ಮೊದಲ ಸುತ್ತಿನಲ್ಲೇ ಸೆರೆನಾ-ಶರಪೋವಾ ಸಮರ
ಇಂದಿನಿಂದ ಯುಎಸ್ ಓಪನ್
Team Udayavani, Aug 26, 2019, 5:04 AM IST
ನ್ಯೂಯಾರ್ಕ್: ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್ ಟೆನಿಸ್ ಪಂದ್ಯಾವಳಿ “ಯುಎಸ್ ಓಪನ್’ ಸೋಮವಾರದಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಲಿದೆ.
ಈ ಸಲದ ವಿಶೇಷವೆಂದರೆ, ವನಿತಾ ಟೆನಿಸ್‌ನ ಇಬ್ಬರು ಅಗ್ರಮಾನ್ಯ ತಾರೆಗಳಾಗಿರುವ ಸೆರೆನಾ ವಿಲಿಯಮ್ಸ್ ಮತ್ತು ಮರಿಯಾ ಶರಪೋವಾ ಮೊದಲ ಬಾರಿಗೆ ಈ ಪ್ರತಿಷ್ಠಿತ ಕೂಟದಲ್ಲಿ ಮುಖಾಮುಖೀ ಆಗುತ್ತಿರುವುದು. ಅದೂ ಮೊದಲ ಸುತ್ತಿನಲ್ಲೇ!
ಸೆರೆನಾ ಮತ್ತು ಶರಪೋವಾ ಉಳಿದ 3 ಗ್ರ್ಯಾನ್‌ಸ್ಲಾಮ್ ಕೂಟಗಳಲ್ಲಿ, 2012ರ ಒಲಿಂಪಿಕ್ಸ್ ನಲ್ಲಿ ಪರಸ್ಪರ ಎದುರಾಗಿದ್ದರು. ಆದರೆ ಯುಎಸ್ ಓಪನ್‌ನಲ್ಲಿ ಈವರೆಗೆ ಒಮ್ಮೆಯೂ ಮುಖಾಮುಖೀಯಾಗಿಲ್ಲ. ಇದಕ್ಕೀಗ ಕಾಲ ಕೂಡಿಬಂದಿದೆ. ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಮಂಗಳವಾರ ಬೆಳಗ್ಗೆ 4.30ರ ಸುಮಾರಿಗೆ ಆರಂಭವಾಗಲಿದೆ.
ಸೆರೆನಾಗೆ ಸತತ 18 ಜಯ
ಡಬ್ಲ್ಯುಟಿಎ ಟೂರ್‌ನಲ್ಲಿ ಸೆರೆನಾ-ಶರಪೋವಾ 21 ಸಲ ಮುಖಾಮುಖೀಯಾಗಿದ್ದು, ಸೆರೆನಾ 19-2 ಮೇಲುಗೈ ಸಾಧಿಸಿದ್ದಾರೆ. ಇದರಲ್ಲಿ 18 ಗೆಲುವು ಸತತ ಪಂದ್ಯಗಳಲ್ಲಿ ಒಲಿದಿದೆ. ಈ ಸಾಧನೆಯ ಆಧಾರದಲ್ಲಿ ಸೆರೆನಾ ಮೇಲುಗೈ ಸಾಧಿಸಬಹುದು ಎಂಬುದೊಂದು ನಿರೀಕ್ಷೆ. ಇನ್ನೊಂದೆಡೆ ಶರಪೋವಾ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವುದು ಖಚಿತ. ಆದರೆ ಯಾವುದೇ ಫಲಿತಾಂಶ ದಾಖಲಾದರೂ ಕೂಟದ ಮೊದಲ ದಿನವೇ ಓರ್ವ ನೆಚ್ಚಿನ ಆಟಗಾರ್ತಿ ಹೊರಬೀಳುವುದನ್ನು ಕಾಣುವುದು ಟೆನಿಸ್ ಅಭಿಮಾನಿಗಳ ಪಾಲಿಗೆ ನೋವಿನ ಸಂಗತಿ ಎಂಬುದು ಮಾತ್ರ ಸುಳ್ಳಲ್ಲ!
ಒಸಾಕಾ ಮುಂದೆ ಭಾರೀ ಸವಾಲು
ಹಾಲಿ ಚಾಂಪಿಯನ್ ಖ್ಯಾತಿಯ ನಂ.1 ಆಟಗಾರ್ತಿ ನವೋಮಿ ಒಸಾಕಾ ಮುಂದೆ ಪ್ರಶಸ್ತಿ ಉಳಿಸಿಕೊಳ್ಳುವ ದೊಡ್ಡ ಸವಾಲಿದೆ. ಅವರ ಮೊದಲ ಸುತ್ತಿನ ಎದುರಾಳಿ ರಶ್ಯದ ಅನ್ನಾ ಬಿಯಾಂಕಾ. 3ನೇ ಸುತ್ತಿನಲ್ಲಿ ಅಮೆರಿಕದ 15ರ ಹರೆಯದ ಪ್ರತಿಭೆ ಕೊಕೊ ಗಾಫ್ ಎದುರಾಗುವ ಸಾಧ್ಯತೆಯಿದೆ. ಗಾಫ್ಗೆ ಈ ಬಾರಿ ವೈಲ್ಡ್ ಕಾರ್ಡ್ ನೀಡಲಾಗಿದೆ. ಅವರು ಕಳೆದ ವಿಂಬಲ್ಡನ್‌ನಲ್ಲಿ 4ನೇ ಸುತ್ತಿಗೇರಿದ್ದರು. ಒಸಾಕಾ ಕಳೆದ ವರ್ಷದ ಫೈನಲ್‌ನಲ್ಲಿ ಸೆರೆನಾ ಅವರನ್ನು ಕೆಡವಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.
ಜೊಕೋ-ಫೆಡರರ್ ಸೆಮಿಫೈನಲ್?
ಪುರುಷರ ವಿಭಾಗದಲ್ಲಿ ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ರೋಜರ್ ಫೆಡರರ್ ಅವರು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನೊವಾಕ್ ಜೊಕೋವಿಕ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಕಳೆದ ವಿಂಬಲ್ಡನ್‌ನ ಫೈನಲ್‌ನಲ್ಲಿ ಇವರಿಬ್ಬರು ಮುಖಾಮುಖೀಯಾಗಿದ್ದರು. ಈ ಮ್ಯಾರಥಾನ್ ಕಾದಾಟದ 5ನೇ ಸೆಟ್ ಟೈ-ಬ್ರೇಕರ್‌ನಲ್ಲಿ ಅಂತ್ಯ ಕಂಡಿತ್ತು. ಇದರಲ್ಲಿ ಜೊಕೋವಿಕ್ ಜಯಭೇರಿ ಬಾರಿಸಿದ್ದರು. ಫೆಡರರ್‌ಗೆ ಮೊದಲ ಸುತ್ತಿನಲ್ಲಿ ಭಾರತದ ಸುಮಿತ್ ನಾಗಲ್ ಎದುರಾಗುವರು.
ರೋಜರ್ ಫೆಡರರ್-ರಫೆಲ್ ನಡಾಲ್ ಇಲ್ಲಿ ಒಮ್ಮೆಯೂ ಮುಖಾಮುಖೀಯಾಗಿಲ್ಲ. ಇಬ್ಬರೂ ಗೆಲ್ಲುತ್ತ ಹೋದರೆ ಫೈನಲ್‌ನಲ್ಲಿ ಎದುರಾಗಲಿದ್ದಾರೆ ಎಂಬುದೊಂದು ಲೆಕ್ಕಾಚಾರ. ನಡಾಲ್ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯದ ಜಾನ್ ಮಿಲ್ಮನ್ ಸವಾಲನ್ನು ಎದುರಿಸಲಿದ್ದಾರೆ. ಮಿಲ್ಮನ್ ಕಳೆದ ವರ್ಷ ಇಲ್ಲಿ 4ನೇ ಸುತ್ತಿನಲ್ಲಿ ಫೆಡರರ್ ಅವರನ್ನು ಕೆಡವಿದ್ದರು. ನಡಾಲ್ ಗೆಲ್ಲುತ್ತ ಹೋದರೆ ಸೆಮಿಫೈನಲ್‌ನಲ್ಲಿ ಡೊಮಿನಿಕ್ ಥೀಮ್ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಹಿಂದೆ ಸರಿದ ಆ್ಯಂಡರ್ಸನ್
2017ರ ಫೈನಲಿಸ್ಟ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಗಾಯಾಳಾದ ಕಾರಣ ಈ ಸಲದ ಯುಎಸ್ ಓಪನ್ ಪಂದ್ಯಾವಳಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಈ ಕೂಟದಲ್ಲಿ ಆ್ಯಂಡರ್ಸನ್ ಅವರಿಗೆ 16ನೇ ಶ್ರೇಯಾಂಕ ನೀಡಲಾಗಿತ್ತು. 4ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಜೊಕೋವಿಕ್ ಅವರನ್ನು ಎದುರಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಮೊಣಕಾಲಿನ ನೋವಿನಿಂದಾಗಿ ಆ್ಯಂಡರ್ಸನ್ ಹೊರಗುಳಿಯಲಿದ್ದಾರೆ ಎಂದು ಕೂಟದ ಸಂಘಟನಾ ಸಮಿತಿ ತಿಳಿಸಿದೆ. ಆ್ಯಂಡರ್ಸನ್ ಬದಲು ಇಟೆಲಿಯ ಪೌಲೊ ಲೊರೆಂಝಿ ಅವರಿಗೆ ಅವಕಾಶ ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.