ಕಾನ್ಪುರ: ಸರಣಿ ಗೆಲುವಿನ ಕಾತರ
Team Udayavani, Oct 29, 2017, 6:50 AM IST
ಕಾನ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ರವಿವಾರ ಕಾನ್ಪುರದ “ಗ್ರೀನ್‌ಪಾರ್ಕ್ ಸ್ಟೇಡಿಯಂ’ನಲ್ಲಿ ಸತತ 7ನೇ ಸರಣಿ ವಶಪಡಿಸಿಕೊಳ್ಳುವ ಯೋಜನೆಯೊಂದಿಗೆ ಮುಂದಡಿ ಇಡಲಿದೆ. ಇನ್ನೊಂದೆಡೆ ನ್ಯೂಜಿಲ್ಯಾಂಡ್ ಕೂಡ ಸರಣಿ ಮೇಲೆ ಕಣ್ಣಿರಿಸಿದ್ದು, ಭಾರತವನ್ನು ಭಾರತದ ನೆಲದಲ್ಲೇ ಮಣಿಸುವ ಬಹು ದೊಡ್ಡ ಕನಸು ಕಾಣುತ್ತಿದೆ. ಹೀಗಾಗಿ ಇತ್ತಂಡಗಳ ಪಾಲಿಗೂ ಇದೊಂದು ಮಾಡು-ಮಡಿ ಪಂದ್ಯ.
ಇದು ಕಾನ್ಪುರದಲ್ಲಿ ನಡೆಯುವ 15ನೇ ಏಕದಿನ ಪಂದ್ಯವಾಗಿದ್ದು, ಭಾರತ ಪಾಲ್ಗೊಳ್ಳುತ್ತಿರುವ 14ನೇ ಮುಖಾಮುಖೀ. ನ್ಯೂಜಿಲ್ಯಾಂಡ್ ಇಲ್ಲಿ ಈವರೆಗೆ ಆಡಿಲ್ಲ. ಮೊದಲ ಬಾರಿಗೆ ಗ್ರೀನ್‌ಪಾರ್ಕ್ ಏಕದಿನ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯುತ್ತಿರುವುದೊಂದು ವಿಶೇಷ.
ಮುಂಬಯಿ ಪಂದ್ಯದಲ್ಲಿ ಆಘಾತಕಾರಿ ಸೋಲುಂಡ ಭಾರತ ತಂಡ, ಬಹಳ ಸಮಯದ ಬಳಿಕ ಸರಣಿ ಆರಂಭದಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿತ್ತು. ಆದರೆ ಪುಣೆಯಲ್ಲಿ ಈ ಒತ್ತಡವನ್ನೆಲ್ಲ ಮೀರಿ ನಿಂತ ಕೊಹ್ಲಿ ಪಡೆ ಕಿವೀಸನ್ನು ಕೆಡವಲು ಯಶಸ್ವಿಯಾಯಿತು. ಮುಂಬಯಿಯಲ್ಲಿ ಬೌಲಿಂಗ್ ವೈಫಲ್ಯದಿಂದ ಸೋಲನುಭವಿಸಿದ ಭಾರತ, ಪುಣೆಯಲ್ಲಿ ಬೌಲಿಂಗ್ ಯಶಸ್ಸಿನಿಂದಲೇ ಜಯ ಸಾಧಿಸಿತೆಂಬುದನ್ನು ಮರೆಯುವಂತಿಲ್ಲ.
ಲಯ ಕಂಡುಕೊಂಡ ಬೌಲಿಂಗ್
ನ್ಯೂಜಿಲ್ಯಾಂಡಿಗೆ ಸ್ಪಿನ್ ಬಿಸಿ ಮುಟ್ಟಿಸದೆ ಗೆಲುವು ಅಸಾಧ್ಯ ಎಂಬುದು ದ್ವಿತೀಯ ಪಂದ್ಯಕ್ಕೂ ಮೊದಲಿನ ಲೆಕ್ಕಾಚಾರವಾಗಿತ್ತು. ಆದರೆ ಪುಣೆಯಲ್ಲಿ ಮೇಲುಗೈ ಸಾಧಿಸಿದ್ದು ಭಾರತದ ವೇಗದ ಬೌಲಿಂಗ್ ವಿಭಾಗ. ಮುಖ್ಯವಾಗಿ ಭುವನೇಶ್ವರ್-ಬುಮ್ರಾ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದ್ದರಿಂದ ಪ್ರವಾಸಿಗರ ಮೇಲೆ ಒತ್ತಡ ತೀವ್ರಗೊಂಡಿತು. ಸ್ಪಿನ್ನರ್‌ಗಳಲ್ಲಿ ಚಾಹಲ್, ಜಾಧವ್ ಉತ್ತಮ ಹಿಡಿತ ಸಾಧಿಸಿದರು. ಕುಲದೀಪ್ ಯಾದವ್ ಬದಲು ಸ್ಥಾನ ಪಡೆದ ಅಕ್ಷರ್ ಪಟೇಲ್ ಮಾತ್ರ ತುಸು ದುಬಾರಿಯಾದರು. ಆದರೂ ವಾಂಖೇಡೆಯಲ್ಲಿ ಭಾರತದ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಹೋಗಿದ್ದ ನ್ಯೂಜಿಲ್ಯಾಂಡ್, ಪುಣೆಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿಯೂ ಸಾಮಾನ್ಯ ಮೊತ್ತಕ್ಕೆ ಕುಸಿದು ಶರಣಾಗತಿ ಸಾರಿತು. ಈ ಸೋಲಿನಿಂದ ಹೊರಬರುವುದು ಬ್ಲ್ಯಾಕ್ ಕ್ಯಾಪ್ಸ್‌ಗೆ ಅಷ್ಟು ಸುಲಭವಲ್ಲ.
ಮುಂಬಯಿಯಲ್ಲಿ ದ್ವಿಶತಕದ ಜತೆಯಾಟ ದಾಖಲಿಸಿದ ರಾಸ್ ಟಯ್ಲರ್-ಟಾಮ್ ಲ್ಯಾಥಂ ನ್ಯೂಜಿಲ್ಯಾಂಡ್ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ ಪುಣೆಯಲ್ಲಿ ಭಾರತದ ಬೌಲರ್‌ಗಳೇ ಆರಂಭಿಕ ಮೇಲುಗೈ ಸಾಧಿಸಿದ್ದರಿಂದ ಪ್ರವಾಸಿ ಪಡೆಗೆ ಕ್ರೀಸ್ ಆಕ್ರಮಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ; ಅವರ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ. ಅಷ್ಟರ ಮಟ್ಟಿಗೆ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಆರಂಭಿಕರಾದ ಗಪ್ಟಿಲ್-ಮುನ್ರೊ ವೈಫಲ್ಯ, ನಾಯಕ ವಿಲಿಯಮ್ಸನ್ ಎರಡೂ ಪಂದ್ಯಗಳಲ್ಲಿ ಒಂದಂಕಿಯ ಮೊತ್ತಕ್ಕೆ ಔಟಾದದ್ದು ನ್ಯೂಜಿಲ್ಯಾಂಡಿಗೆ ಎದುರಾಗಿರುವ ದೊಡ್ಡ ಸಮಸ್ಯೆ. ಟಯ್ಲರ್-ಲ್ಯಾಥಂ ಅವರನ್ನು ಪ್ರತಿ ಸಲವೂ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸ್ಯಾಂಟ್ನರ್, ಗ್ರ್ಯಾಂಡ್‌ಹೋಮ್ ವಿಶ್ವ ದರ್ಜೆಯ ಆಲ್‌ರೌಂಡರ್‌ಗಳೇನಲ್ಲ. ಹೀಗಾಗಿ ಪುಣೆ ಆಟವನ್ನೇ ಪುನರಾವರ್ತಿಸಿದರೆ ಭಾರತಕ್ಕೆ ಸರಣಿ ಗೆಲುವು ಅಸಾಧ್ಯವಲ್ಲ ಎಂದು ಭಾವಿಸಲಾಗಿದೆ.
ಸವಾಲಿಗೆ ಸದಾ ಸಿದ್ಧ
“ನಾವು ಸವಾಲಿಗೆ ಸದಾ ಸಿದ್ಧರಾಗಿರುತ್ತೇವೆ. ಮುಂಬಯಿ ಸೋಲಿನ ಬಳಿಕ ಪುಣೆಯಲ್ಲಿ ತಿರುಗಿ ಬೀಳಲಿದ್ದೇವೆ ಎಂದು ಹೇಳಿದ್ದೆ. ಇದು ನಿಜವಾಗಿದೆ. ಇನ್ನೀಗ ಸರಣಿ ವಶಪಡಿಸಿಕೊಳ್ಳುವುದು. ಇದಕ್ಕೂ ನಾವು ತಯಾರಾಗಿದ್ದೇವೆ’ ಎಂಬುದು ಕ್ಯಾಪ್ಟನ್ ಕೊಹ್ಲಿಯ ಆತ್ಮವಿಶ್ವಾಸದ ಮಾತುಗಳು.ಭಾರತದ ಬ್ಯಾಟಿಂಗ್ ಕುರಿತು ಹೇಳುವುದಾದರೆ ಆರಂಭಕಾರ ರೋಹಿತ್ ಶರ್ಮ ಮಾತ್ರ ಈ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಕ್ರಮವಾಗಿ 7 ಹಾಗೂ 20 ರನ್ ಮಾತ್ರ ಗಳಿಸಿದ್ದಾರೆ. ಸ್ಫೋಟಕ ಆರಂಭ ಕಂಡುಕೊಂಡರೂ ಇದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಅವರು ವಿಫಲರಾಗಿದ್ದಾರೆ. ಕಾನ್ಪುರದಲ್ಲಿ ರೋಹಿತ್ ಅವರಿಂದ ದೊಡ್ಡ ಇನ್ನಿಂಗ್ಸ್ ಒಂದನ್ನು ನಿರೀಕ್ಷಿಸಲಾಗಿದೆ.
ಒಟ್ಟಾರೆಯಾಗಿ ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಭಾರೀ ವೈಫಲ್ಯವನ್ನೇನೂ ಕಂಡಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಭಾರೀ ಸುಧಾರಣೆ ಆಗಬೇಕಾದುದು ಅನಿವಾರ್ಯ. 2015ರ ವಿಶ್ವಕಪ್ ಬಳಿಕ 4ನೇ ಕ್ರಮಾಂಕದಲ್ಲಿ 11 ಆಟಗಾರರನ್ನು ಆಡಿಸಿದ ಭಾರತ ಶೀಘ್ರದಲ್ಲೇ ಇದಕ್ಕೊಂದು ಪೂರ್ಣ ವಿರಾಮ ಹಾಕಬೇಕಿದೆ. ಪುಣೆಯಲ್ಲಿ ದಿನೇಶ್ ಕಾರ್ತಿಕ್ ಅಜೇಯ 64 ರನ್ ಬಾರಿಸಿ ಭರವಸೆ ಮೂಡಿಸಿರುವುದರಿಂದ ಮನೀಷ್ ಪಾಂಡೆ ಒಳಬರುವ ಸಾಧ್ಯತೆ ಇಲ್ಲ. ಹೀಗಾಗಿ ಭಾರತ ವಿಜೇತ ತಂಡವನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತ.
ಕೆಲವು ಸ್ವಾರಸ್ಯ…
* ಭಾರತ ತವರಿನಲ್ಲಿ ಕೊನೆಯ ಸಲ ಏಕದಿನ ಸರಣಿ ಸೋಲುಂಡದ್ದು 2015ರಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ.
* ವಿರಾಟ್ ಕೊಹ್ಲಿ ಇನ್ನು 83 ರನ್ ಮಾಡಿದರೆ ಏಕದಿನದಲ್ಲಿ 9 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ 6ನೇ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ.
* ನ್ಯೂಜಿಲ್ಯಾಂಡ್ 3 ಸಲ ಭಾರತದಲ್ಲಿ ಸರಣಿ ನಿರ್ಣಾಯಕ ಕೊನೆಯ ಪಂದ್ಯವನ್ನಾಡಿತ್ತು (1995, 1999 ಮತ್ತು 2016). ಇವೆಲ್ಲದರಲ್ಲೂ ಸೋಲುಂಡು ಸರಣಿ ಕಳೆದುಕೊಂಡಿತ್ತು.
“ಗ್ರೀನ್‌ಪಾರ್ಕ್’ನಲ್ಲಿ ಭಾರತ
ಪಂದ್ಯ: 13 * ಜಯ: 09 * ಸೋಲು: 04
ಕಾನ್ಪುರದ “ಗ್ರೀನ್‌ಪಾರ್ಕ್ ಸ್ಟೇಡಿಯಂ’ನಲ್ಲಿ 2015ರ ಬಳಿಕ ನಡೆಯುತ್ತಿರುವ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ. ಕೊನೆಯ ಸಲ ಇಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದ ಭಾರತ 5 ರನ್ ಸೋಲಿಗೆ ತುತ್ತಾಗಿತ್ತು.
ಗ್ರೀನ್‌ಪಾರ್ಕ್ ಅಂಗಳದಲ್ಲಿ ಒಟ್ಟು 13 ಏಕದಿನ ಪಂದ್ಯಗಳನ್ನಾಡಿರುವ ಭಾರತ 9ರಲ್ಲಿ ಗೆದ್ದಿದೆ. ಉಳಿದ ನಾಲ್ಕರಲ್ಲಿ ಸೋಲನುಭವಿಸಿದೆ. ಈ ಅಂಗಳದಲ್ಲಿ ನ್ಯೂಜಿಲ್ಯಾಂಡ್ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.
ಬಿಗಿ ಭದ್ರತೆಯಲ್ಲಿ ಕಾನ್ಪುರ ಪಿಚ್
“ಪುಣೆ ಪಿಚ್ ಫಿಕ್ಸಿಂಗ್’ ಪ್ರಕರಣದ ಬಳಿಕ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕಣ್ಣಿಗೆ ಎಣ್ಣೆ ಹಾಕಿಕೊಂಡು ಪಿಚ್ ಕಾವಲು ನಡೆಸುತ್ತಿವೆ. ಭಾರತ-ನ್ಯೂಜಿಲ್ಯಾಂಡ್ ನಡುವಿನ ನಿರ್ಣಾಯಕ ಪಂದ್ಯದ ತಾಣವಾಗಿರುವ ಕಾನ್ಪುರದ ಗ್ರೀನ್‌ಪಾರ್ಕ್ ಪಿಚ್ಚಿಗೂ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿಯ (ಯುಪಿಸಿಎ) ಅಧಿಕೃತ ಪಾಸ್ ಹೊಂದಿದವರಿಗಷ್ಟೇ ಗ್ರೀನ್‌ಪಾರ್ಕ್‌ಗೆ ಪ್ರವೇಶ ನೀಡಲು ಭದ್ರತಾ ಸಿಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾರಿಗೂ ಪಿಚ್ ಸ್ಥಿತಿಯ ಬಗ್ಗೆ ಮಾಹಿತಿ ಒದಗಿಸದಂತೆಯೂ ಅಂಗಳದ ಸಿಬಂದಿಗಳಿಗೆ ಸೂಚಿಸಲಾಗಿದೆ. ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಈ ಪಿಚ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಉಸ್ತುವಾರಿ ಕಾರ್ಯದರ್ಶಿ ಯುದ್ವೀರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್.
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟಯ್ಲರ್, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್/ಐಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಆ್ಯಡಂ ಮಿಲೆ°, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಆರಂಭ: 1.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.