ಸುನೀಲ್ ಚೆಟ್ರಿ ಕೊನೆಯ ಸೀಸನ್: ಸ್ಟಿಮ್ಯಾಕ್
Team Udayavani, Mar 16, 2023, 6:29 AM IST
ಕೋಲ್ಕತಾ: ಭಾರತದ ವಿಶ್ವ ದರ್ಜೆಯ ಫುಟ್ಬಾಲಿಗ, ಖ್ಯಾತ ಸ್ಟ್ರೈಕರ್ ಸುನೀಲ್ ಚೆಟ್ರಿ ಬಹುಶಃ ತಮ್ಮ ವೃತ್ತಿ ಬದುಕಿನ ಕೊನೆಯ ಋತುವನ್ನು ಆಡಲಿದ್ದಾರೆ ಎಂಬುದಾಗಿ ಕೋಚ್ ಐಗರ್ ಸ್ಟಿಮ್ಯಾಕ್ ಅಭಿಪ್ರಾಯಪಟ್ಟಿದ್ದಾರೆ.
“ಸುನೀಲ್ ಚೆಟ್ರಿ ಅವರಿಗೆ ಈಗ ವಯಸ್ಸೇ ಅಡ್ಡಿಯಾಗುತ್ತಿದೆ. ಹೀಗಾಗಿ ಇದು ಅವರ ವಿದಾಯದ ಋತು ಆಗಿರುವ ಸಾಧ್ಯತೆಯೇ ಹೆಚ್ಚು. ಖಂಡಿತವಾಗಿಯೂ ಇದು ಅವರ ಪಾಲಿನ ಕೊನೆಯ ಏಷ್ಯಾ ಕಪ್ ಆಗಿರಲಿದೆ’ ಎಂಬುದಾಗಿ ಸ್ಟಿಮ್ಯಾಕ್ ಹೇಳಿದರು.
ಭಾರತದ ಮುಂದಿನ ದೊಡ್ಡ ಫುಟ್‌ಬಾಲ್ ಪಂದ್ಯಾವಳಿಯೆಂದರೆ 2024ರ ಆರಂಭದಲ್ಲಿ ಕತಾರ್‌ನಲ್ಲಿ ನಡೆಯಲಿರುವ ಎಎಫ್ಸಿ ಏಷ್ಯನ್ ಕಪ್ ಟೂರ್ನಿ. 38 ವರ್ಷದ ಸುನೀಲ್ ಚೆಟ್ರಿ ತಮ್ಮ 3ನೇ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಭಾರತೀಯ ದಾಖಲೆಯೂ ಆಗಿದೆ. ಚೆಟ್ರಿ 2011 ಮತ್ತು 2019ರ ಏಷ್ಯಾ ಕಪ್‌ನಲ್ಲೂ ಆಡಿದ್ದರು.
ಭಾರತದ ಫುಟ್‌ಬಾಲ್ ತಂಡ ಬುಧವಾರ ಕೋಲ್ಕತಾದಲ್ಲಿ ಆರಂಭಗೊಂಡ 5 ದಿನಗಳ ರಾಷ್ಟ್ರೀಯ ಶಿಬಿರಲ್ಲಿ ಪಾಲ್ಗೊಂಡಿದೆ. ಇದರಲ್ಲಿ ಸುನೀಲ್ ಚೆಟ್ರಿ ಕೂಡ ಇದ್ದಾರೆ.
ಅಮೋಘ ಸಾಧನೆ
2005ರಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಅಡಿಯಿರಿಸಿದ ಸುನೀಲ್ ಚೆಟ್ರಿ ಅವರ ಸಾಧನೆ ಅಮೋಘ. ಅತ್ಯಧಿಕ ಗೋಲು ಬಾರಿಸಿದ ಸಮಕಾಲೀನ ಆಟಗಾರರ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ (84 ಗೋಲು). ಕ್ರಿಸ್ಟಿಯಾನೊ ರೊನಾಲ್ಡೊ (118 ಗೋಲು), ಲಿಯೋನೆಲ್ ಮೆಸ್ಸಿ (98 ಗೋಲು) ಹೊರತುಪಡಿಸಿದರೆ ಭಾರತದ ಸುನೀಲ್ ಚೆಟ್ರಿಯೇ ಜಾಗತಿಕ ಹೀರೋ.
ಅಂತಾರಾಷ್ಟ್ರೀಯ ಪಂದ್ಯ
ವಿಶ್ವ ರ್‍ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿರುವ ಭಾರತ ಸೆಪ್ಟಂಬರ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಎದುರಾಳಿ ತಂಡಗಳೆಂದರೆ ಕಿರ್ಗಿ ರಿಪಬ್ಲಿಕ್ ಮತ್ತು ಮ್ಯಾನ್ಮಾರ್. ಈ ಪಂದ್ಯಗಳು ಇಂಫಾಲಾದಲ್ಲಿ ನಡೆಯಲಿವೆ. ಭಾರತ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಿಂಗಾಪುರ ಮತ್ತು ವಿಯೆಟ್ನಾಮ್ ವಿರುದ್ಧ ಆಡಿತ್ತು. ಫಲಿತಾಂಶ, 1-1 ಡ್ರಾ ಹಾಗೂ 0-3 ಸೋಲು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.