ಒತ್ತಡ ಹೇರುವಲ್ಲಿ ಯಶಸ್ವಿಯಾದೆವು: ಡಿ ಕಾಕ್
Team Udayavani, Sep 24, 2019, 5:18 AM IST
ಬೆಂಗಳೂರು: “ನಮ್ಮ ಯೋಜನೆ ಹಾಗೂ ಕಾರ್ಯತಂತ್ರಕ್ಕೆ ತಕ್ಕಂತೆ ಆಡಿ ಭಾರತದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದೆವು. ಇದರಿಂದ ಈ ದೊಡ್ಡ ಗೆಲುವು ಒಲಿಯಿತು’ ಎಂಬುದಾಗಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ. ರವಿವಾರ ರಾತ್ರಿ ಬೆಂಗಳೂರು ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದು, ಟಿ20 ಸರಣಿಯನ್ನು ಸಮಬಲಗೊಳಿಸಿದ ಖುಷಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.
“ಆರಂಭದ 6 ಓವರ್‌ಗಳಲ್ಲಿ ಭಾರತ 54 ರನ್ ಬಾರಿಸಿದಾಗ ನಮ್ಮ ಎಲ್ಲ ಯೋಜನೆ ತಲೆಕೆಳಗಾಗುತ್ತದೆ ಎಂದು ಭಾವಿಸಿದ್ದೆ. ಆಗ ನಾವು ಒತ್ತಡಕ್ಕೆ ಒಳಗಾಗಿದ್ದೆವು. ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿತು ಬೌಲಿಂಗ್ ಮಾಡುವಂತೆ ಸೂಚಿಸಿದೆ. ಇದರಲ್ಲಿ ನಮ್ಮ ಬೌಲರ್‌ಗಳು ಯಶಸ್ವಿಯಾದರು. ಭಾರತವನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದರು’ ಎಂದು ಡಿ ಕಾಕ್ ಹೇಳಿದರು.
“ಸರಣಿಯಲ್ಲಿ ಮೊದಲ ಪಂದ್ಯವಾಡಿದ ಸೀಮರ್ ಬ್ಯೂರನ್ ಹೆಂಡ್ರಿಕ್ಸ್ 4 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಕಬಳಿಸಿ ಅಮೋಘ ಪ್ರದರ್ಶನ ನೀಡಿದರು. ಅವರು ತವರಿನ ಟಿ20 ಲೀಗ್‌ನಲ್ಲಿ ಘಾತಕ ಬೌಲಿಂಗ್ ನಡೆಸುತ್ತಲೇ ಬಂದಿದ್ದಾರೆ. ಎಡಗೈ ಸ್ಪಿನ್ನರ್ ಬ್ರೋರ್ನ್ ಫಾರ್ಟಿನ್ ಕೂಡ ಕ್ಲಿಕ್ ಆದರು’ ಎಂದು ಡಿ ಕಾಕ್ ಬೌಲಿಂಗ್ ದಾಳಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಭಾರತದಂತಹ ಬಲಿಷ್ಠ ತಂಡದ ಎದುರು ಇಷ್ಟು ದೊಡ್ಡ ಅಂತರದ ಗೆಲುವು ದಾಖಲಿಸಿದ್ದನ್ನು ನಂಬಲು ಅಸಾಧ್ಯ ವಾಗುತ್ತಿಲ್ಲ, ಮುಂದಿನ ವರ್ಷದ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ದೊಡ್ಡ ಗೆಲುವನ್ನು ದಾಖಲಿಸಬೇಕಿದೆ ಎಂದೂ ಡಿ ಕಾಕ್ ಹೇಳಿದರು.
ಭಾರತಕ್ಕೆ ಇದು ಎಚ್ಚರಿಕೆ
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಉಪನಾಯಕ ರಸ್ಸಿ ವಾನ್ ಡರ್ ಡುಸೆನ್ ಮಾತನಾಡಿ, “ಟೆಸ್ಟ್ ಸರಣಿಗೂ ಮುನ್ನ ನಾವು ಭಾರತಕ್ಕೆ ಬಲವಾದ ಎಚ್ಚರಿಕೆ ರವಾನಿಸಿದ್ದೇವೆ’ ಎಂದರು. 3 ಪಂದ್ಯಗಳ ಟೆಸ್ಟ್ ಸರಣಿ ಅ. 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಇದೇ ಅಂಗಳದಲ್ಲಿ ಸೆ. 26ರಿಂದ ಮಂಡಳಿ ಅಧ್ಯಕ್ಷರ ಬಳಗದ ಎದುರು ತ್ರಿದಿನ ಅಭ್ಯಾಸ ಪಂದ್ಯವನ್ನು ಆಡಲಿದೆ.
ಶಂಸಿ, ಇದೇನು “ಶೂ ಫೋನ್’ ಸಂಭ್ರಮ?
ಬೆಂಗಳೂರು ಟಿ20 ಪಂದ್ಯದ ವೇಳೆ ಶಿಖರ್ ಧವನ್ ವಿಕೆಟ್ ಹಾರಿಸಿದ ಬಳಿಕ ಆಫ್ರಿಕಾದ ಎಡಗೈ ಸ್ಪಿನ್ನರ್ ತಬ್ರೇಜ್ ಶಂಸಿ ಶೂ ಒಂದನ್ನು ಮೊಬೈಲ್‌ನಂತೆ ಕಿವಿಗೆ ಇರಿಸಿ ಯಾರದೋ ಜತೆ ಮಾತಾಡುತ್ತಿರುವವರಂತೆ ಸಂಭ್ರಮ ಆಚರಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಸಾಕಷ್ಟು ಟೀಕೆಗಳೂ ಹರಿದು ಬಂದಿವೆ.
ಶಂಸಿ ಎಸೆದ ಮೊದಲ ಓವರ್‌ನಲ್ಲಿ ಧವನ್ 2 ಸಿಕ್ಸರ್ ಎತ್ತಿದ್ದರು. ಮುಂದಿನ ಓವರಿನಲ್ಲಿ ಶಂಸಿ ಭಾರತೀಯ ಆರಂಭಿಕದ ವಿಕೆಟ್ ಹಾರಿಸಿ ಸೇಡು ತೀರಿಸಿಕೊಂಡರು. ಅನಂತರ ನಡೆದದ್ದೇ ಈ “ಶೂ ಪ್ರಹಸನ’.
ಇದಕ್ಕೆ ಪತ್ರಿಕಾಗೋಷ್ಠಿ ವೇಳೆ ಡುಸೆನ್ ವಿವರಣೆ ಒದಗಿಸಿದ್ದಾರೆ. “ಶಂಸಿ ಯಾವತ್ತೂ ಇಮ್ಮಿಗೆ (ಇಮ್ರಾನ್ ತಾಹಿರ್) ಫೋನ್ ಮಾಡುತ್ತಿರುತ್ತಾರೆ. ಅವರ ಕ್ರಿಕೆಟ್ ಹೀರೋಗಳಲ್ಲಿ ತಾಹಿರ್ ಕೂಡ ಒಬ್ಬರು. ಇಬ್ಬರೂ ಜತೆಯಾಗಿ ಅಭ್ಯಾಸ ನಡೆಸಿದವರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ ಧವನ್ ಅವರ ಬಿಗ್ ವಿಕೆಟ್ ಪಡೆದ ಬಳಿಕ ಶಂಸಿ ತಾಹಿರ್‌ಗೆ ಫೋನ್ ಮಾಡುವಂತೆ ನಟಿಸಿದ್ದಾರೆ, ಅಷ್ಟೇ…’ ಎಂಬುದು ಡುಸೆನ್ ಹೇಳಿಕೆ.ಆದರೆ ಇದಕ್ಕಾಗಿ ಶಂಸಿ ಶೂವನ್ನೇ ಏಕೆ ಮೊಬೈಲ್ ರೀತಿ ಬಳಸಬೇಕಿತ್ತು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಲಭಿಸಿಲ್ಲ!
ಎಕ್ಸ್‌ಟ್ರಾ ಇನ್ನಿಂಗ್ಸ್
– ಬೆಂಗಳೂರಿನಲ್ಲಿ ಆಡಿದ 5 ಟಿ20 ಪಂದ್ಯಗಳಲ್ಲಿ ಭಾರತ 3ನೇ ಸೋಲನುಭವಿಸಿತು. ಬೆಂಗಳೂರು ಹೊರತುಪಡಿಸಿ ಬೇರೆ ಯಾವುದೇ ಕಡೆ ಭಾರತ 3 ಟಿ20 ಪಂದ್ಯಗಳನ್ನು ಸೋತಿಲ್ಲ.
– ಭಾರತ ಕ್ಯಾಲೆಂಡರ್ ವರ್ಷವೊಂದರಲ್ಲಿ ಬೆಂಗಳೂರಿನಲ್ಲಿ 2 ಟಿ20 ಪಂದ್ಯಗಳನ್ನಾಡಿತು. ಕಳೆದ ಫೆಬ್ರವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಇಲ್ಲಿ ಆಡಿತ್ತು. ಎರಡರಲ್ಲೂ ಸೋತಿತು. ಬೇರೆ ಯಾವುದೇ ಕೇಂದ್ರಗಳಲ್ಲಿ ಭಾರತ ಒಂದೇ ವರ್ಷದಲ್ಲಿ 2 ಟಿ20 ಪಂದ್ಯಗಳನ್ನಾಡಿಲ್ಲ.
– ಭಾರತ 4ನೇ ಸಲ 9 ಅಥವಾ ಇದಕ್ಕಿಂತ ಹೆಚ್ಚು ವಿಕೆಟ್‌ಗಳ ಅಂತರದಲ್ಲಿ ಸೋಲನುಭವಿಸಿತು. ಇದು ತವರಲ್ಲಿ ಭಾರತ ಅನುಭವಿಸಿದ ವಿಕೆಟ್ ಅಂತರದ ಅತೀ ದೊಡ್ಡ ಸೋಲು. ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಗುವಾಹಟಿಯಲ್ಲಿ 8 ವಿಕೆಟ್‌ಗಳಿಂದ ಎಡವಿದ್ದು ದೊಡ್ಡ ಸೋಲಾಗಿತ್ತು.
– ಕ್ವಿಂಟನ್ ಡಿ ಕಾಕ್ ನಾಯಕನಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಗೆಲುವು ಕಂಡರು. ಇದಕ್ಕೂ ಮುನ್ನ ಡಿ ಕಾಕ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 2 ಏಕದಿನ, ಒಂದು ಟಿ20 ಪಂದ್ಯ ಆಡಿತ್ತು. ಎಲ್ಲದರಲ್ಲೂ ಸೋತಿತ್ತು.
– ಡಿ ಕಾಕ್ ಮೊದಲ ಸಲ ಸತತ 2 ಟಿ20 ಪಂದ್ಯಗಳಲ್ಲಿ ಅರ್ಧ ಶತಕ ಹೊಡೆದರು. ಇದಕ್ಕೂ ಮುನ್ನ ಆಡಿದ 36 ಟಿ20 ಇನ್ನಿಂಗ್ಸ್‌ಗಳಲ್ಲಿ ಅವರಿಂದ ದಾಖಲಾದದ್ದು 2 ಅರ್ಧ
ಶತಕ ಮಾತ್ರ.
-ಡಿ ಕಾಕ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಾವಿರ ರನ್ ಗಳಿಸಿದ ದಕ್ಷಿಣ ಆಫ್ರಿಕಾದ 6ನೇ ಬ್ಯಾಟ್ಸ್‌ಮನ್ ಎನಿಸಿದರು. ಎಲ್ಲ ಮಾದರಿಯ ಟಿ20 ಕೂಟಗಳಲ್ಲಿ ಡಿ ಕಾಕ್ ಗಳಿಸಿದ ರನ್ 5 ಸಾವಿರಕ್ಕೆ ಏರಿತು.
– ಧವನ್ ಎಲ್ಲ ಮಾದರಿಯ ಟಿ20 ಪಂದ್ಯಗಳಲ್ಲಿ 7 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ 4ನೇ ಬ್ಯಾಟ್ಸ್ ಮನ್ ಎನಿಸಿದರು.
– ಟಿ20 ಕ್ರಿಕೆಟ್‌ನಲ್ಲಿ ಬ್ಯೂರನ್ ಹೆಂಡ್ರಿಕ್ಸ್ 3 ಸಲ ರೋಹಿತ್ ಅವರನ್ನು ಔಟ್ ಮಾಡಿದರು. ಈ ಸಂದರ್ಭಗಳಲ್ಲಿ ಹೆಂಡ್ರಿಕ್ಸ್ ಅವರಿಂದ ರೋಹಿತ್ ಎದುರಿಸಿದ್ದು
4 ಎಸೆತ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.