Womens ಬಿಗ್ ಬಾಶ್ ಲೀಗ್: ಪ್ರಶಸ್ತಿ ಉಳಿಸಿಕೊಂಡ ಅಡಿಲೇಡ್
Team Udayavani, Dec 2, 2023, 11:41 PM IST
ಅಡಿಲೇಡ್: ಸಣ್ಣ ಮೊತ್ತದ ರೋಚಕ ಫೈನಲ್‌ನಲ್ಲಿ ಬ್ರಿಸ್ಬೇನ್ ಹೀಟ್ ವಿರುದ್ಧ 3 ರನ್ನುಗಳ ಜಯ ಸಾಧಿಸಿದ ಅಡಿಲೇಡ್ ಸ್ಟ್ರೈಕರ್ “ವನಿತಾ ಬಿಗ್ ಬಾಶ್ ಲೀಗ್’ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
“ಅಡಿಲೇಡ್ ಓವಲ್’ನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಡಿಲೇಡ್ ಸ್ಟ್ರೈಕರ್ ಗಳಿಸಿದ್ದು 5 ವಿಕೆಟಿಗೆ 125 ರನ್ ಮಾತ್ರ.
ಇದನ್ನು ಹಿಂದಿಕ್ಕಲು ವಿಫಲವಾದ ಬ್ರಿಸ್ಬೇನ್ ಹೀಟ್ 8ಕ್ಕೆ 122 ರನ್ ಗಳಿಸಿ ಶರಣಾಯಿತು. ಕಳೆದ ಸೀಸನ್‌ನಲ್ಲಿ ಸಿಡ್ನಿ ಸಿಕ್ಸರ್ ವಿರುದ್ಧ 10 ರನ್ ಜಯ ಸಾಧಿಸುವ ಮೂಲಕ ಅಡಿಲೇಡ್ ಮೊದಲ ಸಲ ಪ್ರಶಸ್ತಿ ಜಯಿಸಿತ್ತು.
ಅಡಿಲೇಡ್ ಸ್ಟ್ರೈಕರ್ ಪ್ರಶಸ್ತಿ ಉಳಿಸಿಕೊಂಡ 3ನೇ ತಂಡ. ಇದಕ್ಕೂ ಮೊದಲು ಸಿಡ್ನಿ ಸಿಕ್ಸರ್ (2016, 2017) ಮತ್ತು ಬ್ರಿಸ್ಬೇನ್ ಹೀಟ್ (2018, 2019) ಈ ಸಾಧನೆಗೈದಿದ್ದವು. ಹಾಗೆಯೇ ಅಡಿಲೇಡ್ ಸ್ಟ್ರೈಕರ್ 2 ಸಲ ಬಿಗ್ ಬಾಶ್ ಲೀಗ್ ಚಾಂಪಿಯನ್ ಆದ 4ನೇ ತಂಡ. ಸಿಡ್ನಿ ಸಿಕ್ಸರ್, ಬ್ರಿಸ್ಬೇನ್ ಹೀಟ್ ಮತ್ತು ಸಿಡ್ನಿ ಥಂಡರ್ ಉಳಿದ 3 ತಂಡಗಳಾಗಿವೆ. ಒಮ್ಮೆ ಪರ್ತ್ ಸ್ಕಾರ್ಚರ್ ಪ್ರಶಸ್ತಿ ಜಯಿಸಿತ್ತು.
ಈ ಪಂದ್ಯದಲ್ಲಿ ಬೌಲರ್‌ಗಳದ್ದೇ ಆಟವಾಗಿತ್ತು. ಬ್ಯಾಟಿಂಗ್ ಎಷ್ಟರ ಮಟ್ಟಿಗೆ ಕಠಿನವಾಗಿ ಪರಿಣಮಿಸಿತೆಂದರೆ, ಒಂದೇ ಒಂದು ಶತಕಾರ್ಧ ದಾಖಲಾಗಲಿಲ್ಲ. ಮೂವರಷ್ಟೇ ಮೂವತ್ತರ ಗಡಿ ದಾಟುವಲ್ಲಿ ಯಶಸ್ವಿಯಾದರು. ಅಡಿಲೇಡ್ ತಂಡದ ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಟ್ ಸರ್ವಾಧಿಕ 39, ನಾಯಕಿ ಟಹ್ಲಿಯಾ ಮೆಕ್‌ಗ್ರಾತ್ 38, ಬ್ರಿಸ್ಬೇನ್ ತಂಡದ ಅಮೇಲಿಯಾ ಕೆರ್ ಅಜೇಯ 30 ರನ್ ಹೊಡೆದರು.
ದಡ ಸೇರದ ಬ್ರಿಸ್ಬೇನ್
6ನೇ ಓವರ್‌ನಲ್ಲಿ ಆಡಲಿಳಿದ ಕೆರ್ ಕೊನೆಯ ತನಕ ಕ್ರೀಸ್ ಆಕ್ರಮಿಸಿಕೊಂಡರೂ ತಂಡವನ್ನು ದಡ ತಲುಪಿಸಲು ವಿಫಲರಾದರು. 16ನೇ ಓವರ್ ವೇಳೆ 4ಕ್ಕೆ 95 ರನ್ ಮಾಡಿ ಗೆಲುವಿನ ಹಾದಿಯಲ್ಲಿದ್ದ ಬ್ರಿಸ್ಬೇನ್ ತಂಡಕ್ಕೆ ಲೆಗ್‌ಸ್ಪಿನ್ನರ್ ಅಮಂಡಾ ಜೇಡ್ ವೆಲ್ಲಿಂಗ್ಟನ್ ಕಂಟಕವಾಗಿ ಕಾಡಿದರು. 16ಕ್ಕೆ 3 ವಿಕೆಟ್ ಉರುಳಿಸಿದ ಅಮಂಡಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಟಹ್ಲಿಯಾ ಮೆಕ್‌ಗ್ರಾತ್, ಮೆಗಾನ್ ಶಟ್ ತಲಾ 2 ವಿಕೆಟ್ ಉರುಳಿಸಿದರು. ಅಂತಿಮ ಓವರ್‌ನಲ್ಲಿ ಬ್ರಿಸ್ಬೇನ್‌ಗೆ 13 ರನ್ ತೆಗೆಯುವ ಸವಾಲು ಎದುರಾಗಿತ್ತು.
ಸಂಕ್ಷಿಪ್ತ ಸ್ಕೋರ್: ಅಡಿಲೇಡ್ ಸ್ಟ್ರೈಕರ್-5 ವಿಕೆಟಿಗೆ 125 (ವೋಲ್ವಾರ್ಟ್ 39, ಟಹ್ಲಿಯಾ 38, ನಿಕೋಲಾ ಹ್ಯಾನ್‌ಕಾಕ್ 23ಕ್ಕೆ 3). ಬ್ರಿಸ್ಬೇನ್ ಹೀಟ್-8 ವಿಕೆಟಿಗೆ 122 (ಕೆರ್ ಔಟಾಗದೆ 30, ಜಾರ್ಜಿಯಾ ರೆಡ್‌ಮೇನ್ 22, ಚಾರ್ಲಿ ನಾಟ್ 20, ಅಮಂಡಾ 16ಕ್ಕೆ 3, ಟಹ್ಲಿಯಾ 20ಕ್ಕೆ 2, ಮೆಗಾನ್ ಶಟ್ 30ಕ್ಕೆ 2). ಪಂದ್ಯಶ್ರೇಷ್ಠ: ಅಮಂಡಾ ಜೇಡ್ ವೆಲ್ಲಿಂಗ್ಟನ್. ಸರಣಿಶ್ರೇಷ್ಠ: ಚಾಮರಿ ಅತಪಟ್ಟು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.