ಯುಎಸ್ ಓಪನ್: ಆ್ಯಂಡರ್ಸನ್, ಬುಸ್ಟ ಸೆಮಿಗೆ
Team Udayavani, Sep 7, 2017, 7:45 AM IST
ನ್ಯೂಯಾರ್ಕ್: ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಮತ್ತು ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟ ಅವರು ಯುಎಸ್ ಓಪನ್ ಟೆನಿಸ್ ಕೂಟದ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದು ಗೆದ್ದವರು ರವಿವಾರದ ಫೈನಲಿಗೇರಲಿದ್ದಾರೆ.
ಶಕ್ತಿಶಾಲಿ ಸರ್ವ್‌ಗಳ ಸ್ಥಳೀಯ ಫೇವರಿಟ್ ಸ್ಯಾಮ್ ಕ್ವೆರ್ರಿ ಅವರನ್ನು ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಕೆಡಹಿದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಸೆಮಿಫೈನಲಿಗೇರಿದ ಸಾಧನೆ ಮಾಡಿದರು. ಇದೇ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ತಲುಪಿದ ಆ್ಯಂಡರ್ಸನ್ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಅಮೆರಿಕ ಆಟಗಾರನ ಉಪಸ್ಥಿತಿಗೆ ಬ್ರೇಕ್ ನೀಡಿದರು. ವನಿತೆಯರ ವಿಭಾಗದಲ್ಲಿ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಮತ್ತು ವೀನಸ್ ವಿಲಿಯಮ್ಸ್ ಸೆಮಿಫೈನಲಿಗೇರಿದ್ದಾರೆ.
17ನೇ ಶ್ರೇಯಾಂಕದ ಕ್ವೆರ್ರಿ ಸೋಲಿಗೆ ಸ್ವತಃ ನಾನೇ ಕಾರಣವೆಂದು ಅಂದುಕೊಂಡಿದ್ದಾರೆ. ಮೊದಲ ಸೆಟ್‌ನ ಟೈಬ್ರೇಕರ್‌ನಲ್ಲಿ ಸತತ ಐದಂಕ ಕಳೆದುಕೊಂಡ ಕಾರಣ ಕ್ವೆರ್ರಿ ಮೊದಲ ಸೆಟ್ ಕಳೆದುಕೊಂಡರು. ಆಬಳಿಕ ಕಠಿನ ಹೋರಾಟ ನೀಡಿ ದ್ವಿತೀಯ ಸೆಟ್ ಗೆದ್ದರೂ ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಮತ್ತೆ ಎಡವಿದ ಅವರು ಅಂತಿಮವಾಗಿ 7-6 (5), 6-7 (9), 6-3, 7-6 (7) ಸೆಟ್‌ಗಳಿಂದ ಪಂದ್ಯ ಕಳೆದುಕೊಂಡರು.
ಆರ್ಥರ್ ಆ್ಯಶೆ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಈ ಪಂದ್ಯ ಸಂಘರ್ಷಪೂರ್ಣವಾಗಿ ಸಾಗಿತ್ತು. 31ರ ಹರೆಯದ ಆ್ಯಂಡರ್ಸನ್ ಅಮೋಘವಾಗಿ ಆಡಿ ಮೇಲುಗೈ ಸಾಧಿಸಿದರು.
ಇದೊಂದು ಅಸಾಮಾನ್ಯ ಸಾಧನೆ. ವಿಶ್ವದ ಶ್ರೇಷ್ಠ ಅಂಗಣಗಳಲ್ಲಿ ಒಂದಾದ ಇಲ್ಲಿ ಈ ಹಂತದಲ್ಲಿ ಆಡುವುದೇ ಒಂದು ಅದ್ಭುತ ಅನುಭವ ಎಂದು ಆ್ಯಂಡರ್ಸನ್ ಹೇಳಿದರು. 1968ರಲ್ಲಿ ಟೆನಿಸ್ ವೃತ್ತಿಪರವಾಗಿ ಬದಲಾದ ಬಳಿಕ ಯುಎಸ್ ಓಪನ್‌ನ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಆ್ಯಂಡರ್ಸನ್ ಪಾತ್ರರಾಗಿದ್ದಾರೆ.
ದ್ವಿತೀಯ ಸೆಟ್ ಕಳೆದುಕೊಂಡಾಗ ನಿಜಕ್ಕೂ ಕಷ್ಟವಾಗಿತ್ತು. ಆದರೆ ಆಬಳಿಕ ಆಟಕ್ಕೆ ಹೆಚ್ಚಿನ ಗಮನ ನೀಡಿ ಪ್ರತಿಯೊಂದು ಅಂಕ ಗಳಿಸಲು ಪ್ರಯತ್ನಿಸಿದೆ. ಇದು ನನಗೆ ಬಹಳಷ್ಟು ಲಾಭವಾಯಿತು ಎಂದು ಆ್ಯಂಡರ್ಸನ್ ತಿಳಿಸಿದರು.
ಮೊದಲ ಸೆಟ್‌ನಲ್ಲಿ ಇಬ್ಬರೂ ತೀವ್ರ ಪೈಪೋಟಿ ನಡೆಸಿದ್ದರು. ಟೈಬ್ರೇಕರ್‌ನಲ್ಲಿ ಕ್ವೆರ್ರಿ 5-2 ಮುನ್ನಡೆ ಸಾಧಿಸಿದ್ದರು. ಈ ಹಂತದಲ್ಲಿ ಕ್ವೆರ್ರಿ ಅವರ ತಪ್ಪಿನಿಂದಾಗಿ ಆ್ಯಂಡರ್ಸನ್ ಸತತ ಐದಂಕ ಪಡೆದು ಮುನ್ನಡೆ ಸಾಧಿಸಿದರಲ್ಲದೇ ಸೆಟ್ ತನ್ನದಾಗಿಸಿಕೊಂಡರು. ದ್ವಿತೀಯ ಸೆಟ್‌ನ ಟೈಬ್ರೇಕರ್‌ನಲ್ಲೂ ಕ್ವೆರ್ರಿ 6-1 ಮುನ್ನಡೆ ಸಾಧಿಸಿ ಸುಲಭ ಗೆಲುವಿನ ಕನಸಿನಲ್ಲಿದ್ದರು. ಆದರೆ ಪ್ರತಿ ಹೋರಾಟ ನೀಡಿದ ಆ್ಯಂಡರ್ಸನ್ 8-7ರಿಂದ ಮುನ್ನಡೆ ಸಾಧಿಸಲು ಯಶಸ್ವಿಯಾದರೂ ಅಂತಿಮವಾಗಿ 7-9ರಿಂದ ಸೆಟ್ ಕಳೆದುಕೊಂಡರು. ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಆ್ಯಂಡರ್ಸನ್ ಪಂದ್ಯ ಗೆದ್ದು ಸಂಭ್ರಮಿಸಿದರು. ಇದರಿಂದಾಗಿ 2006ರಲ್ಲಿ ಆ್ಯಂಡಿ ರಾಡಿಕ್ ಬಳಿಕ ಸೆಮಿಫೈನಲಿಗೇರಿದ ಅಮೆರಿಕದ ಮೊದಲ ಆಟಗಾರ ಎಂದೆನಿಸಿಕೊಳ್ಳಲು ಕ್ವೆರ್ರಿಗೆ ಸಾಧ್ಯವಾಗಲಿಲ್ಲ.
ಬುಸ್ಟ ಅಂತಿಮ ನಾಲ್ಕರ ಸುತ್ತಿಗೆ
ಯುಎಸ್ ಓಪನ್‌ನಲ್ಲಿ ಇಷ್ಟರವರೆಗೆ ಯಾವುದೇ ಸೆಟ್ ಕಳೆದುಕೊಳ್ಳದ ಸ್ಪೇನ್‌ನ 12ನೇ ಶ್ರೇಯಾಂಕದ ಬುಸ್ಟ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮ್ಯಾನ್ ಅವರನ್ನು 6-4, 6-4, 6-2 ನೇರ ಸೆಟ್‌ಗಳಿಂದ ಕೆಡಹಿ ಸೆಮಿಫೈನಲ್ ತಲುಪಿದರು. ಬುಸ್ಟ ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ತಲುಪಿರುವುದು ಇದೇ ಮೊದಲ ಸಲವಾಗಿದೆ.
ಯಾವುದೇ ಗ್ರ್ಯಾನ್ ಸ್ಲಾಮ್‌ನಲ್ಲಿ ನಾಲ್ವರು ಅರ್ಹತಾ ಆಟಗಾರರನ್ನು ಎದುರಿಸಿದ ಮೊದಲ ಆಟಗಾರ ಆಗಿರುವ ಬುಸ್ಟ ಫೈನಲ್‌ನಲ್ಲಿ ತನ್ನ ದೇಶದವರೇ ಆದ ರಫೆಲ್ ನಡಾಲ್ ಅವರನ್ನು ಎದುರಿಸುವ ಕನಸು ಕಾಣುತ್ತಿದ್ದಾರೆ. ಆ್ಯಂಡರ್ಸನ್ ಮತ್ತು ಬುಸ್ಟ ಇದೇ ಮೊದಲ ಬಾರಿ ಸೆಮಿಫೈನಲ್‌ನಲ್ಲಿ ಆಡುವ ಕಾರಣ ಇವರಿಬ್ಬರಲ್ಲಿ ಒಬ್ಬರು ಗ್ರ್ಯಾನ್ ಸ್ಲಾಮ್ ಕೂಟದ ಫೈನಲಿಗೇರುವುದು ಖಚಿತವಾಗಿದೆ.
ಇನ್ನೊಂದು ಸೆಮಿಫೈನಲ್ ಪಂದ್ಯವು ಸ್ವಿಸ್‌ನ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ನಡೆಯುವ ಸಾಧ್ಯತೆಯಿದೆ. ಆದರೆ ಈ ಹೋರಾಟಕ್ಕಿಂತ ಮೊದಲು ಅವರಿಬ್ಬರು ಕ್ವಾರ್ಟರ್‌ಫೈನಲ್‌ನಲ್ಲಿ ಗೆಲುವು ಸಾಧಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.