ಬೆಲ್ಜಿಯಂ-ನೆದರ್ಲೆಂಡ್ ಪ್ರಶಸ್ತಿ ಪೈಪೋಟಿ
Team Udayavani, Dec 16, 2018, 6:00 AM IST
ಭುವನೇಶ್ವರ: ರವಿವಾರ ನಡೆಯಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿಯ ಪ್ರಶಸ್ತಿ ಸಮರದಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ ಪರಸ್ಪರ ಎದುರಾಗಲಿವೆ. ಸೆಮಿಪೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿವೆ.
ಶನಿವಾರದ ಮೊದಲ ಸೆಮಿಫೈನಲ್ ಏಕಪಕ್ಷೀಯವಾಗಿ ನಡೆಯಿತು. ಈ ಮುಖಾಮುಖೀಯಲ್ಲಿ ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ 6-0 ಭರ್ಜರಿ ಅಂತರದಿಂದ ಇಂಗ್ಲೆಂಡಿಗೆ ಆಘಾತವಿಕ್ಕಿತು. ಇದು ಬೆಲ್ಜಿಯಂ ಕಾಣುತ್ತಿರುವ ಮೊದಲ ವಿಶ್ವಕಪ್ ಫೈನಲ್ ಎಂಬುದು ವಿಶೇಷ.
ಶೂಟೌಟ್‌ನಲ್ಲಿ ಡಚ್ಚರ ಜಯಭೇರಿ
ಆಸ್ಟ್ರೇಲಿಯ ಮತ್ತು ನೆದರ್ಲೆಂಡ್ ನಡುವಿನ 2ನೇ ಸೆಮಿಫೈನಲ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಪೂರ್ಣಾವಧಿಯಲ್ಲಿ ಎರಡೂ ತಂಡಗಳು 2-2 ಸಮಬಲ ಸಾಧಿಸಿದ್ದರಿಂದ ಪಂದ್ಯದ ಫಲಿತಾಂಶವನ್ನು ಶೂಟೌಟ್‌ನಲ್ಲಿ ನಿರ್ಧರಿಸಲಾಯಿತು. ಇಲ್ಲಿ ನೆದರ್ಲೆಂಡ್ 4-3 ಗೋಲುಗಳಿಂದ ಕಳೆದೆರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನು ಮಣಿಸಿತು. ಕಾಂಗರೂಗಳ ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಕಮರಿ ಹೋಯಿತು.ಈ ಪಂದ್ಯವನ್ನು ನೆದರ್ಲೆಂಡ್ ನಿಗದಿತ ಅವಧಿಯಲ್ಲೇ ಗೆಲ್ಲುವ ಎಲ್ಲ ಸಾಧ್ಯತೆ ಇತ್ತು. ಆದರೆ ಅಂತಿಮ ನಿಮಿಷದಲ್ಲಿ ಎಡ್ಡಿ ಒಕೆಂಡೆನ್ ಡಚ್ಚರ ಕೋಟೆಯನ್ನು ಭೇದಿಸಿ ಆಕರ್ಷಕ ಫೀಲ್ಡ್ ಗೋಲ್ ಒಂದನ್ನು ಬಾರಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು.
ತಲಾ 5 ಅವಕಾಶಗಳ ಮೊದಲ ಶೂಟೌಟ್‌ನಲ್ಲಿ 3-3 ಸಮಬಲ ದಾಖಲಾದ್ದರಿಂದ ಇನ್ನೊಂದು ಅವಕಾಶ ಕಲ್ಪಿಸಲಾಯಿತು. ಇಲ್ಲಿ ನೆದರ್ಲೆಂಡ್ ಗೋಲು ಹೊಡೆದರೆ, ಆಸ್ಟ್ರೇಲಿಯ ವಿಫಲವಾಯಿತು. ಈ ರೀತಿಯಾಗಿ ಕಳೆದ ಸಲ ತವರಿನ ಹೇಗ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅನುಭವಿಸಿದ 1-6 ಅಂತರದ ಸೋಲಿಗೆ ನೆದರ್ಲೆಂಡ್ ಸೇಡು ತೀರಿಸಿಕೊಂಡಿತು.
ರೆಡ್ ಲಯನ್ಸ್ ಪ್ರಾಬಲ್ಯ
ಅಚ್ಚರಿಯ ಸೆಮಿಫೈನಲಿಸ್ಟ್ ಇಂಗ್ಲೆಂಡ್ ವಿರುದ್ಧ “ರೆಡ್ ಲಯನ್ಸ್’ ಬೆಲ್ಜಿಯಂ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಅಲೆಕ್ಸಾಂಡರ್ ಹೆಂಡ್ರಿಕ್ಸ್ (45ನೇ, 50ನೇ ನಿಮಿಷ), ಟಾಮ್ ಬೂನ್ (8ನೇ ನಿಮಿಷ), ಸೈಮನ್ ಗೌಗ್ನರ್ಡ್ (19ನೇ ನಿಮಿಷ), ಸೆಡ್ರಿಕ್ ಚಾರ್ಲಿಯರ್ (42ನೇ ನಿಮಿಷ) ಮತ್ತು ಸೆಬಾಸ್ಟಿಯನ್ ಡೋಕಿಯರ್ (53ನೇ ನಿಮಿಷ) ಗೋಲುಗಳ ರೂವಾರಿ ಎನಿಸಿದರು. ಬೆಲ್ಜಿಯಂ 2014ರ ಆವೃತ್ತಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿತ್ತು.
ಪಂದ್ಯದ ಕೆಲವೇ ನಿಮಿಷಗಳ ಮೊದಲು ತಂಡದ ಆಟಗಾರ ಸೈಮನ್ ಗೌಗ್ನರ್ಡ್ ಅವರ ತಂದೆ ನಿಧನರಾದ್ದರಿಂದ ಬೆಲ್ಜಿಯಂ ಆಟಗಾರರೆಲ್ಲ ಕಪುrಪಟ್ಟಿ ಧರಿಸಿ ಆಡಲಿಳಿದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.