ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದ ಆಯ್ಕೆ ಸವಾಲು
Team Udayavani, Jul 19, 2019, 5:46 AM IST
ಮುಂಬಯಿ: ವಿಶ್ವಕಪ್ ಸೆಮಿಫೈನಲ್ ಆಘಾತದಿಂದ ಇನ್ನಷ್ಟೇ ಹೊರಬರಬೇಕಿರುವ ಟೀಮ್ ಇಂಡಿಯಾ, ಇನ್ನು ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೊರಡಲಿದೆ.
ಇದಕ್ಕಾಗಿ ತಂಡದ ಆಯ್ಕೆ ಪ್ರಕ್ರಿಯೆ ರವಿವಾರ ನಡೆಯಲಿದ್ದು, ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಮುಂದೆ ಅನೇಕ ಜಟಿಲ ಸಂಗತಿಗಳನ್ನು ಇತ್ಯರ್ಥಗೊಳಿಸುವ ಸವಾಲು ಕಾದಿದೆ.
ಇದರಲ್ಲಿ ಮುಖ್ಯವಾಗಿರುವುದು ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿ ಮುಂದುವರಿಸಬೇಕೇ, ಬೇಡವೇ ಎಂಬುದು. ಹಾಗೆಯೇ ನಾಯಕ ವಿರಾಟ್ ಕೊಹ್ಲಿ, ಸೀಮರ್ ಜಸ್‌ಪ್ರೀತ್ ಬುಮ್ರಾ ಮೊದಲಾದವರನ್ನು ಪೂರ್ಣ ಪ್ರವಾಸಕ್ಕೆ ಆರಿಸಬೇಕೇ ಅಥವಾ ವಿಶ್ರಾಂತಿ ನೀಡಬೇಕೇ ಎಂಬುದು.
ಈ ಪ್ರವಾಸದ ವೇಳೆ 3 ಟಿ20 (ಆ. 3-6), 3 ಏಕದಿನ (ಆ. 8-14) ಹಾಗೂ 2 ಟೆಸ್ಟ್ ಪಂದ್ಯಗಳನ್ನು (ಆ. 22-ಸೆ. 3) ಆಡಲಾಗುವುದು. ಟೆಸ್ಟ್ ಪಂದ್ಯಗಳು “ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್’ ವ್ಯಾಪ್ತಿಗೆ ಬರುವುದರಿಂದ ಪೂರ್ಣ ಸಾಮರ್ಥ್ಯದ ತಂಡವನ್ನೇ ಆರಿಸಬೇಕಾದ ಅಗತ್ಯವಿದೆ. ಹಾಗೆಯೇ ಮುಂದಿನ ವರ್ಷ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ತಂಡವನ್ನು ಸಜ್ಜುಗೊಳಿಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನ ದಲ್ಲಿರಿಸಿ ತಂಡವನ್ನು ಅಂತಿಮ ಗೊಳಿಸಬೇಕಾಗುತ್ತದೆ.
ಒಂದು ವೇಳೆ ಕೊಹ್ಲಿಗೆ ತುಸು ವಿಶ್ರಾಂತಿ ನೀಡುವುದಾದರೆ ಅಥವಾ ವಿಭಿನ್ನ ನಾಯಕರ ಪ್ರಯೋಗಕ್ಕೆ ಮುಂದಾಗುವುದಾದರೆ ರೋಹಿತ್ ಶರ್ಮ ಅವರಿಗೆ ಏಕದಿನ, ಟಿ20 ನಾಯಕತ್ವ ಲಭಿಸಲೂಬಹುದು.
ಧೋನಿ ಭವಿಷ್ಯದ ದಿಕ್ಸೂಚಿ
38ರ ಹರೆಯದ ಮಹೇಂದ್ರ ಸಿಂಗ್ ಧೋನಿ ತಮ್ಮ ಫಿನಿಶಿಂಗ್ ಸಾಮರ್ಥ್ಯವನ್ನು ಕಳೆದುಕೊಂಡದ್ದು ಈಗಾಗಲೇ ಏಕದಿನ ವಿಶ್ವಕಪ್‌ನಲ್ಲಿ ಸಾಬೀತಾಗಿದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವರೋ ಅಥವಾ ನಿವೃತ್ತಿಯ ನಿರ್ಧಾರವನ್ನೇನಾದರೂ ತೆಗೆದುಕೊಳ್ಳುವರೋ ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವರ್ಷಾಂತ್ಯ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯ ವಿರುದ್ಧ ನಡೆದ ಟಿ20 ಸರಣಿಯಿಂದ ಧೋನಿ ಅವರನ್ನು ಕೈಬಿಡಲಾಗಿತ್ತು. ಹೀಗಾಗಿ ವಿಂಡೀಸ್ ಟಿ20 ಸರಣಿಗೂ ಅನುಮಾನ ಎಂದು ಭಾವಿಸಲಾಗಿದೆ. ಆಗ ಈ ಸ್ಥಾನ ರಿಷಭ್ ಪಂತ್ ಪಾಲಾಗಲಿದೆ.
ತಂಡದ ಮಧ್ಯಮ ಕ್ರಮಾಂಕ ವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸ್ಪಷ್ಟ ಯೋಜನೆ ಯೊಂದನ್ನು ರೂಪಿಸುವ ಅಗತ್ಯವೂ ಇದೆ. ವಿಶ್ವಕಪ್‌ನಲ್ಲಿ ಮಿಡ್ಲ್ ಆರ್ಡರ್ ವೈಫಲ್ಯ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ವಿಜಯ್ ಶಂಕರ್ ವೈಫಲ್ಯ, ರಾಯುಡು ದಿಢೀರ್ ನಿವೃತ್ತಿಯಿಂದಾಗಿ ಈ ಜಾಗಕ್ಕೆ ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಗಿಲ್ ಮೊದಲಾದವರು ರೇಸ್‌ನಲ್ಲಿದ್ದಾರೆ. ಪಾಂಡೆ ಸದ್ಯ “ಎ’ ತಂಡದ ನಾಯಕ ನಾಗಿ ವೆಸ್ಟ್ ಇಂಡೀಸ್‌ನಲ್ಲೇ ಸರಣಿ ಆಡುತ್ತಿದ್ದು, ಗಿಲ್ ಕೂಡ ಈ ತಂಡದಲ್ಲಿದ್ದಾರೆ.
ಆಯ್ಕೆ ಸಮಿತಿ ಸಭೆ ಮುಂದೂಡಿಕೆ
ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತಗಾರರ ಸಮಿತಿಯು ಕ್ರಿಕೆಟ್ ಆಯ್ಕೆ ಸಮಿತಿ ಸಭೆಯಲ್ಲಿ ಸುಧಾರಣೆ ತರುವ ನಿಟ್ಟಿಯಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಿದೆ. ಆಡಳಿತಗಾರರ ಸಮಿತಿಯ ನಿರ್ದೇಶನದಂತೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿಯ ಬದಲು ಆಯ್ಕೆಗಾರರ ಚೇರ್ಮನ್ ಆಯ್ಕೆ ಸಮಿತಿಯ ಸಂಚಾಲಕರಾಗಿರುತ್ತಾರೆ ಮತ್ತು ಸಭೆಯನ್ನು ಕರೆಯಲಿದ್ದಾರೆ. ಈ ಕಾರಣಕ್ಕಾಗಿ ಶುಕ್ರವಾರ ನಡೆಯಬೇಕಿದ್ದ ತಂಡದ ಆಯ್ಕೆ ರವಿವಾರಕ್ಕೆ ಮುಂದೂಡಲ್ಪಟ್ಟಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.