ಭಾರತದ ವನಿತೆಯರಿಗೂ ಒಲಿಯಿತು ಹಾಕಿ ಏಶ್ಯ ಕಪ್
Team Udayavani, Nov 6, 2017, 9:11 AM IST
ಕಕಮಿಗಹಾರ (ಜಪಾನ್): ಇತ್ತೀಚೆಗಷ್ಟೇ ಏಶ್ಯ ಕಪ್ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಪುರುಷರ ಪರಾಕ್ರಮದ ಬೆನ್ನಲ್ಲೇ ದೇಶದ ವನಿತೆಯರೂ ಏಶ್ಯ ಕಪ್ ಪ್ರಶಸ್ತಿಯನ್ನೆತ್ತಿ ಹಾಕಿ ಪಾರಮ್ಯ ಸಾಧಿಸಿದ್ದಾರೆ. ರವಿವಾರ ಚೀನವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4ರಿಂದ ಮಣಿಸಿ ಮುಂದಿನ ವರ್ಷದ ವನಿತಾ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದರೊಂದಿಗೆ 2009ರ ಏಶ್ಯ ಕಪ್ ಫೈನಲ್‌ನಲ್ಲಿ ಚೀನ ವಿರುದ್ಧ ಅನುಭವಿಸಿದ 5-3 ಅಂತರದ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು. ಜಪಾನನ್ನು 1-0 ಅಂತರದಿಂದ ಮಣಿಸಿದ ದಕ್ಷಿಣ ಕೊರಿಯಾ ತೃತೀಯ ಸ್ಥಾನಿಯಾಯಿತು. ಲೀಗ್ ಹಂತದಲ್ಲೂ ಚೀನ ವಿರುದ್ಧ ಪ್ರಭುತ್ವ ಸಾಧಿಸಿದ್ದ ಭಾರತ 4-1 ಅಂತರದಿಂದ ಗೆದ್ದು ಬಂದಿತ್ತು.
ತೀವ್ರ ಪೈಪೋಟಿಯ ಹಣಾಹಣಿ
ರವಿವಾರ ಜಪಾನಿನ ಕಕಮಿಗಹಾರ ದಲ್ಲಿ ನಡೆದ ಚೀನ ವಿರುದ್ಧದ ತೀವ್ರ ಪೈಪೋಟಿಯ ಫೈನಲ್ ಹಣಾಹಣಿಯಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಜಯ ಸಾಧಿಸಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಂದ ಒಂದೊಂದು ಗೋಲು ದಾಖಲಾಗಿತ್ತು; ಸ್ಕೋರ್ 1-1ರಿಂದ ಸಮನಾಗಿತ್ತು.
ಪೆನಾಲ್ಟಿ ಶೂಟೌಟ್‌ನಲ್ಲಿ ನಾಯಕಿ ರಾಣಿ 2 ಗೋಲು ಸಿಡಿಸಿದರೆ, ಮೋನಿಕಾ, ಲಿಲಿಮಾ ಮಿಂಝ್ ಮತ್ತು ನವಜೋತ್ ಕೌರ್ ಒಂದೊಂದು ಗೋಲು ಬಾರಿಸಿದರು. 5 ಅವಕಾಶಗಳಲ್ಲಿ ಚೀನಕ್ಕೆ 4 ಗೋಲು ಮಾತ್ರ ಸಿಡಿಸಲು ಸಾಧ್ಯವಾಯಿತು. ಕೊನೆಯ ಪ್ರಯತ್ನದ ವೇಳೆ ಗೋಲ್‌ಕೀಪರ್ ಸವಿತಾ ಚೀನ ಆಕ್ರಮಣವನ್ನು ತಡೆದು ಭಾರತದ ಗೆಲುವನ್ನು ಸಾರಿದರು. ಇದು ಭಾರತದ ವನಿತೆಯರಿಗೆ ಒಲಿದ 2ನೇ ಏಶ್ಯ ಕಪ್. ಇದಕ್ಕೂ ಮೊದಲು 2004ರ ತವರಿನ ಕೂಟದಲ್ಲಿ ಚಾಂಪಿ ಯನ್ ಆಗಿ ಮೂಡಿಬಂದಿತ್ತು. ಅಂದು ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಕಾಳಗ ದಲ್ಲಿ ಭಾರತದ ವನಿತೆಯರು ಜಪಾನನ್ನು 1-0 ಅಂತರದಿಂದ ಮಣಿಸಿದ್ದರು.
ಸತತ ಕಳಪೆ ನಿರ್ವಹಣೆಯಿಂದಾಗಿ ಭಾರತ ತಂಡ ಕಳೆದ ವನಿತಾ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಸಂಪಾದಿಸುವಲ್ಲಿ ವಿಫಲವಾಗಿತ್ತು. ಇದಕ್ಕೂ ಹಿಂದಿನ 2010ರ ವಿಶ್ವಕಪ್ ಪಂದ್ಯಾವಳಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿತ್ತು. ಈ ಏಶ್ಯ ಕಪ್ ಜಯಭೇರಿ ಮುಂದಿನ ವರ್ಷದ ವಿಶ್ವಕಪ್ ಕೂಟದಲ್ಲಿ ಭಾರತ ತಂಡಕ್ಕೆ ಹೊಸ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ.
ಫೈನಲ್ ಪಂದ್ಯದ ಜೋಶ್
ನಿಗದಿತ ಅವಧಿಯಲ್ಲಿ ಎರಡೂ ತಂಡ ಗಳಿಂದ ತೀವ್ರ ಪೈಪೋಟಿಯ ಪ್ರದರ್ಶನ ಕಂಡುಬಂತು. ಫೈನಲ್ ಪಂದ್ಯಕ್ಕೆ ಅಗತ್ಯವಿದ್ದ ಜೋಶ್ ಆಟದುದ್ದಕ್ಕೂ ಕಂಡುಬಂತು. ಎರಡೂ ಕಡೆಯ ರಕ್ಷಣಾ ಕೋಟೆ ಅತ್ಯಂತ ಬಲಿಷ್ಠವಾಗಿದ್ದುದರಿಂದ ಗೋಲು ಗಳಿಕೆ ಬಹಳ ಕಠಿನವಾಗಿ ಪರಿಣಮಿಸಿತು. ಆದರೆ ಮೊದಲ ಗೋಲು ಬಾರಿಸಿದ ಹೆಗ್ಗಳಿಕೆ ಭಾರತದ್ದೇ ಆಗಿತ್ತು. 25ನೇ ನಿಮಿಷದಲ್ಲಿ ನವಜೋತ್ ಕೌರ್ ಈ ಸಾಧನೆ ಮಾಡಿ ಭಾರತದ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿದರು. ಈ ಮುನ್ನಡೆಯನ್ನು ಭಾರತ 47ನೇ ನಿಮಿಷದ ತನಕ ಉಳಿಸಿಕೊಂಡು ಬಂತು. ಆಗ ಚೀನದ ತಿಯಾಂತಿಯಾನ್ ಲು ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿಸಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಈ ಸಮಬಲ ಹೋರಾಟ ಕೊನೆಯ ಕ್ಷಣದ ವರೆಗೂ ಮುಂದುವರಿದುದರಿಂದ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಬೇಕಾಯಿತು.
ಚೀನಕ್ಕೆ 2ನೇ ನಿಮಿಷದಲ್ಲೇ ಪೆನಾಲ್ಟಿ ಅವ ಕಾಶವೊಂದು ಸಿಕ್ಕಿತ್ತು. ಇದನ್ನು ಗೋಲ್‌ಕೀಪರ್ ಸವಿತಾ ಅದ್ಭುತ ರೀತಿಯಲ್ಲಿ ತಡೆದುದರಿಂದ ಭಾರತ ಬಚಾವಾಯಿತು. ಅನಂತರ ಫಾರ್ವರ್ಡ್ ಆಟಗಾರ್ತಿಯರಾದ ನವನೀತ್ ಕೌರ್, ವಂದನಾ ಆಕ್ರಮಣಕಾರಿಯಾಗಿ ಆಡಿ ಚೀನ ವೃತ್ತವನ್ನು ಪ್ರವೇಶಿಸುತ್ತಲೇ ಇದ್ದರು. ಅಲ್ಲಿ ವಾಂಗ್ ನಾ ಭಾರತೀಯರ ಪಾಲಿಗೆ ಅಡ್ಡಗಾಲಾಗಿ ಪರಿಣಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.