US Open; ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ರನ್ನರ್ ಅಪ್
Team Udayavani, Sep 9, 2023, 11:33 PM IST
ನ್ಯೂಯಾರ್ಕ್: ಯುಎಸ್ ಓಪನ್ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ದಿಟ್ಟ ಹೋರಾಟ ನೀಡಿಯೂ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತರಾಗಬೇಕಾಯಿತು. ಕಳೆದೆರಡು ಬಾರಿಯ ಚಾಂಪಿಯನ್ಗಳಾದ ರಾಜೀವ್ ರಾಮ್ (ಅಮೆರಿಕ)-ಜೋ ಸ್ಯಾಲಿಸ್ಬರಿ (ಬ್ರಿಟನ್) ಅವರಿಗೆ ಇಂಡೋ-ಆಸ್ಟ್ರೇಲಿಯನ್ ಜೋಡಿ ಸಾಟಿಯಾಗಲಿಲ್ಲ. ಇದರೊಂದಿಗೆ ರಾಜೀವ್ ರಾಮ್-ಸ್ಯಾಲಿಸ್ಬರಿ ಯುಎಸ್ ಓಪನ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ ವಿಶ್ವದ ಮೊದಲ ಜೋಡಿ ಎನಿಸಿತು. ಇವರ ಗೆಲುವಿನ ಅಂತರ 2-6, 6-3, 6-4.
ಮೊದಲ ಸೆಟ್ ವಶಪಡಿಸಿಕೊಂಡು ಶುಭಾರಂಭ ಮಾಡಿದ ಇಂಡೋ-ಆಸ್ಟ್ರೇಲಿಯನ್ ಜೋಡಿ, ಅನಂತರ ಹಿನ್ನಡೆ ಕಾಣುತ್ತ ಹೋಯಿತು. ಹೀಗಾಗಿ 43 ವರ್ಷದ ಬೋಪಣ್ಣ ಅವರಿಗೆ ಪುರುಷರ ಡಬಲ್ಸ್ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗುವ ಕನಸು ಸದ್ಯ ಕನಸಾಗಿಯೇ ಉಳಿದಿದೆ. ಇವರು ಗೆದ್ದ ಏಕೈಕ ಗ್ರ್ಯಾನ್ಸ್ಲಾಮ್ ಅಂದರೆ 2017ರ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್. ಆಗ ಇವರ ಜತೆಗಾರರಾಗಿದ್ದವರು ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್ಸ್ಕಿ.
ಗ್ರ್ಯಾನ್ಸ್ಲಾಮ್ನಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಭಾರತೀಯರೆಂದರೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಮಾತ್ರ. ರೋಹನ್ ಬೋಪಣ್ಣ ಯುಎಸ್ ಓಪನ್ ಪುರುಷರ ಡಬಲ್ಸ್ನಲ್ಲಿ ಫೈನಲ್ ತಲುಪಿದ 2ನೇ ನಿದರ್ಶನ ಇದಾಗಿದೆ. ಮೊದಲ ಸಲ 2010ರಲ್ಲಿ ಪಾಕಿಸ್ಥಾನದ ಐಸಮ್ ಉಲ್ ಹಕ್ ಕುರೇಶಿ ಜತೆಗೂಡಿ ಪ್ರಶಸ್ತಿ ಸುತ್ತಿಗೆ ಬಂದಿದ್ದರು. ಅಂದು ಲೆಜೆಂಡ್ರಿ ಬ್ರಿಯಾನ್ ಸೋದರರಿಗೆ ಶರಣಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.