ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿ: ಸೂರ್ಯಕುಮಾರ್, ಸ್ಮೃತಿ ಮಂಧನಾ ನಾಮನಿರ್ದೇಶನ
ಉದಯೋನ್ಮುಖ ಕ್ರಿಕೆಟಿಗ ಗೌರವಕ್ಕೆ ಅರ್ಶ್ ದೀಪ್ ಸಿಂಗ್...
Team Udayavani, Dec 29, 2022, 3:57 PM IST
ನವದೆಹಲಿ: ಭಾರತದ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಮತ್ತು ಸ್ಮೃತಿ ಮಂಧನಾ ಅವರು ಕ್ರಮವಾಗಿ ಪುರುಷ ಮತ್ತು ಮಹಿಳಾ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಗುರುವಾರ ನಾಮನಿರ್ದೇಶನಗೊಂಡಿದ್ದಾರೆ.
ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರಾನ್, ಪಾಕಿಸ್ಥಾನದ ವಿಕೆಟ್‌ಕೀಪರ್, ಬ್ಯಾಟ್ಸ್ ಮ್ಯಾನ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್‌ರೌಂಡರ್ ಸಿಕಂದರ್ ರಜಾ ಅವರೊಂದಿಗೆ ಪುರುಷರ ವಿಭಾಗದಲ್ಲಿ ಅಗ್ರ ಗೌರವಕ್ಕೆ ಸೂರ್ಯಕುಮಾರ್ ನಾಮನಿರ್ದೇಶನಗೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಪಾಕಿಸ್ಥಾನದ ಬೌಲಿಂಗ್ ಆಲ್‌ರೌಂಡರ್ ನಿದಾ ದಾರ್, ನ್ಯೂಜಿಲ್ಯಾಂಡ್ ನ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ತಹ್ಲಿಯಾ ಮೆಕ್‌ಗ್ರಾತ್ ಅವರು ಮಂಧನಾಗೆ ಸ್ಪರ್ಧೆಯನ್ನು ನೀಡಲಿದ್ದಾರೆ.
2022 ರಲ್ಲಿ ಸೂರ್ಯಕುಮಾರ್ ಅವರು ಟಿ 20 ಸ್ವರೂಪದಲ್ಲಿ ಒಂದು ವರ್ಷದಲ್ಲಿ 1000 ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಅವರು 187.43 ರ ಸ್ಟ್ರೈಕ್ ರೇಟ್‌ನಲ್ಲಿ 1164 ರನ್‌ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸದ್ಯ ಯಾದವ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷದ ಮಹಿಳಾ ವರ್ಷದ ಕ್ರಿಕೆಟಿಗರಾಗಿ ಪ್ರತಿಷ್ಠಿತ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ ಗೆದ್ದಿದ್ದ ಮಂಧನಾ ಮತ್ತೊಮ್ಮೆ ನಾಮನಿರ್ದೇಶನಗೊಂಡು ಗಮನಸೆಳೆದಿದ್ದಾರೆ.
ಅರ್ಶ್ ದೀಪ್ ಸಿಂಗ್ ನಾಮನಿರ್ದೇಶನ
ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಗೌರವಕ್ಕೆ ಭಾರತದ ಎಡಗೈ ವೇಗಿ ಅರ್ಶ್ ದೀಪ್ ಸಿಂಗ್ ಬುಧವಾರ ನಾಮನಿರ್ದೇಶನಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್, ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಮತ್ತು ಅಫ್ಘಾನಿಸ್ಥಾನ ಬ್ಯಾಟ್ಸ್ ಮ್ಯಾನ್ ಇಬ್ರಾಹಿಂ ಝದ್ರಾನ್ ಅವರೊಂದಿಗೆ ಅರ್ಶ್ ದೀಪ್ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.