ರಾಷ್ಟ್ರೀಯ ಕಬಡ್ಡಿ ಸಂಭಾವ್ಯ ತಂಡದಲ್ಲಿ ರಾಜ್ಯದ ಏಕೈಕ ಆಟಗಾರ
ಸುಳ್ಯದ ಐವರ್ನಾಡು ಗ್ರಾಮದ ಸಚಿನ್ ಪ್ರತಾಪ್
Team Udayavani, Mar 14, 2020, 6:33 AM IST
ಸುಳ್ಯ : ಆರ್ಥಿಕ ಬಡತನವಿದ್ದರೂ ಪ್ರತಿಭೆಗೆ ಬಡತನವಿಲ್ಲ. ಇದಕ್ಕೆ ನಿದರ್ಶನ, ಈ ಹಳ್ಳಿ ಯುವಕ. ಈ ಬಾರಿಯ ಭಾರತ ಕಬಡ್ಡಿ ತಂಡದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಕಬಡ್ಡಿ ಪಟು!
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಸಚಿನ್ ಪ್ರತಾಪ್ ಈ ಸಾಧಕ ಯುವಕ. ರಾಷ್ಟ್ರೀಯ ಕಬಡ್ಡಿ ತಂಡದಲ್ಲಿ ಸ್ಥಾನ ಗಳಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಅಪರೂಪದ ಹಳ್ಳಿ ಪ್ರತಿಭೆ.
ಅತ್ಯುತ್ತಮ ರೈಡರ್
ಈಗಾಗಲೇ 50ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿರುವ ಪ್ರತಾಪ್, ಕೆಲವು ದಿನಗಳ ಹಿಂದೆ ಜೈಪುರದಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಪೈನಲ್‌ನಲ್ಲಿ ಪರಾಭವಗೊಂಡರೂ, ಪ್ರತಾಪ್ ಎರಡು ಪಂದ್ಯಗಳಲ್ಲಿ “ಅತ್ಯುತ್ತಮ ರೈಡರ್’ ಎನಿಸಿಕೊಂಡಿದ್ದರು.
ಈ ತಂಡದಲ್ಲಿ ಸುಖೇಶ್ ಹೆಗ್ಡೆ, ಪ್ರಶಾಂತ ರೈ ಮೊದಲಾದ ಆಟಗಾರರಿದ್ದರು ಎನ್ನುವುದು ಗಮನಾರ್ಹ ಸಂಗತಿ. ಅಲ್ಲಿನ ಪ್ರದರ್ಶನ ಇವರನ್ನು ಭಾರತ ತಂಡದ ಕದ ತಟ್ಟುವಂತೆ ಮಾಡಿದೆ. ಜತೆಗೆ ಪ್ರೊ ಕಬಡ್ಡಿ ಹರಾಜು ಬಿಡ್ಡಿಂಗ್‌ನಲ್ಲೂ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.
36 ಸಂಭಾವ್ಯ ಆಟಗಾರರು
ಸೀನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಸಚಿನ್ ಪ್ರತಾಪ್ ಭಾರತ ಕಬಡ್ಡಿ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಆಯ್ಕೆಗೊಂಡ ಏಕೈಕ ಆಟಗಾರ ಎಂಬುದು ಇವರ ಹೆಗ್ಗಳಿಕೆ. 36 ಮಂದಿ ಆಟಗಾರರಿದ್ದು, ತರಬೇತಿ ಶಿಬಿರಕ್ಕೆ ಇವರೆಲ್ಲರೂ ಆಯ್ಕೆಗೊಂಡಿದ್ದಾರೆ. ಅಲ್ಲಿ 12 ಮಂದಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಾರೆ.
ಕೆಎಫ್ಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ ಮೂವರು ಮಕ್ಕಳಲ್ಲಿ ಸಚಿನ್ ಪ್ರತಾಪ್ ಎರಡನೆಯವರು. ಮನೆಯಲ್ಲಿ ಆರ್ಥಿಕ ಬಡತನವಿದ್ದರೂ, ಕಬಡ್ಡಿ ಆಟಗಾರರಾಗಬೇಕೆಂಬ ಆಸಕ್ತಿಗೆ ಹೆತ್ತವರು, ಬಂಧುಗಳು ಪ್ರೋತ್ಸಾಹ ನೀಡಿದರು. ಹಿರಿಯ ಸಹೋದರಿ ಶರ್ಮಿಳಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ. ಕಿರಿಯ ಸಹೋದರಿ ಸುಮಾ ಎನ್‌ಎಂಸಿ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ತರಬೇತಿ ಪಡೆಯುತ್ತಿದ್ದಾರೆ.
ನನ್ನ ಸಾಧನೆಗೆ ಪ್ರಾಥಮಿಕ, ಪ್ರೌಢಶಾಲಾ, ಪಿಯು ಹಂತದಲ್ಲಿನ ತರಬೇತುದಾರರು, ಮುಖ್ಯವಾಗಿ ಉಜಿರೆ ಎಸ್‌ಡಿಎಂ ಕಾಲೇಜಿನ ಕಬಡ್ಡಿ ತರಬೇತುದಾರ ಕೃಷ್ಣಾನಂದ ಅವರ ಪ್ರೋತ್ಸಾಹ ಮುಖ್ಯವಾದುದು. ಆರ್ಥಿಕವಾಗಿ ಕಷ್ಟ ಇದ್ದರೂ, ಮನೆ ಮಂದಿಯ ಜತೆ ಊರವರು ಸೇರಿದಂತೆ ಹಲವರು ನನಗೆ ಸಹಕಾರ ನೀಡಿದ್ದಾರೆ. ರಾಷ್ಟ್ರೀಯ ತಂಡದ ಸಂಭಾವ್ಯ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದಿರುವುದು ಖುಷಿ ತಂದಿದೆ.
-ಸಚಿನ್ ಪ್ರತಾಪ್
ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ. ಎಳೆಯ ಪ್ರಾಯದಲ್ಲೇ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ ಪ್ರತಾಪ್ ಈಗ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿರುವುದು ನಮ್ಮ ಊರಿಗೂ ಹೆಮ್ಮೆ.
-ಎಸ್.ಎನ್. ಮನ್ಮಥ, ಜಿ.ಪಂ. ಸದಸ್ಯ
ಕಬಡ್ಡಿಯೇ ಜೀವಾಳ…
ಪ್ರಾಥಮಿಕ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಐವರ್ನಾಡಿನಲ್ಲಿ ಪೂರೈಸಿರುವ ಸಚಿನ್ ಪ್ರತಾಪ್, ಈ ಬಾರಿ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆ ಬರೆದಿದ್ದು, ಫಲಿತಾಂಶ ಪ್ರಕಟವಾಗಬೇಕಿದೆ. 10ನೇ ತರಗತಿ ತನಕ ಖೋ-ಖೋ ಆಟಗಾರನಾಗಿದ್ದ ಪ್ರತಾಪ್ ಅನಂತರ ಕಬಡ್ಡಿ ಕ್ರೀಡೆಯತ್ತ ಆಸಕ್ತಿ ತೋರಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಜತೆಗೆ ಹರ್ಷಿತ್ ಬೇಂಗಮಲೆ, ವೀರನಾಥ, ಕುಮಾರ್ ಅವರು ಆರಂಭದಲ್ಲಿ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಅನಂತರ ಉಜಿರೆ ಎಸ್‌ಡಿಎಂ ಕಾಲೇಜಿಗೆ ಕ್ರೀಡಾ ಕೋಟಾದಡಿ ಸೇರ್ಪಡೆಗೊಂಡು ಇಲ್ಲಿನ ಕಬಡ್ಡಿ ತರಬೇತುದಾರ ಕೃಷ್ಣಾನಂದ ಅವರು ಪೂರ್ಣ ಸಹಕಾರ ನೀಡಿ ಪ್ರತಾಪ್ ಅವರ ಪ್ರತಿಭೆಗೆ ಇನ್ನಷ್ಟು ನೀರೆರೆದು ಪೋಷಿಸಿದರು.
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.