ಜಪಾನ್ ಎದುರಾಳಿ: ಭಾರತಕ್ಕೆ ಸುಲಭ ಜಯದ ನಿರೀಕ್ಷೆ
Team Udayavani, Jan 21, 2020, 6:45 AM IST
ಬ್ಲೋಮ್‌ಫಾಂಟೈನ್ (ದಕ್ಷಿಣ ಆಫ್ರಿಕಾ): ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಇರಿಸಿರುವ ಭಾರತ, ಅಂಡರ್-19 ಏಕದಿನ ವಿಶ್ವಕಪ್ ಕೂಟದ ತನ್ನ ದ್ವಿತೀಯ ಪಂದ್ಯದಲ್ಲಿ ಮಂಗಳವಾರ “ಕ್ರಿಕೆಟ್ ಶಿಶು’ ಜಪಾನ್ ವಿರುದ್ಧ ಸೆಣಸಲಿದೆ.
“ಎ’ ವಿಭಾಗದ ತನ್ನ ಮೊದಲ ಪಂದ್ಯದಲ್ಲಿ ಭಾರತ 90 ರನ್ನುಗಳಿಂದ ಶ್ರೀಲಂಕಾವನ್ನು ಕೆಡವಿತ್ತು. ಇನ್ನೊಂದೆಡೆ ನ್ಯೂಜಿಲ್ಯಾಂಡ್ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿದ್ದರಿಂದ ಜಪಾನ್ ಒಂದಂಕವನ್ನು ಸಂಪಾದಿಸಲು ಯಶಸ್ವಿಯಾಗಿತ್ತು. ಪೂರ್ಣ ಅಂಕದ ನಿರೀಕ್ಷೆಯಲ್ಲಿದ್ದ ಕಿವೀಸ್‌ಗೆ ಇದರಿಂದ ಭಾರೀ ನಷ್ಟ ಸಂಭವಿಸಿದ್ದು ಸುಳ್ಳಲ್ಲ.
ಮುಂದಿನ ಸುತ್ತಿನತ್ತ…
ಮಂಗಳವಾರ ಜಪಾನನ್ನು ಮಣಿಸಿದರೆ ಭಾರತದ ಕಿರಿಯರು ಎಂಟರ ಸುತ್ತಿಗೆ ಲಗ್ಗೆ ಇಡಲಿದ್ದಾರೆ. ಜ. 24ರಂದು ನ್ಯೂಜಿಲ್ಯಾಂಡ್ ವಿರುದ್ಧ ಪ್ರಿಯಂ ಗರ್ಗ್ ಬಳಗ ತನ್ನ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ.
ಶ್ರೀಲಂಕಾ ವಿರುದ್ಧ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ನಿಚ್ಚಳ ಮೇಲುಗೈ ಸಾಧಿಸಿತ್ತು. ಆರಂಭಕಾರ ಯಶಸ್ವಿ ಜೈಸ್ವಾಲ್ (59), ನಾಯಕ ಪ್ರಿಯಂ ಗರ್ಗ್ (56), ಉಪನಾಯಕ ಧ್ರುವ ಜುರೆಲ್ (52), ಆಲ್‌ರೌಂಡರ್ ಸಿದ್ದೇಶ್ ವೀರ್ (ಅಜೇಯ 44) ಬ್ಯಾಟಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಪ್ರತಿಯೊಂದು ವಿಕೆಟಿಗೂ ಉತ್ತಮ ಜತೆಯಾಟ ನಡೆಸುವ ಮೂಲಕ ಇವರೆಲ್ಲ ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ಬೌಲಿಂಗ್ ವೇಳೆ ಎಡಗೈ ಪೇಸರ್ ಆಕಾಶ್ ಸಿಂಗ್, ಸಿದ್ದೇಶ್ ವೀರ್, ಲೆಗ್‌ಸ್ಪಿನ್ನರ್ ರವಿ ಬಿಶ್ನೋಯ್, 140 ಕಿ.ಮೀ. ವೇಗದ ಎಸೆತಗಳಿಗೆ ಸಾಕ್ಷಿಯಾದ ಕಾರ್ತಿಕ್ ತ್ಯಾಗಿ ಸೇರಿಕೊಂಡು ಲಂಕಾ ಬ್ಯಾಟಿಂಗಿಗೆ ಉಳಿಗಾಲವಿಲ್ಲದಂತೆ ಮಾಡಿದ್ದರು.
ಅನನುಭವಿ ಜಪಾನ್
ಕ್ರಿಕೆಟಿಗೆ ಅಪರಿಚಿತವಾದ ಅನನುಭವಿ ಜಪಾನಿಗೆ ಭಾರತದ ಸವಾಲನ್ನು ನಿಭಾಯಿಸುವುದು ಖಂಡಿತ ಅಸಾಧ್ಯ. ಏರುಪೇರಿನ ಫಲಿತಾಂಶ ದಾಖಲಿಸುವ ಸಾಮರ್ಥ್ಯವನ್ನೂ ಅದು ಹೊಂದಿಲ್ಲ. ಹೀಗಾಗಿ ಜಪಾನ್ ಹಾಲಿ ಚಾಂಪಿಯನ್ನರಿಗೆ ಸುಲಭದ ತುತ್ತಾಗುವ ಎಲ್ಲ ಸಾಧ್ಯತೆ ಇದೆ.
ಹೆಸರಿಗೆ ಜಪಾನ್ ಆದರೂ ಇದಲ್ಲಿ ತವರಿನ ಆಟಗಾರರ ಸಂಖ್ಯೆ ಕೆಲವೇ ಕೆಲವು. ಮೊರಿಟ, ಡಾಟೆ, ನೊಗುಚಿ, ಸುಟೊ, ಟಕಹಾಶಿ ಮೊದಲಾದವರಷ್ಟೇ ಜಪಾನ್ ಮೂಲದವರು. ಉಳಿದವರಲ್ಲಿ ಏಶ್ಯನ್ನರದೇ ಸಿಂಹಪಾಲು. ಇದರಲ್ಲಿ ಭಾರತೀಯರೂ ಇದ್ದಾರೆ.
ಜಪಾನ್ ತಂಡ
ಮಾರ್ಕಸ್ ತುಗೇìಟ್ (ನಾಯಕ), ತುಷಾರ್ ಚತುರ್ವೇದಿ, ಮ್ಯಾಕ್ಸಿಮಿಲಿಯನ್ ಕ್ಲೆಮೆಂಟ್ಸ್, ನೀಲ್ ಡಾಟೆ, ಕೆಂಟೊ ಡೋಬೆಲ್, ಸೋರ ಲಿಶಿಕಿ, ಇಶಾನ್ ಫರ್ಟಿಯಲ್, ಲಿಯೋನ್ ಮೆಹ್ಲಿಂಗ್, ಮಸಾಟೊ ಮೊರಿಟ, ಶು ನೊಗುಚಿ, ಯುಗಂಧರ್ ರೆತಾರೇಕರ್, ದೇಬಶಿಷ್ ಸಾಹೂ, ರೀಜಿ ಸುಟೊ, ಕಝುಮಸ ಟಕಹಾಶಿ, ಅÂಶ್ಲಿ ತುಗೇìಟ್.
ಆಸೀಸ್, ವಿಂಡೀಸ್ ಗೆಲುವು
ಸೋಮವಾರದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಡಿ-ಎಲ್ ನಿಯಮದಂತೆ 71 ರನ್ನುಗಳಿಂದ ಇಂಗ್ಲೆಂಡನ್ನು ಮಣಿಸಿದೆ. ಇನ್ನೊಂದು ಪಂದ್ಯದಲ್ಲಿ ನೈಜೀರಿಯಾ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯ 10 ವಿಕೆಟ್‌ಗಳ ಗೆಲುವು ಸಾಧಿಸಿತು. ನೈಜೀರಿಯಾ 61ಕ್ಕೆ ಆಲೌಟ್ ಆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.