ಪ್ರೇಮಿಗಳ ದಿನದಂದೇ ಪ್ರೇಮಸುದ್ದಿ ನಿರಾಕರಿಸಿದ ಹಾರ್ದಿಕ್ ಪಾಂಡ್ಯ
Team Udayavani, Feb 15, 2017, 3:35 AM IST
ಹೊಸದಿಲ್ಲಿ: ಇತ್ತೀಚಿಗೆ ಭಾರತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಲವ್ವಿಡವ್ವಿನಲ್ಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಇದಕ್ಕೆ ಕಾರಣ ಕೋಲ್ಕತಾ ಮೂಲದ ರೂಪದರ್ಶಿ ಲಿಶಾ ಶರ್ಮ ಜತೆಗೆ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಫೋಟೋ. ಸ್ವತಃ ಲಿಶಾ ಇನ್‌ಸ್ಟಾಗ್ರಾಮ್ ಮೂಲಕ ಹಾರ್ದಿಕ್ ಜತೆಗಿರುವ ಫೋಟೋವೊಂದನ್ನು ಪ್ರಕಟಿಸಿ ಭಾರೀ ಬಿರುಗಾಳಿ ಎಬ್ಬಿಸಿದ್ದಳು. ಈಗ ಪ್ರೇಮಿಗಳ ದಿನದಂದೇ ಹಾರ್ದಿಕ್ ಪಾಂಡ್ಯ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
“ನಾನು ಇನ್ನೂ ಬ್ಯಾಚುಲರ್. ಕ್ರಿಕೆಟ್ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ. ಬಹಳ ವರ್ಷಗಳಿಂದ ಕ್ರಿಕೆಟ್ ಬಿಟ್ಟು ಬೇರ್ಯಾವ ವಿಷಯದ ಬಗ್ಗೆಯೂ ಚಿಂತಿಸಿಲ್ಲ. ಕಠಿನ ಪರಿಶ್ರಮ ವಹಿಸುತ್ತಿದ್ದೇನೆ. ಹೀಗಿದ್ದರೂ ನನ್ನ ಬಗ್ಗೆ ಪದೇ ಪದೇ ಗಾಳಿ ಸುದ್ದಿ ಹರಡುತ್ತಿದೆ. ನನಗೆ ಸಂಬಂಧಪಟ್ಟ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದೆ. ಒಂದಂತೂ ನಿಜ.ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಇಂಥ ಪ್ರಕರಣಕ್ಕೆ ಬಣ್ಣ ಹಚ್ಚುವ ಪ್ರಯತ್ನ ಮಾಡಬೇಡಿ. ಗಾಳಿ ಸುದ್ದಿಯನ್ನು ಹರಡಬೇಡಿ…’ ಎಂದು ಹಾರ್ದಿಕ್ ಪಾಂಡ್ಯ ಮನವಿ ಮಾಡಿದ್ದಾರೆ.