ನೀರಜ್ ಚೋಪ್ರಾ ಮೇಲೀಗ ಬಂಗಾರದ ನಿರೀಕ್ಷೆ: ರೋಹಿತ್ ಯಾದವ್ ಕೂಡ ಫೈನಲ್‌ಗೆ
ರವಿವಾರ ಬೆಳಗ್ಗೆ 7.05ರಿಂದ ಪದಕ ಸ್ಪರ್ಧೆ
Team Udayavani, Jul 23, 2022, 6:45 AM IST
ಯೂಜೀನ್ (ಯುಎಸ್‌ಎ): ಎಲ್ಲರ ನಿರೀಕ್ಷೆಯಂತೆ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಆ್ಯತ್ಲೆಟಿಕ್ಸ್ ಜಾವೆಲಿನ್ ತ್ರೋ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.
ನೀರಜ್ ಮೊದಲ ಎಸೆತದಲ್ಲೇ 88.39 ಮೀ. ದೂರವನ್ನು ದಾಖಲಿಸಿ ಪದಕ ಸುತ್ತಿಗೆ ನೆಗೆದದ್ದು ವಿಶೇಷವಾಗಿತ್ತು. ಇವರೊಂದಿಗೆ ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ ಕೂಡ ಫೈನಲ್ ಪ್ರವೇಶಿಸಿದ್ದಾರೆ.
24 ವರ್ಷದ ನೀರಜ್ ಚೋಪ್ರಾ ವಿಶ್ವ ಆ್ಯತ್ಲೆಟಿಕ್ಸ್ ನಲ್ಲಿ ಕಾಣುತ್ತಿರುವ ಮೊದಲ ಫೈನಲ್ ಎಂಬುದು ಮತ್ತೊಂದು ವಿಶೇಷ. ಭಾರತೀಯ ಕಾಲಮಾನ ದಂತೆ ರವಿವಾರ ಬೆಳಗ್ಗೆ 7.05ಕ್ಕೆ ಫೈನಲ್ ಸ್ಪರ್ಧೆ ಆರಂಭವಾಗಲಿದೆ. ನೀರಜ್ ಚೋಪ್ರಾ ಪದಕ ವೊಂದನ್ನು ಗೆಲ್ಲುವ ಹಾಟ್ ಫೇವರಿಟ್ ಆಗಿದ್ದು, ಇದು ಬಂಗಾರವೇ ಆಗಲೆಂಬುದು ದೇಶದ ಕ್ರೀಡಾಪ್ರೇಮಿಗಳ ಹಾರೈಕೆ.
ಒಟ್ಟಾರೆಯಾಗಿ ದ್ವಿತೀಯ ಸ್ಥಾನ
ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ “ಬಿ’ ವಿಭಾಗದಿಂದ ಸ್ಪರ್ಧೆಗೆ ಇಳಿದಿದ್ದರು. 88.39 ಮೀ. ಎನ್ನುವುದು ಚೋಪ್ರಾ ಅವರ 3ನೇ ಅತ್ಯುತ್ತಮ ಸಾಧನೆ ಯಾಗಿದೆ. ಒಟ್ಟಾರೆಯಾಗಿ ಅವರು ದ್ವಿತೀಯ ಸ್ಥಾನಿಯಾಗಿ ಫೈನಲ್ ತಲುಪಿದರು. “ಎ’ ವಿಭಾಗದಿಂದ ಸ್ಪರ್ಧೆಗೆ ಇಳಿದಿದ್ದ ಗ್ರೆನಡಾದ ಹಾಲಿ ಚಾಂಪಿಯನ್ ಆ್ಯಂಡರ್ಸನ್ ಪೀಟರ್ ಮೊದಲ ಸ್ಥಾನ ಸಂಪಾದಿಸಿದರು (89.91 ಮೀ.). ಪೀಟರ್ ಕೂಡ ಮೊದಲ ಎಸೆತದಲ್ಲೇ ಈ ದೂರವನ್ನು ದಾಖಲಿಸಿದರು.
ಟೋಕಿಯೋದಲ್ಲಿ ಬೆಳ್ಳಿ ಪದಕ ಗೆದ್ದ ಜಾಕುಬ್ ವಲೆªಶ್ ಕೂಡ ಫೈನಲ್ ತಲುಪಿದ್ದಾರೆ (85.23 ಮೀ.).
“ವರ್ಲ್ಡ್ ಲೀಡರ್’ ಪೀಟರ್ ಈ ಋತುವಿನಲ್ಲಿ 3 ಸಲ 90 ಮೀ. ಪ್ಲಸ್ ಸಾಧನೆಗೈದಿದ್ದಾರೆ. ದೋಹಾದಲ್ಲಿ ನಡೆದ ವರ್ಷದ ಮೊದಲ ಡೈಮಂಡ್ ಲೀಗ್ ನಲ್ಲಿ 93.07 ಮೀ. ದೂರ ಎಸೆದಿದ್ದರು. ಬಳಿಕ ಸ್ಟಾಕ್ ಹೋಮ್ ಡೈಮಂಡ್ ಲೀಗ್‌ನಲ್ಲೂ ಚಿನ್ನ ಜಯಿಸಿದ್ದರು. ಫೈನಲ್‌ನಲ್ಲಿ ಇವರಿಂದ ನೀರಜ್ ತೀವ್ರ ಸ್ಪರ್ಧೆ ಎದುರಿಸುವುದು ಖಂಡಿತ.
“ಉತ್ತಮ ಆರಂಭ. ರನ್‌ಅಪ್ ವೇಳೆ ತುಸು ಆಚೀಚೆ ಆಯಿತು. ಆದರೂ ಇದೊಂದು ಉತ್ತಮ ತ್ರೋ. ಫೈನಲ್‌ನಲ್ಲಿ 100 ಪ್ರತಿಶತ ಪ್ರಯತ್ನ ನನ್ನ ದಾಗಲಿದೆ. ಪ್ರತಿಯೊಂದು ದಿನವೂ ಭಿನ್ನವಾಗಿರು ತ್ತದೆ. ನಿರ್ದಿಷ್ಟ ದಿನದಂದು ಯಾರು ಅತೀ ದೂರದ ಸಾಧನೆ ಮಾಡುತ್ತಾರೋ ಹೇಳಲಾಗದು’ ಎಂಬುದು ನೀರಜ್ ಚೋಪ್ರಾ ಪ್ರತಿಕ್ರಿಯೆ.
ರೋಹಿತ್‌ಗೆ 11ನೇ ಸ್ಥಾನ
ಭಾರತದ ಮತ್ತೋರ್ವ ಜಾವೆಲಿನ್ ಎಸೆತ ಗಾರ ರೋಹಿತ್ ಯಾದವ್ “ಬಿ’ ವಿಭಾಗ ದಲ್ಲಿ 6ನೇ ಹಾಗೂ ಒಟ್ಟಾರೆ 11ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು (80.42 ಮೀ.). ಇವರ ಈ ದೂರವೂ ಮೊದಲ ಎಸೆತದಲ್ಲೇ ದಾಖಲಾಯಿತು. ದ್ವಿತೀಯ ಪ್ರಯತ್ನ ಫೌಲ್ ಆಯಿತು. 3ನೇ ಯತ್ನ 77.32 ಮೀಟರ್‌ಗೆ ಸೀಮಿತಗೊಂಡಿತು.
21 ವರ್ಷದ ರೋಹಿತ್ ಯಾದವ್ ಕಳೆದ ತಿಂಗಳ ನ್ಯಾಶನಲ್ ಇಂಟರ್-ಸ್ಟೇಟ್ ಚಾಂಪಿಯನ್‌ಶಿಪ್ ನಲ್ಲಿ 82.54 ಮೀ. ದೂರದ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದ್ದರು. ಆದರೆ ವಿಶ್ವ ಆ್ಯತ್ಲೆಟಿಕ್ಸ್ ನಲ್ಲಿ ಈ ಮಟ್ಟವನ್ನು ಮುಟ್ಟಲು ಅವರು ವಿಫಲರಾದರು.
ಅರ್ಹತಾ ಸುತ್ತಿನಲ್ಲಿ ಒಬ್ಬರಿಗೆ 3 ಅವಕಾಶ ಗಳಿರುತ್ತವೆ. ಆದರೆ ಮೊದಲ ಪ್ರಯತ್ನದಲ್ಲೇ ಫೈನಲ್ ಮಾನದಂಡವನ್ನು ದಾಖಲಿಸಿದರೆ ಉಳಿದೆರಡು ಸುತ್ತುಗಳಲ್ಲಿ ಸ್ಪರ್ಧಿಸಬೇಕೆಂದಿಲ್ಲ. ನೀರಜ್ ಚೋಪ್ರಾ ಕೂಡ ಈ ಮಾನದಂಡವನ್ನೇ ಅನುಸರಿಸಿದರು. ಫೈನಲ್ ಅರ್ಹತೆಗೆ ಇರುವ ದೂರ 83.50 ಮೀ. ಅಥವಾ ಮೊದಲ 12 ಸ್ಥಾನ ಪಡೆದ ಸ್ಪರ್ಧಿಗಳು ಪದಕ ಸುತ್ತಿಗೆ ಅರ್ಹತೆ ಪಡೆಯುತ್ತಾರೆ.
ಫೈನಲ್‌ನಲ್ಲಿ ಎಲ್ಡೋಸ್ ಪೌಲ್
ಟ್ರಿಪಲ್ ಜಂಪ್‌ನಲ್ಲಿ ಎಲ್ಡೋಸ್ ಪೌಲ್ 16.68 ಮೀ. ಸಾಧನೆಯೊಂದಿಗೆ ಫೈನಲ್ ಪ್ರವೇಶಿಸಿದರು. ಇದು ವಿಶ್ವ ಆ್ಯತ್ಲೆಟಿಕ್ಸ್ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿಯೊಬ್ಬರು ಕಾಣುತ್ತಿರುವ ಮೊದಲ ಫೈನಲ್ ಆಗಿದೆ.
“ಎ’ ವಿಭಾಗದ ಅರ್ಹತಾ ಸುತ್ತಿನಲ್ಲಿ ಪೌಲ್ 6ನೇ ಸ್ಥಾನಿಯಾದರು. ಒಟ್ಟಾರೆಯಾಗಿ 12ನೇ ಹಾಗೂ ಕೊನೆಯ ಸ್ಥಾನದೊಂದಿಗೆ ಪದಕ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರು.
ವೀಸಾ ಸಮಸ್ಯೆಯಿಂದಾಗಿ ಎಲ್ಡೋಸ್ ಪೌಲ್ ಕೇವಲ 2 ದಿನಗಳ ಮೊದಲು ಅಮೆರಿಕ ತಲುಪಿದ್ದರು. ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲ ಅಬೂಬಕರ್ ಕ್ರಮವಾಗಿ 17ನೇ ಹಾಗೂ 19ನೇ ಸ್ಥಾನಕ್ಕೆ ಕುಸಿದರು. ರವಿವಾರ ಬೆಳಗ್ಗೆ 6.50ಕ್ಕೆ ಫೈನಲ್ ಆರಂಭವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.