ಇಂದು ನನ್ನ ಪಾಲಿನ ರಾತ್ರಿಯಾಗಿತ್ತು: ಬ್ರಾವೊ
Team Udayavani, Apr 9, 2018, 7:00 AM IST
ಮುಂಬಯಿ: “ಇಂದು ನನ್ನ ಪಾಲಿನ ರಾತ್ರಿಯಾಗಿತ್ತು’ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ರೂವಾರಿ ಡ್ವೇನ್ ಬ್ರಾವೊ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ರಾತ್ರಿಯ 11ನೇ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಚೇಸಿಂಗ್ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೊ ಕೇವಲ 30 ಎಸೆತಗಳಿಂದ 68 ರನ್ ಸಿಡಿಸಿ ವಾಂಖೇಡೆಯಲ್ಲಿ ಅಬ್ಬರಿಸಿದ್ದರು. 7 ಪ್ರಚಂಡ ಸಿಕ್ಸರ್ ಹಾಗೂ 3 ಬೌಂಡರಿ ಸಿಡಿಸಿ ಆತಿಥೇಯರನ್ನು ಬೆಚ್ಚಿ ಬೀಳಿಸಿದರು. ಇನ್ನೇನು ಸೋತೇ ಹೋಗಲಿದ್ದ ಚೆನ್ನೈ ಒಂದು ಎಸೆತ ಬಾಕಿ ಇರುವಂತೆಯೆ ಒಂದು ವಿಕೆಟ್ ಅಂತರದ ರೋಮಾಂಚಕ ಜಯ ಒಲಿಸಿಕೊಂಡಿತ್ತು.
ಮುಂಬೈ 4 ವಿಕೆಟಿಗೆ 165 ರನ್ ಪೇರಿಸಿದರೆ, ಚೆನ್ನೈ ಒಂದು ಹಂತದಲ್ಲಿ 118ಕ್ಕೆ 8 ವಿಕೆಟ್ ಉರುಳಿಸಿಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಸಿಡಿದು ನಿಂತ ಬ್ರಾವೊ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 2018ನೇ ಋತುವಿನ ಐಪಿಎಲ್‌ಗೆ ರೋಚಕ ಆರಂಭ ಒದಗಿಸಿದರು.
“ಇಂದು ನನ್ನ ಪಾಲಿನ ರಾತ್ರಿಯಾಗಿತ್ತು. ಬ್ಯಾಟಿಂಗ್ ಬಗ್ಗೆ ನನಗೇನೂ ಚಿಂತೆ ಇರಲಿಲ್ಲ. ನಾನು ಕೊನೆಯ ತನಕ ಕ್ರೀಸಿನಲ್ಲಿ ಉಳಿದದ್ದೇ ಆದರೆ ಗೆಲುವಿನ ಸಾಧ್ಯತೆಯ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದೆ. ನಾನು 50 ರನ್ ಪೂರ್ತಿಗೊಳಿಸಿದಾಗ ಬ್ಯಾಟ್ ಎತ್ತಿರಲಿಲ್ಲ. ಏಕೆಂದರೆ ನನ್ನ ಕರ್ತವ್ಯ ಪೂರ್ತಿಯಾಗಿರಲಿಲ್ಲ’ ಎಂದು ಬ್ರಾವೊ ಸಂದರ್ಶನವೊಂದರಲ್ಲಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.