ಟಿ20: ಸಮಬಲಕ್ಕೆ ಎದುರಾಗಿದೆ “ಮಹಾ’ ಭೀತಿ
ರಾಜ್‌ಕೋಟ್‌ನಲ್ಲಿ ಇಂದು ಭಾರತ-ಬಾಂಗ್ಲಾದೇಶ ; 2ನೇ ಟಿ20 ಪಂದ್ಯದ ದಿನವೇ "ಮಹಾ' ಚಂಡಮಾರುತ ಅಪ್ಪಳಿಸುವ ಸಾಧ್ಯತೆ
Team Udayavani, Nov 7, 2019, 5:45 AM IST
ರಾಜ್‌ಕೋಟ್: ಭಾರತ-ಬಾಂಗ್ಲಾದೇಶ ನಡುವಿನ ಹೊಸದಿಲ್ಲಿ ಪಂದ್ಯ ವಾಯುಮಾಲಿನ್ಯದಿಂದ ವಿಶ್ವ ಮಟ್ಟದಲ್ಲಿ ಸುದ್ದಿಯಾದರೆ, ಗುರುವಾರದ ರಾಜ್‌ಕೋಟ್ ಮುಖಾಮುಖೀ ಇನ್ನೊಂದು ರೀತಿಯಲ್ಲಿ ಸುದ್ದಿಯ ಕೇಂದ್ರವಾಗಿದೆ.
ಇದು “ಮಹಾ’ ಚಂಡಮಾರುತ ಭೀತಿಗೆ ಸಿಲುಕಿದೆ. ಕೊನೆಗೂ ದಿಲ್ಲಿ ಪಂದ್ಯ ನಿರ್ವಿಘ್ನವಾಗಿ ನಡೆದರೆ, ರಾಜ್‌ಕೋಟ್ ಪಂದ್ಯ ಮಾತ್ರ ಇನ್ನೂ ತೂಗುಯ್ನಾಲೆಯಲ್ಲಿದೆ. ಪಂದ್ಯದ ದಿನವೇ ಚಂಡಮಾರುತ ಅಪ್ಪಳಿಸುವುದರಿಂದ ಇದರ ಭವಿಷ್ಯ ಗುರುವಾರವಷ್ಟೇ ನಿರ್ಧಾರವಾಗಲಿದೆ.
ಬುಧವಾರ ರಾಜ್‌ಕೋಟ್‌ನಲ್ಲಿ ಉತ್ತಮ ಬಿಸಿಲಿನ ವಾತಾವರಣವಿತ್ತು. ಆಟಗಾರರೆಲ್ಲ ಪೂರ್ಣಾವಧಿ ಅಭ್ಯಾಸದಲ್ಲಿ ತೊಡಗಿ ಹುರಿಗೊಂಡರು. ಆದರೆ ಇದೇ ಸ್ಥಿತಿ ಗುರುವಾರವೂ ಇರಲಿದೆ ಎಂದು ಹೇಳುವ ಹಾಗಿಲ್ಲ. ಅಕಸ್ಮಾತ್ ಪಂದ್ಯ ರದ್ದಾದರೆ ಭಾರತದ ಸರಣಿ ಸಮಬಲಕ್ಕೆ ಭಾರೀ ಹಿನ್ನಡೆಯಾಗಲಿದೆ.
ಗೆಲ್ಲಲೇಬೇಕಾದ ಒತ್ತಡ…
ಯುವಕರನ್ನೊಳಗೊಂಡ ಟೀಮ್ ಇಂಡಿಯಾ ರವಿವಾರದ ದಿಲ್ಲಿ ಮೇಲಾಟದಲ್ಲಿ ಯಾವ ವಿಭಾಗದಲ್ಲೂ ಬಾಂಗ್ಲಾದೇಶಕ್ಕೆ ಸಾಟಿಯಾಗಿರಲಿಲ್ಲ. ಬಾಂಗ್ಲಾ ವಿರುದ್ಧ ಅಜೇಯ ದಾಖಲೆ ಕಾಯ್ದುಕೊಂಡು ಬಂದಿದ್ದ ಭಾರತ ಮೊದಲ ಸಲ ಸೋಲಿನ ಆಘಾತಕ್ಕೆ ಸಿಲುಕಿತ್ತು. ಈಗ ಒಮ್ಮಿಂದೊಮ್ಮೆಲೇ ಸುಧಾರಿತ ಪ್ರದರ್ಶನ ನೀಡಿ ಎದುರಾಳಿಯನ್ನು ಮಣಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಅಕಸ್ಮಾತ್ ಇದರಲ್ಲಿ ಎಡವಿದರೆ ತವರಲ್ಲೇ ಮತ್ತೂಂದು ಟಿ20 ಸರಣಿ ಕಳೆದುಕೊಂಡ ಅವಮಾನಕ್ಕೆ ಸಿಲುಕಬೇಕಾಗುತ್ತದೆ. ಈ ವರ್ಷ ಆಸ್ಟ್ರೇಲಿಯ ವಿರುದ್ಧ ಭಾರತ ಇಂಥದೇ ಸಂಕಟಕ್ಕೆ ಸಿಲುಕಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಸಮಬಲ ಸಾಧಿಸಿತ್ತು.
ಹಾಗೆಯೇ ಈ ಪಂದ್ಯ ಮಳೆಯಿಂದ ರದ್ದುಗೊಂಡರೂ ಭಾರತಕ್ಕೆ ನಷ್ಟವೇ. ಆಗ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ತೀವ್ರಗೊಳ್ಳುತ್ತದೆ.
ಸೋಲಿಗೆ ಕಾರಣ ಹಲವು
ಉಸ್ತುವಾರಿ ನಾಯಕ ರೋಹಿತ್ ಶರ್ಮ ಹೇಳಿದಂತೆ, ದಿಲ್ಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣ ಹಲವು. ನಿಧಾನ ಗತಿಯ ಬ್ಯಾಟಿಂಗ್, ಕಳಪೆ ಫೀಲ್ಡಿಂಗ್, ಡಿಆರ್‌ಎಸ್ ನಿರ್ಧಾರ ತೆಗೆದುಕೊಳ್ಳುವಾಗ ಮಾಡಿಕೊಂಡ ಎಡವಟ್ಟು… ಹೀಗೆ ಪಟ್ಟಿ ಬೆಳೆಯುತ್ತದೆ. ಸ್ವತಃ ರೋಹಿತ್ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಧವನ್ ಆಟ ನಿಧಾನ ಗತಿಯಿಂದ ಕೂಡಿತ್ತು. ಟೆಸ್ಟ್ ಅವಕಾಶ ಕಳೆದುಕೊಂಡ ರಾಹುಲ್ ಟಿ20ಯಲ್ಲಿ ತಮ್ಮ ಸ್ಥಾನ ಕಾಯ್ದುಕೊಳ್ಳುವ ಒತ್ತಡದಲ್ಲಿದ್ದಂತೆ ಕಂಡುಬಂತು. ಇವರೆಲ್ಲ ಲಯ ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ. ಹಾಗೆಯೇ ಅಯ್ಯರ್, ಪಂತ್, ದುಬೆ, ಕೃಣಾಲ್ ಸಿಡಿದು ನಿಲ್ಲಬೇಕಾದುದೂ ಅತ್ಯಗತ್ಯ.
ರಾಜ್‌ಕೋಟ್ ಟ್ರ್ಯಾಕ್ ಬ್ಯಾಟಿಂಗ್ ಸ್ನೇಹಿ ಎಂದು ನಂಬಲಾಗಿದ್ದು, ಬೌಲರ್‌ಗಳಿಂದ ಮ್ಯಾಜಿಕ್ ಅನಿವಾರ್ಯವಾ ಗುತ್ತದೆ. ಆದರೆ ಭಾರತದ ಬಳಿ ಸದ್ಯ ಘಾತಕ ಬೌಲಿಂಗ್ ಪಡೆ ಇಲ್ಲ. ದಿಲ್ಲಿಯಲ್ಲಿ ಬಾಂಗ್ಲಾದೇಶ ಯಾವುದೇ ಒತ್ತಡಕ್ಕೆ ಸಿಲುಕದೆ ಮೂರೇ ವಿಕೆಟ್ ನಷ್ಟದಲ್ಲಿ ಮೊತ್ತವನ್ನು ಬೆನ್ನಟ್ಟಿದ್ದೇ
ಇದಕ್ಕೆ ಸಾಕ್ಷಿ.
ಸ್ಯಾಮ್ಸನ್, ಪಾಂಡೆಗೆ ಅವಕಾಶ?
ಭಾರತದ ಆಡುವ ಬಳಗದಲ್ಲಿ ಒಂದೆರಡು ಬದಲಾವಣೆ ಸಂಭವಿಸಬಹುದು. ಶಿವಂ ದುಬೆ ಅವರಿಗೆ ಇನ್ನೊಂದು ಅವಕಾಶ ನೀಡಬೇಕೇ ಅಥವಾ ಮನೀಷ್ ಪಾಂಡೆ, ಸಂಜು ಸ್ಯಾಮ್ಸನ್ ಅವರಲ್ಲೊಬ್ಬರಿಗೆ ಅವಕಾಶ ನೀಡಬೇಕೇ ಎಂಬ ಕುರಿತು ಚರ್ಚೆ ನಡೆದ ಬಗ್ಗೆ ವರದಿಯಾಗಿದೆ. 37 ರನ್ ಕೊಟ್ಟು ದುಬಾರಿಯಾದ ಖಲೀಲ್ ಅಹ್ಮದ್ ಬದಲು ಶಾದೂìಲ್ ಠಾಕೂರ್ ಅವರನ್ನು ಆಡಿಸಲೂಬಹುದು.
ಬಾಂಗ್ಲಾ ಅನುಭವಿಗಳ ತಂಡ
ಶಕಿಬ್ ಅಲ್ ಹಸನ್, ತಮಿಮ್ ಇಕ್ಬಾಲ್ ಗೈರಲ್ಲೂ ತನ್ನದು ಸಶಕ್ತ ತಂಡ ಎಂಬುದನ್ನು ನಿರೂಪಿಸಬೇಕಿದೆ ಎಂದು ನಾಯಕ ಮಹಮದುಲ್ಲ ಸರಣಿಗೂ ಮುನ್ನ ಹೇಳಿದ್ದರು. ದಿಲ್ಲಿಯಲ್ಲಿ ಅವರು ಧಾರಾಳ ಯಶಸ್ಸು ಕಂಡಿದ್ದಾರೆ. ಮುನ್ನುಗ್ಗಿ ಬಾರಿಸಿದ ಮುಶ್ಫಿಕರ್ ರಹೀಂ ಗೆಲುವಿನ ರೂವಾರಿಯಾಗಿದ್ದರು. ಸ್ಪಿನ್ನರ್ ಅಮಿನುಲ್ ಇಸ್ಲಾಮ್, ಪೇಸ್ ಬೌಲರ್ ಶಫಿಯುಲ್ ಇಸ್ಲಾಮ್ ಅಮೋಘ ನಿಯಂತ್ರಣ ಸಾಧಿಸಿದ್ದರು.
ಭಾರತದ ಮೇಲೆ ಇನ್ನಷ್ಟು ಒತ್ತಡ ಹೇರಿ ಸರಣಿ ವಶಪಡಿಸಿಕೊಳ್ಳುವುದು ಬಾಂಗ್ಲಾದ ಗುರಿ. ಅನುಭವದಲ್ಲಿ ಪ್ರವಾಸಿಗರು ಭಾರತಕ್ಕಿಂತ ಎಷ್ಟೋ ಮೇಲು ಎಂಬುದನ್ನು ಮರೆಯುವಂತಿಲ್ಲ.
ಮಳೆ ಇಲ್ಲದಿದ್ದರೆ ರನ್ ಸುರಿಮಳೆ
ರಾಜ್‌ಕೋಟ್‌ನ “ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ’ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಮಳೆ ಬಾರದೇ ಹೋದರೆ ಇದು ದೊಡ್ಡ ಮೊತ್ತದ ಪಂದ್ಯವಾಗುವ ಸಾಧ್ಯತೆ ಇದೆ ಎಂಬುದಾಗಿ ಕ್ಯುರೇಟರ್ ಮನ್ಸುಖ್‌ಭಾç ತೆರಯ್ಯ ಹೇಳಿದ್ದಾರೆ.
“ಮಳೆ ಭೀತಿಯಿಂದಾಗಿ ಪಿಚ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಮಳೆ ಬಂದು ನಿಂತರೆ ಪಂದ್ಯಕ್ಕೇನೂ ಅಡ್ಡಿಯಾಗದು, ಅಂಗಳದ ಡ್ರೈನೇಜ್ ವ್ಯವಸ್ಥೆ ಉತ್ತಮ ಮಟ್ಟದಲ್ಲಿದೆ’ ಎಂಬುದಾಗಿ ಮಂಡಳಿ ಕಾರ್ಯದರ್ಶಿ ಹಿಮಾಂಶು ಶಾ ಹೇಳಿದ್ದಾರೆ.
“ಸಂಜೆ ಬಳಿಕ ಮಳೆ ಸುರಿದ ಹೊರತಾಗಿಯೂ ಪಂದ್ಯ ನಡೆಯುವಂತಾದರೆ ಆಗ ಬ್ಯಾಟಿಂಗ್ ಕಷ್ಟವಾಗಲಿದೆ. ಔಟ್‌ಫೀಲ್ಡ್ ಒದ್ದೆಯಾಗಿರುವುದರಿಂದ ಚೆಂಡಿನ ವೇಗ ಸಹಜವಾಗಿಯೇ ಕುಂಟಿತಗೊಳ್ಳಲಿದ್ದು, ಬೌಂಡರಿ ಹೊಡೆಯುವುದು ಕಠಿನವಾಗಲಿದೆ’ ಎಂಬುದು ಕ್ಯುರೇಟರ್ ಅಭಿಪ್ರಾಯ.
ರಾಜ್‌ಕೋಟ್‌ನಲ್ಲಿ ಭಾರತಕ್ಕೆ ಮಿಶ್ರಫಲ
ರಾಜ್‌ಕೋಟ್‌ನಲ್ಲಿ ಭಾರತ ಈವರೆಗೆ 2 ಟಿ20 ಪಂದ್ಯಗಳನ್ನಾಡಿದ್ದು, ಒಂದನ್ನು ಗೆದ್ದು, ಇನ್ನೊಂದರಲ್ಲಿ ಸೋಲನುಭವಿಸಿದೆ. ಇಲ್ಲಿ ಮೊದಲ ಮುಖಾಮುಖೀ ಏರ್ಪಟ್ಟದ್ದು 2013ರಲ್ಲಿ, ಆಸ್ಟ್ರೇಲಿಯ ವಿರುದ್ಧ. ಬೃಹತ್ ಮೊತ್ತದ ಈ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 4ಕ್ಕೆ 202 ರನ್ ಪೇರಿಸಿ ಸವಾಲೊಡ್ಡಿದ್ದªರೂ ಇದನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಧೋನಿ ಪಡೆ 19.4 ಓವರ್‌ಗಳಲ್ಲಿ, ನಾಲ್ಕೇ ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತ್ತು. ಇಲ್ಲಿ ದ್ವಿತೀಯ ಹಾಗೂ ಕೊನೆಯ ಪಂದ್ಯ ನಡೆದದ್ದು 2017ರಲ್ಲಿ. ಎದುರಾಳಿ ನ್ಯೂಜಿಲ್ಯಾಂಡ್. ಇದು ಕೂಡ ದೊಡ್ಡ ಮೊತ್ತದ ಮುಖಾಮುಖೀಯೇ ಆಗಿತ್ತು. ಆದರೆ ಚೇಸಿಂಗ್‌ನಲ್ಲಿ ವಿಫಲವಾದ ಕೊಹ್ಲಿ ಪಡೆ 40 ರನ್ನುಗಳಿಂದ ಪರಾಭವಗೊಂಡಿತು.
ರೋಹಿತ್ ಶರ್ಮ “ಶತಕ’
ಭಾರತದ ಉಸ್ತುವಾರಿ ನಾಯಕ ರೋಹಿತ್ ಶರ್ಮ ರಾಜ್‌ಕೋಟ್ ಪಂದ್ಯದಲ್ಲಿ ಮೈಲುಗಲ್ಲೊಂದನ್ನು ನೆಡಲಿದ್ದಾರೆ. ಅವರು 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದು, ಈ ಸಾಧನೆಗೈದ ವಿಶ್ವದ 2ನೇ, ಭಾರತದ ಮೊದಲ ಕ್ರಿಕೆಟಿಗನಾಗಲಿದ್ದಾರೆ.
ಪಾಕಿಸ್ಥಾನದ ಶೋಯಿಬ್ ಮಲಿಕ್ 111 ಪಂದ್ಯಗಳನ್ನಾಡಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಮಲಿಕ್ ಹೊರತುಪಡಿಸಿದರೆ ಉಳಿದವರ್ಯಾರೂ 100 ಪಂದ್ಯಗಳ ಗಡಿ ತಲುಪಿಲ್ಲ.
ಹೊಸದಿಲ್ಲಿ ಪಂದ್ಯದ ವೇಳೆ ಶಾಹಿದ್ ಅಫ್ರಿದಿ ಅವರ 99 ಪಂದ್ಯಗಳ ದಾಖಲೆಯನ್ನು ರೋಹಿತ್ ಶರ್ಮ ಸರಿದೂಗಿಸಿದ್ದರು. ಈ “ಮೈಲುಗಲ್ಲು ಪಂದ್ಯ’ ರೋಹಿತ್‌ಗೆ ಅದೃಷ್ಟ ತಂದೀತೇ ಎಂಬುದೊಂದು ನಿರೀಕ್ಷೆ.
“2007ರಿಂದ ಆರಂಭಗೊಂಡ ಸುದೀರ್ಘ ಪ್ರಯಾಣ ಇದಾಗಿದೆ. ಅಂದಿನ ಟಿ20 ವಿಶ್ವಕಪ್‌ನಲ್ಲಿ ನಾನು ಪದಾರ್ಪಣೆ ಮಾಡಿದೆ. ಈ 12 ವರ್ಷಗಳ ಅವಧಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇದೊಂದು ಕಠಿನ ಮಾದರಿಯ ಸ್ಪರ್ಧೆ. ಸಾಕಷ್ಟು ಪಾಠಗಳನ್ನು ಹೇಳಿಕೊಟ್ಟಿದೆ’ ಎಂದು ಟಿ20ಯಲ್ಲಿ ಸರ್ವಾಧಿಕ 2,452 ರನ್ ಬಾರಿಸಿರುವ ರೋಹಿತ್ ಈ ಸಂದರ್ಭದಲ್ಲಿ ಹೇಳಿದರು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ/ಸಂಜು ಸ್ಯಾಮ್ಸನ್/ಮನೀಷ್ ಪಾಂಡೆ, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಯಜುವೇಂದ್ರ ಚಹಲ್, ಖಲೀಲ್ ಅಹ್ಮದ್/ ಶಾದೂìಲ್ ಠಾಕೂರ್.
ಬಾಂಗ್ಲಾದೇಶ: ಲಿಟನ್ ದಾಸ್, ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ರಹೀಂ, ಮಹಮದುಲ್ಲ (ನಾಯಕ), ಅಫಿಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಅಹ್ಮದ್ ಇಸ್ಲಾಮ್, ಶಫಿಯುಲ್ ಇಸ್ಲಾಮ್, ಮುಸ್ತಫಿಜರ್ ರಹಮಾನ್, ಅಲ್ ಅಮೀನ್ ಹೊಸೈನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.