ರಾಂಚಿ ಟೆಸ್ಟ್: ಸ್ಮಿತ್-ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮ್ಯಾಜಿಕ್
Team Udayavani, Mar 17, 2017, 10:52 AM IST
ರಾಂಚಿ: ನಾಯಕ ಸ್ಟೀವನ್ ಸ್ಮಿತ್ ಮತ್ತು 3 ವರ್ಷಗಳ ಬಳಿಕ ಟೆಸ್ಟ್ ಆಡಲಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿಕೊಂಡು ರಾಂಚಿ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮ್ಯಾಜಿಕ್ ಪ್ರದರ್ಶಿಸಿ ದ್ದಾರೆ; ಕುಸಿದ ಆಸ್ಟ್ರೇಲಿಯವನ್ನು ಮೇಲೆತ್ತಿ ನಿಲ್ಲಿಸಿದ್ದಾರೆ. ಮೊದಲ ಅವಧಿಯಲ್ಲಿ ಬೌಲಿಂಗ್ ಮಿಂಚು ಹರಿಸಿದ ಭಾರತ ಕ್ರಮೇಣ ಕಳೆ
ಗುಂದುತ್ತ ಹೋಗಿದೆ.
ಐತಿಹಾಸಿಕ 800ನೇ ಟೆಸ್ಟ್ ಆಡುತ್ತಿರುವ ಸಡಗರದಲ್ಲಿರುವ ಆಸ್ಟ್ರೇಲಿಯ, ರಾಂಚಿ ಆತಿಥ್ಯದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ರೆನ್‌ಶಾ-ವಾರ್ನರ್ ಜೋಡಿಯಿಂದ 50 ರನ್ನುಗಳ ಉತ್ತಮ ಆರಂಭ ಕೂಡ ಲಭಿಸಿತು. ಅನಂತರ 3 ವಿಕೆಟ್‌ಗಳನ್ನು ಪಟಪಟನೇ ಉದುರಿಸಿದ ಭಾರತ ಮೇಲುಗೈ ಸಾಧಿಸುವ ಲಕ್ಷಣ ತೋರಿತು. ಲಂಚ್ ಸ್ಕೋರ್ 3ಕ್ಕೆ 109. ಆಗ ಆರಂಭಿಕರಿಬ್ಬರ ಸಹಿತ ಶಾನ್ ಮಾರ್ಷ್ ಕೂಡ ಪೆವಿಲಿಯನ್ ಸೇರಿಕೊಂಡಿದ್ದರು.
ಕಪ್ತಾನ ಸ್ಮಿತ್‌ಗೆ ಉತ್ತಮ ಬೆಂಬಲ ನೀಡುವ ಸೂಚನೆಯಿತ್ತ ಪೀಟರ್ ಹ್ಯಾಂಡ್ಸ್ ಕಾಂಬ್ (19), ಸ್ಕೋರ್ 140 ರನ್ ಆದಾಗ ಉಮೇಶ್ ಯಾದವ್‌ಗೆ ಲೆಗ್ ಬಿಫೋರ್ ಆಗಿ ನಿರ್ಗಮಿಸಿದಾಗ ಭಾರತದ ದಾಳಿ ತೀವ್ರತೆ ಪಡೆದುಕೊಳ್ಳುವ ಸೂಚನೆ ಲಭಿಸಿತು. ಆದರೆ 5ನೇ ವಿಕೆಟಿಗೆ ಜತೆಗೂಡಿದ ಸ್ಮಿತ್-ಮ್ಯಾಕ್ಸ್‌ವೆಲ್ ಕ್ರೀಸ್ ಆಕ್ರಮಿಸಿಕೊಂಡು ಪಂದ್ಯದ ಸಮೀಕರಣವನ್ನೇ ಬದಲಿಸತೊಡಗಿದರು. ಮೊದಲ ದಿನ ದಾಟದ ಅಷ್ಟೂ ಗೌರವವನ್ನು ಆಸ್ಟ್ರೇಲಿಯಕ್ಕೆ ಲಭಿಸುವಂತೆ ಮಾಡಿದರು.
ಸ್ಮಿತ್: ಈ ಸರಣಿಯ 2ನೇ ಶತಕ
43ನೇ ಓವರಿನಲ್ಲಿ ಜತೆಗೂಡಿದ ಸ್ಮಿತ್-ಮ್ಯಾಕ್ಸ್‌ವೆಲ್ ಕ್ರೀಸಿಗೆ ಫೆವಿಕಾಲ್ ಹಾಕಿಕೊಂಡು ನಿಂತಿದ್ದಾರೆ. ಈಗಾಗಲೇ 47.4 ಓವರ್‌ಗಳ ಅಜೇಯ ಜತೆಯಾಟದ ಮೂಲಕ ಮುರಿಯದ 5ನೇ ವಿಕೆಟಿಗೆ 159 ರನ್ ಪೇರಿಸಿದ್ದಾರೆ. ಸ್ಮಿತ್ 117 ರನ್, “ಮ್ಯಾಕ್ಸಿ’ 82 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಭಾರತಕ್ಕೆ ಭಾರೀ ಸವಾಲಾಗಿ ಉಳಿದಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದ ಡಿಆರ್‌ಎಸ್ ವಿವಾದಕ್ಕೆ “ಗೋಲಿ ಮಾರೋ’ ಎಂಬ ರೀತಿಯಲ್ಲಿ ವಿಜೃಂಭಣೆಯ ಬ್ಯಾಟಿಂಗ್ ನಡೆಸಿದ್ದು ಸ್ಟೀವನ್ ಸ್ಮಿತ್ ಸಾಹಸಕ್ಕೆ ಸಾಕ್ಷಿ. 244 ಎಸೆತಗಳಿಗೆ ಉತ್ತರಿಸಿರುವ ಅವರು 13 ಬೌಂಡರಿ ಬಾರಿಸಿದ್ದಾರೆ. ಇದು ಅವರ 19ನೇ ಟೆಸ್ಟ್ ಶತಕ. ಭಾರತದ ವಿರುದ್ಧ ಆರನೆಯದಾದರೆ, ಈ ಸರಣಿಯಲ್ಲಿ ಎರಡನೆಯದು. ಸ್ಮಿತ್ ಹೊರತುಪಡಿಸಿ ಈ ಸರಣಿಯಲ್ಲಿ ಯಾರೂ ಸೆಂಚುರಿ ಹೊಡೆದಿಲ್ಲ ಎಂಬುದೊಂದು ಹೆಚ್ಚುಗಾರಿಕೆ.
ಇನ್ನೊಂದೆಡೆ, “ಒನ್ ಡೇ ಪ್ಲೇಯರ್’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಆಡುತ್ತಿರುವ ಕೇವಲ 4ನೇ ಟೆಸ್ಟ್ ಇದಾಗಿದೆ. 2014ರ ನವೆಂಬರ್ ಬಳಿಕ ಅವರಿಗೆ ಟೆಸ್ಟ್ ಆಡುವ ಅವಕಾಶ ಲಭಿಸಿದ್ದು ಇದೇ ಮೊದಲು. ಇದನ್ನು ಅಜೇಯ 82 ರನ್ ಬಾರಿಸುವ ಮೂಲಕ ಸ್ಮರಣೀಯ ಗೊಳಿಸಿದರು. ಇದು ಮ್ಯಾಕ್ಸ್‌ವೆಲ್ ಅವರ ಮೊದಲ ಅರ್ಧ ಶತಕ. ಆರಂಭದಲ್ಲಿ ನಿಧಾನ ಗತಿಯ ಆಟವಾಡಿದ ಮ್ಯಾಕ್ಸ್‌ವೆಲ್ ಬಳಿಕ ಬಿರುಸಿನ ಆಟಕ್ಕೆ ಕುದುರಿ ಕೊಂಡರು. 147 ಎಸೆತ ಎದು ರಿಸಿದ್ದು, 5 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಈ ಎರಡೂ ಸಿಕ್ಸರ್‌ಗಳು ಜಡೇಜ ಎಸೆತಗಳಿಗೆ ಬಂದಿವೆ.
ಇವರಿಬ್ಬರನ್ನು ಬಿಟ್ಟರೆ ಆರಂಭಕಾರ ಮ್ಯಾಟ್ ರೆನ್‌ಶಾ ಅವರದೇ ಹೆಚ್ಚಿನ ಗಳಿಕೆ. 69 ಎಸೆತಗಳಿಗೆ ಜವಾಬಿತ್ತ ಅವರು 7 ಬೌಂಡರಿ ನೆರವಿನಿಂದ 44 ರನ್ ಮಾಡಿದರು. ವಾರ್ನರ್ ಮತ್ತು ಹ್ಯಾಂಡ್ಸ್‌ಕಾಂಬ್ ತಲಾ 19 ರನ್ ಮಾಡಿ ನಿರ್ಗಮಿಸಿದರು.
ಭಾರತದ ಪರ ಉಮೇಶ್ ಯಾದವ್ 2 ವಿಕೆಟ್ ಹಾರಿಸಿದರೆ, ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಒಂದೊಂದು ವಿಕೆಟ್ ಉರುಳಿಸಿದರು.
ಅಂದಾಜಿಗೆ ಸಿಗದ ರಾಂಚಿ ಪಿಚ್
ರಾಂಚಿ ಟ್ರ್ಯಾಕ್ ಹೇಗಿದೆ ಎಂಬುದನ್ನು ಮೊದಲ ದಿನದಾಟದಲ್ಲಿ ನಿಖರವಾಗಿ ಅಂದಾಜಿಸಲು ಸಾಧ್ಯವಾಗಿಲ್ಲ. ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ ರಹಾನೆ ಭಾರೀ ಗೊಂದಲಕ್ಕೊಳಗಾದಂತೆ ಕಂಡುಬಂದರು. ಆಗಾಗ ಕೀಪರ್ ಸಾಹಾ ಬಳಿ ಹೋಗಿ ಸಲಹೆ ಕೇಳಿ ಬರುತ್ತಿದ್ದ ದೃಶ್ಯ ಕಂಡುಬಂತು. ಭಾರತ 87ನೇ ಓವರಿನಲ್ಲಿ ಹೊಸ ಚೆಂಡನ್ನು ಕೈಗೆತ್ತಿಕೊಂಡಿದೆ. ಬೇರೂರಿದ ಬ್ಯಾಟ್ಸ್ ಮನ್‌ಗಳಿಬ್ಬರನ್ನು ಶುಕ್ರವಾರ ಬೆಳಗಿನ ಅವಧಿಯಲ್ಲಿ ಬೇಗನೇ ಔಟ್ ಮಾಡಲು ಯಶಸ್ವಿಯಾದರೆ ಪ್ರವಾಸಿಗರ ದೊಡ್ಡ ಮೊತ್ತದ ಯೋಜನೆಯನ್ನು ವಿಫಲಗೊಳಿಸಬಹುದು.
ಕೊಹ್ಲಿ ಭುಜಕ್ಕೆ ಪೆಟ್ಟು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ದಿನದಾಟದ ಕ್ಷೇತ್ರರಕ್ಷಣೆ ವೇಳೆ ಬಲ ಭುಜಕ್ಕೆ ಪೆಟ್ಟು ಮಾಡಿಕೊಂಡು ಮೈದಾನ ತೊರೆದ ಘಟನೆ ಸಂಭವಿಸಿದೆ. ಬಳಿಕ ಉಪನಾಯಕ ಅಜಿಂಕ್ಯ ರಹಾನೆ ತಂಡದ ನೇತೃತ್ವ ವಹಿಸಿದರು.
ಆದರೆ ಕೊಹ್ಲಿ ನೋವು ಗಂಭೀರ ಸ್ವರೂಪದ್ದಾಗೇನೂ ಗೋಚರಿಸಲಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ಐಸ್ ಪ್ಯಾಕ್ ಕಟ್ಟಿಕೊಂಡು ಕೈ ತಿರುಗಿಸುತ್ತ ವ್ಯಾಯಾಮ ಮಾಡುತ್ತಿದ್ದುದು ಕಂಡುಬಂತು. ಸಂಜೆ ಸ್ಕ್ಯಾನಿಂಗ್ ನಡೆಸಲಾಗಿದ್ದು, ಶುಕ್ರವಾರ ಬೆಳಗ್ಗೆ ಸಂಪೂರ್ಣ ಚಿತ್ರಣ ಲಭಿಸಲಿದೆ ಎಂಬುದಾಗಿ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಹೇಳಿದ್ದಾರೆ.
ಆಸ್ಟ್ರೇಲಿಯ ಇನ್ನಿಂಗ್ಸಿನ 40ನೇ ಓವರ್ ವೇಳೆ ಕೊಹ್ಲಿ ಮಿಡ್ ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ಹ್ಯಾಂಡ್ಸ್‌ಕಾಂಬ್ ಬಾರಿಸಿದ ಚೆಂಡು ಲಾಂಗ್ ಬೌಂಡರಿ ದಾಟುವುದನ್ನು ತಪ್ಪಿಸಲು ಕೊಹ್ಲಿ ಮಿಂಚಿನ ಗತಿಯಲ್ಲಿ ಓಡಿದ್ದಾರೆ. ಬೌಂಡರಿ ಲೈನ್‌ನಲ್ಲಿ ಡೈವ್ ಹೊಡೆದಾಗ ಅವರ ಬಲ ಭುಜಕ್ಕೆ ಏಟಾಗಿದೆ. ಕೂಡಲೇ ಅವರು ಮೈದಾನ ಬಿಟ್ಟು ಹೊರನಡೆದರು. ಕೊಹ್ಲಿ ಬದಲು ಅಭಿನವ್ ಮುಕುಂದ್ ಫೀಲ್ಡಿಂಗಿಗೆ ಬಂದರು. ಮತ್ತೆ ಕೊಹ್ಲಿ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ.
ಕೊಹ್ಲಿ ದ್ವಿತೀಯ ದಿನ ಚೇತರಿಸಿಕೊಂಡರೂ ಈಗಾಗಲೇ ಸಾಕಷ್ಟು ಹೊತ್ತು ಮೈದಾನದಿಂದ ಹೊರಗುಳಿದಿರುವುದರಿಂದ ಅವರಿಗೆ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಲಭಿಸುವುದೋ ಇಲ್ಲವೋ ಎಂಬುದೊಂದು ಪ್ರಶ್ನೆಯಾಗಿದೆ.
ಹನ್ನೊಂದರ ಬಳಗದಲ್ಲಿ
ಮ್ಯಾಕ್ಸ್‌ವೆಲ್, ಕಮಿನ್ಸ್
ನಿರೀಕ್ಷೆಯಂತೆ ಆಸ್ಟ್ರೇಲಿಯ ತಂಡದಲ್ಲಿ 2 ಬದಲಾವಣೆ ಸಂಭವಿಸಿತು. ಆಲ್‌ರೌಂಡರ್ ಮಿಚೆಲ್ ಮಾರ್ಷ್, ವೇಗಿ ಮಿಚೆಲ್ ಸ್ಟಾರ್ಕ್ ಗಾಯಾಳಾಗಿ ಬೇರ್ಪಟ್ಟಿದ್ದರಿಂದ ಈ ಸ್ಥಾನಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಸೇರಿಸಿ ಕೊಳ್ಳಲಾಯಿತು. ಇವರಿಬ್ಬರೂ ಸುದೀರ್ಘ ಕಾಲದ ಬಳಿಕ ಟೆಸ್ಟ್ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಕಮಿನ್ಸ್ ಪಾಲಿಗೆ ಇದು ಕೇವಲ 2ನೇ ಟೆಸ್ಟ್ ಆಗಿದ್ದು, 6 ವರ್ಷಗಳ ಬಳಿಕ ಹನ್ನೊಂದರ ಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ 2011ರ ಜೊಹಾನ್ಸ್‌ಬರ್ಗ್ ಪಂದ್ಯದಲ್ಲಿ ಟೆಸ್ಟ್‌ಕ್ಯಾಪ್ ಧರಿಸಿದ ಬಳಿಕ ಕಮಿನ್ಸ್ ಆಡುತ್ತಿರುವ ಮೊದಲ ಟೆಸ್ಟ್ ಇದಾಗಿದೆ.
ಇನ್ನೊಂದೆಡೆ ಮ್ಯಾಕ್ಸ್‌ವೆಲ್ 2014ರಲ್ಲಿ ಪಾಕಿಸ್ಥಾನ ವಿರುದ್ಧ ಯುಎಇಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ರಾಂಚಿ ಪಂದ್ಯ ಮ್ಯಾಕ್ಸ್‌ವೆಲ್ ಪಾಲಿನ ಕೇವಲ 4ನೇ ಟೆಸ್ಟ್ ಆಗಿದೆ.
ಭಾರತ ತಂಡದಲ್ಲಿ ಸಂಭವಿಸಿದ್ದು ಒಂದೇ ಬದಲಾವಣೆ. ಭುಜದ ನೋವಿನಿಂದಾಗಿ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಆರಂಭಕಾರ ಮುರಳಿ ವಿಜಯ್ ಮರಳಿ ತಂಡವನ್ನು ಕೂಡಿಕೊಂಡರು. ಅಭಿನವ್ ಮುಕುಂದ್ ಹೊರ ನಡೆದರು. ನಾಲ್ಕೇ ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳನ್ನು ನೆಚ್ಚಿ ಕೊಂಡಿದ್ದರಿಂದ ಹೆಚ್ಚುವರಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸ್ಟೀವನ್ ಸ್ಮಿತ್ 5,000 ರನ್ ಸಾಧನೆ
ರಾಂಚಿ ಟೆಸ್ಟ್ ಪಂದ್ಯದ ಮೊದಲ ದಿನ ಅಜೇಯ ಶತಕದೊಂದಿಗೆ ಆಸ್ಟ್ರೇಲಿಯ ವನ್ನು ದೊಡ್ಡ ಕುಸಿತದಿಂದ ರಕ್ಷಿಸಿದ ನಾಯಕ ಸ್ಟೀವನ್ ಸ್ಮಿತ್ ಇನ್ನೊಂದು ಸಾಧನೆಯಿಂದಲೂ ಗಮನ ಸೆಳೆದರು. ಈ ಕಪ್ತಾನನ ಆಟದ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದರು. ಅಷ್ಟೇ ಅಲ್ಲ, ಇದನ್ನು ಅತ್ಯಂತ ಕಡಿಮೆ ಟೆಸ್ಟ್‌ಗಳಲ್ಲಿ ಪೂರೈಸಿದ ಸಾಧಕರ ಯಾದಿಯಲ್ಲಿ 3ನೇ ಸ್ಥಾನ ಅಲಂಕರಿಸಿದರು.
ಇದು ಸ್ಮಿತ್ ಆಡುತ್ತಿರುವ 53ನೇ ಟೆಸ್ಟ್. ಕ್ರಿಕೆಟ್ ದಂತ ಕತೆ ಗಳಾದ ಸರ್ ಡಾನ್ ಬ್ರಾಡ್‌ಮನ್ ಕೇವಲ 36 ಟೆಸ್ಟ್‌ಗಳಲ್ಲಿ 5 ಸಾವಿರ ರನ್ ಪೂರೈಸಿದ್ದು ಇಂದಿಗೂ ವಿಶ್ವದಾಖಲೆ ಯಾಗಿ ಉಳಿದಿದೆ. ಅನಂತರದ ಸ್ಥಾನ ದಲ್ಲಿರುವವರು ಭಾರತದ ಸುನೀಲ್ ಗಾವಸ್ಕರ್ (52 ಟೆಸ್ಟ್).
ಗುರುವಾರದ ಬ್ಯಾಟಿಂಗ್ ವೇಳೆ ಸ್ಮಿತ್ ಇಂಗ್ಲೆಂಡಿನ ಜಾಕ್ ಹಾಬ್ಸ್ ಮತ್ತು ವೆಸ್ಟ್ ಇಂಡೀಸಿನ ಗ್ಯಾರಿ ಸೋಬರ್ ದಾಖಲೆಯನ್ನು ಮುರಿದರು. ಇವ ರಿಬ್ಬರೂ 57 ಟೆಸ್ಟ್‌ಗಳಲ್ಲಿ 5 ಸಾವಿರ ರನ್ ಬಾರಿಸಿದ್ದರು.
97 ಇನ್ನಿಂಗ್ಸ್
ಸ್ಟೀವ್ ಸ್ಮಿತ್ 5 ಸಾವಿರ ರನ್ನಿಗಾಗಿ 97 ಇನ್ನಿಂಗ್ಸ್ ತೆಗೆದುಕೊಂಡರು. ಅವರೀಗ 100 ಇನ್ನಿಂಗ್ಸ್ ಒಳಗೆ ಈ ಸಾಧನೆ ಮಾಡಿದ ವಿಶ್ವದ 11ನೇ ಬ್ಯಾಟ್ಸ್‌ಮನ್ ಎನಿಸಿದ್ದು, ಇಲ್ಲಿ ವಿಶ್ವಶ್ರೇಷ್ಠರಾದ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಕೂಡ ಇಲ್ಲ ಎಂಬುದು ಗಮನಾರ್ಹ.
ಇನ್ನಿಂಗ್ಸ್‌ಗಳ ಲೆಕ್ಕಾಚಾರದಲ್ಲಿ ಸ್ಮಿತ್ ಅವರ 5 ಸಾವಿರ ರನ್ ಸಾಧನೆಗೆ ಜಂಟಿ 7ನೇ ಸ್ಥಾನ. ಇಂಗ್ಲೆಂಡಿನ ವಾಲೀ ಹ್ಯಾಮಂಡ್, ಕೆನ್ ಬ್ಯಾರಿಂಗ್ಟನ್ ಕೂಡ 97 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 56 ಇನ್ನಿಂಗ್ಸ್‌ಗಳಲ್ಲಿ 5 ಸಹಸ್ರ ರನ್ ಪೇರಿಸಿದ ಬ್ರಾಡ್‌ಮನ್ ಅವರದು ವಿಶ್ವದಾಖಲೆ.
27ರ ಹರೆಯದ ಸ್ಮಿತ್ 5 ಸಾವಿರ ರನ್ ಸಾಧನೆ ಮಾಡಿದ ಆಸ್ಟ್ರೇಲಿಯದ ಅತ್ಯಂತ ಕಿರಿಯ ಕ್ರಿಕೆಟಿಗನೂ ಹೌದು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ಮ್ಯಾಟ್ ರೆನ್‌ಶಾ ಸಿ ಕೊಹ್ಲಿ ಬಿ ಯಾದವ್ 44
ಡೇವಿಡ್ ವಾರ್ನರ್ ಸಿ ಮತ್ತು ಬಿ ಜಡೇಜ 19
ಸ್ಟೀವನ್ ಸ್ಮಿತ್ ಬ್ಯಾಟಿಂಗ್ 117
ಶಾನ್ ಮಾರ್ಷ್ ಸಿ ಪೂಜಾರ ಬಿ ಅಶ್ವಿನ್ 2
ಪೀಟರ್ ಹ್ಯಾಂಡ್ಸ್‌ಕಾಂಬ್ ಎಲ್‌ಬಿಡಬ್ಲ್ಯು ಯಾದವ್ 19
ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ 82
ಇತರ 16
ಒಟ್ಟು (4 ವಿಕೆಟಿಗೆ) 299
ವಿಕೆಟ್ ಪತನ: 1-50, 2-80, 3-89, 4-140.
ಬೌಲಿಂಗ್:
ಇಶಾಂತ್ ಶರ್ಮ 15-2-46-0
ಉಮೇಶ್ ಯಾದವ್ 19-3-63-2
ಆರ್. ಅಶ್ವಿನ್ 23-2-78-1
ರವೀಂದ್ರ ಜಡೇಜ 30-3-80-1
ಮುರಳಿ ವಿಜಯ್ 3-0-17-0
ಎಕ್ಸ್‌ಟ್ರಾ ಇನ್ನಿಂಗ್ಸ್
ಸ್ಟೀವನ್ ಸ್ಮಿತ್ ಭಾರತದ ಸರಣಿಯೊಂದರ ವೇಳೆ 2 ಅಥವಾ ಹೆಚ್ಚು ಶತಕ ಹೊಡೆದ 3ನೇ ವಿದೇಶಿ ಆಟಗಾರನೆನಿಸಿದರು. ಇದಕ್ಕೂ ಮುನ್ನ ಕ್ಲೈವ್ ಲಾಯ್ಡ 2 ಸಲ (1974-75 ಮತ್ತು 1983-83ರಲ್ಲಿ ತಲಾ 2 ಶತಕ) ಮತ್ತು ಅಲಸ್ಟೇರ್ ಕುಕ್ ಒಮ್ಮೆ (2012-13ರಲ್ಲಿ 3 ಶತಕ) ಈ ಸಾಧನೆಗೈದಿದ್ದರು.
ಸ್ಮಿತ್ ಈ ಇನ್ನಿಂಗ್ಸ್ ವೇಳೆ 5 ಸಾವಿರ ರನ್ ಹಾಗೂ 19ನೇ ಶತಕವನ್ನು ಪೂರ್ತಿಗೊಳಿಸಿದರು. 5 ಸಾವಿರ ರನ್ ಗಳಿಕೆಯ ವೇಳೆ ಅತೀ ಹೆಚ್ಚು ಶತಕ ಹೊಡೆದವರ ಯಾದಿಯಲ್ಲಿ ಸ್ಮಿತ್ 3ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಬ್ರಾಡ್‌ಮನ್ ಅಗ್ರಸ್ಥಾನದಲ್ಲಿದ್ದರೆ (21), ಗಾವಸ್ಕರ್ ಮತ್ತು ಹೇಡನ್ ದ್ವಿತೀಯ ಸ್ಥಾನ ಪಡೆದಿದ್ದಾರೆ (20). ತೆಂಡುಲ್ಕರ್ ಮತ್ತು ನೀಲ್ ಹಾರ್ವೆ ಅವರಿಗೆ 4ನೇ ಸ್ಥಾನ (18 ಶತಕ).
ಸ್ಮಿತ್-ಮ್ಯಾಕ್ಸ್‌ವೆಲ್ 159 ರನ್ನುಗಳ ಅಜೇಯ ಜತೆಯಾಟ ದಾಖಲಿಸಿದ್ದಾರೆ. ಆಸೀಸ್ 5ನೇ ವಿಕೆಟಿಗೆ ಭಾರತದಲ್ಲಿ ಒಟ್ಟುಗೂಡಿಸಿದ ಅತ್ಯಧಿಕ ಮೊತ್ತ ಇದಾ ಗಿದೆ. 2012-13ರ ಹೈದರಾಬಾದ್ ಟೆಸ್ಟ್‌ನಲ್ಲಿ ಕ್ಲಾರ್ಕ್-ವೇಡ್ ಪೇರಿಸಿದ 145 ರನ್ ದಾಖಲೆ ಪತನಗೊಂಡಿತು.
ಮ್ಯಾಕ್ಸ್‌ವೆಲ್ ಮೊದಲ ಅರ್ಧ ಶತಕ ಹೊಡೆದರು (ಬ್ಯಾಟಿಂಗ್ 82). ಇದಕ್ಕೂ ಹಿಂದಿನ 6 ಇನ್ನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 80 ರನ್. ಇದರಲ್ಲಿ 37 ರನ್ ಅತೀ ಹೆಚ್ಚಿನದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.