World Cup Cricket; ಇತಿಹಾಸ ಬರೆಯಿತು ಅರ್ಜುನ ಸಾರಥ್ಯದ ಶ್ರೀಲಂಕಾ
Team Udayavani, Sep 28, 2023, 6:45 AM IST
ಒಂದು ಪಂದ್ಯಾವಳಿಯ “ಗ್ಯಾಪ್’ ಬಳಿಕ ವಿಶ್ವಕಪ್ ಆತಿಥ್ಯ ಏಷ್ಯಾಕ್ಕೆ ಮರಳಿತು. 1996ರ ಈ ಕೂಟಕ್ಕೆ ಭಾರತ, ಪಾಕಿಸ್ಥಾನದ ಜತೆಗೆ ಶ್ರೀಲಂಕಾ ಕೂಡ ಕೈ ಜೋಡಿಸಿತು. ವಿಲ್ಸ್ ಕಂಪೆನಿ ಪ್ರಾಯೋಜಕತ್ವ ವಹಿಸಿದ್ದರಿಂದ ಇದು “ವಿಲ್ಸ್ ವಿಶ್ವಕಪ್’ ಎನಿಸಿತು.
ಅತ್ಯಂತ ಬಲಿಷ್ಠ ಹಾಗೂ ಸ್ಫೋಟಕ ಆಟಗಾರರನ್ನು ಹೊಂದಿದ್ದ ಅರ್ಜುನ ರಣತುಂಗ ಸಾರಥ್ಯದ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾ ಘಟಾನುಘಟಿ ತಂಡ ಗಳನ್ನೆಲ್ಲ ಮೀರಿಸಿ ಮೊದಲ ಸಲ ಪಟ್ಟವೇರಿದ್ದು ಇಲ್ಲಿನ ವಿಶೇಷ. ಜತೆಗೆ ಆತಿಥೇಯ ತಂಡ ವಿಶ್ವ ಚಾಂಪಿ ಯನ್ ಆಗದು ಎಂಬ ನಂಬಿಕೆ ಯೊಂದನ್ನು ಹುಸಿಗೊಳಿಸಿತು. ಆದರೆ ಫೈನಲ್ ನಡೆದದ್ದು ಪಾಕಿಸ್ಥಾನದ ಲಾಹೋರ್‌ನಲ್ಲಿ.
1996ರ ವಿಶ್ವಕಪ್‌ನಲ್ಲಿ ಸರ್ವಾ ಧಿಕ 12 ತಂಡಗಳು ಪಾಲ್ಗೊಂಡವು. ಟೆಸ್ಟ್ ಮಾನ್ಯತೆ ಹೊಂದಿದ 9 ತಂಡಗಳ ಜತೆಗೆ ಐಸಿಸಿ ಟ್ರೋಫಿ ಅರ್ಹತಾ ಪಂದ್ಯಾವಳಿ ಮೂಲಕ ಆಯ್ಕೆಯಾದ ಕೀನ್ಯಾ, ನೆದರ್ಲೆಂಡ್ಸ್ ಮತ್ತು ಯುಎಇ ಮೊದಲ ಸಲ ವಿಶ್ವಕಪ್ ಆಡುವ ಅವಕಾಶ ಪಡೆದವು.
ಜಯಸೂರ್ಯ ಸಿಡಿಗುಂಡು
ಈ ಕೂಟದುದ್ದಕ್ಕೂ ಸುದ್ದಿಯಾದ ತಂಡ ಶ್ರೀಲಂಕಾ. ಎಡಗೈ ಆರಂಭಕಾರ ಸನತ್ ಜಯಸೂರ್ಯ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮೊದಲ 15 ಓವರ್‌ಗಳ ಲಾಭವನ್ನೆತ್ತುವ ಪ್ರಯತ್ನದಲ್ಲಿ ಭರಪೂರ ಯಶಸ್ಸು ಸಾಧಿಸಿದರು. ಅವರು ಯಾವುದೇ ಬೌಲರ್‌ಗಳಿಗೆ ರಿಯಾಯಿತಿ ತೋರಲಿಲ್ಲ. ಬೀಸಿದ್ದೆಲ್ಲ ಬೌಂಡರಿ, ಸಿಕ್ಸರ್ ಆಗುತ್ತಿತ್ತು. ಸ್ಟ್ರೈಕ್ ಬೌಲರ್‌ಗಳೆಲ್ಲ ಇವರನ್ನು ನಿಯಂತ್ರಿಸಲಾಗದೆ ಹೈರಾಣಾದರು. ಇವರ ಸಾಹಸ ದಿಂದ 15 ಓವರ್‌ಗಳಲ್ಲೇ 100 ರನ್ ಹರಿದು ಬರತೊಡಗಿತು. ಮನೋಜ್ ಪ್ರಭಾಕರ್ ಸೇರಿದಂತೆ ಕೆಲವು ಬೌಲರ್‌ಗಳ ಕ್ರಿಕೆಟ್ ಬಾಳ್ವೆ ಯನ್ನೇ ಮುಗಿಸಿದರು. ಅಂದು ಮನೋಜ್ ಪ್ರಭಾಕರ್ ಅವರನ್ನು ಬಡಿದಟ್ಟುತ್ತಿದ್ದಾಗ ಜಯ ಸೂರ್ಯ ಅವರು ಎಲ್‌ಟಿಟಿಇಯ ಪ್ರಭಾಕರನ್‌ನನ್ನು ಕಲ್ಪಿಸಿ ಕೊಂಡಿದ್ದರೇನೋ ಎಂಬುದು ಆ ಕಾಲದ ಜೋಕ್ ಆಗಿತ್ತು!
ಹೌದು, 1996ರಲ್ಲಿ ಲಂಕಾದಲ್ಲಿ ಎಲ್‌ಟಿಟಿಇ ಹಾವಳಿ ಜೋರಿತ್ತು. ಆತಂಕಭರಿತ ವಾತಾವರಣವಿತ್ತು. ಹೀಗಾಗಿ ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ತಂಡಗಳು ಲಂಕೆಯಲ್ಲಿ ಆಡಲು ನಿರಾಕರಿಸಿದವು. ಹೀಗಾಗಿ ಶ್ರೀಲಂಕಾಕ್ಕೆ 4 ಪುಕ್ಕಟೆ ಅಂಕಗಳು ಲಭಿಸಿದವು. ರಣತುಂಗ ಬಳಗದ ಯಶಸ್ಸಿಗೆ ಇದೂ ಒಂದು ಕಾರಣ. ಈ ಸಂದರ್ಭದಲ್ಲಿ ಭಾರತದ ಕ್ರಿಕೆಟಿಗರು ಲಂಕೆಯಲ್ಲಿ ಸೌಹಾರ್ದ ಪಂದ್ಯವೊಂದನ್ನು ಆಡಿ ಇಲ್ಲಿ ಯಾವುದೇ ಭೀತಿ ಇಲ್ಲ ಎಂಬುದನ್ನು ಸಾಬೀತುಪಡಿಸಿ ಕ್ರೀಡಾಸ್ಫೂರ್ತಿ ತೋರಿಸಿದ್ದನ್ನು ಮರೆಯುವಂತಿಲ್ಲ. ತನ್ನಲ್ಲಿ ಆಡಲು ಒಪ್ಪದ ಆಸ್ಟ್ರೇಲಿಯ ವನ್ನೇ ಫೈನಲ್‌ನಲ್ಲಿ 7 ವಿಕೆಟ್‌ಗಳಿಂದ ಸದೆಬಡಿಯುವ ಮೂಲಕ ರಣತುಂಗ ಪಡೆ ಸೇಡು ತೀರಿಸಿಕೊಂಡಿತು!
ಮೊದಲ ಕ್ವಾರ್ಟರ್ ಫೈನಲ್
ಇಲ್ಲಿ ಮತ್ತೆ ಗ್ರೂಪ್ ಮಾದರಿಗೆ ಆದ್ಯತೆ ನೀಡಲಾಯಿತು. ಒಂದೊಂದು ಗುಂಪಿನಲ್ಲಿ 6 ತಂಡ ಗಳನ್ನು ಆಡಿಸಲಾಯಿತು. ಅಗ್ರ 4 ತಂಡಗಳು ಮುನ್ನಡೆದವು. ಮೊದಲ ಸಲ ಕ್ವಾರ್ಟರ್ ಫೈನಲ್ ಅಳವಡಿಸಲಾಯಿತು.ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಹಾಲಿ ಚಾಂಪಿಯನ್ ಪಾಕಿಸ್ಥಾನ ವನ್ನು ಕೆಡವಿತು. ಭಾರತ-ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್- ಆಸ್ಟ್ರೇಲಿಯ ಸೆಮಿಫೈನಲ್‌ನಲ್ಲಿ ಎದುರಾದವು.
ಹೊತ್ತಿ ಉರಿಯಿತು ಈಡನ್
ಲೀಗ್ ಹಂತದಲ್ಲಿ ಭಾರತವನ್ನು 6 ವಿಕೆಟ್‌ಗಳಿಂದ ಕೆಡವಿದ ಶ್ರೀಲಂಕಾ, ಸೆಮಿಫೈನಲ್‌ನಲ್ಲಿ ಮತ್ತೆ ಎದು ರಾಯಿತು. ಅಜರುದ್ದೀನ್ ಪಡೆ ಇಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಚೇಸಿಂಗ್ ವೇಳೆ ನಮ್ಮವರ ವಿಕೆಟ್‌ಗಳು ಪಟಪಟನೆ ಉದುರತೊಡಗಿದಾಗ ಕೋಲ್ಕತಾ ವೀಕ್ಷಕರು ರೊಚ್ಚಿಗೆದ್ದರು. ಈಡನ್ ಹೊತ್ತಿ ಉರಿಯಿತು. 1983ರ ಫೈನಲ್ ಸೋಲಿನ ಬಳಿಕ ಭಾರತದ ಮೇಲೆ ಕೆಂಗಣ್ಣು ಬೀರುತ್ತಲೇ ಇದ್ದ ವೆಸ್ಟ್ ಇಂಡೀಸ್‌ನ ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ ಪಂದ್ಯವನ್ನು ರದ್ದುಗೊಳಿಸಿ ಲಂಕೆಯನ್ನು ಫೈನಲ್‌ಗೆ ರವಾನಿಸಿದರು. ವಿನೋದ್ ಕಾಂಬ್ಳಿ ಕ್ರೀಸ್‌ನಲ್ಲಿ ಅಳುತ್ತ ನಿಂತರು!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.