ಟಿ20 ರ್‍ಯಾಂಕಿಂಗ್: ಅಗ್ರ ಹತ್ತರಲ್ಲಿ ಕೊಹ್ಲಿ
Team Udayavani, Dec 12, 2019, 10:37 PM IST
ದುಬಾೖ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2-1 ಅಂತರದಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಪರಿಷ್ಕರಿಸಲಾದ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಗತಿ ಸಾಧಿಸಿದ್ದಾರೆ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟಿನ ಅಗ್ರಮಾನ್ಯ ಬ್ಯಾಟ್ಸ್‌ಮನ್ ಕೊಹ್ಲಿ, ಚುಟುಕು ಕ್ರಿಕೆಟ್‌ನಲ್ಲೀಗ 10ನೇ ಸ್ಥಾನ ಅಲಂಕರಿಸಿದ್ದಾರೆ. ರಾಹುಲ್ 3 ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಬಂದಿದ್ದಾರೆ.
ಮೊದಲ ಪಂದ್ಯದಲ್ಲಿ ಅಜೇಯ 94 ರನ್ ಹಾಗೂ ಮುಂಬಯಿಯ ನಿರ್ಣಾಯಕ ಮುಖಾಮುಖೀಯಲ್ಲಿ ಅಜೇಯ 71 ರನ್ ಬಾರಿಸಿದ “ಸರಣಿಶ್ರೇಷ್ಠ’ ವಿರಾಟ್ ಕೊಹ್ಲಿ ಈ ಸಾಧನೆಯಿಂದ 5 ಸ್ಥಾನಗಳ ಪ್ರಗತಿ ಸಾಧಿಸಿದರು. ರಾಹುಲ್ ಕೂಡ ಮೊದಲ ಹಾಗೂ ಅಂತಿಮ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸುವ ಮೂಲಕ 3 ಸ್ಥಾನಗಳ ಜಿಗಿತದೊಂದಿಗೆ ಆರಕ್ಕೇರಿದರು. ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸದ ಎವಿನ್ ಲೆವಿಸ್ 6ರಿಂದ 7ಕ್ಕೆ ಇಳಿಯಬೇಕಾಯಿತು.
ಮುಂಬಯಿ ಪಂದ್ಯದಲ್ಲಷ್ಟೇ ಮಿಂಚಿದ ರೋಹಿತ್ ಶರ್ಮ ಒಂದು ಸ್ಥಾನ ಕುಸಿದು 9ಕ್ಕೆ ಬಂದಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಡುವೆ ಕೇವಲ ಒಂದಂಕದ ಅಂತರವಷ್ಟೇ ಇದೆ.
ರೋಹಿತ್-ಕೊಹ್ಲಿ ಟೈ!
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲೀಗ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವೆ ರನ್ ರೇಸ್ ನಡೆಯುತ್ತಿದೆ. ಸರ್ವಾಧಿಕ ರನ್ ಸಾಧಕರ ಯಾದಿಯಲ್ಲಿ ಇವರಿಬ್ಬರ ಸ್ಥಾನ ಅದಲು ಬದಲಾಗುತ್ತಲೇ ಇದೆ. ಆದರೀಗ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ಬಳಿಕ ಸ್ವಾರಸ್ಯಕರ ಅಂಕಿಅಂಶವೊಂದು ದಾಖಲಾಗಿದೆ. ಇಬ್ಬರೂ ತಲಾ 2,633 ರನ್ ಗಳಿಸಿ ಜಂಟಿ ಅಗ್ರಸ್ಥಾನಿಯಾಗಿದ್ದಾರೆ!
ಕೊಹ್ಲಿ 70 ಇನ್ನಿಂಗ್ಸ್‌ಗಳಿಂದ 52.66 ಸರಾಸರಿಯಲ್ಲಿ ಈ ಮೊತ್ತ ಪೇರಿಸಿದರೆ, ರೋಹಿತ್ ಇದಕ್ಕಾಗಿ 96 ಇನ್ನಿಂಗ್ಸ್ ಆಡಿದ್ದಾರೆ. ಸರಾಸರಿ 32.10.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.