಾ, ವಿರಾಮದ ಹೊತ್ತಿಗೆ ಇದನ್ನು 11-6ಕ್ಕೆ ವಿಸ್ತರಿಸಿಕೊಂಡರು. ಬಳಿಕ ಸಿಂಧು ದಿಟ್ಟ ಹೋರಾಟ ಸಂಘಟಿಸಿದರೂ ಸೈನಾ ಮುನ್ನಡೆ 20-14ಕ್ಕೆ ಏರಿತು. ಇಲ್ಲಿಂದ ಮುಂದೆ ಸಿಂಧು ಸತತ 4 ಅಂಕ ಸಂಪಾದಿಸಿದಾಗ ಪಂದ್ಯದ ರೋಚಕತೆ ಇನ್ನಷ್ಟು ಹೆಚ್ಚಿತು. ಅಂತಿಮವಾಗಿ ಸೈನಾ 23 ನಿಮಿಷಗಳಲ್ಲಿ ಮೊದಲ ಗೇಮ್ ವಶಪಡಿಸಿಕೊಂಡರು.
ತೀವ್ರ ಪೈಪೋಟಿಯ 2ನೇ ಗೇಮ್
ದ್ವಿತೀಯ ಗೇಮ್ ಇನ್ನಷ್ಟು ಪೈಪೋಟಿಯಿಂದ ಕೂಡಿತ್ತು. ಆರಂಭದಲ್ಲಿ ಸಿಂಧು ಮೇಲುಗೈ ಸಾಧಿಸಿ 9-7, 13-8, 19-16ರಿಂದ ಮುನ್ನಡೆದರು. ಈ ಹಂತದಲ್ಲಿ ಸೈನಾ ಪ್ರಬಲ ಹೊಡೆತಗಳಿಗೆ ಮುಂದಾದರು. 19-19, 21-21ರಲ್ಲಿ ಇಬ್ಬರೂ ಸಮಬಲ ಸಾಧಿಸಿದರು. ಮುಂದಿನೆರಡು ಗೆಲುವಿನ ಅಂಕಗಳನ್ನು ಬಾಚಿಕೊಂಡ ಸೈನಾ ಸ್ವರ್ಣ ಪದಕದ ಮೇಲೆ ಹಕ್ಕು ಚಲಾಯಿಸಿಯೇ ಬಿಟ್ಟರು! ಭಾರತದ ಈ ತಾರಾ ಆಟ ಗಾರ್ತಿಯರ ಹೋರಾಟದ ವೇಳೆ ಸ್ಟೇಡಿಯಂ ಫುಲ್ ಪ್ಯಾಕ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.