T20: ಭಾರತದ ವನಿತೆಯರ ವಿರುದ್ಧ ತಿರುಗಿ ಬಿದ್ದ ಆಸ್ಟ್ರೇಲಿಯ
ಮಂಗಳವಾರ ಸರಣಿ ನಿರ್ಣಾಯಕ ಪಂದ್ಯ
Team Udayavani, Jan 8, 2024, 6:00 AM IST
ನವಿ ಮುಂಬಯಿ: ಮೊದಲ ಪಂದ್ಯಕ್ಕೆ ತದ್ವಿರುದ್ಧ ರೀತಿಯಲ್ಲಿ ಆಡಿದ ಭಾರತದ ವನಿತೆಯರು ರವಿವಾರದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 6 ವಿಕೆಟ್‌ಗಳಿಂದ ಶರಣಾಗಿದ್ದಾರೆ. ಇದರೊಂದಿಗೆ ಸರಣಿ 1-1 ಸಮಬಲಕ್ಕೆ ಬಂದಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 8 ವಿಕೆಟಿಗೆ ಕೇವಲ 130 ರನ್ ಗಳಿಸಿತು. ಯಾವುದೇ ಒತ್ತಡಕ್ಕೆ ಸಿಲುಕದ ಆಸ್ಟ್ರೇಲಿಯ 19 ಓವರ್‌ಗಳಲ್ಲಿ 4 ವಿಕೆಟಿಗೆ 133 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಶುಕ್ರವಾರದ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಸರ್ವಾಂಗೀಣ ಪ್ರದರ್ಶನ ನೀಡಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ರನ್ ಬರಗಾಲ ಅನುಭವಿಸಿತು. ಭಾರತದ ಸರದಿಯಲ್ಲಿ ಒಂದೂ ಶತಕಾರ್ಧ ದಾಖಲಾಗಲಿಲ್ಲ. ಮೊದಲ ಪಂದ್ಯದಲ್ಲಿ ಆರಂಭಿಕ ವಿಕೆಟಿಗೆ 137 ರನ್ ಜತೆಯಾಟ ದಾಖಲಾಗಿದ್ದರೆ, ಇಲ್ಲಿ ಎಲ್ಲ ಸೇರಿ ಈ ಮೊತ್ತಕ್ಕಿಂತಲೂ ಕಡಿಮೆ ಸ್ಕೋರ್ ದಾಖಲಿಸಿದ್ದು ಭಾರತದ ಅಸ್ಥಿರ ಬ್ಯಾಟಿಂಗ್‌ಗೆ ಸಾಕ್ಷಿಯಾಯಿತು.
ಅಲ್ಲಿ ಸರ್ವಾಧಿಕ 64 ರನ್ ಮಾಡಿದ್ದ ಶಫಾಲಿ ಇಲ್ಲಿ ಒಂದೇ ರನ್ನಿಗೆ ಆಟ ಮುಗಿಸಿದರು. ಮಂಧನಾ ಗಳಿಕೆ 22 ರನ್. ದೀಪ್ತಿ ಶರ್ಮ ಸರ್ವಾಧಿಕ 30, ರಿಚಾ ಘೋಷ್ 23 ರನ್ ಮಾಡಿದರು. ಎರಡಂಕೆಯ ಗಡಿ ದಾಟಿದ ಮತ್ತೋರ್ವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ (13). ನಾಯಕಿ ಕೌರ್ ಅವರ ಬ್ಯಾಟಿಂಗ್ ಬರಗಾಲ ಇಲ್ಲಿಯೂ ಮುಂದುವರಿಯಿತು. ಅವರದು ಬರೀ 6 ರನ್ ಗಳಿಕೆ. ಎದುರಿಸಿದ್ದು 12 ಎಸೆತ.
ಕಿಮ್ ಗಾರ್ತ್ ತಮ್ಮ ಮೊದಲ ಓವರ್‌ನಲ್ಲೇ ಶಫಾಲಿ ವರ್ಮ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಬಳಿಕ ಜೆಮಿಮಾ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಪವರ್ ಪ್ಲೇಯಲ್ಲಿ ಭಾರತ 2 ವಿಕೆಟಿಗೆ 33 ರನ್ ಗಳಿಸಿತ್ತು. ಅನ್ನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೇರ್‌ಹ್ಯಾಮ್ ಕೂಡ ಭಾರತಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.
ಚೇಸಿಂಗ್ ವೇಳೆ ಆಸ್ಟ್ರೇಲಿಯ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಎಲ್ಲಿಸ್ ಪೆರ್ರಿ ಅಜೇಯ 34, ಅಲಿಸ್ಸಾ ಹೀಲಿ 26, ಬೆತ್ ಮೂನಿ 20 ಹಾಗೂ ಲಿಚ್‌ಫೀಲ್ಡ್ ಅಜೇಯ 18 ರನ್ ಬಾರಿಸಿ ಒಂದು ಓವರ್ ಉಳಿದಿರುವಾಗಲೇ ತಂಡವನ್ನು ದಡ ಮುಟ್ಟಿಸಿದರು. ದೀಪ್ತಿ ಶರ್ಮ 22 ರನ್ನಿಗೆ 2 ವಿಕೆಟ್ ಉರುಳಿಸಿದರು.
ಸರಣಿ ನಿರ್ಣಾಯಕ ಪಂದ್ಯ ಮಂಗಳವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-8 ವಿಕೆಟಿಗೆ 130 (ದೀಪ್ತಿ 30, ಮಂಧನಾ 23, ರಿಚಾ 23, ವೇರ್‌ಹ್ಯಾಮ್ 17ಕ್ಕೆ 2, ಸದರ್‌ಲ್ಯಾಂಡ್ 18ಕ್ಕೆ 2, ಗಾರ್ತ್ 27ಕ್ಕೆ 2). ಆಸ್ಟ್ರೇಲಿಯ-19 ಓವರ್‌ಗಳಲ್ಲಿ 4 ವಿಕೆಟಿಗೆ 133 (ಪೆರ್ರಿ ಅಜೇಯ 34, ಹೀಲಿ 26, ಮೂನಿ 20, ಲಿಚ್‌ಫೀಲ್ಡ್ ಅಜೇಯ 18, ದೀಪ್ತಿ 22ಕ್ಕೆ 2).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.