ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್: ಶ್ರೀಕಾಂತ್‌ಗೆ ಬೆಳ್ಳಿ ,ಲಕ್ಷ್ಯ ಸೇನ್‌ಗೆ ಕಂಚು
ಪುರುಷರ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ರಜತ; ಶ್ರೀಕಾಂತ್ ಇತಿಹಾಸ
Team Udayavani, Dec 19, 2021, 11:03 PM IST
ವೆಲ್ವಾ (ಸ್ಪೇನ್): ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೆ. ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಮೊದಲ ಬಾರಿಗೆ ಪದಕ ಗೆದ್ದು ನೂತನ ಇತಿಹಾಸ ನಿರ್ಮಿಸಿದ್ದಾರೆ. ಚಿನ್ನದ ಪದಕದಿಂದ ಸ್ವಲ್ಪವೇ ದೂರ ಉಳಿದ ಶ್ರೀಕಾಂತ್ ಬೆಳ್ಳಿಯಿಂದ ಮಿನುಗಿದರೆ, ಯುವ ಆಟಗಾರ ಲಕ್ಷ್ಯಸೇನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ರವಿವಾರದ ಫೈನಲ್ ಹಣಾಹಣಿಯಲ್ಲಿ ದಿಟ್ಟ ಹೋರಾಟ ನೀಡಿದ ಶ್ರೀಕಾಂತ್ ಅವರನ್ನು ಸಿಂಗಾಪುರದ ಲೋಹ್ ಕೀನ್ ವ್ಯೂ 21-15, 22-20 ಅಂತರದಿಂದ ಮಣಿಸಿದರು. 42 ನಿಮಿಷಗಳ ಕಾಲ ಇವರ ಕಾಳಗ ಸಾಗಿತು. ಇದಕ್ಕೂ ಮೊದಲಿನ “ಆಲ್ ಇಂಡಿಯನ್ ಸೆಮಿಫೈನಲ್’ನಲ್ಲಿ ಕೆ. ಶ್ರೀಕಾಂತ್ 17-21, 21-14, 21-17 ಅಂತರದಿಂದ ಲಕ್ಷ್ಯ ಸೇನ್ ಅವರನ್ನು ಪರಾಭವಗೊಳಿಸಿದ್ದರು.
ಇಬ್ಬರಿಗೂ ಮೊದಲ ಫೈನಲ್
ಶ್ರೀಕಾಂತ್ ಮತ್ತು ವ್ಯೂ ಅವರಿಗೆ ಇದು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಕೂಟದ ಮೊದಲ ಫೈನಲ್ ಆಗಿತ್ತು. ಶ್ರೇಯಾಂಕದ ಮಾನ ದಂಡದಂತೆ ಶ್ರೀಕಾಂತ್ ಅವರೇ ನೆಚ್ಚಿನ ಆಟಗಾರನಾ ಗಿದ್ದರು. ಭಾರತೀಯ 7ನೇ ಶ್ರೇಯಾಂಕ ಹೊಂದಿದ್ದರೆ, ವ್ಯೂ ಶ್ರೇಯಾಂಕರಹಿತರಾಗಿ ಕಣಕ್ಕಿಳಿದಿದ್ದರು.
ಮುನ್ನಡೆ ಉಳಿಸಿಕೊಳ್ಳದ ಶ್ರೀ
ಮೊದಲ ಗೇಮ್ ವೇಳೆ ಶ್ರೀಕಾಂತ್ ಅವರೇ ಮುಂದಿದ್ದರು. ಬ್ರೇಕ್ ವೇಳೆ 11-7ರ ಲೀಡ್ ಹೊಂದಿದ್ದರು. ಇಲ್ಲಿಂದ ಮುಂದೆ ವ್ಯೂ ಆಟ ತೀವ್ರಗೊಂಡಿತು. ಸತತ 4 ಅಂಕ ಸಂಪಾದಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಮತ್ತೆ 6 ಅಂಕ ಗಳಿಸಿ 17-13ರಿಂದ ದಾಪುಗಾಲಿಕ್ಕಿದರು. ಮತ್ತೆ ಶ್ರೀಕಾಂತ್‌ಗೆ ಗಳಿಸಲು ಸಾಧ್ಯವಾದದ್ದು 2 ಅಂಕ ಮಾತ್ರ. ಅಸಾಮಾನ್ಯ ವೇಗ ವ್ಯೂ ಆಟದ ವಿಶೇಷವಾಗಿತ್ತು.
ದ್ವಿತೀಯ ಗೇಮ್ ಆರಂಭದಿಂದಲೇ ಜಿದ್ದಾಜಿದ್ದಿಯಿಂದ ಕೂಡಿತ್ತು. ಇಲ್ಲಿ ವಿರಾಮದ ವೇಳೆ ಮೇಲುಗೈ ಸಾಧಿಸುವ ಸರದಿ ವ್ಯೂ ಅವರದಾಗಿತ್ತು. ಅಂತರ ಹೆಚ್ಚೇನಿರಲಿಲ್ಲ, ಕೇವಲ 11-9. ಸಿಂಗಾಪುರದ ಆಟಗಾರ ತಮ್ಮ ರ್ಯಾಲಿಯಲ್ಲಿ ಉತ್ತಮ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಬ್ರೇಕ್ ಬಳಿಕ ಶ್ರೀಕಾಂತ್ ತಿರುಗಿ ಬಿದ್ದ ರೀತಿ ಅಮೋಘವಾಗಿತ್ತು. ಪಂದ್ಯವನ್ನು ಅವರು 14-14ಕ್ಕೆ ತಂದು ನಿಲ್ಲಿಸುವಲ್ಲಿ ಶ್ರೀ ಯಶಸ್ವಿಯಾಗಿದ್ದರು. 43 ಶಾಟ್‌ಗಳ ರ್ಯಾಲಿಯೊಂದನ್ನು ತಮ್ಮದಾಗಿಸಿಕೊಂಡ ಶ್ರೀಕಾಂತ್ 16-14ರ ಲೀಡ್ ಪಡೆದರು. ಆದರೆ ಮುಂದೆ ಇವರ ಆಟ ಯೋಜನೆಯಂತೆ ನಡೆಯಲಿಲ್ಲ.
ಭಾರತಕ್ಕೆ ಮೊದಲ ಬೆಳ್ಳಿ
ಈ ಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಬೆಳ್ಳಿ ಪದಕ ಇದೆಂಬುದು ಹೆಗ್ಗಳಿಕೆಯ ಸಂಗತಿ. ಭಾರತದ ಪುರುಷರ ವಿಭಾಗದಿಂದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೊದಲ ಶಟ್ಲರ್ ಎಂಬುದು ಶ್ರೀಕಾಂತ್ ಪಾಲಿನ ಹಿರಿಮೆ ಆಗಿತ್ತು.
ಇದಕ್ಕೂ ಮೊದಲು ಪ್ರಕಾಶ್ ಪಡುಕೋಣೆ (1983) ಮತ್ತು ಬಿ. ಸಾಯಿಪ್ರಣೀತ್ (2019) ಕಂಚಿನ ಪದಕ ಜಯಿಸಿದ್ದೇ ಭಾರತೀಯ ಪುರು ಷರ ಅತ್ಯುತ್ತಮ ಸಾಧನೆಯಾಗಿತ್ತು. ಈ ಬಾರಿ ಭಾರತ ಅವಳಿ ಪದಕದೊಂದಿಗೆ ಮಿಂಚಿತು.
ಅಕಾನೆ ಯಮಾಗುಚಿ
ವನಿತಾ ಚಾಂಪಿಯನ್
ವಿಶ್ವದ ನಂ.1 ಆಟಗಾರ್ತಿ, ತೈವಾನ್‌ನ ತೈ ಜು ಯಿಂಗ್ ಅವರನ್ನು ಏಕಪಕ್ಷೀಯ ಫೈನಲ್‌ನಲ್ಲಿ ಮಣಿಸಿದ ಜಪಾನಿನ ಅಕಾನೆ ಯಮಾಗುಚಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು 21-14, 21-11 ಅಂತರದ ಸುಲಭ ಜಯ ಸಾಧಿಸಿದರು. ಇದು ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತೈ ಜು ಯಿಂಗ್ ಅವರಿಗೆ ಒಲಿದ ಮೊದಲ ಪದಕ ಎಂಬುದು ಉಲ್ಲೇಖನೀಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.