ಸರಣಿ ಗೆಲುವಿಗೆ ಕ್ಷಣಗಣನೆ
Team Udayavani, Jan 28, 2019, 12:30 AM IST
ಮೌಂಟ್ ಮೌಂಗನುಯಿ: ಆತಿಥೇಯ ನ್ಯೂಜಿಲ್ಯಾಂಡನ್ನು ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅಧಿಕಾರಯುತವಾಗಿ ಮಣಿಸಿದ ಭಾರತವೀಗ ಸರಣಿ ಗೆಲುವಿನ ಕ್ಷಣಗಣನೆಯಲ್ಲಿದೆ. ಸೋಮವಾರ ಮೌಂಟ್ ಮೌಂಗನುಯಿಯ “ಬೇ ಓವಲ್’ನಲ್ಲೇ 3ನೇ ಪಂದ್ಯ ನಡೆಯಲಿದ್ದು, ಇದನ್ನು ಗೆದ್ದರೆ ಟೀಮ್ ಇಂಡಿಯಾ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಆಗ 2024ರ 4-0 ಸೋಲಿಗೆ ಬಹಳ ಬೇಗನೇ ಸೇಡು ತೀರಿಸಿಕೊಂಡಂತಾಗುತ್ತದೆ.
ನಾಯಕ ವಿರಾಟ್ ಕೊಹ್ಲಿ ಪಾಲಿಗೂ ಇದು ಮಹತ್ವದ ಮುಖಾಮುಖೀ. ಕಾರಣ, ಈ ಪಂದ್ಯದ ಬಳಿಕ ಅವರ ನ್ಯೂಜಿಲ್ಯಾಂಡ್ ಪ್ರವಾಸ ಕೊನೆಗೊಳ್ಳಲಿದೆ. ಮುಂದಿನೆರಡು ಏಕದಿನ ಹಾಗೂ ಅನಂತರದ ಟಿ20 ಸರಣಿಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಭಾರತಕ್ಕೆ ವಾಪಸಾಗುವ ಮುನ್ನ ತಂಡಕ್ಕೆ ಸರಣಿ ಗೆಲುವನ್ನು ದೊರಕಿಸಿಕೊಡುವುದು ಅವರ ಪ್ರಮುಖ ಉದ್ದೇಶ. ಅನಂತರದ ಪಂದ್ಯಗಳಲ್ಲಿ ರೋಹಿತ್ ಶರ್ಮ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ಹಿಂದಿನೆರಡೂ ಪಂದ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಯೊಂದಿಗೆ ಭರ್ಜರಿ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್, ಬೌಲಿಂಗ್ ಜತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿನ ಪ್ರದರ್ಶನ ನೀಡಿತ್ತು. ಇದೇ ಸಾಧನೆಯನ್ನು ಕಾಯ್ದುಕೊಂಡರೆ ಮೂರೇ ಪಂದ್ಯಗಳೊಳಗೆ ಸರಣಿ ವಶಪಡಿಸಿಕೊಳ್ಳುವುದು ಟೀಮ್ ಇಂಡಿಯಾಕ್ಕೆ ಅಸಾಧ್ಯವೇನೂ ಆಗದು.
ಕಿವೀಸ್‌ಗೆ ಸ್ಪಿನ್ ಕಂಟಕ
ಸಾಮಾನ್ಯವಾಗಿ ನ್ಯೂಜಿಲ್ಯಾಂಡ್ ತವರಿನಂಗಳದಲ್ಲಿ ಯಾವತ್ತೂ ಬಲಿಷ್ಠವೇ. ಕಿವೀಸ್ ಆಟಗಾರರೊಂದಿಗೆ ಅಲ್ಲಿನ ವಾತಾವರಣವೂ ಪ್ರವಾಸಿಗರಿಗೆ ಸವಾಲಾಗುತ್ತದೆ. ಹೀಗಾಗಿ ಭಾರತದ ಪಾಲಿಗೆ ಈ ಸರಣಿ ಆಸ್ಟ್ರೇಲಿಯಕ್ಕಿಂತಲೂ ಹೆಚ್ಚು ಕಠಿನವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊಹ್ಲಿ ಪಡೆ ಈ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದೆ. ವಾತಾವರಣದ ಜತೆಗೆ ಇಲ್ಲಿನ ಟ್ರ್ಯಾಕ್‌ಗಳ ಭರಪೂರ ಲಾಭವೆತ್ತುವ ಮೂಲಕ ವಿಲಿಯಮ್ಸನ್ ಪಡೆಗೆ ಕಂಟಕವಾಗಿ ಪರಿಣಮಿಸಿದೆ.
ನ್ಯೂಜಿಲ್ಯಾಂಡಿಗೆ ದೊಡ್ಡ ತೊಡಕಾಗಿ ಪರಿಣಮಿಸಿದವರು ಸ್ಪಿನ್‌ದ್ವಯರಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್. ಇವರ ಸ್ಪಿನ್ ದಾಳಿಯ ಮರ್ಮವನ್ನು ಭೇದಿಸುವಲ್ಲಿ ಆತಿಥೇಯರು ಸಂಪೂರ್ಣ ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿ ಉರುಳಿದ 20 ವಿಕೆಟ್‌ಗಳಲ್ಲಿ ಹನ್ನೆರಡನ್ನು ಇವರಿಬ್ಬರ ಪಾಲಾಗಿರುವುದೇ ಇದಕ್ಕೆ ಸಾಕ್ಷಿ. ಚೈನಾಮನ್ ಕುಲದೀಪ್ ಅವರಂತೂ ಎರಡೂ ಪಂದ್ಯಗಳಲ್ಲಿ 4 ಪ್ಲಸ್ 4 ವಿಕೆಟ್ ಹಾರಿಸಿ ಘಾತಕವಾಗಿ ಪರಿಣಮಿಸಿದ್ದಾರೆ. ಮುಂದೆಯೂ ಅವರು ನ್ಯೂಜಿಲ್ಯಾಂಡಿನ ದಿಕ್ಕು ತಪ್ಪಿಸುವುದರಲ್ಲಿ ಅನುಮಾನವಿಲ್ಲ. ಎಲ್ಲಿಯ ತನಕ ವಿಲಿಯಮ್ಸನ್ ಪಡೆ ಸ್ಪಿನ್ನಿಗೆ ಜವಾಬು ನೀಡುವಲ್ಲಿ ಎಡವುತ್ತದೋ ಅಲ್ಲಿಯ ತನಕ ಗೆಲ್ಲದು ಎಂಬುದು ಈಗಿನ ಲೆಕ್ಕಾಚಾರ.
ಹಾರ್ದಿಕ್ ಪಾಂಡ್ಯ ಪ್ರವೇಶ
ಟಿವಿ ಶೋ ಒಂದರಲ್ಲಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಗ ಮರಳಿ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಸೋಮವಾರ ಆಡುವುದು ಬಹುತೇಕ ಖಚಿತ. ಇದರಿಂದ ಭಾರತ ತಂಡ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಹೆಚ್ಚು ಬ್ಯಾಲೆನ್ಸ್ ಆಗಲಿದೆ. ಜತೆಗೆ ಸೀಮರ್‌ಗಳಾದ ಭುವನೇಶ್ವರ್ ಮತ್ತು ಶಮಿ ಮೇಲಿನ ಭಾರವೂ ಕಡಿಮೆಯಾಗಲಿದೆ. ಪಾಂಡ್ಯ ಆಡಿದರೆ ವಿಜಯ್ ಶಂಕರ್ ಅವಕಾಶ ಕಳೆದುಕೊಳ್ಳಲಿದ್ದಾರೆ. 2ನೇ ಪಂದ್ಯದಲ್ಲಿ ತಮಿಳುನಾಡಿನ ಈ ಕ್ರಿಕೆಟಿಗನಿಗೆ ಕೇವಲ ಎರಡೇ ಓವರ್ ನೀಡಲಾಗಿತ್ತು.
ಫಾರ್ಮ್ಗೆ ಮರಳಿದ ಧವನ್
ಭಾರತದ ಬ್ಯಾಟಿಂಗ್ ಎರಡೂ ಪಂದ್ಯಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ನೇಪಿಯರ್‌ನಲ್ಲಿ ಎರಡೇ ವಿಕೆಟ್ ನಷ್ಟದಲ್ಲಿ ರನ್ ಚೇಸ್ ಮಾಡಿದ ಭಾರತ, ದ್ವಿತೀಯ ಮುಖಾಮುಖೀಯಲ್ಲಿ ಮುನ್ನೂರರ ಗಡಿ ದಾಟಿ ಮೆರೆದಿತ್ತು. ಎಡಗೈ ಆರಂಭಕಾರ ಶಿಖರ್ ಧವನ್ ಮರಳಿ ಫಾರ್ಮ್ ಕಂಡುಕೊಂಡದ್ದು ಭಾರತದ ಬ್ಯಾಟಿಂಗ್ ಯಶಸ್ಸಿಗೆ ಪ್ರಮುಖ ಕಾರಣ ಎನ್ನಲಡ್ಡಿಯಿಲ್ಲ. ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಧವನ್ ಕ್ರಮವಾಗಿ ಅಜೇಯ 75 ಹಾಗೂ 66 ರನ್ ಬಾರಿಸುವ ಮೂಲಕ ಅಪಾಯಕಾರಿಯಾಗಿ ಗೋಚರಿಸಿದ್ದಾರೆ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು, ಧೋನಿ, ಕೇದಾರ್ ಜಾಧವ್ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಲೈನ್‌ಅಪ್ ಉತ್ತಮ ಲಯದಲ್ಲಿದೆ. ರೋಹಿತ್ ಮೊದಲ ಪಂದ್ಯದಲ್ಲಿ ವಿಫಲರಾದರೂ ಬಳಿಕ
“ಸ್ಟ್ರೋಕ್‌ಫುಲ್’ ಬ್ಯಾಟಿಂಗ್ ಮೂಲಕ 87 ರನ್ ಸಿಡಿಸಿ ಮೆರೆದರು. ಕೊಹ್ಲಿ ತಂಡದಿಂದ ಬೇರ್ಪಟ್ಟ ಬಳಿಕ ದಿನೇಶ್ ಕಾರ್ತಿಕ್ ಅಥವಾ ಶುಭಮನ್ ಗಿಲ್ ಅವಕಾಶ ಪಡೆಯಬಹುದು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ/ವಿಜಯ್ ಶಂಕರ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್.
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟಯ್ಲರ್, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಡಗ್ ಬ್ರೇಸ್‌ವೆಲ್/ಟಿಮ್ ಸೌಥಿ, ಐಶ್ ಸೋಧಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ಆರಂಭ: ಬೆಳಗ್ಗೆ 7.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.