Team India: ರೋಹಿತ್- ಶಮಿ ನಡುವೆ ಎಲ್ಲವೂ ಸರಿಯಿಲ್ಲ! ಫಿಟ್ನೆಸ್ ವಿಚಾರದಲ್ಲಿ ಗಲಾಟೆ?
Team Udayavani, Dec 9, 2024, 7:26 PM IST
ಮುಂಬೈ: ಅಡಿಲೇಡ್ ಟೆಸ್ಟ್ ನಲ್ಲಿ ಸೋತ ಭಾರತೀಯ ಕ್ರಿಕೆಟ್ ತಂಡವು (Team India) ಇದೀಗ ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾಗೆ ಸರಿಯಾಗಿ ನೆರವು ನೀಡುವಲ್ಲಿ ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಸಿರಾಜ್ ವಿಫಲರಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಭಾರತ ಕೇವಲ 10 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದು, ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸಿ 1-1 ರಿಂದ ಸಮಬಲ ಸಾಧಿಸಿದೆ.
ಪಿಂಕ್ ಟೆಸ್ಟ್‌ನಲ್ಲಿನ ಸೋಲು ಶೀಘ್ರವಾಗಿ ಮೊಹಮ್ಮದ್ ಶಮಿಯನ್ನು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ಕರೆ ತರಲು ಒತ್ತಾಯಿಸಿದೆ. ಪಂದ್ಯದ ಬಳಿಕ ಶಮಿ ಲಭ್ಯತೆಯ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಕೇಳಿದಾಗ ಅವರು ಸುಮ್ಮನಿದ್ದರು.
ಆದಾಗ್ಯೂ, ಅನುಭವಿ ವೇಗಿಯ ಫಿಟ್ನೆಸ್ ವಿಷಯದ ಬಗ್ಗೆ ಶಮಿ ಮತ್ತು ರೋಹಿತ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಈಗ ವರದಿಯೊಂದು ಹೇಳಿದೆ. ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತವರಿನ ನ್ಯೂಜಿಲ್ಯಾಂಡ್ ಸರಣಿಯ ಸಮಯದಲ್ಲಿ ರೋಹಿತ್ ಬಳಿ ಶಮಿ ಲಭ್ಯತೆಯ ಬಗ್ಗೆ ಕೇಳಿದಾಗ ಇದೇ ರೀತಿಯ ಹೇಳಿಕೆ ನೀಡಿದ್ದರು.
ತಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ಶಮಿ ಹೇಳಿಕೊಂಡಿದ್ದರೆ, ಆಸ್ಟ್ರೇಲಿಯಾ ಸರಣಿಯಷ್ಟು ದೊಡ್ಡ ಸರಣಿಗೆ ಶಮಿ 100% ಫಿಟ್ ಆಗಿಲ್ಲ ಎಂದು ರೋಹಿತ್ ಹೇಳಿದ್ದರು. ದೈನಿಕ್ ಜಾಗರಣ್ ವರದಿಯ ಪ್ರಕಾರ ಈ ಕಾಮೆಂಟ್‌ಗಳು ಇಬ್ಬರ ನಡುವೆ ಬಿಸಿಯಾದ ಚರ್ಚೆಗೆ ಕಾರಣವಾಗಿತು.
“ಶಮಿ ಎನ್‌ಸಿಎಯಲ್ಲಿದ್ದಾಗ, ಬೆಂಗಳೂರಿನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ ರೋಹಿತ್ ಅವರನ್ನು ಭೇಟಿಯಾದರು. ಅವರ ಭೇಟಿಯ ಸಮಯದಲ್ಲಿ, ಶಮಿ ಅವರ ಪ್ರಸ್ತುತ ಸ್ಥಿತಿ ಮತ್ತು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಲಭ್ಯತೆಯ ಬಗ್ಗೆ ಕೇಳಿದಾಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು” ಎಂದು ವರದಿಯಾಗಿತ್ತು.
ಅಡಿಲೇಡ್ ಟೆಸ್ಟ್‌ನ ಮುಕ್ತಾಯದ ನಂತರ, ರೋಹಿತ್, ಶಮಿ ತಂಡಕ್ಕೆ ಮರಳಲು ಬಾಗಿಲು ತೆರೆದಿದ್ದರೂ, ಮ್ಯಾನೇಜ್‌ಮೆಂಟ್ ಅವರನ್ನು ಕರೆ ತರಲು ಉತ್ಸುಕವಾಗಿಲ್ಲ ಎಂದು ಹೇಳಿದರು. ಈಗ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶಮಿ ಫಿಟ್ನೆಸ್ ಹಿನ್ನಡೆ ಅನುಭವಿಸಿದ್ದಾರೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
“ಅವರು 100% ಫಿಟ್ ಆಗಿರಬೇಕು ಎಂದು ನಾವು ಬಯಸುತ್ತೇವೆ. ಇಲ್ಲಿಗೆ ಬಂದು ತಂಡಕ್ಕಾಗಿ ಕೆಲಸ ಮಾಡುವಾಗ ನಾವು ಅವನ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ. ಕೆಲವು ವೃತ್ತಿಪರರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರಿಗೆ ಏನು ಅನಿಸುತ್ತದೆ ಎಂಬುದನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವನ ಪ್ರತಿ ಪಂದ್ಯವನ್ನು ಅವರು ನೋಡುತ್ತಿದ್ದಾರೆ. ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ ನಂತರ, 20 ಓವರ್ ಗಳವರೆಗೆ ಹೇಗೆ ನಿಲ್ಲುತ್ತಾನೆ ಎಂದು ಗಮನಿಸುತ್ತಿದ್ದೇವೆ. ಆದರೆ ಶಮಿ ಯಾವಾಗ ಬೇಕಾದರೂ ಬಂದು ಆಟವಾಡಲು ಬಾಗಿಲು ತೆರೆದಿರುತ್ತದೆ” ರೋಹಿತ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.