Under-19 Cricket ವಿಶ್ವಕಪ್: ಇಂದಿನಿಂದ ಭಾರತದ ಅಭಿಯಾನ
ಹಾಲಿ ಚಾಂಪಿಯನ್ ಭಾರತಕ್ಕೆ ಬಾಂಗ್ಲಾ ಎದುರಾಳಿ
Team Udayavani, Jan 20, 2024, 5:50 AM IST
ಬ್ಲೋಮ್‌ಫಾಂಟೀನ್: ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ತಂಡ ಶನಿವಾರ ತನ್ನ ಅಭಿಯಾನ ಆರಂಭಿಸಲಿದೆ. ಹಾಲಿ ಚಾಂಪಿಯನ್ ಕೂಡ ಆಗಿರುವ ಭಾರತದ ಕಿರಿಯರ ತಂಡದ ಮೊದಲ ಎದುರಾಳಿ ಬಾಂಗ್ಲಾದೇಶ.
ಸರ್ವಾಧಿಕ 5 ಸಲ ಚಾಂಪಿಯನ್ ಆಗಿರುವ ಭಾರತ ಕಳೆದ ಸಲ ಯಶ್ ಧುಲ್ ಸಾರಥ್ಯದಲ್ಲಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಉದಯ್ ಸಹಾರಣ್ ನಾಯಕರಾಗಿದ್ದಾರೆ. “ಎ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದೆ. ಮೂಲ ವೇಳಾಪಟ್ಟಿಯಂತೆ ಈ ಪಂದ್ಯಾವಳಿ ಶ್ರೀಲಂಕಾದಲ್ಲಿ ನಡೆ ಯಬೇಕಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಐಸಿಸಿ ಅಮಾನತಿನಲ್ಲಿರಿಸಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಿತು.
ಭಾರತ ಮೊದಲ ಸಲ ಚಾಂಪಿ ಯನ್ ಪಟ್ಟ ಅಲಂಕರಿಸಿದ್ದು 2002 ರಲ್ಲಿ. ಅಂದಿನ ನಾಯಕ ಮೊಹ್ಮಮದ್ ಕೈಫ್. ಬಳಿಕ 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಎತ್ತಿತು.
ಆಲ್‌ರೌಂಡರ್ ಪಡೆ
ಭಾರತ ಉತ್ತಮ ಆಲ್‌ರೌಂಡರ್‌ಗಳನ್ನೊಳಗೊಂಡ ಸಶಕ್ತ ಪಡೆಯನ್ನು ಹೊಂದಿದೆ. ಮಹಾರಾಷ್ಟ್ರದ ಸವ್ಯ ಸಾಚಿ ಅರ್ಶಿನ್ ಕುಲಕರ್ಣಿ, ವಿಕೆಟ್ ಕೀಪರ್-ಬ್ಯಾಟರ್ ಎ. ಅವನೀಶ್ ರಾವ್, ಎಡಗೈ ಸ್ಪಿನ್ನರ್-ಉಪನಾಯಕ ಸೌಮ್ಯ ಕುಮಾರ್ ಪಾಂಡೆ, ನಾಯಕ ಉದಯ್ ಸಹಾರಣ್, ಮುಂಬ ಯಿಯ ಮುಶೀರ್ ಖಾನ್ ಅವರೆಲ್ಲ ತಂಡದ ಸ್ಟಾರ್ ಬ್ಯಾಟರ್ ಹಾಗೂ ಆಲ್‌ರೌಂಡರ್. ಇವರಲ್ಲಿ ಅರ್ಶಿನ್ ಕುಲಕರ್ಣಿ ಮತ್ತು ಅವನೀಶ್ ರಾವ್ ಈಗಾಗಲೇ ಐಪಿಎಲ್ ತಂಡ ಗಳಿಂದಲೂ ಕರೆ ಪಡೆದಿದ್ದಾರೆ. ಕ್ರಮ ವಾಗಿ ಲಕ್ನೋ ಮತ್ತು ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ.
ನಾಯಕ ಸಹಾರಣ್ ಮೂಲತಃ ರಾಜಸ್ಥಾನದವರಾದರೂ ಕಳೆದ ನವಂಬರ್‌ನಿಂದ ಪಂಜಾಬ್ ತಂಡ ವನ್ನು ಪ್ರತಿನಿಧಿಸಲಾರಂಭಿಸಿದ್ದಾರೆ. ಅಂಡರ್-19 ಚಾಲೆಂಜರ್ ಟ್ರೋಫಿ ಪಂದ್ಯಾವಳಿಯ 4 ಪಂದ್ಯಗಳಿಂದ 297 ರನ್ ಬಾರಿಸಿದ್ದು ಇವರ ಸಾಧನೆ. ಅಂಡರ್-19 ತ್ರಿಕೋನ ಸರಣಿಯ 3 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಹೊಡೆದ ಒಂದು ಶತಕವೂ ಸೇರಿದೆ. ಮುಶೀರ್ ಖಾನ್ ದೇಶಿ ಕ್ರಿಕೆಟ್‌ನಲ್ಲಿ 89.33 ಸರಾಸರಿಯಲ್ಲಿ 268 ರನ್ ಬಾರಿಸಿದ್ದಾರೆ.
ಬೌಲಿಂಗ್ ವಿಭಾಗದ ಪ್ರಮುಖ ರೆಂದರೆ ಆರಾಧ್ಯ ಶುಕ್ಲಾ, ಪಾಂಡೆ ಮತ್ತು ಕುಲಕರ್ಣಿ. ಅಂಡರ್-19 ಚಾಲೆಂಜರ್ ಸರಣಿಯಲ್ಲಿ ಇವರ ಬೌಲಿಂಗ್ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು. ಭಾರತ ಅಂಡರ್-19 ತ್ರಿಕೋನ ಸರಣಿಯ ಎಲ್ಲ ಪಂದ್ಯಗಳನ್ನು ಗೆದ್ದ ಸಾಧನೆಗೈದಿತ್ತು. ಆದರೆ ದಕ್ಷಿಣ ಆಫ್ರಿಕಾದ ಫೈನಲ್ ಮಳೆಯಿಂದ ವಾಶೌಟ್ ಆಗಿತ್ತು.
ಬಾಂಗ್ಲಾ ಅಪಾಯಕಾರಿ
ಬಾಂಗ್ಲಾದೇಶ ಫೇವರಿಟ್ ಅಲ್ಲದಿದ್ದರೂ ಅಪಾಯಕಾರಿ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಅಂಡರ್-19 ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ಮಣಿಸಿ, ಬಳಿಕ ಚಾಂಪಿಯನ್ ಆಗಿ ಮೂಡಿಬಂದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ.
ಭಾರತ ತಂಡ: ಉದಯ್ ಸಹಾರಣ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೋಲಿಯಾ, ಮುಶೀರ್ ಖಾನ್, ಎ. ಅವನೀಶ್ ರಾವ್, ಸೌಮ್ಯ ಕುಮಾರ್ ಪಾಂಡೆ, ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್, ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.
ಆರಂಭ: ಅ. 1.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.