ಭಾರತಕ್ಕೆ “ರೆಡ್ ಲಯನ್ಸ್’ ಬೆಲ್ಜಿಯಂ ಸವಾಲು
Team Udayavani, Dec 2, 2018, 6:25 AM IST
ಭುವನೇಶ್ವರ: ತವರಿನ ವಿಶ್ವಕಪ್ ಹಾಕಿ ಹಣಾಹಣಿಯನ್ನು ಆತ್ಮವಿಶ್ವಾಸದಿಂದಲೇ ಆರಂಭಿಸಿರುವ ಭಾರತ, ರವಿವಾರ ಮಹತ್ವದ ಪಂದ್ಯದಲ್ಲಿ “ರೆಡ್ ಲಯನ್ಸ್’ ಖ್ಯಾತಿಯ ಬಲಿಷ್ಠ ಬೆಲ್ಜಿಯಂ ಸವಾಲವನ್ನು ಎದುರಿಸಲಿದೆ.
43 ವರ್ಷಗಳ ಬಳಿಕ ಹಾಕಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲು ಕಾಯುತ್ತಿರುವ ಭಾರತಕ್ಕೆ ಬೆಲ್ಜಿಯಂ ಎದುರಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. “ಸಿ’ ವಿಭಾಗದಲ್ಲಿ ಮನ್‌ಪ್ರೀತ್ ಪಡೆಯ ಪ್ರಮುಖ ಎದುರಾಳಿಯೇ ಬೆಲ್ಜಿಯಂ ತಂಡ. ಇಲ್ಲಿ ಮೇಲುಗೈ ಸಾಧಿಸಿದರೆ ಮನ್‌ಪ್ರೀತ್ ಸಿಂಗ್ ಪಡೆಯ ನಾಕೌಟ್ ಹಾದಿ ಸುಗಮಗೊಳ್ಳಲಿದೆ. ಅಂತಿಮ ಲೀಗ್ ಎದುರಾಳಿಯಾಗಿರುವ ಕೆನಡಾ ಅಷ್ಟೇನೂ ಬಲಿಷ್ಠವಲ್ಲ. ಆದರೆ ಅದು ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂಗೆ ಸುಲಭದಲ್ಲಿ ಶರಣಾಗಲಿಲ್ಲ ಎಂಬುದನ್ನು ಮರೆಯುವಂತಿಲ್ಲ.
ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತ್ತು. 5-0 ಭರ್ಜರಿ ಅಂತರದಿಂದ ಮಣಿಸಿ ಲೀಗ್ ಹಂತಕ್ಕೆ ಅಗತ್ಯವಿರುವಷ್ಟು ಆತ್ಮವಿಶ್ವಾಸ ತುಂಬಿಕೊಂಡಿದೆ. ಇನ್ನೊಂದೆಡೆ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬೆಲ್ಜಿಯಂಗೆ ಕೆನಡಾ ವಿರುದ್ಧ ಒಲಿದದ್ದು 2-1 ಅಂತರದ ಸಾಮಾನ್ಯ ಗೆಲುವು.
ದಾಖಲೆ ಬೆಲ್ಜಿಯಂ ಪರ
2013ರ ಬಳಿಕ ಭಾರತ-ಬೆಲ್ಜಿಯಂ ತಂಡಗಳು 19 ಸಲ ಮುಖಾಮುಖೀಯಾಗಿವೆ. ಇದರಲ್ಲಿ ಬೆಲ್ಜಿಯಂ 13ರಲ್ಲಿ ಗೆದ್ದರೆ, ಭಾರತಕ್ಕೆ ಒಲಿದದ್ದು 5 ಗೆಲುವು ಮಾತ್ರ. ಒಂದು ಪಂದ್ಯ ಡ್ರಾ ಆಗಿತ್ತು. ಇತ್ತಂಡಗಳು ಕೊನೆಯ ಸಲ ಎದುರಾದದ್ದು ಇದೇ ವರ್ಷ ಬ್ರೆಡಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ. ಇಲ್ಲಿ ಕೊನೆಯ ಗಳಿಗೆಯಲ್ಲಿ ಗೋಲೊಂದನ್ನು ಬಿಟ್ಟುಕೊಟ್ಟ ಭಾರತ 1-1 ಡ್ರಾಗೆ ಸಮಾಧಾನ ಪಡಬೇಕಾಯಿತು. ಆದರೆ ವಿಶ್ವಕಪ್ ಎಂಬುದು “ಡಿಫರೆಂಟ್ ಬಾಲ್ ಗೇಮ್’. ಇಲ್ಲಿ ತಂಡವೊಂದು ಮಾಡುವ ಸಣ್ಣ ತಪ್ಪಿಗೂ ಭಾರೀ ಬೆಲೆ ತೆರಬೇಕಾಗುತ್ತದೆ.
ಆಕ್ರಮಣಕಾರಿ ಪ್ರದರ್ಶನ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಆಕ್ರಮಣಕಾರಿ ಹಾಕಿಯನ್ನು ಪ್ರದರ್ಶಿಸಿತ್ತು. ಇದೇ ಪ್ರದರ್ಶನವನ್ನು ಮುಂದುವರಿಸಿದರೆ ಬೆಲ್ಜಿಯಂ ವಿರುದ್ಧವೂ ಮೇಲುಗೈ ಸಾಧಿಸುವುದು ದೊಡ್ಡ ಸವಾಲೇನೂ ಆಗದು. ಭಾರತದ ಫಾರ್ವರ್ಡ್ ಆಟಗಾರರಾದ ಮನ್‌ದೀಪ್ ಸಿಂಗ್, ಸಿಮ್ರನ್‌ಜಿàತ್ ಸಿಂಗ್, ಆಕಾಶ್‌ದೀಪ್ ಸಿಂಗ್ ಮತ್ತು ಲಲಿತ್ ಉಪಾಧ್ಯಾಯ ಹರಿಣಗಳ ವಿರುದ್ಧ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಇವರಲ್ಲಿ ಸಿಮ್ರನ್‌ಜಿàತ್ ಅವಳಿ ಗೋಲು ಬಾರಿಸಿ ಮೆರೆದರೆ, ಉಳಿದವರೆಲ್ಲ ಒಂದೊಂದು ಗೋಲು ಹೊಡೆದು ಆಫ್ರಿಕಾ ಕತೆ ಮುಗಿಸಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಸ್ಟ್ರೈಕರ್ ಬೆಲ್ಜಿಯಂ ವಿರುದ್ಧವೂ ಹಿಡಿತ ಸಾಧಿಸಬೇಕಾದ ಅಗತ್ಯವಿದೆ.
ಭಾರತಕ್ಕೆ ಈಗಲೂ ಸಮಸ್ಯೆಯಾಗಿ ಉಳಿದಿರುವುದು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸಿ ಪರಿವರ್ತಿಸುವುದು. ಆಫ್ರಿಕಾ ವಿರುದ್ಧ 5 ಪೆನಾಲ್ಟಿ ಅವಕಾಶ ಗಳಿಸಿದ ಭಾರತ, ಇದರಲ್ಲಿ ಗೋಲಾಗಿಸಿದ್ದು ಒಂದನ್ನು ಮಾತ್ರ. ಇದು ಬೆಲ್ಜಿಯಂ ಪಡೆಯ
ಸಮಸ್ಯೆ ಕೂಡ ಹೌದು!
ಭಾರತ ತಂಡದ ಪ್ರಧಾನ ಕೋಚ್ ಹರೇಂದ್ರ ಕೋಚ್ ಅಭಿಪ್ರಾಯವೆಂದರೆ, ಹೇಗಾದರೂ ಗೋಲುಗಳು ಬಂದರೆ ಸೈ. ಅದು ಪೆನಾಲ್ಟಿ ಕಾರ್ನರ್ ಮೂಲಕವಾಗಿರಲಿ ಅಥವಾ ಫೀಲ್ಡ್ ಮೂಲಕವೇ ಆಗಿರಲಿ, ಸತತವಾಗಿ ಗೋಲುಗಳು ಸಿಡಿಯುವುದು ಮುಖ್ಯ.
“ನಾವು ಸುಂದರವಾದ ಫೀಲ್ಡ್ ಗೋಲ್ಸ್ ದಾಖಲಿಸಿದ್ದೇವೆ. ಪೆನಾಲ್ಟಿ ಕಾರ್ನರ್‌ಗಳಿಂದ ಹೆಚ್ಚಿನ ಗೋಲು ಬರಲಿಲ್ಲ ನಿಜ, ಆದರೆ ಇದೇನೂ ದೊಡ್ಡ ಸಮಸ್ಯೆ ಅಲ್ಲ’ ಎಂಬುದು ಹರೇಂದ್ರ ಸಿಂಗ್ ಅಭಿಪ್ರಾಯ.
ಕ್ರಾಸ್ ಓವರ್ ತಪ್ಪಬೇಕು
ಭಾರತ ವಿರುದ್ಧದ ಪಂದ್ಯ “ಮಸ್ಟ್ ವಿನ್’ ಮಹತ್ವ ಪಡೆದಿದೆ ಎಂಬುದು ಬೆಲ್ಜಿಯಂ ಕೋಚ್ ಶೇನ್ ಮೆಕ್‌ಲಾಯ್ಡ ಅಭಿಪ್ರಾಯ. “ಸಿ’ ಬಣದಲ್ಲಿ ಅಗ್ರಸ್ಥಾನಿಯಾಗಿ, “ಕ್ರಾಸ್ ಓವರ್’ ತಪ್ಪಿಸಿಕೊಳ್ಳಲು ಈ ಗೆಲುವು ಮುಖ್ಯ ಎನ್ನುತ್ತಾರೆ ಅವರು.
“ನಮ್ಮ ಬಳಿ 3 ಅಂಕಗಳಿವೆ. ಆದರೆ ಗೋಲು ವ್ಯತ್ಯಾಸದಲ್ಲಿ ಹಿಂದಿದ್ದೇವೆ. ಹೀಗಾಗಿ ಭಾರತದೆದುರಿನದ್ದು ನಮ್ಮ ಪಾಲಿಗೆ ಮಸ್ಟ್ ವಿನ್ ಮ್ಯಾಚ್’ ಎಂಬುದಾಗಿ ಮೆಕ್‌ಲಾಯ್ಡ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.