ಅಧ್ಯಕ್ಷ , ಕಾರ್ಯದರ್ಶಿ ಪದಚ್ಯುತಿ ಬಿಸಿಸಿಐ ಶಿರಚ್ಛೇದ
Team Udayavani, Jan 3, 2017, 3:45 AM IST
ಹೊಸದಿಲ್ಲಿ: ಸುಧಾರಣ ಕ್ರಮ ಗಳನ್ನು ಜಾರಿಗೊಳಿಸಲು ಹಿಂದೇಟು ಹಾಕಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಸರ್ವೋಚ್ಚ ನ್ಯಾಯಾಲಯ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.
ಬಿಸಿಸಿಐ ಆಡಳಿತ ಸುಧಾರಣೆಗೆ ಸಂಬಂ ಧಿಸಿದಂತೆ ನ್ಯಾ| ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸದೆ ಇದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಪದಚ್ಯುತಿ ಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ತನ್ನ ಸೂಚನೆ ಪಾಲಿಸದ ಬಿಸಿಸಿಐ ಆಡಳಿತ ಮಂಡಳಿಯ “ಶಿರ ಚ್ಛೇದ’ ಮಾಡಿದೆ. ಮುಂದಿನ ನಿರ್ಧಾರ ಪ್ರಕಟಿಸುವವರೆಗೆ ಹಿರಿಯ ಉಪಾಧ್ಯಕ್ಷ ಹಾಗೂ ಹಿರಿಯ ಜಂಟಿ ಕಾರ್ಯದರ್ಶಿಗಳು ಬಿಸಿಸಿಐ ಆಡಳಿತ ವಹಿಸಿಕೊಳ್ಳು ವಂತೆಯೂ ಸೂಚಿಸಿದೆ.
ಅಲ್ಲದೆ, ಬಿಸಿಸಿಐ ಸ್ವಾಯತ್ತೆ ಬಗ್ಗೆ ಅಂತಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯಿಂದ ದಾಖಲೆ ಒದಗಿಸುವ ಸಂಬಂಧ ಸಲ್ಲಿಸಿದ ಸುಳ್ಳು ಪ್ರಮಾಣಪತ್ರದ ಹಿನ್ನೆಲೆ ಯಲ್ಲಿ ಅನುರಾಗ್ ಠಾಕೂರ್ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳ ಬಾರದು ಎಂದು ಕೇಳಿ ಮುಖ್ಯ ನ್ಯಾಯ ಮೂರ್ತಿ ಟಿ.ಎಸ್. ಠಾಕೂರ್, ನ್ಯಾಯ ಮೂರ್ತಿಗಳಾದ ಎ.ಎಂ.ಖಾನ್ವೀಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ.
ಇಡೀ ಬಿಸಿಸಿಐ ಆಡಳಿತದ ಬಗ್ಗೆ ನ್ಯಾಯಾಲಯ ತುಸು ಮೃದು ಧೋರಣೆ ತಾಳಿದ್ದು, ಉಳಿದ ಪದಾಧಿಕಾರಿಗಳನ್ನು ಪದಚ್ಯುತಿ ಗೊಳಿಸದಿರಲು ನಿರ್ಧರಿಸಿದೆ. ಇದರಿಂದಾಗಿ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಪದಾಧಿ ಕಾರಿಗಳಿಗೂ ಸದ್ಯದ ಮಟ್ಟಿಗೆ ಪದಚ್ಯುತಿ ಆತಂಕ ದೂರವಾಗಿದೆ.
ನಿವೃತ್ತಿ ಹೊಂದುವ ಒಂದು ದಿನ ಹಿಂದಷ್ಟೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ಈ ಕಠಿಣ ನಿರ್ಧಾರ ಕೈಗೊಂಡಿರುವುದು ವಿಶೇಷ. ಈ ಮಧ್ಯೆ, ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿಗಳಾದ ಫಾಲಿ.ಎಸ್.ನಾರಿಮನ್ ಹಾಗೂ ಗೋಪಾಲ್ ಸುಬ್ರಹ್ಮಣ್ಯನ್ ಅವರುಗಳನ್ನು ಅಮಿಕಸ್ ಕ್ಯೂರಿಗಳು (ನ್ಯಾಯಾಲಯಕ್ಕೆ ಸಲಹೆ ನೀಡುವ ಕಾನೂನು ತಜ್ಞರು) ಎಂದು ನಿಯೋ ಜಿಸಲಾಗಿದ್ದು, ಬಿಸಿಸಿಐ ನೇತೃತ್ವವನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ಸಲಹೆ ನೀಡುವಂತೆ ಕೋರಲಾಗಿದೆ. ಜ.19ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಬಿಸಿಸಿಐಗೆ ಹೊಸ ಅಧ್ಯಕ್ಷರು ಯಾರು ಎಂಬುದು ಪ್ರಕಟವಾಗುವ ನಿರೀಕ್ಷೆ ಇದೆ.
ನ್ಯಾಯಪೀಠ ವ್ಯಂಗ್ಯ: ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆಯನ್ನು ವಜಾ ಮಾಡುವ ಮುನ್ನ ನ್ಯಾಯಪೀಠ ಕಟು ಶಬ್ದಗಳಲ್ಲಿ ಟೀಕಾಪ್ರಹಾರ ನಡೆಸಿತು. “ಬಿಸಿಸಿಐ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳು ನ್ಯಾಯಪೀಠದ ಅಂತಿಮ ನಿರ್ದೇಶನವನ್ನು ಜಾರಿ ಮಾಡುವುದಕ್ಕೆ ಅಡ್ಡಿ ಮಾಡುತ್ತಿದ್ದಾರೆ. ರಾಜ್ಯ ಸಂಸ್ಥೆಗಳು ಲೋಧಾ ಶಿಫಾರಸಿಗೆ ಒಪ್ಪುತ್ತಿಲ್ಲ ಎನ್ನುವುದನ್ನು ಆಧಾರ ವಾಗಿಟ್ಟುಕೊಂಡು ಅವರು ಹೀಗೆ ಮಾಡುತ್ತಿದ್ದಾರೆ. ಅನುರಾಗ್ ಅವರ ಕೃತ್ಯಗಳು ಅವರು ಆ ಹುದ್ದೆಗೆ (ಅಧ್ಯಕ್ಷ ಸ್ಥಾನ) ಯೋಗ್ಯರಲ್ಲ ಎನ್ನುವುದನ್ನು ಸ್ವತಃ ಸಾಬೀತುಪಡಿಸಿವೆ. ನ್ಯಾಯಾಲಯದ ಆದೇಶ ಜಾರಿಗೆ ಅಡ್ಡಿ ಮಾಡಿರುವುದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೂಡ ಸಾಧುವಾಗಿದೆ’ ಎಂದು ಮುಖ್ಯ ನ್ಯಾ.ಟಿ.ಎಸ್.ಠಾಕೂರ್ ಅವರಿದ್ದ ಪೀಠ ಹೇಳಿತು.
ಬಿಸಿಸಿಐ ಪದಾಧಿಕಾರಿಗಳಿಗೆ ಎಚ್ಚರಿಕೆ: ನ್ಯಾ.ಲೋಧಾ ಸಮಿತಿ ತನ್ನ ಶಿಫಾರಸನ್ನು ಅಳವಡಿಸಿಕೊಳ್ಳದ ಪರಿಣಾಮ ಬಿಸಿಸಿಐನ ಎಲ್ಲ ಪದಾಧಿ ಕಾರಿಗಳನ್ನು ವಜಾ ಮಾಡುವ ಶಿಫಾರಸು ಮಾಡಿದ್ದರು. ಆದರೆ ನ್ಯಾಯಾಲಯ ಇಂತಹ ಕಟು ನಿರ್ಧಾರಕ್ಕೆ ಮುಂದಾಗಿಲ್ಲ. ಬದಲಿಗೆ ಶಿಫಾರಸನ್ನು ಒಪ್ಪಿಕೊಳ್ಳಬೇಕು, ಇದರಲ್ಲಿ ವಿಫಲರಾದರೆ ಹುದ್ದೆಯಿಂದ ಕಿತ್ತು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ರಾಜ್ಯ ಸಂಸ್ಥೆಗಳಿಗೂ ಅನ್ವಯಿಸುತ್ತದೆ.
ಹಿರಿಯ ಉಪಾಧ್ಯಕ್ಷರಿಗೆ ಜವಾಬ್ದಾರಿ: ಜ.19ರಂದು ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳು ನೇಮಕ ಗೊಳ್ಳುವವರೆಗೆ ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಸಂಸ್ಥೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಸದ್ಯದ ಮಟ್ಟಿಗೆ ದೆಹಲಿ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಸಿ.ಕೆ.ಖನ್ನಾ ಬಿಸಿಸಿಐನ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಆದ್ದರಿಂದ ಅವರೇ ಹೊಣೆ ಹೊತ್ತುಕೊಳ್ಳುವುದು ಖಾತ್ರಿಯಾಗಿದೆ. ಅಜಯ್ ಶಿರ್ಕೆಯವರೊಂದಿಗೆ ಜಂಟಿ ಕಾರ್ಯದರ್ಶಿಯಾಗಿರುವ ಅಮಿತಾಭ್ ಚೌಧರಿ ಕಾರ್ಯದರ್ಶಿ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.
ಯಾಕೆ ಈ ಕಠಿನ ಕ್ರಮ?
2016, ಜು.18ರಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ನ್ಯಾ| ಲೋಧಾ ಸಮಿತಿ ಮಾಡಿರುವ ಆಡಳಿತಾತ್ಮಕ ಸುಧಾರಣೆಗಳನ್ನು ಬಿಸಿಸಿಐ ಮಾನ್ಯ ಮಾಡಬೇಕು ಎಂದಿತ್ತು. ಅದನ್ನು 6 ತಿಂಗಳೊಳಗೆ ಜಾರಿ ಮಾಡಬೇಕು ಎಂದೂ ಸೂಚಿಸಿತ್ತು. ಅದನ್ನು ಜಾರಿ ಮಾಡಿಸುವ ಹೊಣೆಗಾರಿಕೆಯನ್ನು ಲೋಧಾ ಸಮಿತಿಗೇ ವಹಿಸಿತ್ತು. ಆದರೆ ಬಿಸಿಸಿಐ ಕೆಲ ಪ್ರಮುಖ ಶಿಫಾರಸುಗಳಿಗೆ ತನ್ನ ವಿರೋಧವನ್ನು ಮುಂದುವರಿಸಿತು. ಇದನ್ನು ಲೋಧಾ ಸಮಿತಿ ಸಹಿಸಲಿಲ್ಲ. ಬಿಸಿಸಿಐ ಶಿಫಾರಸುಗಳನ್ನು ಜಾರಿ ಮಾಡುವ ಸಂಬಂಧ ಉದಾಸೀನ ತೋರುತ್ತಿದೆ. ಆದ್ದರಿಂದ ಅದರ ಎಲ್ಲ ಪದಾಧಿಕಾರಿಗಳನ್ನು ವಜಾ ಮಾಡಬೇಕೆಂದು ಶಿಫಾರಸು ಮಾಡಿತು. ಈ ಪ್ರಕಾರ ಸರ್ವೋಚ್ಚ ನ್ಯಾಯಾಲಯ ಮೇಲಿನ ತೀರ್ಪು ನೀಡಿದೆ.
ಬಿಸಿಸಿಐ ವಿರೋಧಿಸಿದ್ದೇನು?
1 ಬಿಸಿಸಿಐ ಚುನಾವಣೆ ವೇಳೆ ಒಂದು ರಾಜ್ಯದ ಕ್ರಿಕೆಟ್ ಸಂಸ್ಥೆಗೆ ಒಂದೇ ಮತ ಎಂಬ ಲೋಧಾ ಸಮಿತಿ ಶಿಫಾರಸು.
2 70 ವರ್ಷ ಮೇಲ್ಪಟ್ಟವರು ಬಿಸಿಸಿಐ ಮತ್ತು ಅದರ ಅಂಗಸಂಸ್ಥೆಯ ಪದಾಧಿಕಾರಿಗಳಾಗಿರಬಾರದು ಎಂಬುದನ್ನು.
3 ಯಾರೂ 2 ಸಲಕ್ಕಿಂತ ಹೆಚ್ಚು ಬಾರಿ ಪುನರಾಯ್ಕೆಯಾಗು ವಂತಿಲ್ಲ. ಪ್ರತಿ ಅಧಿಕಾರಾವಧಿ ಬಳಿಕ 3 ವರ್ಷ ವಿಶ್ರಾಂತಿ ಇರಬೇಕು ಎಂಬುದನ್ನು.
ಸುಪ್ರೀಂ ಹೇಳಿದ್ದೇನು?
1 ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಸರ್ವೋಚ್ಚ ನ್ಯಾಯಪೀಠದ ಅಂತಿಮ ನಿರ್ದೇಶನ ಜಾರಿ ಮಾಡಲು ಅಡ್ಡಿ ಮಾಡುತ್ತಿದ್ದಾರೆ.
2 ರಾಜ್ಯಸಂಸ್ಥೆಗಳು ಲೋಧಾ ಶಿಫಾರಸನ್ನು ಒಪ್ಪುತ್ತಿಲ್ಲವೆಂದು ಅವರು ಹೇಳುತ್ತಿದ್ದಾರೆ. ಅನುರಾಗ್ ಕೃತ್ಯಗಳೇ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯರಲ್ಲವೆಂದು ಸಾಬೀತುಪಡಿಸಿವೆ.
3 ಕೋರ್ಟ್‌ನ ನಿರ್ದೇಶ ಜಾರಿಗೆ ಅಡ್ಡಿ ಮಾಡಿರುವುದರಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಕೂಡ ಸೂಕ್ತ.
ಮುಂದೇನು?
1 ಸುಪ್ರೀಂ ಕೋರ್ಟ್ ಶಿಫಾರಸನ್ನು ಒಪ್ಪಿಕೊಂಡು ಮುಂದುವರಿಯುವುದೇ ಬಿಸಿಸಿಐ ಮುಂದಿರುವ ಪ್ರಮುಖ ಆಯ್ಕೆ.
2 ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿ ಎಂದೂ ಕೋರಿಕೊಳ್ಳಲು ಅವಕಾಶವಿದೆ.
3 ಅನುರಾಗ್ ಠಾಕೂರ್, ಅಜಯ್ ಶಿರ್ಕೆ ಅವರು ತಪ್ಪೊಪ್ಪಿಕೊಂಡು ಮತ್ತೂಂದು ಅವಕಾಶ ನೀಡುವಂತೆ ಕೇಳಬಹುದು
ಶ್ರೀನಿವಾಸನ್ ಬಳಿಕ ಠಾಕೂರ್ ಸರದಿ
2013ರ ಐಪಿಎಲ್‌ನಿಂದ ಆರಂಭಗೊಂಡ ಬಿಸಿಸಿಐ ಒದ್ದಾಟ ಇನ್ನೂ ಮುಗಿದಿಲ್ಲ. 2014ರಲ್ಲಿ ಎನ್. ಶ್ರೀನಿವಾಸನ್ ಪದಚ್ಯುತಗೊಂಡ ಅನಂತರ, ಈಗ ಅನುರಾಗ್ ಕೂಡ ಹುದ್ದೆ ಕಳೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅಳಿಯ ಬೆಟ್ಟಿಂಗ್ ಮಾಡಿರುವುದು ಮತ್ತು ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡೇ ಐಪಿಎಲ್ ಫ್ರಾಂಚೈಸಿಯೊಂದರ ಮಾಲಕರಾಗಿರುವುದು ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಕಾರಣವಾಗಿ, ಶ್ರೀನಿವಾಸನ್ 2014 ಮಾರ್ಚ್ ತಿಂಗಳಲ್ಲಿ ಪದಚ್ಯುತಗೊಂಡಿದ್ದರು.
ತಲೆದಂಡದಿಂದ ಪಾರಾದ ಶಶಾಂಕ್: ಅನುರಾಗ್ ಠಾಕೂರ್‌ಗಿಂತ ಮೊದಲು ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿದ್ದರು. ನ್ಯಾಯಪೀಠದ ಬಹುತೇಕ ಶಿಫಾರಸುಗಳನ್ನು ಅವರು ಜಾರಿ ಮಾಡಿದರು. ಅವರ ಪ್ರಭಾವ ಹೊಂದಿರುವ ನಾಗಪುರ ಕ್ರಿಕೆಟ್ ಸಂಸ್ಥೆಯೂ ಲೋಧಾ ಸಮಿತಿಯ ಎಲ್ಲ ಶಿಫಾರಸುಗಳನ್ನು ಅಳವಡಿಸಿಕೊಂಡಿತು. ಆದರೆ ಇದ್ದಕ್ಕಿದ್ದಂತೆ ಅವರು ಬಿಸಿಸಿಐಗೆ ರಾಜೀನಾಮೆ ನೀಡಿ ಐಸಿಸಿ ಮುಖ್ಯಸ್ಥರಾಗಿ ಆಯ್ಕೆ ಯಾದರು. ಅನಂತರ ಬಿಸಿಸಿಐನತ್ತ ತಲೆ ಹಾಕಲಿಲ್ಲ. ಒಂದು ವೇಳೆ ಶಶಾಂಕ್ ಬಿಸಿಸಿಐ ಅಧ್ಯಕ್ಷರಾಗಿಯೇ ಇದ್ದಿದ್ದರೆ ಅವರ ತಲೆದಂಡವಾಗುವ ಸಾಧ್ಯತೆಯಿತ್ತು.
ಲೋಧಾ ಸಮಿತಿಯ 10 ಪ್ರಮುಖ ಶಿಫಾರಸುಗಳು
1.ಒಂದು ರಾಜ್ಯದಲ್ಲಿ 2,3 ಕ್ರಿಕೆಟ್ ಸಂಸ್ಥೆಗಳಿದ್ದರೂ ಒಂದು ರಾಜ್ಯಕ್ಕೆ ಒಂದೇ ಮತ.
2. ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಆಡಳಿತ ಮಂಡಳಿ ಪ್ರತ್ಯೇಕವಾಗಿರಬೇಕು. ಜತೆಗೆ ಐಪಿಎಲ್ ಆಡಳಿತ ಸಮಿತಿಗಿರುವ ಅಧಿಕಾರವನ್ನು ಮೊಟಕುಗೊಳಿಸಬೇಕು.
3. ಬಿಸಿಸಿಐನ ಪದಾಧಿಕಾರಿಗಳು ಸರಕಾರಿ ನೌಕರರು, ಮಂತ್ರಿಗಳು ಆಗಿರಬಾರದು.
4. ಒಟ್ಟು 9 ವರ್ಷ ಅಥವಾ ಬಿಡಿಬಿಡಿಯಾಗಿ 9 ವರ್ಷವನ್ನು ಪದಾಧಿಕಾರಿಯಾಗಿ ಪೂರೈಸಿದ್ದರೆ ಅನಂತರ ಹುದ್ದೆಯಲ್ಲಿರುವಂತಿಲ್ಲ.
5. ಯಾವುದೇ ವ್ಯಕ್ತಿ ಸತತವಾಗಿ 2 ಬಾರಿ ಮಾತ್ರ ಪುನರಾಯ್ಕೆಯಾಗಬಹುದು. ಪ್ರತಿ ಅವಧಿಯ ಅನಂತರ 3 ವರ್ಷ ವಿಶ್ರಾಂತಿ ಹೊಂದಬೇಕು.
6. ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಬೇಕು.
7. ಬಿಸಿಸಿಐ ಅಧ್ಯಕ್ಷ 2 ವರ್ಷಕ್ಕಿಂತ ಜಾಸ್ತಿ ಅಧಿಕಾರದಲ್ಲಿರುವಂತಿಲ್ಲ.
8. ಬಿಸಿಸಿಐನಲ್ಲಿ ಆಟಗಾರರ ಸಂಸ್ಥೆ ಅಸ್ತಿತ್ವಕ್ಕೆ ಬರಬೇಕು.
9. ಬಿಸಿಸಿಐನಲ್ಲಿ ಮಹಾಲೇಖಪಾಲರ ಪ್ರತಿನಿಧಿ ಯೊಬ್ಬರು ಲೆಕ್ಕ ಪರಿಶೋಧನೆ ಮಾಡಬೇಕು.
10. ಬಿಸಿಸಿಐ ತನ್ನ ನಿಯಮಗಳು, ಮತ್ತಿತರ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
ಕೆಎಸ್‌ಸಿಎ ನ್ಯಾಯಾಲಯದ ಆದೇಶ ಪಾಲಿಸುತ್ತದೆ
ಬೆಂಗಳೂರು: ಸರ್ವೋಚ್ಚ ನ್ಯಾಯಾಲಯ ಕ್ರಿಕೆಟ್ ಅಭಿವೃದ್ದಿ ನಿಟ್ಟಿನಲ್ಲಿ ಯಾವುದೇ ದಿಟ್ಟ ಕ್ರಮ ತೆಗೆದುಕೊಂಡರೂ ಅದನ್ನು ಪಾಲಿಸುವುದಾಗಿ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ತೀರ್ಪಿನ ಕುರಿತಾದ ಮೂಲ ಪ್ರತಿ ನಮಗೆ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ ಅಂದ ಮಾತ್ರಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ತತ್‌ಕ್ಷಣಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ನ್ಯಾಯಾಲಯದ ಆದೇಶದ ಮೂಲಪ್ರತಿ ಸಿಗುವವರೆಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.