ವಿಶ್ವದಾಖಲೆ ವೀರ ಪ್ರಣವ್ ಧನವಾಡೆ ಕ್ರಿಕೆಟ್‌ಗೆ ಗುಡ್ ಬೈ?
Team Udayavani, Dec 30, 2017, 6:20 AM IST
ನವದೆಹಲಿ: ಮಹಾರಾಷ್ಟ್ರದ ಆಟೋ ಚಾಲಕನ ಪುತ್ರ ಪ್ರಣವ್ ಧನವಾಡೆ 2 ವರ್ಷಗಳ ಹಿಂದೆ ವಿಶ್ವ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದ ಅಪ್ರತಿಮ ಸಾಧಕ.
ಅವರು 116 ವರ್ಷದ ಹಿಂದಿನ ದಾಖಲೆ ಪತನಗೊಳಿಸಿದ್ದರು. ಬರೋಬ್ಬರಿ 1009 ರನ್ ಚಚ್ಚಿ ಅಂತರ್ ಶಾಲಾ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಹುಡುಗನ ಸಾಧನೆ ಕಂಡು ಜನ ಅದ್ಭುತ, ಅಮೋಘ ಎಂದರು. ಎಲ್ಲೆಡೆಯಿಂದ ಪ್ರಶಂಸೆ, ಸನ್ಮಾನ ಪ್ರಣವ್‌ರನ್ನು ಹುಡುಕಿಕೊಂಡು ಬಂತು. ಕ್ರಿಕೆಟ್‌ನಲ್ಲಿ ಭವ್ಯ ಭವಿಷ್ಯ ಕಾಣುತ್ತಿದ್ದ ಪ್ರಣವ್ ಮುಖದಲ್ಲಿ ನಗು ಮೂಡಿತು. ಹೆತ್ತವರು ಮಗನ ಬಗ್ಗೆ ಕನಸು ಕಾಣಲು ಆರಂಭಿಸಿದರು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ತಿಂಗಳಿಗೆ 10 ಸಾವಿರ ರೂ. ಸ್ಕಾಲರ್‌ಶಿಪ್ ನೀಡಿತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು.
ಆದರೆ ಇದೀಗ ಪ್ರಣವ್ ಧನವಾಡೆ ಕ್ರಿಕೆಟ್ ತೊರೆದಿದ್ದಾರೆ ಎನ್ನುವ ಸ್ಫೋಟಕ ಸುದ್ದಿಯನ್ನು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಧನವಾಡೆ ಕ್ರಿಕೆಟ್‌ಗೆ ದಿಢೀರ್ ಗುಡ್‌ಬೈ ಹೇಳಿದ್ದು ಏಕೆ? ವಿಶ್ವ ದಾಖಲೆ ವೀರನಿಗೆ ಏನಾಯಿತು? ಎನ್ನುವ ಕುತೂಹಲ ಎಲ್ಲೆಡೆಯಿಂದ ವ್ಯಕ್ತವಾಗಿದೆ.
ಯಾರಿವರು ಪ್ರಣವ್?: ಪೂರ್ಣ ಹೆಸರು ಪ್ರಣವ್ ಪ್ರಶಾಂತ್ ಧನವಾಡೆ. ಮಹಾರಾಷ್ಟ್ರ ಮೂಲದ ಆಟೋ ಚಾಲಕನ ಪುತ್ರ. 2016ರಲ್ಲಿ 16 ವರ್ಷವಯೋಮಿತಿಯೊಳಗಿನ ಅಂತರ್‌ಶಾಲಾ ಕೂಟದಲ್ಲಿ ಆರ್ಯ ಗುರುಕುಲ ಶಾಲಾ ತಂಡದ ವಿರುದ್ಧ 323 ಎಸೆತದಿಂದ ಅಜೇಯ 1009 ರನ್ ಸಿಡಿಸಿ ಖ್ಯಾತಿ ಪಡೆದಿದ್ದರು. ಕೆ.ಸಿ.ಗಾಂಧಿ ಹೈಸ್ಕೂಲ್ ತಂಡವನ್ನು ಪ್ರಣವ್ ಪ್ರತಿನಿಧಿಸಿ 116 ವರ್ಷದ ಹಿಂದೆ ಇಂಗ್ಲೆಂಡ್ ಶಾಲಾ ಬಾಲಕ ಕಾಲಿನ್ಸ್ ವೈಯಕ್ತಿಕ ಅಜೇಯ 628 ರನ್‌ವಿಶ್ವದಾಖಲೆಯನ್ನು ಪುಡಿಗಟ್ಟಿದ್ದರು. ಇದೊಂದು ಐತಿಹಾಸಿಕ ದಾಖಲೆಯಾಯಿತು.
ಕ್ರಿಕೆಟ್ ತೊರೆದಿದ್ದೇಕೆ?: ಪ್ರಣವ್ ಸದ್ಯ ಫಾರ್ಮ್ನಲ್ಲಿಲ್ಲ. ಹೀಗಾಗಿ ಆತ ಸ್ಕಾಲರ್‌ಶಿಪ್ ಹಿಂದಕ್ಕೆ ನೀಡಿದ್ದಾನೆ ಎಂದು ಪ್ರಣವ್ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಗನಿಗೆ ಸ್ಕಾಲರ್‌ಶಿಪ್ ನೀಡಿದೆ. ಸಂಸ್ಥೆಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದಿದ್ದಾರೆ.
ಮೂಲಗಳ ಪ್ರಕಾರ ಪ್ರಣವ್ ಕಳಪೆ ಫಾರ್ಮ್ನಿಂದಾಗಿ 16 ವರ್ಷ ವಯೋಮಿತಿಯೊಳಗಿನ ಎಂಸಿಎ ಕ್ರಿಕೆಟ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರಣವ್‌ಗೆ ಏರ್ ಇಂಡಿಯಾ ಮತ್ತು ದಾದರ್ ಯೂನಿಯನ್ ಸಂಸ್ಥೆ ನೆಟ್ ಅಭ್ಯಾಸ ನಡೆಸಲು ಉಚಿತ ವೇದಿಕೆ ನೀಡಿತ್ತು. ಸದ್ಯ ಈ ಸೌಲಭ್ಯ ಕೂಡ ಕಡಿತಗೊಂಡಿದೆ ಎನ್ನಲಾಗಿದೆ.
ಮಾಧ್ಯಮದಿಂದ ಕ್ರಿಕೆಟ್ ಭವಿಷ್ಯ ಹಾಳು?: ಪ್ರಣವ್ ಏಕಾಏಕಿ ವಿಫಲವಾಗಲು ಕಾರಣ ಅತಿಯಾದ ಮಾಧ್ಯಮ ಪ್ರಚಾರವೇ? ಹೌದು, ಎನ್ನುತ್ತಾರೆ ಪ್ರಣವ್ ಕೋಚ್ ಮೊಬಿನ್ ಶೇಖ್, ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಕಟವಾಗಿರುವುದರಿಂದ ಪ್ರಣವ್ ಒತ್ತಡಕ್ಕೆ ಒಳಗಾಗಿದ್ದಾನೆ. ಕ್ರಿಕೆಟ್‌ನತ್ತ ಏಕಾಗ್ರತೆ ಕಳೆದುಕೊಂಡಿದ್ದಾನೆ ಎಂದಿದ್ದಾರೆ.
ಕೇಂದ್ರ ಸಚಿವರ ವಿರುದ್ಧ ಪ್ರಣವ್ ಪ್ರತಿಭಟನೆ
2016ರಲ್ಲಿ ಮಹಾರಾಷ್ಟ್ರ ಕಲ್ಯಾಣ್ ನಗರದಲ್ಲಿ ಪ್ರಣವ್ ಅಭ್ಯಾಸ ನಡೆಸಲು ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಭೇಟಿ ಹಿನ್ನಲೆಯಲ್ಲಿ ಅವಕಾಶ ನೀಡಿರಲಿಲ್ಲ. ಸಚಿವರ ಹೆಲಿಕಾಪ್ಟರ್ ಇವರು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಂಗಣದಲ್ಲಿ ಇಳಿಯುವುದಿತ್ತು. ಇದರ ವಿರುದ್ಧ ಪ್ರಣವ್ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರಣವ್ ಹಾಗೂ ಅವರ ತಂದೆ ಜತೆಗೆ ಅನುಚಿತವಾಗಿ ವರ್ತಿಸಿದ್ದರು. ಇದು ವಿವಾದವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.