US Open ಟೆನಿಸ್: ಬೋಪಣ್ಣ-ಎಬ್ಡೆನ್ ಸೆಮಿಫೈನಲಿಗೆ
Team Udayavani, Sep 6, 2023, 11:37 PM IST
ನ್ಯೂಯಾರ್ಕ್: ಭಾರತದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಆರಂಭಿಕ ಸೆಟ್‌ನಲ್ಲಿ ಏಳು ಸೆಟ್ ಅಂಕ ರಕ್ಷಿಸಿಕೊಂಡು ಮೇಲುಗೈ ಸಾಧಿಸಿ ಯುಎಸ್ ಓಪನ್ ಟೆನಿಸ್ ಕೂಟದ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು.
ಆರನೇ ಶ್ರೇಯಾಂಕದ ಬೋಪಣ್ಣ-ಎಬ್ಡೆನ್ ಅವರು ಅಮೆರಿಕದ ನಥನಿಯೆಲ್ ಲಾಮನ್ಸ್ ಮತ್ತು ಜಾಕ್ಸನ್ ವೀಥ್ರೋ ಅವರನ್ನು 7-6 (10) 6-1 ಸೆಟ್‌ಗಳಿಂದ ಸೋಲಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಅವರಿಬ್ಬರು ಈ ವರ್ಷ ಗ್ರ್ಯಾನ್ ಸ್ಲಾಮ್ ಕೂಟದಲ್ಲಿ ಸೆಮಿಫೈನಲ್ ತಲುಪಿರುವುದು ಇದು ಎರಡನೇ ಸಲವಾಗಿದೆ. ಅವರಿಬ್ಬರು ಈ ಮೊದಲು ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಅಲ್ಲಿ ಅವರು ವೆಸ್ಲೆ ಕೂಲ್‌ಹೊಫ್ ಮತ್ತು ನೀಲ್ ಕುಪಸ್ಕಿ ಅವರಿರೆ ದುರು ಸೋಲನ್ನು ಕಂಡಿದ್ದರು.
43ರ ಹರೆಯದ ಬೋಪಣ್ಣ ಅವರಿಗೆ ತನ್ನ ಟೆನಿಸ್ ಬಾಳ್ವೆಯಲ್ಲಿ ಎರಡನೇ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಫೈನಲಿಗೇರುವ ಅವಕಾಶವೊಂದು ಲಭಿಸಿದೆ. ಆಶ್ಚರ್ಯವೆಂಬಂತೆ ಅವರು ಈ ಹಿಂದೆ ಚೊಚ್ಚಲ ಬಾರಿ ಗ್ರಾನ್ ಸ್ಲಾಮ್ ಕೂಟದ ಫೈನಲಿ ಗೇರಿದ್ದು ಯುಎಸ್ ಓಪನ್ ಕೂಟದ ಮೂಲಕವೇ. 2010ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಬೋಪಣ್ಣ ಅವರು ಈಗಾಗಲೇ ಸೋಲನ್ನು ಕಂಡಿದ್ದಾರೆ.
ಜೊಕೋವಿಕ್ ಮುನ್ನಡೆ
ಸರ್ಬಿಯದ ನೊವಾಕ್ ಜೊಕೋವಿಕ್ ಅವರು ಭಾರೀ ಸೆಖೆ ಮತ್ತು ಟಯ್ಲರ್ ಫ್ರಿಟ್ಜ್ ಅವರ ಸವಾಲನ್ನು ದಿಟ್ಟವಾಗಿ ಎದುರಿಸಿ ಯುಎಸ್ ಓಪನ್ ಟೆನಿಸ್ ಕೂಟದಲ್ಲಿ ಸೆಮಿಫೈನಲ್ ಹಂತಕ್ಕೇರಿದ ಸಾಧನೆ ಮಾಡಿದರಲ್ಲದೇ ಇಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಇದೇ ವೇಳೆ ಅಮೆರಿಕದ ಕೊಕೊ ಗಾಫ್ 19ರ ಹರೆಯದಲ್ಲಿ ಚೊಚ್ಚಲ ಬಾರಿ ಸೆಮಿಫೈನಲಿಗೇರಿ ಸಂಭ್ರಮಿಸಿದ್ದಾರೆ.
ಶಕ್ತಿಶಾಲಿ ಸರ್ವ್‌ಗಳ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರನ್ನು 6-0, 6-2 ನೇರ ಸೆಟ್‌ಗಳಿಂದ ಉರುಳಿಸಿದ ಗಾಫ್ ಅವರು 2001ರಲ್ಲಿ ಸೆರೆನಾ ವಿಲಿಯಮ್ಸ್ ಬಳಿಕ ಇಲ್ಲಿ ಸೆಮಿಫೈನಲಿಗೇರಿದ ಅಮೆರಿಕದ ಮೊದಲ ಹದಿಹರೆಯದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು. ವಾಷಿಂಗ್ಟನ್ ಮತ್ತು ಸಿನ್ಸಿನಾಟಿಯಲ್ಲಿ ಪ್ರಶಸ್ತಿ ಗೆದ್ದಿರುವ ಗಾಫ್ 67 ನಿಮಿಷಗಳ ಹೋರಾಟದಲ್ಲಿ ಕೇವಲ ಒಮ್ಮೆ ಮಾತ್ರ ಸರ್ವ್ ಕಳೆದುಕೊಂಡಿದ್ದರು.
ಈ ಹಿಂದಿನ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಇಗಾ ಸ್ವಿಯಾಟೆಕ್ ಅವರನ್ನು ಉರುಳಿಸಿದ್ದ ಒಸ್ಟಾಪೆಂಕೊ ಅವರು ಗಾಫ್ ಅವರ ಅಮೋಘ ಆಟಕ್ಕೆ ಸಂಪೂರ್ಣ ಶರಣಾದರು. ಗಾಫ್ ಸೆಮಿಫೈನಲ್ ಹೋರಾಟದಲ್ಲಿ 10ನೇ ಶ್ರೇಯಾಂಕದ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಮುಚೋವಾ ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ರೊಮಾನಿಯಾದ ಸೊರಾನಾ ಸಿರ್ಟಿಯಾ ಅವರನ್ನು 6-0, 6-3 ನೇರ ಸೆಟ್‌ಗಳಿಂದ ಕೆಡಹಿ ಮೊದಲ ಬಾರಿ ಸೆಮಿಫೈನಲಿಗೇರಿದರು. 32 ವಿಜಯಿ ಹೊಡೆತಗಳನ್ನು ಬಾರಿಸಿದ್ದ ಮುಜೋವಾ ಯಾವುದೇ ಹಂತದಲ್ಲೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಿಲಿಲ್ಲ.
ಪ್ರಚಂಡ ಫಾರ್ಮ್ ನಲ್ಲಿರುವ ಜೊಕೋವಿಕ್ ಟಯ್ಲರ್ ಫ್ರಿಟ್ಜ್ ಅವರನ್ನು 6-1, 6-4, 6-4 ನೇರ ಸೆಟ್‌ಗಳಿಂದ ಕೆಡಹಿ ಸೆಮಿಫೈನಲ್ ತಲುಪಿದ್ದಾರೆ. ಅವರೀಗ ಮಾರ್ಗರೆಟ್ ಕೋರ್ಟ್ ದಾಖಲೆ 24 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಫ್ರಿಟ್ಜ್ ಅವರು ಜೊಕೋವಿಕ್ ವಿರುದ್ಧ ಈ ಹಿಂದೆ ಆಡಿದ ಏಳು ಪಂದ್ಯಗಳಲ್ಲಿಯೂ ಸೋತಿದ್ದರು. ಅವರು ಇಷ್ಟರವರೆಗೆ ಅಗ್ರ ಹತ್ತರೊಳಗಿನ ಎದುರಾಳಿ ವಿರುದ್ಧ ಗೆದ್ದ ನಿದರ್ಶನವಿಲ್ಲ. ಆದರೂ ಅಮೋಘ ಆಟದ ಪ್ರದರ್ಶನ ನೀಡಿ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.
ಸೆಮಿಫೈನಲ್‌ನಲ್ಲಿ ಜೊಕೋವಿಕ್ ಅವರ ಎದುರಾಳಿ ಶಕ್ತಿಶಾಲಿ ಹೊಡೆತಗಳ ಅಮೆರಿಕದ ಬೆನ್ ಶೆಲ್ಟನ್ ಅವರು ತನ್ನದೇ ದೇಶದ ಫ್ರಾನ್ಸೆಸ್ ತಿಯಾಫೋಯಿ ಅವರನ್ನು 6-2, 3-6, 7-6 (7), 6-2 ಸೆಟ್‌ಗಳಿಂದ ಸೊಲಿಸಿ ಸೆಮಿಫೈನಲ್ ತಲುಪಿದರು. ಈ ಗೆಲುವಿನಿಂದ 20ರ ಹರೆಯದ ಶೆಲ್ಟನ್ 1992ರಲ್ಲಿ ಮೈಕಲ್ ಚಾಂಗ್ ಬಳಿಕ ಇಲ್ಲಿ ಸೆಮಿಫೈನಲ್ ತಲುಪಿದ ಅಮೆರಿಕದ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.