ನ್ಯೂಜಿಲ್ಯಾಂಡ್ ನೆಲದಲ್ಲಿ ಟಿ20 ವಿಶ್ವಕಪ್ ತಯಾರಿ
Team Udayavani, Jan 24, 2020, 6:59 AM IST
ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧ ಅಷ್ಟೇನೂ ಉತ್ತಮ ಟಿ20 ದಾಖಲೆ ಹೊಂದಿಲ್ಲದ ಭಾರತ, ಶುಕ್ರವಾರದಿಂದ ಅವರದೇ ನೆಲದಲ್ಲಿ 5 ಪಂದ್ಯಗಳ ಸುದೀರ್ಘ ಸರಣಿ ಆರಂಭಿಸಲಿದೆ. ವರ್ಷಾಂತ್ಯ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಟೀಮ್ ಇಂಡಿಯಾ ತವರಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಗೆದ್ದ ಹುರುಪಿನಲ್ಲಿದೆ. ಆದರೆ ತವರು ನೆಲದಲ್ಲಿ ನ್ಯೂಜಿಲ್ಯಾಂಡ್ ಯಾವತ್ತೂ ಅಪಾಯಕಾರಿ, ಭಾರತದಂತೆ ಅಲ್ಲಿನ ಸೀಮ್ ಫ್ರೆಂಡ್ಲಿ ಟ್ರ್ಯಾಕ್ ಮತ್ತು ಶೀತಗಾಳಿ ಪ್ರವಾಸಿಗರಿಗೆ ಸದಾ ಸವಾಲು.
ಟಿ-ಟ್ವೆಂಟಿಗೆ ಹೆಚ್ಚಿನ ಮಹತ್ವ
ಸಾಮಾನ್ಯವಾಗಿ ಮೊದಲೆಲ್ಲ ಸರಣಿಯಲ್ಲಿ ಟೆಸ್ಟ್ ಪಂದ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಬಳಿಕ ಏಕದಿನ ಪಂದ್ಯಗಳ ಸರದಿ. ಟಿ20 ಪಂದ್ಯಗಳು ಲೆಕ್ಕದ ಭರ್ತಿಗೆ ಎಂಬಂತಿದ್ದವು. ಆದರೀಗ ಟಿ20 ಪಂದ್ಯಗಳಿಗೆ ಲಭಿಸುವ ಆದ್ಯತೆ ಜಾಸ್ತಿಯಾಗುತ್ತ ಹೋಗುತ್ತಿದೆ. ಇದಕ್ಕೆ ಪ್ರಸಕ್ತ ಸರಣಿ ಅತ್ಯುತ್ತಮ ನಿದರ್ಶನ. ಇಲ್ಲಿ 5 ಪಂದ್ಯಗಳನ್ನು ಆಡಲಾಗುತ್ತಿದೆ. ಮುಂದಿನ ಚುಟುಕು ವಿಶ್ವಕಪ್ ಪಂದ್ಯಾವಳಿ ಇದಕ್ಕೆ ಕಾರಣ ಎಂಬುದಾಗಿ ವಿಶ್ಲೇಷಿಸಬಹುದು.
ಸಾಲು ಸಾಲು ಗಾಯಾಳುಗಳು
ಎರಡೂ ತಂಡಗಳು ವಿಶ್ವಕಪ್‌ಗಾಗಿ ಸಮರ್ಥ ತಂಡವನ್ನು ಕಟ್ಟುವ ಯೋಜನೆಯಲ್ಲಿವೆ. ಆದರೆ ಗಾಯದ ಸಮಸ್ಯೆ ಎರಡೂ ತಂಡಗಳನ್ನು ಬಿಟ್ಟಿಲ್ಲ. ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್ ಅವರೆಲ್ಲ ಭಾರತ ತಂಡದಿಂದ ಬೇರ್ಪಟ್ಟಿದ್ದಾರೆ. ಹಾಗೆಯೇ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್ ಸೇವೆ ಕಿವೀಸ್‌ಗೆ ಲಭ್ಯವಾಗುತ್ತಿಲ್ಲ. ಆದರೂ ಎರಡೂ ಕಡೆಗಳಲ್ಲಿ ಸಮರ್ಥ ಆಟಗಾರರ ಪಡೆಗೇನೂ ಕೊರತೆ ಇಲ್ಲ.
ರಾಹುಲ್ ಕೀಪಿಂಗ್, ಕೊಹ್ಲಿ ವಿಶ್ವಾಸ
ಧವನ್ ಗೈರಲ್ಲಿ ಇನ್ನಿಂಗ್ಸ್ ಆರಂಭಿಸಲಿರುವ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಕರ್ತವ್ಯವನ್ನೂ ವಹಿಸಲಿರುವ ಸೂಚನೆಯನ್ನು ನಾಯಕ ಕೊಹ್ಲಿ ನೀಡಿದ್ದಾರೆ. ಹೀಗಾಗಿ ರಿಷಭ್ ಪಂತ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ರೋಹಿತ್, ರಾಹುಲ್, ಕೊಹ್ಲಿ, ಅಯ್ಯರ್, ಪಾಂಡೆ ಭಾರತದ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿರುತ್ತಾರೆ.
ರಾಹುಲ್ ಆಸ್ಟ್ರೇಲಿಯ ವಿರುದ್ಧ ಕೀಪಿಂಗ್‌ನಲ್ಲಿ ಯಶಸ್ವಿಯಾದದ್ದು ಕೊಹ್ಲಿ ಖುಷಿಗೆ ಕಾರಣವಾಗಿದೆ. ಏಕದಿನದಲ್ಲೂ ರಾಹುಲ್ ಕೀಪಿಂಗ್ ನಡೆಸಲಿದ್ದಾರೆಂದೂ ಕೊಹ್ಲಿ ತುಂಬು ಆತ್ಮವಿಶ್ವಾಸದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಜತೆಗೆ, ಏಕದಿನದಲ್ಲಿ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಮರಳುತ್ತಾರೆ ಎಂಬುದಾಗಿಯೂ ಹೇಳಿದ್ದಾರೆ. ಫೆ. 5ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಓಪನಿಂಗ್ ಅವಕಾಶ ಪೃಥ್ವಿ ಶಾ ಪಾಲಾಗಲಿದೆ.
ಪೇಸ್ ಬೌಲರ್‌ಗಳಿಗೆ ಆದ್ಯತೆ
ಸರಣಿಯುದ್ದಕ್ಕೂ ಭಾರತ ತ್ರಿವಳಿ ಪೇಸ್ ಬೌಲರ್‌ಗಳ ಕಾಂಬಿನೇಶನ್ ಕಾಯ್ದು ಕೊಳ್ಳುವುದರಲ್ಲಿ ಅನುಮಾನವಿಲ್ಲ. ಆಗ ಶಮಿ, ಬುಮ್ರಾ, ಸೈನಿಗೆ ಮೊದಲ ಆದ್ಯತೆ ಲಭಿಸಲಿದೆ. ಠಾಕೂರ್ ರೇಸ್‌ನಲ್ಲಿ ಉಳಿಯುತ್ತಾರೆ. ಸ್ಪಿನ್ನರ್‌ಗಳಾದ ಕುಲದೀಪ್-ಚಹಲ್ ಒಟ್ಟಿಗೇ ಆಡುವ ಸಾಧ್ಯತೆ ಕಡಿಮೆ. ಜಡೇಜ, ಸುಂದರ್, ದುಬೆ ಆಲ್‌ರೌಂಡರ್‌ಗಳ ರೇಸ್‌ನಲ್ಲಿ ಇರಲಿದ್ದಾರೆ.
ಭಾರತ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಶಾದೂìಲ್ ಠಾಕೂರ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್.
ನ್ಯೂಜಿಲ್ಯಾಂಡ್
ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಸ್ಕಾಟ್ ಕ್ಯುಗೆಲೀನ್, ಕಾಲಿನ್ ಮುನ್ರೊ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್, ಹಾಮಿಶ್ ಬೆನೆಟ್, ಐಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.
ಕಿವೀಸ್ ಏರಿಳಿತ
ಕಳೆದ ವರ್ಷ ಪ್ರವಾಸಿ ಭಾರತವನ್ನು ನ್ಯೂಜಿಲ್ಯಾಂಡ್ 2-1ರಿಂದ ಮಣಿಸಿತ್ತು. ಬಳಿಕ ಶ್ರೀಲಂಕಾ ಪ್ರವಾಸ ಬಂದ ಕಿವೀಸ್ ಅಲ್ಲಿಯೂ 2-1ರಿಂದ ಸರಣಿ ಜಯಿಸಿತು. ಅನಂತರ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡಿತ್ತು. ಆದರೆ ಕಳೆದ ತಿಂಗಳಲ್ಲಷ್ಟೇ ಆಸ್ಟ್ರೇಲಿಯದಲ್ಲಿ 3-0 ವೈಟ್‌ವಾಶ್‌ಗೆ ತುತ್ತಾಗಿತ್ತು ಎಂಬುದು ಬ್ಲ್ಯಾಕ್ ಕ್ಯಾಪ್ಸ್ ಪಾಲಿದೊಂದು ಇದೊಂದು ದೊಡ್ಡ ಹಿನ್ನಡೆ.
ವಿಶ್ರಾಂತಿ, ಅಭ್ಯಾಸದ ಕೊರತೆ
ಆಸ್ಟ್ರೇಲಿಯ ವಿರುದ್ಧ ತವರಿನ ಏಕದಿನ ಸರಣಿ ಮುಗಿಸಿದ ಐದೇ ದಿನಗಳಲ್ಲಿ ಭಾರತ ತಂಡ ದೂರದ ನ್ಯೂಜಿಲ್ಯಾಂಡಿಗೆ ಬಂದು ಟಿ20 ಸರಣಿ ಆರಂಭಿಸಬೇಕಿದೆ. ಮಂಗಳವಾರವಷ್ಟೇ ಕೊಹ್ಲಿ ಪಡೆ 16 ಗಂಟೆಗಳ ವಿಮಾನ ಪ್ರಯಾಣ ಮಾಡಿ ಆಕ್ಲೆಂಡಿಗೆ ಬಂದಿಳಿದಿದೆ. ಬುಧವಾರ ಪೂರ್ತಿ ದಿನ ವಿಶ್ರಾಂತಿಗೆ ಮೀಸಲಾಯಿತು. ಗುರುವಾರ ಕೆಲವು ಗಂಟೆಗಳ ಅಭ್ಯಾಸವಷ್ಟೇ ಸಾಧ್ಯವಾಗಿದೆ. ಶುಕ್ರವಾರ ಮೊದಲ ಪಂದ್ಯ ಆಡಬೇಕಿದೆ. ಅಭ್ಯಾಸಕ್ಕಿಂತ ಮಿಗಿಲಾಗಿ ನ್ಯೂಜಿಲ್ಯಾಂಡಿನ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಭಾರತದ ಕ್ರಿಕೆಟಿಗರಿಗೆ ದೊಡ್ಡ ಸವಾಲಾಗಿ ಕಾಡುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.