ಚಿನ್ನ ಗೆದ್ದ ಕೋಮಲಿಕಾ ಬಾರಿ
ವಿಶ್ವ ಯುವ ಆರ್ಚರಿ ಚಾಂಪಿಯನ್‌ಶಿಪ್
Team Udayavani, Aug 26, 2019, 5:13 AM IST
ಮ್ಯಾಡ್ರಿಡ್: ಭಾರತದ ಕೋಮಲಿಕಾ ಬಾರಿ ತನಗಿಂತ ಉನ್ನತ ಶ್ರೇಯಾಂಕದ, ಜಪಾನಿ ಎದುರಾಳಿ ಸೊನೊದಾ ವಾಕಾ ಅವರನ್ನು ಮಣಿಸುವ ಮೂಲಕ ವಿಶ್ವ ಯುವ ಆರ್ಚರಿ ಚಾಂಪಿಯನ್‌ಶಿಪ್ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಏಕಪಕ್ಷೀಯ “ರಿಕರ್ವ್ ಕ್ಯಾಡೆಟ್’ ಸ್ಪರ್ಧೆಯ ಫೈನಲ್‌ನಲ್ಲಿ ಕೋಮಲಿಕಾ 7-3 ಅಂತರದಿಂದ ವಾಕಾ ಅವರನ್ನು ಹಿಮ್ಮೆಟ್ಟಿಸಿದರು. ಒಂದು ಹಂತದಲ್ಲಿ ಕೋಮಲಿಕಾ 4-0 ಮುನ್ನಡೆಯಲ್ಲಿದ್ದರು.
ಕೋಮಲಿಕಾ ಸಾಧನೆಯೊಂದಿಗೆ ಭಾರತ ಈ ಸ್ಪರ್ಧೆಯಲ್ಲಿ 2ನೇ ಚಿನ್ನದ ಪದಕ ಜಯಿಸಿತು. ಜತೆಗೆ ಒಂದು ಕಂಚಿನ ಪದಕವೂ ಬಂದಿದೆ. ಇದು “ವರ್ಲ್ಡ್ ಆರ್ಚರಿ’ ಭಾರತೀಯ ಆರ್ಚರಿ ಸಂಸ್ಥೆಗೆ ವಿಧಿಸಿದ ನಿಷೇಧ ಜಾರಿಗೆ ಬರುವ ಮುನ್ನ ಭಾರತ ಪಾಲ್ಗೊಂಡ ಕೊನೆಯ ಕೂಟವಾಗಿತ್ತು.
ಜಮ್ಶೆಡ್‌ಪುರದ ಟಾಟಾ ಆರ್ಚರಿ ಅಕಾಡೆಮಿ ಕ್ಯಾಡೆಟ್ ಆಗಿರುವ, 17ರ ಹರೆಯದ ಕೋಮಲಿಕಾ ಬಾರಿ ರಿಕರ್ವ್ ಕ್ಯಾಡೆಟ್ (ಅಂಡರ್-18) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ 2ನೇ ಆಟಗಾರ್ತಿ ಎನಿಸಿಕೊಂಡರು. 2009ರಲ್ಲಿ ದೀಪಿಕಾ ಕುಮಾರಿ ಈ ಸಾಧನೆ ಮಾಡಿದ್ದರು.
ಸೀನಿಯರ್ ಹಂತದಲ್ಲೂ ಸ್ಪರ್ಧೆ
ಈ ವರ್ಷವಷ್ಟೇ ಭಾರತದ ಸೀನಿಯರ್ ವಿಭಾಗಕ್ಕೆ ಸೇರ್ಪಡೆಗೊಂಡ ಕೋಮಲಿಕಾ ಬಾರಿ, ಜೂನ್‌ನಲ್ಲಿ ನಡೆದ ನೆದರ್ಲೆಂಡ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು.
ಈ ಕೂಟದಲ್ಲಿ ಭಾರತಕ್ಕೆ ಇನ್ನೊಂದು ಬಂಗಾರದ ಪದಕ ಕಂಪೌಂಡ್ ಜೂ. ಮಿಕ್ಸೆಡ್ ವಿಭಾಗದಲ್ಲಿ ಒಲಿಯಿತು. ಕಂಪೌಂಡ್ ಜೂನಿಯರ್ ಪುರುಷರ ವಿಭಾಗದಲ್ಲಿ ಕಂಚು ಲಭಿಸಿತ್ತು.
ಬಹಳ ಖುಷಿಯಾಗಿದೆ. ಏಕೆಂದರೆ ನಾನು ಜಯಿಸಿದ್ದು ವಿಶ್ವ ಚಾಂಪಿಯನ್‌ಶಿಪ್ ಪದಕ. ನನ್ನ ತರಬೇತುದಾರರಿಂದ ಇದು ಸಾಧ್ಯವಾಯಿತು.
– ಕೋಮಲಿಕಾ ಬಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.