T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Team Udayavani, Nov 9, 2024, 12:11 AM IST
ಡರ್ಬನ್: ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಶತಕ ಸಾಹಸದಿಂದ ಶುಕ್ರವಾರ(ನ8) ನಡೆದ ದಕ್ಷಿಣ ಆಫ್ರಿಕಾ ಎದುರಿನ ಡರ್ಬನ್ ಟಿ20 ಪಂದ್ಯದಲ್ಲಿ ಭಾರತ 61 ರನ್ ಗಳ ಅಮೋಘ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ನೆರವು ಮತ್ತು ನಾಯಕ ಸೂರ್ಯಕುಮಾರ್ ಯಾದವ್ 17 ಎಸೆತಗಳಿಂದ 21 ರನ್ ಹೊಡೆದರು. ತಿಲಕ್ ವರ್ಮ ಕೂಡ ಹೊಡಿಬಡಿ ಆಟವಾಡಿ 18 ಎಸೆತಗಳಿಂದ 33 ರನ್ ಸಿಡಿಸಿದರು (3 ಫೋರ್, 2 ಸಿಕ್ಸರ್).ಭಾರತ 8 ವಿಕೆಟಿಗೆ 202 ರನ್ ಪೇರಿಸಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 17.5 ಓವರ್ ಗಳಲ್ಲಿ 141 ರನ್ ಗಳಿಗೆ ಆಲೌಟಾಯಿತು. ಬಿಗಿ ದಾಳಿ ನಡೆಸಿದ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್ ತಲಾ 3 ವಿಕೆಟ್ ಕಬಳಿಸಿದರು. ಅವೇಶ್ ಖಾನ್ 2 ವಿಕೆಟ್ ಪಡೆದರೆ ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಸಂಜು ಸ್ಯಾಮ್ಸನ್ ಭರ್ತಿ 50 ಎಸೆತಗಳಿಂದ 107 ರನ್ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 10 ಸಿಕ್ಸರ್ ಹಾಗೂ 7 ಬೌಂಡರಿ. ಅವರ ಶತಕ ಕೇವಲ 47 ಎಸೆತಗಳಲ್ಲಿ ಸಿಡಿಯಿತು. ಇದು ಅವರ ಸತತ 2ನೇ ಟಿ20 ಸೆಂಚುರಿ. ಇದಕ್ಕೂ ಮುನ್ನ ಅ. 12ರಂದು ಬಾಂಗ್ಲಾದೇಶ ವಿರುದ್ಧ ಹೈದರಾಬಾದ್‌ನಲ್ಲಿ 111 ರನ್ ಬಾರಿಸಿದ್ದರು.
ಸಂಜು ಸ್ಯಾಮ್ಸನ್ ಸತತ ಟಿ20 ಇನ್ನಿಂಗ್ಸ್‌ಗಳಲ್ಲಿ ಸೆಂಚುರಿ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ಕ್ರಿಕೆಟಿಗ. ಗುಸ್ತಾವ್ ಮೆಕ್‌ಕಿಯಾನ್, ರಿಲೀ ರೋಸ್ಯೂ ಮತ್ತು ಫಿಲ್ ಸಾಲ್ಟ್ ಉಳಿದ ಮೂವರು.
ಅಭಿಷೇಕ್ ಶರ್ಮ (7) ಅವರನ್ನು ಬೇಗ ಕಳೆದುಕೊಂಡರೂ ಸ್ಯಾಮ್ಸನ್ ಅವರ ಬಿರುಸಿನ ಆಟದಿಂದ ಭಾರತದ ಮೊತ್ತ ಏರುತ್ತ ಹೋಯಿತು. ಓವರಿಗೆ ಹತ್ತರ ಸರಾಸರಿಯಲ್ಲಿ ರನ್ ಹರಿದು ಬಂತು. ಪವರ್ ಪ್ಲೇಯಲ್ಲಿ ಒಂದಕ್ಕೆ 56 ರನ್ ಗಳಿಸಿದ ಭಾರತ, 10 ಓವರ್ ಅಂತ್ಯಕ್ಕೆ 2ಕ್ಕೆ 99 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಸಂಜು ಸ್ಯಾಮ್ಸನ್ 27 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.