ಇಂದು ಮುಂಬೈVs ರಾಜಸ್ಥಾನ್
Team Udayavani, May 13, 2018, 12:29 PM IST
ಮುಂಬೈ: ಹನ್ನೊಂದನೇ ಐಪಿಎಲ್ ನಿರ್ಣಾಯಕ ಸ್ಪರ್ಧೆಯೊಂದಕ್ಕೆ ಮುಂಬೈ ಇಂಡಿಯನ್ಸ್- ರಾಜಸ್ಥಾನ್ ರಾಯಲ್ಸ್ ತಂಡಗಳು ಭಾನುವಾರ ಸಾಕ್ಷಿಯಾಗಲಿವೆ.
“ವಾಂಖೇಡೆ ಸ್ಟೇಡಿಯಂ’ನಲ್ಲಿ ಈ ಮುಖಾಮುಖೀ ಸಾಗಲಿದ್ದು, ಗೆದ್ದವರಿಗಷ್ಟೇ ಪ್ಲೇ-ಆಫ್ ಟಿಕೆಟ್ ಸಾಧ್ಯತೆ ಎಂಬುದು ಸದ್ಯದ ಸ್ಥಿತಿ.
ಸದ್ಯ ಎರಡೂ ತಂಡಗಳು 11 ಪಂದ್ಯಗಳಲ್ಲಿ ಐದನ್ನು ಗೆದ್ದು ಸಮಬಲ ಸಾಧನೆ ತೋರ್ಪಡಿಸಿವೆ. ತಲಾ 10 ಅಂಕ ಹೊಂದಿವೆ. ಪ್ಲೇ-ಆಫ್ ತಲುಪಬೇಕಾದರೆ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಎರಡೂ ತಂಡಗಳ ಮೇಲಿದೆ.
ಭಾನುವಾರದ ಸ್ಪರ್ಧೆಯಲ್ಲಿ ಸೋತ ತಂಡ ಬಹುತೇಕ ಹೊರಬೀಳಲಿದೆ. ಹೀಗಾಗಿ ರೋಹಿತ್ -ರಹಾನೆ ಪಡೆಗಳ ಮೇಲಾಟ ಐಪಿಎಲ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಮುಂಬೈ ಮತ್ತು ರಾಜಸ್ಥಾನ್ ಎರಡೂ ಕೊನೆಯ ಸ್ಥಾನದಿಂದ ಮೇಲೆದ್ದು ಬಂದ ತಂಡಗಳು. ಅಚ್ಚರಿಯೆಂಬಂತೆ ಈಗ ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿವೆ. ಎರಡೂ ತಂಡಗಳು ತಮ್ಮ ಹಿಂದಿನ ಲೀಗ್ ಪಂದ್ಯದಲ್ಲಿ ಜಯ ಸಾಧಿಸಿ
ಪ್ಲೇ-ಆಫ್ ಪೈಪೋಟಿಯನ್ನು ತೀವ್ರಗೊಳಿಸಿವೆ.
ಸೇಡು ತೀರಿಸೀತೇ ಮುಂಬೈ?: ಜೈಪುರದಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್ 3 ವಿಕೆಟ್‌ಗಳಿಂದ ಮುಂಬೈಗೆ ಸೋಲುಣಿಸಿತ್ತು. ಮುಂಬೈ 7 ವಿಕೆಟಿಗೆ 167 ರನ್ ಗಳಿಸಿದರೆ, ರಾಜಸ್ಥಾನ್ 19.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 168 ರನ್ ಬಾರಿಸಿ ಜಯಭೇರಿ ಮೊಳಗಿಸಿತ್ತು. ಸಂಜು ಸ್ಯಾಮ್ಸನ್ (52), ಬೆನ್ ಸ್ಟೋಕ್ಸ್ (40), ಕೆ. ಗೌತಮ್ (ಅಜೇಯ 33) ರಾಜಸ್ಥಾನ್ ಗೆಲುವಿನ ಹೀರೋಗಳಾಗಿದ್ದರು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಮುಂಬೈಗೆ ತವರಿನಲ್ಲೇ ಎದುರಾಗಿದೆ. ರೋಹಿತ್ ಪಡೆಯನ್ನು “ನೆಚ್ಚಿನ ತಂಡ’ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಾಜಸ್ಥಾನ್ ರಾಯಲ್ಸ್ ಶುಕ್ರವಾರವಷ್ಟೇ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಜೈಪುರದ ಮೇಲಾಟದಲ್ಲಿ 4 ವಿಕೆಟ್‌ಗಳಿಂದ ಮಣಿಸಿತ್ತು. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ “ಈಡನ್ ಗಾರ್ಡನ್ಸ್’ನಲ್ಲಿ ಆಡಲಾದ ತನ್ನ ಹಿಂದಿನ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್‌ರೈಡರ್ಗೆ 102ರನ್ನುಗಳ ಭಾರೀ ಸೋಲುಣಿಸಿತ್ತು.
ವನ್ ಮ್ಯಾನ್ ಶೋ!: ಮುಂಬೈ ಒಂದು ತಂಡವಾಗಿ ಆಡುತ್ತಿದ್ದರೆ, ರಾಜಸ್ಥಾನ್‌ನದ್ದು “ವನ್ ಮ್ಯಾನ್ ಶೋ’ ಎಂಬಂತಾಗಿದೆ. ಆರಂಭಕಾರ ಜಾಸ್ ಬಟ್ಲರ್ ಕ್ರೀಸ್ ಆಕ್ರಮಿಸಿಕೊಂಡರಷ್ಟೇ ತಂಡಕ್ಕೆ ಗೆಲುವು ಎಂಬ ಸ್ಥಿತಿ ಇದೆ. ಚೆನ್ನೈ ವಿರುದ್ಧ ಬಟ್ಲರ್ ಅಜೇಯ ಹೋರಾಟ ನಡೆಸದೇ ಇರುತ್ತಿದ್ದಲ್ಲಿ ರಾಜಸ್ಥಾನ್ ಮೇಲೆ ಯಾವ ನಿರೀಕ್ಷೆಯೂ ಉಳಿಯುತ್ತಿರಲಿಲ್ಲ. ರಹಾನೆ, ಸ್ಟೋಕ್ಸ್,ಸ್ಯಾಮ್ಸನ್ ಸತತ ವೈಫಲ್ಯ ಕಾಣುತ್ತಿರುವುದು ಆತಂಕದ ಸಂಗತಿ. ಲೀಗ್ ಹಂತದ ಅಂತಿಮ ಹಂತದಲ್ಲಾದರೂ ಇವರ ಬ್ಯಾಟ್ ಮಾತಾಡಬೇಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.