ವನಿತಾ ಏಷ್ಯಾ ಕಪ್ ಕ್ರಿಕೆಟ್; ಭಾರತವೇ ಫೇವರಿಟ್; ರೌಂಡ್ ರಾಬಿನ್ ಲೀಗ್ ಮಾದರಿ
ಇಂದಿನಿಂದ ಬಾಂಗ್ಲಾದೇಶದಲ್ಲಿ 7 ತಂಡಗಳ ನಡುವೆ ಹಣಾಹಣಿ
Team Udayavani, Oct 1, 2022, 7:55 AM IST
ಬಾಂಗ್ಲಾದೇಶ: ಇಂಗ್ಲೆಂಡ್ ನೆಲದಲ್ಲಿ 3-0 ಅಂತರದಲ್ಲಿ ಏಕದಿನ ಸರಣಿ ಗೆದ್ದ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ಭಾರತದ ವನಿತೆಯರಿಗೆ ಏಷ್ಯಾ ಕಪ್ ಕ್ರಿಕೆಟ್ ಸವಾಲು ಎದುರಾಗಿದೆ.
ಶನಿವಾರದಿಂದ ಬಾಂಗ್ಲಾದೇಶದ ಆತಿಥ್ಯದಲ್ಲಿ, 7 ತಂಡಗಳ ನಡುವೆ ಏಷ್ಯನ್ ಕ್ರಿಕೆಟ್ ಕದನ ಆರಂಭವಾಗಲಿದೆ.
ಇದು ರೌಂಡ್ ರಾಬಿನ್ ಮಾದರಿಯ ಟಿ20 ಮುಖಾಮುಖೀ ಆಗಿದ್ದು, ಇಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಗೆದ್ದವರು ಪ್ರಶಸ್ತಿ ಸುತ್ತಿನಲ್ಲಿ ಸೆಣಸುವರು. ಶನಿವಾರದ ದ್ವಿತೀಯ ಪಂದ್ಯದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿವೆ. ಬೆಳಗ್ಗೆ ಬಾಂಗ್ಲಾದೇಶ-ಥಾಯ್ಲೆಂಡ್ ಪಂದ್ಯ ನಡೆಯಲಿದೆ.
ಇದು 8ನೇ ವನಿತಾ ಏಷ್ಯಾ ಕಪ್ ಕ್ರಿಕೆಟ್.
2020ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ನಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿತು. ಇಲ್ಲಿಯೂ ಸಾಧ್ಯವಾಗದೆ ಇದೀಗ 2022ರ ವರ್ಷಾಂತ್ಯ ನಡೆಯುತ್ತಿದೆ.
ಭಾರತದ ಪ್ರಭುತ್ವ
ಏಷ್ಯಾ ಕಪ್‌ನಲ್ಲಿ ಪ್ರಭುತ್ವ ಸಾಧಿಸುತ್ತ ಬಂದದ್ದು ಭಾರತೀಯರ ಹೆಗ್ಗಳಿಕೆ. ಏಳರಲ್ಲಿ 6 ಸಲ ಭಾರತ ಚಾಂಪಿಯನ್ ಆಗಿ ಮೂಡಿಬಂದಿದೆ. 2018ರ ಕೊನೆಯ ಪಂದ್ಯಾವಳಿಯಲ್ಲಿ ಮಾತ್ರ ಬಾಂಗ್ಲಾದೇಶಕ್ಕೆ ಶರಣಾಗಿ ರನ್ನರ್ ಅಪ್‌ಗೆ ಸಮಾಧಾನಪಟ್ಟಿತ್ತು.
ಆರಂಭದ 4 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಏಕದಿನ ಮಾದರಿಯಲ್ಲಿ ಆಡಲಾಗಿತ್ತು. ಎಲ್ಲ ದರಲ್ಲೂ ಭಾರತದ್ದು ಸಾಟಿಯಿಲ್ಲದ ಪರಾಕ್ರಮ. ಭಾರತವೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2012ರಿಂದ ಏಷ್ಯಾ ಕಪ್ ಟಿ20 ಮಾದರಿಗೆ ಪರಿ ವರ್ತನೆಗೊಂಡಿತು. ಇಲ್ಲಿಯೂ ಭಾರತ ಪ್ರಭುತ್ವ ಸ್ಥಾಪಿಸಿತು. ಮೂರರಲ್ಲಿ ಎರಡು ಸಲ ಪ್ರಶಸ್ತಿ ಎತ್ತಿತು.
ಆದರೆ 2018ರ ಕೊನೆಯ ಟೂರ್ನಿಯಲ್ಲಿ ಭಾರತದ ಅಜೇಯ ಅಭಿಯಾನಕ್ಕೆ ಬ್ರೇಕ್ ಬಿತ್ತು. ಕೌಲಾಲಂಪುರದಲ್ಲಿ ನಡೆದ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿ 3 ವಿಕೆಟ್ ಸೋಲಿಗೆ ತುತ್ತಾಯಿತು. ಕೈಜಾರಿದ ಟ್ರೋಫಿಯನ್ನು ಮತ್ತೆ ಎತ್ತಿ ಹಿಡಿದು ಸಂಭ್ರಮಿಸುವುದು ಹರ್ಮನ್‌ಪ್ರೀತ್ ಕೌರ್ ಪಡೆಯ ಯೋಜನೆ. ತಂಡದ ಈಗಿನ ಫಾರ್ಮ್ ಕಂಡಾಗ ಇದೇನೂ ಅಸಾಧ್ಯವೆನಿಸದು.
ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಶಫಾಲಿ ವರ್ಮ, ಎಸ್. ಮೇಘನಾ ಮತ್ತು ಡಿ. ಹೇಮಲತಾ ಕೂಡ ಮುನ್ನುಗ್ಗಿ ಬಾರಿಸಬೇಕಾದ ಅಗತ್ಯವಿದೆ. ಇಂಗ್ಲೆಂಡ್ ಪ್ರವಾಸ ತಪ್ಪಿಸಿ ಕೊಂಡಿದ್ದ ಜೆಮಿಮಾ ರೋಡ್ರಿಗಸ್ ತಂಡಕ್ಕೆ ಮರಳಿದ್ದಾರೆ. ರಿಚಾ ಘೋಷ್ ಮಿಶ್ರ ಫಾರ್ಮ್ನಲ್ಲಿದ್ದಾರೆ.
ಭಾರತದ ಬೌಲಿಂಗ್ ಆಕ್ರಮಣ ದಲ್ಲಿ ವೇಗಿ ರೇಣುಕಾ ಸಿಂಗ್ ಠಾಕೂರ್ ಮುಂಚೂಣಿಯಲ್ಲಿದ್ದಾರೆ. ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಉಳಿದ ಪ್ರಮುಖರು.
ಭಾರತ ಬಿಟ್ಟರೆ ಲಂಕಾ
ಕೂಟದಲ್ಲಿ ಭಾರತ ಹೊರತು ಪಡಿಸಿದರೆ ಶ್ರೀಲಂಕಾವೇ ಬಲಿಷ್ಠ ತಂಡ. ಆದರೆ ಇಡೀ ತಂಡದ ನಿರ್ವಹಣೆ ನಾಯಕಿ ಚಾಮರಿ ಅತಪಟ್ಟು ಅವರ ಬ್ಯಾಟಿಂಗ್ ಫಾರ್ಮನ್ನು ಅವಲಂಬಿಸಿದೆ. ಅವರ ಜತೆಗಾರ್ತಿ ವಿಶ್ಮಿ ಗುಣರತ್ನೆ ಗಾಯಾಳಾಗಿ ಹೊರಗುಳಿದಿರುವುದು ತಂಡಕ್ಕೊಂದು ಹಿನ್ನಡೆ. ಹೀಗಾಗಿ ಹಾಸಿನಿ ಪೆರೆರ, ಹರ್ಷಿತಾ ಸಮರವಿಕ್ರಮ ಮೇಲೆ ಬ್ಯಾಟಿಂಗ್ ಹೆಚ್ಚಿನ ಭಾರ ಬೀಳಲಿದೆ. ಬೌಲಿಂಗ್ ವಿಭಾಗ ಇನೋಕಾ ರಣವೀರ ಮತ್ತು ಒಶಾದಿ ರಣಸಿಂಘೆ ಮ್ಯಾಜಿಕ್ ಮಾಡಬೇಕಿದೆ.
ಏಷ್ಯಾ ಕಪ್ ತಂಡಗಳು
ಭಾರತ, ಶ್ರೀಲಂಕಾ, ಪಾಕಿಸ್ಥಾನ, ಬಾಂಗ್ಲಾದೇಶ, ಮಲೇಷ್ಯಾ, ಥಾಯ್ಲೆಂಡ್, ಯುಎಇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.