ಅಂತೂ ತವರು ನೆಲದಲ್ಲಿ ಗೆದ್ದ ಯುಪಿ
Team Udayavani, Aug 25, 2017, 8:40 AM IST
ಲಕ್ನೋ: ಪ್ರೊ ಕಬಡ್ಡಿ ಲೀಗ್ ಐದರ ಗುರು ವಾರದ ಯು.ಪಿ.ಯೋಧಾ ಮತ್ತು ತೆಲುಗು ಟೈಟಾನ್ಸ್ ನಡುವಿನ ಹೋರಾಟದಲ್ಲಿ ಯೋಧಾ ಗೆಲುವಿನ ನಗೆ ಬೀರಿದೆ. ಪಂದ್ಯ ಮುಗಿಯಲು 1 ನಿಮಿಷ ಬಾಕಿ ಇರುವಾಗ ತೋಮರ್ ಅವರ ಅದ್ಭುತ ರೈಡಿಂಗ್‌ನಿಂದ ಯೋಧಾ 25-23ರಿಂದ ಜಯ ಸಾಧಿಸಿದೆ.
ತವರಿನ ಚರಣದಲ್ಲಿ ಯೋಧಾಗೆ ಇದು ಮೊದಲ ಗೆಲುವಾಗಿದೆ. ಇದು ತವರಿನಲ್ಲಿ ತಂಡದ ಕೂನೆಯ ಪಂದ್ಯವೂ ಹೌದು. ಈ ಮೂಲಕ ತವರಿನ ಅಭಿಮಾನಿಗಳನ್ನು ಕೊನೆಯ ಪಂದ್ಯದಲ್ಲಿ ಖುಷಿ ಪಡಿಸುವಲ್ಲಿ ಯೋಧಾ ಯಶಸ್ವಿಯಾಗಿದೆ.
ಶುಕ್ರವಾರದಿಂದ ಮುಂಬಯಿಯಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವು ಜೈಪುರ ಹಾಗೂ ಎರಡನೇ ಪಂದ್ಯದಲ್ಲಿ ಬೆಂಗಾಲ್ ತಂಡವು ಪಾಟ್ನಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಬಾಬು ಬನಾರಸಿದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಸ್ಪರ್ಧೆಯಿತ್ತು. ಪಂದ್ಯದ ಆರಂಭದಲ್ಲಿ ಇಬ್ಬರ ನಡುವೆ ಸಮಬಲದ ಹೋರಾಟವಿತ್ತು. ಇದರಿಂದಾಗಿ ಅಂಕ ಗಳಿಕೆ ಹಾವು ಏಣಿ ಆಟದಂತೆ ಸಾಗುತ್ತಿತ್ತು. ಈ ಹಂತದಲ್ಲಿ ಯಾವ ತಂಡ ಮೇಲುಗೈ ಸಾಧಿಸುತ್ತೆ ಎಂದು ಅಂದಾಜಿಸುವುದು ಕಷ್ಟವಾಗಿತ್ತು. ಆದರೆ ಮೊದಲ ಅವಧಿಯ ಅಂತ್ಯದಲ್ಲಿ ಟೈಟಾನ್ಸ್ 12-10ರಿಂದ ಮುನ್ನಡೆ ಪಡೆಯಿತು. 2 ಅಂಕಗಳ ಅಂತರದಿಂದ ಮುನ್ನಡೆಯಲ್ಲಿದ್ದ ಟೈಟಾನ್ಸ್ ಗೆಲುವಿನ ಹುಮ್ಮಸ್ಸಿನಲ್ಲಿಯೇ ಇತ್ತು.
ಕೊನೆ ಕ್ಷಣದಲ್ಲಿ ಪಂದ್ಯಕ್ಕೆ ತಿರುವು: 2ನೇ ಅವಧಿಯ ಆರಂಭಿಕ ಹಂತದಲ್ಲಿಯೂ ಎರಡೂ ತಂಡಗಳ ನಡುವೇ ಸಮಬಲದ ಹೋರಾಟವೇ ಇತ್ತು. ಪಂದ್ಯ ಮುಗಿಯಲು 2 ನಿಮಿಷ ಬಾಕಿ ಇರುವಾಗ ಟೈಟಾನ್ಸ್ 22-21ರಿಂದ ಮುನ್ನಡೆಯಲ್ಲಿತ್ತು. ಹೀಗಾಗಿ ಈ ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಆದರೆ ಈ ಹಂತದಲ್ಲಿ ಯೋಧಾ ನಾಯಕ ತೋಮರ್ ಸತತ 2 ರೈಡಿಂಗ್‌ನಲ್ಲಿ 2 ಅಂಕ ತಂದರು. ಇದರಿಂದ ಯೋಧಾ ಪಂದ್ಯದ ಮೇಲೆ ಕೊನೆಯ ಕ್ಷಣದಲ್ಲಿ ಮೇಲುಗೈ ಸಾಧಿಸಿತು. ಟೈಟಾನ್ಸ್ ಸೋತರೂ ಕೂಡ ಭರ್ಜರಿ ಹೋರಾಟ ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು.
ಎರಡೂ ತಂಡಗಳು ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲಿಯೇ ಮೇಲುಗೈ ಸಾಧಿಸಿದವು. ಟ್ಯಾಕಲ್‌ನಲ್ಲಿ ಯೋಧಾ 10 ಅಂಕ ಪಡೆದರೆ, ಟೈಟಾನ್ಸ್ 12 ಅಂಕ ಪಡೆದಿತ್ತು. ರೈಡಿಂಗ್‌ನಲ್ಲಿ ಯೋಧಾ 13, ಟೈಟಾನ್ಸ್ 10 ಅಂಕ ಪಡೆದಿತ್ತು. ಉಭಯ ತಂಡಗಳು ಒಂದು ಬಾರಿಯೂ ಆಲೌಟ್ ಆಗದೇ ಪಂದ್ಯ ಮುಗಿಸಿದವು. ಟೈಟಾನ್ಸ್ ಪರ ರಾಹುಲ್ ಚೌಧರಿ 6 ರೈಡಿಂಗ್ ಅಂಕ ತಂದರು. ಇತರೆ ಆಟಗಾರರ ವೈಫಲ್ಯ ಟೈಟಾನ್ಸ್ ಸೋಲಿಗೆ ಕಾರಣವಾಯಿತು.