ಪ್ರೊ ಕಬಡ್ಡಿಯಿಂದ ಹಿಂದೆ ಸರಿಯುತ್ತ ಸ್ಟಾರ್ ಸ್ಪೋರ್ಟ್ಸ್ ?
Team Udayavani, Nov 4, 2018, 6:10 AM IST
ಬೆಂಗಳೂರು: ಮುಂದಿನ ಪ್ರೊ ಕಬಡ್ಡಿಯಿಂದ ಕೂಟದ ನೇರ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಹೊರಗುಳಿಯುವ ಆತಂಕ ಸೃಷ್ಠಿಯಾಗಿದೆ.
ಸ್ಟಾರ್ ಸ್ಪೋರ್ಟ್ಸ್ ಕೂಟದಿಂದ ಹೊರಗುಳಿಯಲು ಒಂದಷ್ಟು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಮೊದಲನೆಯದು ನ್ಯಾಯಾಲಯದಲ್ಲಿ ಎಕೆಎಫ್ಐ (ಅಖೀಲ ಭಾರತೀಯ ಕಬಡ್ಡಿ ಒಕ್ಕೂಟ) ಹಾಗೂ ಎನ್‌ಕೆಎಫ್ಐ (ನ್ಯೂ ಕಬಡ್ಡಿ ಫೆಡರೇಷನ್) ನಡುವಿನ ವಿಚಾರಣೆ ನಡೆಯುತ್ತಿದೆ. ಎರಡನೆಯದು 15 ವರ್ಷಗಳ ಕಾಲ ಪ್ರೊ ಕಬಡ್ಡಿಯನ್ನು ಎಕೆಎಫ್ಐ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮಾಡುವ ಒಪ್ಪಂದ ಮಾಡಿಕೊಟ್ಟಿದೆ. ಈ ಒಪ್ಪಂದವು ಎಕೆಎಫ್ಐನಿಂದ ಉಚ್ಚ ನ್ಯಾಯಾಲಯ ಪದಚ್ಯುತಿಗೊಳಿಸಿರುವ ಆಜೀವ ಅಧ್ಯಕ್ಷ ಜನಾರ್ಧನ್ ಸಿಂಗ್ ಗೆಹೊಟ್ ಹಾಗೂ ಅವರ ಪತ್ನಿ ಮೃದುಲಾ ಬದೂರಿಯಾ ಕಾಲದಲ್ಲಿ ನಡೆದಿದೆ.
ವಿಶೇಷವೆಂದರೆ ಗೆಹೊಟ್ ಕುಟುಂಬ 2013ರಿಂದಲೂ ಸಹಿ ಹಾಕಿರುವ ಎಲ್ಲ ಒಪ್ಪಂದಗಳು ಅಸಿಂಧು, ಜತೆಗೆ ಅವರ ಕಾಲದಲ್ಲಿ ಬಿಡುಗಡೆ ಆಗಿರುವ ಅನುದಾನವನ್ನು ವಾಪಸ್ ನೀಡಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಆದೇಶಿಸಿದೆ. ಇದೆಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಟಾರ್ ಸ್ಪೋರ್ಟ್ಸ್ ಮುಂಬರುವ ಪ್ರೊ ಕಬಡ್ಡಿ ಕೂಟದ ಆಯೋಜನೆಯಿಂದ ಹಿಂದಕ್ಕೆ ಸರಿಯಲು ಚಿಂತಿಸಿದೆ ಎನ್ನಲಾಗಿದೆ.
ಸದ್ಯಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಗೆ ಆಡಳಿತಾಧಿಕಾರಿ ನೇಮಿಸಿದಂತೆ ಎಕೆಎಫ್ಐಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನ್ಯಾಯಾಲಯ ನೇಮಿಸಿದೆ. ಮುಂದಿನ ಆದೇಶ ಬರುವ ತನಕ ಆಡಳಿತಾಧಿಕಾರಿ ಎಕೆಎಫ್ಐನ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.
ಚಾರು ಶರ್ಮ, ಅನುಪಮ್‌ರಿಂದಲೂ ಉತ್ತರವಿಲ್ಲ: ಪ್ರೊ ಕಬಡ್ಡಿಯಿಂದ ಸ್ಟಾರ್ ಸ್ಪೋರ್ಟ್ಸ್ ಹಿಂದಕ್ಕೆ ಸರಿಯಲಿದೆಯೆ? ಎನ್ನುವ ಪ್ರಶ್ನೆಗೆ ಪ್ರೊ ಕಬಡ್ಡಿ ಜನಕ, ಮಾಶಲ್ ಸ್ಪೋರ್ಟ್ಸ್ ಮುಖ್ಯಸ್ಥರಾದ ಚಾರು ಶರ್ಮ ಕೂಡ ಸೂಕ್ತ ಉತ್ತರ ನೀಡಲಿಲ್ಲ. ಈ ಬಗ್ಗೆ ಉದಯವಾಣಿ ಅವರನ್ನು ಸಂಪರ್ಕಿಸಿದಾಗ ಅಂತಹ ಬದಲಾವಣೆ ನಡೆಯಲಿಕ್ಕಿಲ್ಲ ಎಂದು ನಂಬಿದ್ದೇನೆ ಎಂದಷ್ಟೇ ತಿಳಿಸಿದರು. ಲೀಗ್ ಕಮೀಷನರ್ ಅನುಪಮ್ ಗೋಸ್ವಾಮಿಯನ್ನೂ ಉದಯವಾಣಿ ಸಂಪರ್ಕಿಸಿತು. ಈ ವೇಳೆ ಅವರು ಈ ಬಗ್ಗೆ ಸದ್ಯಕ್ಕೆ ಏನೂ ಪ್ರತಿಕ್ರಿಯಿಸಲಾರೆ ಎಂದಷ್ಟೆ ತಿಳಿಸಿದರು.
ಹಣದ ಹರಿವಿಗೆ ಬ್ರೇಕ್?: ಸ್ಟಾರ್ ಸ್ಪೋರ್ಟ್ಸ್ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡುತ್ತಿದೆ. ಮೊದಲ ಆವೃತ್ತಿಯಿಂದ ಹಿಡಿದು ಐದು ಆವೃತ್ತಿಗಳ ತನಕ ಕೂಟದ ಪ್ರಚಾರಕ್ಕಾಗಿ ಅದ್ಧೂರಿ ಜಾಹೀರಾತು ಪ್ರಕಟಿಸಿದೆ. ಹಿಂದಿನ ಆವೃತ್ತಿಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯದ ಪತ್ರಕರ್ತರನ್ನು ದೇಶದ ಬೇರೆ ಬೇರೆ ಕಡೆ ನಡೆಯುವ ಕೂಟಗಳಿಗೆ ಆಹ್ವಾನಿಸಿತ್ತು. ಬಂದ ಪತ್ರಕರ್ತರಿಗೆ ಪಂಚತಾರಾ ಹೋಟೆಲ್‌ನಲ್ಲಿ ಇರಿಸಿ, ಅವರಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿತ್ತು. ಪ್ರಸ್ತುತ ಆವೃತ್ತಿಯಲ್ಲಿ ಪತ್ರಕರ್ತರ ಸಂಖ್ಯೆಯಲ್ಲಿ ಕುಸಿತವಾಗಿದೆ. ವೆಚ್ಚ ಕಡಿತ ಮಾಡಲು ಸ್ಟಾರ್ ನ್ಪೋರ್ಟ್ಸ್ ಇಂತಹ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ.
ಪ್ರಾಯೋಜಕರ ಕೊರತೆ?: ಒಟ್ಟಾರೆ ಕೂಟದಲ್ಲಿ ತಂಡಗಳ ಸಂಖ್ಯೆ 12ಕ್ಕೆ ಏರಿದೆ. ಜತೆಗೆ 2 ತಿಂಗಳಿಗೂ ಸುದೀರ್ಘ ಕಾಲದ ಕೂಟ ಗ್ರಾಮೀಣ ಪ್ರದೇಶದಲ್ಲಿ ಆಸಕ್ತಿ ಕುಂದಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಎಲ್ಲದರ ಪರಿಣಾಮ ಪ್ರಾಯೋಜಕರು ಕೂಟವನ್ನು ಆಯೋಜಿಸಲು ಮುಂದೆ ಬರುತ್ತಿಲ್ಲ. ಇದರಿಂದ ಕೂಟದ ಸಂಘಟಕ ಸ್ಟಾರ್‌ಗೆ ನಷ್ಟವಾಗಿದೆ ಎನ್ನಲಾಗಿದೆ. ಕೂಟದ ಪ್ರಮುಖ ತಂಡವಾಗಿರುವ ಬೆಂಗಳೂರು ಬುಲ್ಸ್ ಈ ಹಿಂದೆ ಪ್ರಾಯೋಜಕರ ಕೊರತೆಯಿಂದ 20 ಕೋಟಿ ರೂ. ನಷ್ಟದಲ್ಲಿದೆ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಎಕೆಎಫ್ಐ ವಿರುದ್ಧ ನ್ಯಾಯಾಂಗ ನಿಂದನೆ: ಎನ್‌ಕೆಎಫ್ಐ
ನವೆಂಬರ್ 6ಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಎಕೆಎಫ್ಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಎನ್‌ಕೆಎಫ್ಐ ನಿರ್ಧರಿಸಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ಪುರುಷರ ಹಾಗೂ ಮಹಿಳಾ ತಂಡದ ಆಯ್ಕೆಯನ್ನು ಎಕೆಎಫ್ಐ ಪಾರದರ್ಶಕವಾಗಿ ಮಾಡಿಲ್ಲ ಎಂದು ಎನ್‌ಕೆಎಫ್ಐ ದಿಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಏಷ್ಯನ್ ಕೂಟದ ಬಳಿಕ ದಿಲ್ಲಿಯ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನ್ಯಾಯಾಲಯ ರಚಿಸಿದ ಆಡಳಿತಾಧಿಕಾರಿ ಸಮ್ಮುಖದಲ್ಲಿ ಎನ್‌ಕೆಎಫ್ಐ ಹಾಗೂ ಎಕೆಎಫ್ಐ ಆಟಗಾರರ ನಡುವೆ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿತ್ತು. ಇದರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಎಕೆಎಫ್ಐ ಆಟಗಾರರು ಪಾಲ್ಗೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ಎನ್‌ಕೆಎಫ್ಐ ನ್ಯಾಯಾಂಗ ನಿಂದನೆ ದೂರು ನೀಡಲು ನಿರ್ಧರಿಸಿದೆ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.