ಧೋನಿ ಗೈರು; ಅಭಿಮಾನಿಗಳಿಗೆ ಬೇಜಾರು
Team Udayavani, Mar 15, 2017, 10:59 AM IST
ರಾಂಚಿ: ರಾಂಚಿ! ವಿಶ್ವ ಭೂಪಟದಲ್ಲಿ ಈ ಹೆಸರನ್ನು ಮಿಂಚುವಂತೆ ಮಾಡಿದ್ದು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ. ಜಾರ್ಖಂಡ್ ರಾಜ್ಯದ ಈ ರಾಜಧಾನಿಯೀಗ ಭಾರತದ ನೂತನ ಟೆಸ್ಟ್ ಕೇಂದ್ರ. ಆದರೆ ಇದರಲ್ಲಿ ರಾಂಚಿಯ ಹೆಮ್ಮೆಯ ಪುತ್ರ ಧೋನಿ ಆಡದಿರುವುದು ಅಭಿಮಾನಿಗಳ ಪಾಲಿಗೆ ಅತ್ಯಂತ ಬೇಸರದ ಸಂಗತಿ. ಅಷ್ಟೇ ಅಲ್ಲ, ಈ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನೂ ಅವರು ತಪ್ಪಿಸಿಕೊಳ್ಳಲಿದ್ದಾರೆ. ಇದಕ್ಕೆ ಕಾರಣ, ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್. ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ಸದ್ಯ ಹೊಸದಿಲ್ಲಿಯಲ್ಲಿದ್ದಾರೆ.
ಆದರೆ ಧೋನಿ ಕುಟುಂಬದ ಸದಸ್ಯರು ಈ ಟೆಸ್ಟ್ ಪಂದ್ಯದ ವೇಳೆ ಉಪಸ್ಥಿತರಿರುವರು ಎಂಬುದಾಗಿ ತಿಳಿದು ಬಂದಿದೆ. ಇವ ರಿಗೆ ಈಗಾಗಲೇ ರಾಜ್ಯ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿದೆ.”ರಾಂಚಿಯಲ್ಲಿ ಟೆಸ್ಟ್ ನಡೆಯುವಂತಾಗಲು ಧೋನಿಯೇ ಕಾರಣ. ಅವರಿಂದಾಗಿಯೇ ವಿಶ್ವ ಭೂಪಟದಲ್ಲಿ ರಾಂಚಿ ರಾರಾಜಿಸಿದೆ. ಆದರೆ ಇಲ್ಲಿ ಚೊಚ್ಚಲ ಟೆಸ್ಟ್ ನಡೆಯುವ ಈ ಐತಿಹಾಸಿಕ ಗಳಿಗೆಯಲ್ಲಿ ಅವರ ಗೈರು ಎದ್ದುಕಾಣುತ್ತಿದೆ. ಏನೇ ಇರಲಿ, ರಾಂಚಿ ಟೀಮ್ ಇಂಡಿಯಾ ಪಾಲಿಗೆ ಅದೃಷ್ಟ ತರಲಿ…’ ಎಂದವರು ಧೋನಿಯ ಬಾಲ್ಯದ ಕೋಚ್ ಕೇಶವ ಬ್ಯಾನರ್ಜಿ.
ಈ ಟೆಸ್ಟ್ ಧಿಂದ್ಯದ ವೇಳೆ ಧೋನಿಯನ್ನು ಸಮ್ಮಾನಿಸುವುದು ಜೆಎಸ್‌ಸಿಎ ಉದ್ದೇಶವಾಗಿತ್ತು. ಆದರೆ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ಜಾರ್ಖಂಡ್ ತಂಡದ ಓಟದಿಂದ ಈ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಧೋನಿ ತಂಡ ಈ ಟ್ರೋಫಿ ಯನ್ನು ಹೊತ್ತುತರಬೇಕೆಂಬುದೇ ಅಭಿಮಾನಿಗಳ ಬಯಕೆ.
ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ಧೋನಿ ಕಲಿತ “ಜವಾಹರ್ ವಿದ್ಯಾ ಮಂದಿರ್’ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ರಾಂಚಿ ಟೆಸ್ಟ್ ಪಂದ್ಯದ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲು ಜೆಎಸ್‌ಸಿಎ ನಿರ್ಧರಿಸಿದೆ. ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ರಾಜ್ಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ದೇಬಶಿಷ್ ಚಕ್ರವರ್ತಿ ಹೇಳಿದ್ದಾರೆ.ರಾಂಚಿ ಸ್ಟೇಡಿಯಂ 40 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ್ದು, ಪ್ರತಿ ದಿನ 30 ಸಾವಿರ ಮಂದಿ ಜಮಾಯಿಸುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.