ದಹಿಯಾ ಬಂಗಾರ ವಿಜಯ; ಭಜರಂಗ್, ಸತ್ಯವ್ರತ್, ಗೌರವ್‌ಗೆ ಬೆಳ್ಳಿ
ಏಶ್ಯನ್ ಕುಸ್ತಿಯಲ್ಲಿ ಮೊದಲ ಚಿನ್ನ ಗೆದ್ದ ವಿಜಯ್ ದಹಿಯಾ ; ಫೈನಲ್‌ನಲ್ಲಿ ಎಡವಿದ ಮೂವರು
Team Udayavani, Feb 22, 2020, 11:11 PM IST
ಹೊಸದಿಲ್ಲಿ: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಶನಿವಾರದ ಸ್ಪರ್ಧೆ ಯಲ್ಲಿ ಭಾರತದ ಪುರುಷರು ಗಮನಾರ್ಹ ಪ್ರದರ್ಶನ ನೀಡಿದರು. ವಿವಿಧ ವಿಭಾಗಗಳ 4 ಫೈನಲ್ ಸ್ಪರ್ಧೆಗಳಲ್ಲಿ ಭಾರತ ಒಂದು ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆದ್ದಿತು.
ಬಂಗಾರ ಪದಕಕ್ಕೆ ಕೊರಳೊಡ್ಡಿದ ಹಿರಿಮೆ ವಿಜಯ್ ಕುಮಾರ್ ದಹಿಯಾ ಅವರ ದಾಯಿತು. “ಕೆ.ಡಿ. ಜಾಧವ್ ರೆಸ್ಲಿಂಗ್ ಹಾಲ್’ನಲ್ಲಿ ನಡೆದ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಹಿಯಾ ತಜಿಕಿಸ್ಥಾನದ ಹಿಕ್ಮತುಲ್ಲೊ ವೊಹಿದೋವ್ ವಿರುದ್ಧ 10-0 ಅಂತರದ ಭರ್ಜರಿ ಗೆಲುವು ಸಾಧಿಸಿದರು.
ಇದು ಏಶ್ಯನ್ ಕೂಟದಲ್ಲಿ ದಹಿಯಾ ಗೆದ್ದ ಮೊದಲ ಬಂಗಾರ. ಪ್ರಶಸ್ತಿಯ ಹಾದಿಯಲ್ಲಿ ಅವರು ಜಪಾನಿನ ವಿಶ್ವ ಚಾಂಪಿಯನ್ ಯುಕಿ ಟಕಹಾಶಿ ಹಾಗೂ 2 ಬಾರಿಯ ವಿಶ್ವ ಚಾಂಪಿಯನ್ ನುರಿಸ್ಲಾಮ್ ಸನಯೇವ್ ಅವರನ್ನು ಮಣಿಸಿ ಮುನ್ನಡೆದಿದ್ದರು.
ಭಜರಂಗ್ ಬೆಳ್ಳಿಗೆ ತೃಪ್ತಿ
65 ಕೆ.ಜಿ. ವಿಭಾಗದಲ್ಲಿ ಭಜರಂಗ್ ಪುನಿಯ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು. ಅವರು 2-10 ಅಂತರದಿಂದ ಜಪಾನಿನ ಟಕುಟೊ ಒಟುಗುರೊ ವಿರುದ್ಧ ಸೋಲನುಭವಿಸಿದರು. ಇದು 2018ರ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನ ರೀ-ಮ್ಯಾಚ್ ಆಗಿತ್ತಾದರೂ ಭಜರಂಗ್ ಸೇಡು ತೀರಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಭಜರಂಗ್ ಅವರ ಫೈನಲ್ ಹಾದಿಯ ಪಯಣ ಅಮೋಘವಾಗಿತ್ತು. ತಜಿಕಿಸ್ಥಾನದ ಜಮ್ಶೆಡ್ ಶರಿಫೋವ್ ಅವರನ್ನು 11-0 ಅಂತರದಿಂದ, ಉಜ್ಬೆಕಿಸ್ಥಾನದ ಅಬ್ಬೊàಸ್ ರಕೊ¾ನೋವ್ ಅವರನ್ನು 12-2ರಿಂದ ಹಾಗೂ ಇರಾನಿನ ಜೂನಿಯರ್ ವಿಶ್ವ ಚಾಂಪಿಯನ್ ಅಮೀರ್‌ಹೊಸೇನ್ ಮಗ್‌ಶೌದಿ ಅವರನ್ನು 10-0 ಭರ್ಜರಿ ಅಂತರದಿಂದ ಚಿತ್ ಮಾಡಿದ್ದರು.
ಸತ್ಯವೃತ್, ಗೌರವ್‌ಗೆ ಬೆಳ್ಳಿ
ಮೊದಲು ನಡೆದ 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸತ್ಯವೃತ್ ಕಾದಿಯಾನ್ ಇರಾನ್‌ನ ಮೊಜ¤ಬ ಮೊಹಮ್ಮದ್ ಶಫಿ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. 0-10 ಭಾರೀ ಅಂತರದಿಂದ ಸೋಲು ಕಾಣಬೇಕಾಯಿತು. ಪಂದ್ಯದುದ್ದಕ್ಕೂ ಪಟ್ಟು ಸಡಿಲಿಸದ ಶಫಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.
ಅನಂತರ ನಡೆದ 79 ಕೆ.ಜಿ. ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಗೌರವ್ ಬಲಿಯಾನ್ ಕಿರ್ಗಿಸ್ಥಾನದ ಅರ್ಸಾಲನ್ ಬುಡಝಪೋವ್ ವಿರುದ್ಧ ಅಮೋಘ ಹೋರಾಟ ತೋರ್ಪಡಿಸಿದರೂ ಚಿನ್ನದಿಂದ ದೂರವೇ ಉಳಿದರು. ಈ ಪಂದ್ಯದಲ್ಲಿ ಗೌರವ್ 5-7 ಅಂತರದ ಸೋಲು ಕಾಣಬೇಕಾಯಿತು. ಗೌರವ್ ಇದೇ ಮೊದಲ ಸಲ ಏಶ್ಯನ್ ಕುಸ್ತಿಯಲ್ಲಿ ಅಖಾಡಕ್ಕಿಳಿದಿದ್ದರು.
70 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ ನವೀನ್ ಉಜ್ಬೆಕಿಸ್ಥಾನದ ಮಿರ್ಜಾನ್ ಅಶಿರೋವ್ ವಿರುದ್ಧ 1-12 ಅಂತರದ ಸೋಲುಂಡರು.