ವಿರಾಟ್ ಕೊಹ್ಲಿಗೆ ಪರ್ಯಾಯ ಟೆಸ್ಟ್ ಕ್ಯಾಪ್ಟನ್ ಯಾರು?
ರೋಹಿತ್ ಶರ್ಮ, ಕೆ.ಎಲ್. ರಾಹುಲ್ ಜತೆ ಆಯ್ಕೆ ಸಮಿತಿ ಮಾತುಕತೆ ; ಬುಮ್ರಾಗೂ ಆಸಕ್ತಿ
Team Udayavani, Jan 18, 2022, 6:10 AM IST
ಕೆಲವೇ ವಾರಗಳ ಅಂತರದಲ್ಲಿ ವಿರಾಟ್ ಕೊಹ್ಲಿ ಒಂದೊಂದೇ ಮಾದರಿಯ ನಾಯಕತ್ವದಿಂದ ಬೇರ್ಪಡಲಾರಂಭಿಸಿದ್ದು ಭಾರತೀಯ ಕ್ರಿಕೆಟಿನ ಅಚ್ಚರಿ ಹಾಗೂ ಆಘಾತಕಾರಿ ಸಂಗತಿ. ಮೊದಲು ಐಪಿಎಲ್, ಬಳಿಕ ಟಿ20, ಅನಂತರ ಏಕದಿನ, ಇದೀಗ ಟೆಸ್ಟ್ ಕ್ರಿಕೆಟ್…
ಎಲ್ಲ ಮಾದರಿಗಳ ಕ್ರಿಕೆಟ್‌ನಲ್ಲೂ ವಿರಾಟ್ ಕೊಹ್ಲಿ ಈಗ ಮಾಜಿ ನಾಯಕ. ಐಪಿಎಲ್ ಹಾಗೂ ಟಿ20ಯಲ್ಲಿ ಅವರಾಗಿಯೇ ನಾಯಕತ್ವ ಬಿಡುವ ನಿರ್ಧಾರ ತೆಗೆದುಕೊಂಡಿದ್ದರು. ಏಕದಿನ ವಿಷಯಕ್ಕೆ ಬರುವಾಗ ಅಲ್ಲಿ ನಾಟಕೀಯ ಬೆಳವಣಿಗೆ ಸಂಭವಿಸಿತು. ರಾಜಕೀಯದ ದಟ್ಟ ವಾಸನೆ ಈಗಲೂ ಅಡರುತ್ತಿದೆ.
ಟೆಸ್ಟ್ ನಾಯಕತ್ವಕ್ಕೆ ಅವರದು ದಿಢೀರ್ ರಾಜೀನಾಮೆ. ಇಲ್ಲಿಯೂ ಒಳಗಿಂದೊಳಗೆ ದೊಡ್ಡ ಮಟ್ಟದ “ಚಟುವಟಿಕೆ’ ನಡೆದಿರುವುದು ಖಚಿತ. ಮುಂದೊಂದು ದಿನ ಕೊಹ್ಲಿಯೇ ಇದನ್ನು ಬಹಿರಂಗಪಡಿಸುವುದರಲ್ಲಿ ಅನುಮಾನ ವಿಲ್ಲ. ಅಲ್ಲಿಯ ತನಕ ಕುತೂಹಲವನ್ನು ಹಿಡಿದಿಟ್ಟುಕೊಳ್ಳಬೇಕು. ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಹೊರತುಪಡಿಸಿದರೆ ವಿರಾಟ್ ಕೊಹ್ಲಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನೀಗ ಮುಂದಿರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ. ಈ ಕುರಿತು ಬಿಸಿಸಿಐ ಮತ್ತು ಆಯ್ಕೆ ಸಮಿತಿ ಈಗಾಗಲೇ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದೆ. ಈ ಜವಾಬ್ದಾರಿ ವಹಿಸಿದರೆ ತಾನೂ ನಿಭಾಯಿಸಬಲ್ಲೆ ಎಂಬುದಾಗಿ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಹೇಳಿದ್ದಾರೆ.
ಉಪನಾಯಕನೇ ನಾಯಕ
ಸಂಪ್ರದಾಯದಂತೆ ಉಪನಾಯಕನಿಗೇ ಈ ಜವಾಬ್ದಾರಿ ವಹಿಸಬೇಕಾಗುತ್ತದೆ. ಆಗ ರೋಹಿತ್ ಶರ್ಮ ತಂಡದ ನಾಯಕರಾಗಲಿದ್ದಾರೆ. ಆದರೆ ಆಗಾಗ ಗಾಯಾಳಾಗುವ ರೋಹಿತ್ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿ ಇನ್ನೂ ಗುರುತಿಸಿಕೊಂಡಿಲ್ಲ. ಉಸ್ತುವಾರಿ ನಾಯಕನಾದ ಅನುಭವವೂ ಇಲ್ಲ. ಅಜಿಂಕ್ಯ ರಹಾನೆಯ ಉಪನಾಯಕತ್ವವನ್ನು ದಕ್ಷಿಣ ಆಫ್ರಿಕಾ ಸರಣಿ ವೇಳೆ ರೋಹಿತ್‌ಗೆ ವಹಿಸಲಾಗಿತ್ತು. ಆದರೆ ಅವರು ಸರಣಿಯಿಂದಲೇ ಹೊರಗುಳಿದರು.
ಇಲ್ಲಿ ಒಂದು ಸಂಗತಿಯಿದೆ. ರೋಹಿತ್ ಶರ್ಮ ಅವರಿಗೆ ಈಗಾಗಲೇ 34 ವರ್ಷ. ನಾಯಕತ್ವದ ಮಟ್ಟಿಗೆ ಇದು ಬಹುತೇಕ ಇಳಿ ವಯಸ್ಸು!
ರಹಾನೆ ಲಕ್ಕಿ, ಆದರೆ…
ಇವರೆಲ್ಲರಿಗಿಂತ ಸಮರ್ಥ ಆಯ್ಕೆಯೆಂದರೆ ಅಜಿಂಕ್ಯ ರಹಾನೆ. ಅವರ ನಾಯಕತ್ವದಲ್ಲಿ ಭಾರತ ಸೋತದ್ದಿಲ್ಲ. ಆಸ್ಟ್ರೇಲಿಯ ಸರಣಿಯಲ್ಲಿ ರಹಾನೆ ಸಾರಥ್ಯದಲ್ಲೇ ಭಾರತ ಇತಿಹಾಸ ನಿರ್ಮಿಸಿತ್ತು. ಆದರೆ, ಕೈಕೊಟ್ಟ ಫಾರ್ಮ್ನಿಂದಾಗಿ ಅವರು ತಂಡದಲ್ಲಿ ಮುಂದುವರಿಯುವುದೇ ಅನುಮಾನ ಎಂಬ ಸ್ಥಿತಿ ಇದೆ.
ಸುನೀಲ್ ಗಾವಸ್ಕರ್ ಆಯ್ಕೆ ರಿಷಭ್ ಪಂತ್. ಆದರೆ ಇದಕ್ಕಾಗಿ ಡ್ಯಾಶಿಂಗ್ ಬ್ಯಾಟರ್ ಹಾಗೂ ಕೀಪರ್ ಕಾಯಬೇಕಿದೆ.
ಅನುಭವದ ಲೆಕ್ಕಾಚಾರದಲ್ಲಿ ಆರ್. ಅಶ್ವಿನ್ ಅವರನ್ನೂ ಪರಿಗಣಿಸಬಹುದಿತ್ತು. ಆದರೆ ಅಶ್ವಿನ್ ಟೆಸ್ಟ್ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. ಅಲ್ಲದೇ ಕೊಹ್ಲಿ ನಾಯಕತ್ವದ ವೇಳೆ ಅಶ್ವಿನ್‌ಗೆ ಯಾವ ಜವಾಬ್ದಾರಿಯನ್ನೂ ವಹಿಸಿರಲಿಲ್ಲ. ಈ ಸೀನಿಯರ್ ಕ್ರಿಕೆಟಿಗನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು.
ರಾಹುಲ್, ಬುಮ್ರಾ, ಅಯ್ಯರ್…
ರೋಹಿತ್ ಬಿಟ್ಟರೆ ರೇಸ್‌ನಲ್ಲಿರುವವರು ಕೆ.ಎಲ್. ರಾಹುಲ್. ಇವರು ಕೂಡ ಟೆಸ್ಟ್ ತಂಡಕ್ಕೆ ಇನ್ನೂ ಸಿಮೆಂಟ್ ಹಾಕಿಲ್ಲ. ಅದೃಷ್ಟ ಕೂಡ ಹೊಂದಿಲ್ಲ. ಐಪಿಎಲ್ ಮತ್ತು ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯ ಇದಕ್ಕೆ ಸಾಕ್ಷಿ. ಅಕಾಸ್ಮತ್ ರೋಹಿತ್‌ಗೆ ಕ್ಯಾಪ್ಟನ್ಸಿ ಲಭಿಸದೇ ಹೋದರೆ ರಾಹುಲ್ ಆಯ್ಕೆ ಪಕ್ಕಾ ಎಂಬುದರಲ್ಲಿ ಎರಡು ಮಾತಿಲ್ಲ.
ಮುಂದಿನ ಆಯ್ಕೆ ಜಸ್‌ಪ್ರೀತ್ ಬುಮ್ರಾ. ಜೊಹಾನ್ಸ್‌ಬರ್ಗ್‌ನಲ್ಲಿ ಅವರಿಗೆ ಉಪನಾಯಕತ್ವ ಲಭಿಸಿತ್ತು. ನಾಯಕನನ್ನಾಗಿ ಮಾಡಿದರೆ ಅದು ನನಗೆ ಲಭಿಸುವ ಅತೀ ದೊಡ್ಡ ಗೌರವ ಎಂಬುದಾಗಿ ಸೋಮವಾರವಷ್ಟೇ ಪಿಟಿಐ ಸಂದರ್ಶನದಲ್ಲಿ ಬುಮ್ರಾ ಹೇಳಿಕೊಂಡಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಅನಾರೋಗ್ಯ ದಿಂದಾಗಿ ಹೊರಗುಳಿದುದರಿಂದ ಬುಮ್ರಾಗೆ ಈ ಜವಾಬ್ದಾರಿ ವಹಿಸಲಾಗಿತ್ತು ಎಂಬುದಿಲ್ಲಿ ಉಲ್ಲೇಖನೀಯ. ಅಯ್ಯರ್ ನಾಯಕತ್ವದ ಅಭ್ಯರ್ಥಿ ಎನಿಸಿಕೊಳ್ಳಬೇಕಿದ್ದರೆ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯನಾಗಿ ಗಟ್ಟಿಯಾಗಬೇಕು.
ಕೊಹ್ಲಿ ನಾಯಕತ್ವದ ಮೈಲುಗಲ್ಲು
-ವಿರಾಟ್ ಕೊಹ್ಲಿ ನಾಯಕನಾಗಿ 40 ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವುದು ಭಾರತೀಯ ದಾಖಲೆ. ಒಟ್ಟಾರೆ ಸಾಧಕರ ಯಾದಿಯಲ್ಲಿ ಅವರಿಗೆ 4ನೇ ಸ್ಥಾನ. ಗ್ರೇಮ್ ಸ್ಮಿತ್ 53, ರಿಕಿ ಪಾಂಟಿಂಗ್ 48 ಮತ್ತು ಸ್ಟೀವ್ ವೋ 41 ಪಂದ್ಯಗಳನ್ನು ಜಯಿಸಿದ್ದಾರೆ.
-ನಾಯಕನಾಗಿ ಕೊಹ್ಲಿ 20 ಶತಕ ಬಾರಿಸಿ ಈ ಯಾದಿಯ ದ್ವಿತೀಯ ಸ್ಥಾನಿಯಾಗಿದ್ದಾರೆ. ಗ್ರೇಮ್ ಸ್ಮಿತ್‌ಗೆ ಮೊದಲ ಸ್ಥಾನ (25).
-25 ಟೆಸ್ಟ್ ಸರಣಿಗಳಲ್ಲಿ ನಾಯಕತ್ವ. 18 ಗೆಲುವು, 6 ಸೋಲು, ಒಂದು ವಾಶೌಟ್.
-ವಿದೇಶಗಳಲ್ಲಿ ಅತ್ಯಧಿಕ 16 ಟೆಸ್ಟ್ ಗೆದ್ದ ಭಾರತೀಯ ದಾಖಲೆ.
-ಭಾರತ ಗೆದ್ದ 28 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಂಚುರಿ ಬಾರಿಸಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್‌ಗೆ ಅಗ್ರಸ್ಥಾನ (34 ಶತಕ).
-ಟೆಸ್ಟ್ ನಾಯಕನಾಗಿ ಅತೀ ಹೆಚ್ಚು 7 ದ್ವಿಶತಕ ಬಾರಿಸಿದ ಅಮೋಘ ಸಾಧನೆ.
-ಕನಿಷ್ಠ 50 ಟೆಸ್ಟ್ ನಾಯಕತ್ವ ವಹಿಸಿದ ನಾಯಕರಲ್ಲಿ ಅತ್ಯುತ್ತಮ ಗೆಲುವಿನ ಪ್ರತಿಶತ ಸಾಧನೆಗೈದವರಲ್ಲಿ ಕೊಹ್ಲಿಗೆ 3ನೇ ಸ್ಥಾನ (58.52). ಸ್ಟೀವ್ ವೋ (71.92) ಮತ್ತು ರಿಕಿ ಪಾಂಟಿಂಗ್ (62.33) ಮೊದಲೆರಡು ಸ್ಥಾನದಲ್ಲಿದ್ದಾರೆ.
-ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಗೆದ್ದ ಏಶ್ಯದ ಮೊದಲ ನಾಯಕ .
-ತವರಲ್ಲಿ 24 ಗೆಲುವು. 3ನೇ ಶ್ರೇಷ್ಠ ಸಾಧಕ. ಸ್ಮಿತ್ (30) ಮತ್ತು ಪಾಂಟಿಂಗ್ (29) ಮೊದಲೆರಡು ಸ್ಥಾನದಲ್ಲಿದ್ದಾರೆ.
-ಟೆಸ್ಟ್ ನಾಯಕನಾಗಿ 4ನೇ ಅತ್ಯಧಿಕ ರನ್ ಸಾಧನೆ (5,864).
-ಕೊಹ್ಲಿ ಎಲ್ಲ ಮಾದರಿಗಳಲ್ಲಿ ಕನಿಷ್ಠ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ 2ನೇ ಕಪ್ತಾನ. ಧೋನಿ ಮೊದಲಿಗ.
-ಕ್ಯಾಲೆಂಡರ್ ವರ್ಷವೊಂದರಲ್ಲಿ 2 ಸಲ ವಿದೇಶಗಳಲ್ಲಿ 4 ಟೆಸ್ಟ್ ಗೆದ್ದ ಭಾರತದ ಏಕೈಕ ನಾಯಕ.
-ಸೆಂಚುರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಶ್ಯದ ಮೊದಲ ಕ್ಯಾಪ್ಟನ್.
-2 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದ ಏಶ್ಯದ ಮೊದಲ ನಾಯಕ.
-ದಕ್ಷಿಣ ಆಫ್ರಿಕಾದಲ್ಲಿ 2 ಟೆಸ್ಟ್ ಪಂದ್ಯಗಳಲ್ಲಿ ಗೆಲುವು ತಂದಿತ್ತ ಭಾರತದ ಮೊದಲ ಸಾರಥಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.